ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ
ಇಂದು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ
Team Udayavani, Jan 5, 2022, 7:05 AM IST
ಯಾವ ಜ್ಞಾನಿಯು ತನ್ನಲ್ಲಿಯೇ ಎಲ್ಲ ಜೀವನ ಅಸ್ತಿತ್ವವನ್ನು ಅನುಭವಿಸುತ್ತಾನೋ ಎಲ್ಲರನ್ನೂ ತನ್ನಂತೆಯೇ ಕಾಣುತ್ತಾನೋ ಅಂತಹ ಐಕ್ಯದರ್ಶಿಯ ಭಾಗಕ್ಕೆ ಮೋಹ ಯಾವುದು, ಶೋಕ ಯಾವುದು? – ಯಜುರ್ವೇದದ ಒಂದು ಸಾಲಿನಂತೆ ಬದುಕಿದವರು 2019ರ ಡಿ. 29 ರಂದು ಹರಿಪಾದ ಸೇರಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು.
ಅಹಿಂಸೆ, ಸತ್ಯ, ಆಸ್ತೇಯ, ಶೌಚ, ಇಂದ್ರಿಯ ನಿಗ್ರಹ ಇವು ಮಾನವ ಧರ್ಮ. ಇವು ಎಲ್ಲ ವರ್ಣೀಯರು ಅನುಸರಿಸಬೇಕಾದ ಜೀವನ ಪದ್ಧತಿಯೂ ಹೌದು. ಧರ್ಮದ ಸಮಗ್ರ ಸಾರವು ಈ ಪಂಚ ವ್ರತದ ಮೇಲೆ ನಿಂತಿದೆ. ಯಾರು ಮಾನವ ಧರ್ಮ ವಿರೋಧಿಯೋ ಅವನು ಅಧರ್ಮಿ. ಅಂತಹ ಅಧರ್ಮಿಗಳಿಂದ ಸಮಗ್ರ ದೇಶಕ್ಕೆ ಹಾನಿ. ಮನುಷ್ಯ ಧರ್ಮ ನಾಶಗೊಂಡರೆ ಸಮಾಜದ ನಾಶ ಶತಃಸಿದ್ಧ. ಧರ್ಮಿಷ್ಠರನ್ನು ಸಮಾಜ, ದೇಶವೇ ಗೌರವಿಸುತ್ತದೆ. ಅಂತಹ ಶ್ರೇಷ್ಠ ಧರ್ಮಿಷ್ಠ, ಧರ್ಮಾಧಿಪತಿ ಪೂಜ್ಯ ವಿಶ್ವೇಶತೀರ್ಥರು. ಮಾತ್ರವಲ್ಲ ಅವರು ಶ್ರೇಷ್ಠ ಜ್ಞಾನಿ ಸಂಕುಲಕ್ಕೂ ಸೇರಿದವರು. ತನಗೆ ಬೇಡವಾದದ್ದನ್ನು ಬೇರಾರಿಗೂ ಮಾಡಬಾರದು. ವೇದ, ಸ್ಮತಿ, ಸದಾಚಾರ ಮತ್ತು ತನ್ನ ಆತ್ಮನಿಗೆ ಪ್ರಿಯವಾದುದು ಈ ನಾಲ್ಕು ಧರ್ಮದ ಸಾಕ್ಷಾಲಕ್ಷಣಗಳೆಂದು ಮನುಸ್ಮತಿಯ ಉಕ್ತಿ. ಅಂತಹ ಸಾಕ್ಷಾಲಕ್ಷಣಮೂರ್ತಿಯೇ ಸಂತ ಶ್ರೇಷ್ಠ ಶ್ರೀ ವಿಶ್ವೇಶತೀರ್ಥರು. ಅಹಮ್ಮನ್ಯತೆ ಅವರ ಹತ್ತಿರ ಎಂದೂ ಸುಳಿಯದು.
ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುವ ಯತಿರಾಜನೇ, ಜ್ಞಾನವನ್ನು ಉಪದೇಶಿಸು. ಸತ್ಕರ್ಮನಿಷ್ಠನಾದ ಯತೀಶ್ವರನೇ ಸತ್ಯವನ್ನು ಬೋಧಿಸು. ಶಾಂತಿಯಿಂದ ಪ್ರಕಾಶಿಸುವ ಪರಮ ಪರಿವ್ರಾಟನೇ ಶ್ರದ್ಧೆಯನ್ನು ತಿಳಿಸು. ಹೇ ಯತಿಯೇ, ಜೀವನದ ಮೇಲೆ ದಯಾದೃಷ್ಟಿಯನ್ನು ಹರಿಸು ಎಂಬ ಋಗ್ವೇದದ ಸಾಲು ಸನ್ಯಾಸಿಗಳ ಶ್ರೇಷ್ಠ ಆದರ್ಶವನ್ನು ಸಾರುವಂತೆ ಯತಿ ಜೀವನವನ್ನು ಸಾರ್ಥಕಪಡಿಸಿದವರು ಶ್ರೀ ವಿಶ್ವೇಶತೀರ್ಥರು. ಚಿತ್ತ, ವಾಚ, ಕ್ರಿಯೆ ಸಾಧುಗಳಲ್ಲಿ ಏಕರೂಪದಲ್ಲಿರುವಂತೆ ಅವರು ಏಕರೂಪದ ಸಂತರು.
ನಾನಾ ಜನಸ್ಯ ಶುಶ್ರೂಷಾ: ನಾನಾ ಜನಸ್ಯ ಶುಶ್ರೂಷಾ.. ಎಂಬ ಆಚಾರ್ಯ ಮಧ್ವರ ನುಡಿಯಂತೆ, ವಿಷ್ಣು ಭಕ್ತರನ್ನೆಲ್ಲ ಸೇರಿಸಿ, ಅಖೀಲ ಭಾರತ ಮಾಧ್ವಮಹಾಮಂಡಳವನ್ನು ಸ್ಥಾಪಿಸಿ, ತನ್ನ ಮೊದಲ ಪರ್ಯಾಯದಲ್ಲೇ ಸಮ್ಮೇಳನವನ್ನು ಏರ್ಪಡಿಸಿದರು. ಆಚಾರ್ಯ ಮಧ್ವರ ತಣ್ತೀಜ್ಞಾನ ಸುಧೆಯನ್ನು ನೀಡಲು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠವನ್ನು ಆರಂಭಿಸಿದರು. ನಮ್ಮ ವಿದ್ಯಾರ್ಥಿಗಳು ಪಾಶ್ಚಾತ್ಯ ಶಿಕ್ಷಣದ ಪ್ರಭಾವಕ್ಕೆ ಸಿಕ್ಕಿ, ನಾಸ್ತಿಕರಾಗುವುದನ್ನು ತಡೆಯಲು ನೂರಾರು ವಿದ್ಯಾರ್ಥಿನಿಲಯಗಳನ್ನು ತೆರೆದರು. ಅಲ್ಲಿ ಯುವ ಜನಾಂಗಕ್ಕೆ ಸದಾಚಾರದ ವಾತಾವರಣ ಸೃಷ್ಟಿಯಾಯಿತು. ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವಂತೆ ಶಿಕ್ಷಣ ನಿಧಿಯನ್ನು ಸ್ಥಾಪಿಸಿದರು. ಸಾವಿರಾರು ಯುವಕರ ಉದ್ಯೋಗಕ್ಕೆ ನೆರವಾದರು. ಧಾರ್ಮಿಕತೆಯ ವಾತಾವರಣದ ಸೃಷ್ಟಿ ಮತ್ತು ಚಟುವಟಿಕೆಗಳಿಗಾಗಿ ನೂರಾರು ಕಡೆ ರಾಘವೇಂದ್ರಸ್ವಾಮಿ ಮಠಗಳನ್ನು ಆರಂಭಿಸಿದರು. 40ಕ್ಕೂ ಹೆಚ್ಚು ಬಾರಿ ಶಿಷ್ಯರಿಗೆ ಸುಧಾ ಮಂಗಳ್ಳೋತ್ಸವವನ್ನು ಮಾಡಿ ಜ್ಞಾನಧಾರೆಯನ್ನು ಎರೆದಿದ್ದಾರೆ.
ಭಗವದ್ಗೀತೆ ಸಾರುವಂತೆ, ಕುಲಕ್ಷಯ ವಾದರೆ ಸನಾತನವಾದ ಕುಲಧರ್ಮಗಳೂ ನಷ್ಟವಾಗುತ್ತವೆ. ಕುಲಧರ್ಮ ನಷ್ಟವಾದರೆ ಅಧರ್ಮವು ಆಕ್ರಮಿಸಿಕೊಳ್ಳುತ್ತದೆ. ಈ ಜಾಗೃತಿಯನ್ನು ಮೂಡಿಸಲು ವಿಶ್ವ ಹಿಂದೂ ಪರಿಷತ್ ಸ್ಥಾಪನೆಯ ಹಿಂದೆ ಶ್ರೀ ವಿಶ್ವೇಶತೀರ್ಥರ ಪಾತ್ರ ಮಹತ್ತರವಾದುದು.
ಸವರ್ಣೀಯರಿಂದಲೇ ತುಳಿತಕ್ಕೊಳ ಗಾಗಿ ಮತಾಂತರಕ್ಕೆ ಬಲಿಪಶುವಾಗುತ್ತಿದ್ದ ಹರಿಜನರನ್ನು ಅವರ ಕೇರಿಗೆ ಹೋಗಿ ಸ್ವಧರ್ಮ ತೊರೆಯದಂತೆ ಉಪದೇಶವನ್ನಿತ್ತರು. ನಿರಾ ಶ್ರಿತರಿಗೆ ಆಶ್ರಯದಾತರಾದರು. ಮರಳಿ ಮಾತೃಧರ್ಮಕ್ಕೆ ಹಿಂದಿರುಗುವಂತೆ ಶ್ರಮ ವಹಿಸಿದರು. ಬರಗಾಲ ಬಂದಾಗಲೆಲ್ಲ ಗಂಜಿ ಕೇಂದ್ರಗಳನ್ನು ತೆರೆಯುವಲ್ಲಿ ಶ್ರೀಗಳು ಮುಂಚೂಣಿಯಲ್ಲಿದ್ದರು. ಜಾನುವಾರುಗಳ ರಕ್ಷಣೆಗಾಗಿ ಗೋಶಾಲೆಗಳು, ಬರಪೀಡಿತ ಪ್ರದೇಶಗಳಲ್ಲಿ ಕೆರೆ ಹೂಳೆತ್ತುವ ಉದ್ಯೋಗ ನೀಡಿ, ನೀರು ತುಂಬಿ ಹರಿಯುವಂತೆ ಮಾಡಿದ ಭಗೀರಥ ಅವರು. ಚಂಡಮಾರುತದಲ್ಲಿ ಹಾನಿ ಗೊಳಗಾಗಿದ್ದ ಪ್ರದೇಶಗಳಲ್ಲಿ ನೂರಾರು ಮನೆಗಳನ್ನು ಕಟ್ಟಿಸಿಕೊಟ್ಟು ಆಶ್ರಯ ಕಲ್ಪಿಸಿದರು. 1975 ರ ತುರ್ತುಪರಿಸ್ಥಿತಿ ವಿರುದ್ಧ ಸತ್ಯಾಗ್ರಹ, ಪಂಜಾಬಿನಲ್ಲಿ ಕೈಗೊಂಡ ಶಾಂತಿಯಾತ್ರೆ, ಅಯೋಧ್ಯಾ ರಾಮಮಂದಿರ ಹೋರಾಟ, ತಿರುಪತಿಯಲ್ಲಿ ಮತಾಂತರ ಚಟುವಟಿಕೆ ವಿರುದ್ಧದ ಹೋರಾಟವೇ ಇರಲಿ ಶ್ರೀ ವಿಶ್ವೇಶತೀರ್ಥರಲ್ಲಿ ನಿಷ್ಕಪಟ, ಧರ್ಮ, ದೇಶನಿಷ್ಠೆ ಎದ್ದು ಕಾಣುತ್ತಿತ್ತು. 1984ರ ಪರ್ಯಾಯದಲ್ಲಿ ಈದ್ ಸೌಹಾರ್ದ ಕೂಟವನ್ನು ಏರ್ಪಡಿಸಿ ಕ್ರೆçಸ್ತರೂ ಸಹಿತ ಎಲ್ಲ ಮತಧರ್ಮೀಯರನ್ನು ಆಹ್ವಾನಿಸಿದರು. 2016 ರ ದಾಖಲೆಯ ಪಂಚಮ ಪರ್ಯಾಯದಲ್ಲಿ ಮುಸಲ್ಮಾನರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವುದರ ಮೂಲಕ ಸಾಮರಸ್ಯದ ಅನಿವಾರ್ಯತೆಯನ್ನು ಮನದಟ್ಟು ಮಾಡಿದರು. ಪರಿಸರ ಮಾರಕ ಯೋಜನೆಗಳು ತಲೆಯೆತ್ತಿದಾಗಲೆಲ್ಲ ಇವುಗಳ ವಿರುದ್ಧದ ಹೋರಾಟಗಳ ನೇತೃತ್ವವನ್ನು ಶ್ರೀಗಳು ವಹಿಸಿದ್ದರು.
ಆರ್ತರಿಗೆ ಆಶ್ರಯ, ರೋಗಿಗಳಿಗೆ ಚಿಕಿತ್ಸಾಲಯ, ವಿದ್ಯಾರ್ಥಿಗಳಿಗೆ ವಿದ್ಯಾಲಯ, ವೈದ್ಯಕೀಯ ಕೇಂದ್ರಗಳು, ಆಸ್ಪತ್ರೆಗಳು, ಬಾಲನಿಕೇತನಗಳು, ಉಚಿತ ಹಾಸ್ಟೆಲ್‌ಗಳು, ವೃದ್ಧಾಶ್ರಮಗಳು, ಹೈಸ್ಕೂಲು, ಕಾಲೇಜುಗಳು, ನೂರಾರು ಛತ್ರಗಳು, ಗೋಶಾಲೆಗಳು ಇತ್ಯಾದಿ ಒಂದು ಸರಕಾರ ಮಾಡಲು ಅಸಾಧ್ಯವಾದ ಕಾರ್ಯಗಳನ್ನು ಮಾಡಿ ಮುಗಿಸಿ ಶ್ರೀಕೃಷ್ಣನಿಗೆ ಸಮರ್ಪಿಸುವುದರ ಮೂಲಕ ಆಚಾರ್ಯ ಮಧ್ವರ ತಣ್ತೀವನ್ನು ಅಕ್ಷರಶಃ ಪಾಲಿಸಿದರು. ಪೂಜ್ಯರು ಸ್ಥಾಪಿಸಿದ್ದ ಪ್ರತಿಷ್ಠಾನಗಳು, ಸಮ್ಮೇಳನಗಳು, ಶಿಬಿರಗಳು, ಜ್ಞಾನಸತ್ರಗಳೆಷ್ಟೋ? ಸೇವಾ ವಿಭಾಗಗಳು ಇನ್ನೆಷ್ಟೋ? ಕರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಎಲ್ಲವನ್ನೂ ಸಮಾಜಕ್ಕೆ ಅರ್ಪಿಸಿ ತೆರಳಿದ್ದಾರೆ. ಅವರು “ಮಾಧ್ವಯತಿಕುಲತಿಲಕ’. ಧರ್ಮ ಸಂಸ್ಥಾಪನೆ ಮತ್ತು ಮಾನವ ಸೇವೆಯೇ ಅವರ ಪಾಲಿನ ದ್ವೈತ ಸಿದ್ಧಾಂತ.
– ಜಲಂಚಾರು ರಘುಪತಿ ತಂತ್ರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.