ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿಗಾಲು: ಜ.19 ರಂದು ತಮಿಳುನಾಡು ಗಡಿ ಬಂದ್
Team Udayavani, Jan 10, 2022, 6:40 AM IST
ಬೆಂಗಳೂರು: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಜ.19ರಂದು “ತಮಿಳುನಾಡು ಗಡಿ ಬಂದ್” ಮಾಡುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಮೈಸೂರು ಬ್ಯಾಂಕ್‌ನಲ್ಲಿ ಭಾನುವಾರ ಕರಾಳ ದಿನಾಚರಣೆ ನಡೆಸಿದ ಅವರು, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳನಾಡು ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಪರ ಸಂಘಟನೆಗಳು ಈ ಹಿಂದೆಯೇ ಈ ಮೇಕೆದಾಟು ಯೋಜನೆ ಶಂಕುಸ್ಥಾಪನೆ ಮಾಡಿದ್ದೆವು. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯ ಮಾಡಬಾರದು. ಮೇಕೆದಾಟು ಯೋಜನೆ ಜಾರಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ವಿರೋಧಿಸಿ ಆನೇಕಲ್ ಗಡಿಯಲ್ಲಿ ಕನ್ನಡಪರ ಸಂಘಟನೆಗಳು ತಮಿಳುನಾಡು ಗಡಿ ಬಂದ್ ಮಾಡಲಿವೆ ಎಂದು ತಿಳಿಸಿದರು.
ಕಳಸಾಬಂಡೂರಿ ಯೋಜನೆ ಸೇರಿದಂತೆ ಅಖಂಡ ಕರ್ನಾಟಕದ ನದಿ ನೀರು ಯೋಜನೆಗಳ ಜಾರಿಗೆ ಆಗ್ರಹಿಸಿ ಜ.22ರಂದು ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಕರ್ನಾಟಕ ಅಂದರೆ ಕೇವಲ ಹಳೆ ಮೈಸೂರು ಭಾಗಷ್ಟೇ ಅಲ್ಲ.ಅಖಂಡ ಕರ್ನಾಟಕ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾಳಜಿ ತೋರಬೇಕು ಎಂದರು.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ ಆರಂಭ: ಪಾಂಚಜನ್ಯ ಮೊಳಗಿದೆ ಎಂದ ಡಿ.ಕೆ.ಶಿವಕುಮಾರ್
ಕಾಂಗ್ರೆಸ್‌ನವರು ಅಪರಾಧಿ ಸ್ಥಾನದಲ್ಲಿ ಇದ್ದಾರೆ
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತೆ.ಕಾಂಗ್ರೆಸ್ ಮುಖಂಡರಿಗೆ ಈ ಹೋರಾಟ ಮಾಡುವ ನೈತಿಕತೆಯಿಲ್ಲ.ಐದಾರು ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಮೇಕೆದಾಟು ಯೋಜನೆಯ ಬಗ್ಗೆ ಯಾವುದೇ ಕೆಲಸ ಮಾಡಿಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಮತ್ತು ಇಂಧನ ಸಚಿವರಾಗಿದ್ದರು. ಆಗ ಮೇಕೆದಾಟುವಿನ ಬಗ್ಗೆ ಕಾಳಜಿ ವಹಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಮೇಕೆದಾಟು ಯೋಜನೆಯನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಯಾವುದೇ ಕಾರಣಕ್ಕೂ ವಿರೋಧಿಸಬಾರದು. ತಮಿಳುನಾಡು ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಡಿಎಂಕೆ ಸರ್ಕಾರಕ್ಕೆ ನೀಡುವ ಬೆಂಬಲವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಚಿತ್ರರಂಗದ ವಿರುದ್ಧ ಆಕ್ರೋಶ:
ಕನ್ನಡದ ನಾಡು ನುಡಿ ಹೋರಾಟ ಬೆಂಬಲಿಸದ ಕನ್ನಡ ಚಿತ್ರರಂಗ, ಇವತ್ತು ಮೇಕೆದಾಟು ಬೆಂಬಲಿಸುತ್ತಿರುವುದು ಸರಿಯಲ್ಲ. ಬೆಳಗಾವಿಯಲ್ಲಿ ಕಿಡಿಗೇಡಿನಗಳು ಕನ್ನಡ ತಾಯಿಗೆ ಅಪಮಾನ ಮಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದರು. ಈ ವೇಳೆ ಕನ್ನಡಪರ ಹೋರಾಟಗಾರರಿಗೆ ಬೆಂಬಲ ನೀಡದ ಚಿತ್ರರಂಗ ಈಗ ಮೇಕೆದಾಟು ಯೋಜನೆ ಪಾದಯಾತ್ರೆಗೆ ಬೆಂಬಲ ನೀಡಿರುವುದು ಎಷ್ಟು ಸರಿ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.