ನೇಕಾರರ ಕೌಶಲಾಭಿವೃದ್ಧಿಗೆ ಪ್ರತ್ಯೇಕ ಸಂಸ್ಥೆ ರಚನೆ
ನೇಕಾರರ ಕುಂದುಕೊರತೆ ಆಲಿಸಿದ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ
Team Udayavani, Jan 1, 2022, 7:30 AM IST
ಉಡುಪಿ: ಕಾರ್ಕಳ ಬಳಿ ನಿರ್ಮಿಸುತ್ತಿರುವ ಜವಳಿ ಪಾರ್ಕ್‌ನಲ್ಲಿ ನೇಕಾರರ ಕೌಶಲಾಭಿವೃದ್ಧಿಗೆ ಪ್ರತ್ಯೇಕ ಸಂಸ್ಥೆ ರಚಿಸುವುದಲ್ಲದೇ, ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಸಂಬಂಧ ಅಧ್ಯಯನಕ್ಕೆ ತಜ್ಞರ ತಂಡವನ್ನು ಜಿಲ್ಲೆಗೆ ಕಳುಹಿಸುವುದಾಗಿ ರಾಜ್ಯ ಕೈಮಗ್ಗ ಮತ್ತು ಜವುಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಹೇಳಿದರು.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೈಮಗ್ಗ ನೇಕಾರರ ಸಹಕಾರಿ ಸಂಘಗಳ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಾಣದ ಪ್ರಕ್ರಿಯೆ ನಡೆಯುತ್ತಿದೆ. ಕೈಮಗ್ಗ ಆಧಾರಿತ ಸಾಂಪ್ರ ದಾಯಿಕ ವೃತ್ತಿಯಲ್ಲಿ ಇರುವವರ ಕೌಶಲಾಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೂ ತರಬೇತಿ ನೀಡಲು ಪ್ರತ್ಯೇಕ ಸಂಸ್ಥೆ ರೂಪಿಸಲಿದ್ದೇವೆ ಎಂದರು.
ಜಿಲ್ಲೆಯಲ್ಲಿನ ಕೈಮಗ್ಗಗಳನ್ನು ಆಧುನಿಕ ರೀತಿ ಯಲ್ಲಿ ಅಭಿವೃದ್ಧಿಪಡಿಸಲು ಜವಳಿ ಎಂಜಿನಿಯರ್ ಮತ್ತು ಜವಳಿ ತಜ್ಞರ ತಂಡವನ್ನು ಜಿಲ್ಲೆಗ ಕಳುಹಿಸಿ ಆಧ್ಯಯನ ನಡೆಸಲಾ ಗುವುದು. ಅವರ ವರದಿ ಅಧರಿಸಿ ಕೈಮಗ್ಗಗಳನ್ನು ತಾಂತ್ರಿಕವಾಗಿ ಸುಧಾರಿಸಿ, ನೇಕಾರರಿಗೆ ಅನುಕೂಲ ಕಲ್ಪಿಸಲಾ ಗುವುದು. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಅದನ್ನು ಲಾಭದಾಯಕವಾಗಿಸಿ, ಯುವಜನರು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಹೇಳಿದರು.
ಉಡುಪಿ ಕೈಮಗ್ಗದ ಸೀರೆಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೇಡಿಕೆ ಇದೆ. ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು. ನೇಕಾರ ಸಮ್ಮಾನ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಪಾವತಿ ಮಾಡುತ್ತಿದ್ದೇವೆ. ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ ಎಂದರು.
ಶಾಸಕ ರಘುಪತಿ ಭಟ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೈಮಗ್ಗಗಳನ್ನು ಪುನಃಶ್ಚೇತನಗೊಳಿಸಬೇಕು. ಕೈಮಗ್ಗದ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಸಾಂಪ್ರದಾಯಿಕ ವಿಧಾನದಲ್ಲೇ ಕೈಮಗ್ಗಗಳು ಸಾಗುತ್ತಿವೆ. ಯುವ ಜನರನ್ನು ಆಕರ್ಷಿಸಲು ಹೊಸ ಪ್ರಯೋಗಗಳು ನಡೆಯಬೇಕು. ಹಾಗೆಯೇ ಬ್ರಹ್ಮಾವರದಲ್ಲಿರುವ ಸಕ್ಕರೆ ಕಾರ್ಖಾನೆ ಪುನಃಶ್ಚೇತನಕ್ಕೂ ಸೂಕ್ತ ಅನುದಾನ ನೀಡಬೇಕು ಎಂದು ಹೇಳಿದರು.
ಕೈಮಗ್ಗ ಉತ್ಪನ್ನಗಳಿಗೆ ವಿಧಿಸಲಾದ ಜಿಎಸ್‌ಟಿ ಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಬೇಕು. ನೇಕಾರರಿಗೆ ನೀಡುವ ಮಜೂರಿ ಮೇಲೆ ಸರಕಾರವೇ ಶೇ. 25ರಿಂದ 30ರಷ್ಟು ಪ್ರೋತ್ಸಾಹ ಧನ ನೀಡಬೇಕು ಎಂದು ನೇಕಾರರು ಆಗ್ರಹಿಸಿದರು.
ಜವುಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ, ಉಭಯ ಜಿಲ್ಲೆಗಳ ಸಹಾಯಕ ನಿರ್ದೇಶಕರಾದ ಅಶೋಕ್ (ಉಡುಪಿ), ಶಂಕರ್ (ದ.ಕ.), ನೇಕಾರರ ಸಂಘದ ಅಧ್ಯಕ್ಷ ಅಬ್ನೆಸರ್ ಸತ್ಯಾರ್ಥಿ, ಶಿವಳ್ಳಿ ನೇಕಾರರ ಸಂಘದ ಶಶಿಕಾಂತ್ ಉಪಸ್ಥಿತರಿದ್ದರು. ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ಸ್ವಾಗತಿಸಿ, ವಂದಿಸಿದರು.
ಇದನ್ನೂ ಓದಿ:ಶೀಘ್ರ ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ: ಸತೀಶ ಜಾರಕಿಹೊಳಿ
ಎಥೆನಾಲ್ ನೀತಿ ಜಾರಿಗೆ ತೀರ್ಮಾನ
ಉಡುಪಿ: ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಉಪ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಲು ಎಥೆನಾಲ್ ನೀತಿಯನ್ನು ಜಾರಿಗೆ ತರಲು ತೀರ್ಮಾನಿಸಿದ್ದೇವೆ ಎಂದು ಜವಳಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಹೇಳಿದರು.
ಮಾಧ್ಯಮದವರ ಜತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ರೈತರು ಬೆಳಯುವ ಕಬ್ಬು, ಭತ್ತ ಮತ್ತು ಮೆಕ್ಕೆ ಜೋಳದಿಂದ ಎಥೆನಲ್ ಉತ್ಪಾದಿಸಲು ಸಾಧ್ಯವಿದೆ. ಶೀಘ್ರವೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಎಥೆನಾಲ್ ಉತ್ಪಾದಕರಿಗೆ ಸಬ್ಸಿಡಿ ಹಾಗೂ ಪ್ರೋತ್ಸಾಹ ನೀಡಲಾಗುವುದು. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವ ಜತೆಗೆ ರೈತರಿಗೆ ಲಾಭ ಆಗಲಿದೆ. ಸಕ್ಕರೆ ಉದ್ದಿಮೆಗಳ ಪುನಃಶ್ಚೇತನವೂ ಸಾಧ್ಯವಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪಾದನೆಗೆ ಅನೇಕ ಸಂಸ್ಥೆಗಳು, ಸಹಕಾರಿ ಸಂಘಗಳು ಮುಂದೆ ಬಂದಿವೆ. ಈಗಾಗಲೇ ಕೆಲವೊಂದು ಕಾರ್ಖಾನೆಗಳಲ್ಲಿ ಉಪ ಉತ್ಪನ್ನವಾಗಿ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಇಲಾಖೆಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅನುಮೋದನೆ ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಎಷ್ಟೇ ಪ್ರಮಾಣದಲ್ಲಿದ್ದರೂ ಸರಕಾರವೇ ಖರೀದಿ ಮಾಡಲಿದೆ. ಆನಂತರ ಅದನ್ನು ಪೆಟ್ರೋಲಿಯಂ ಕಂಪೆನಿಗಳಿಗೆ ಮಾರಾಟ ಮಾಡಲಿದ್ದೇವೆ. ಉಡುಪಿಯ ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಆರಂಭ ಕುರಿತಂತೆ, ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ, ಕಾರ್ಖಾನೆ ಆರಂಭಕ್ಕೆ ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.