ರೌಡಿಶೀಟರ್‌ಗಳ ಚಿತ್ರ-ವಿಚಿತ್ರ ನಾಮಧೇಯ : ಸಹಚರರಿಂದಲೇ ರೌಡಿಗಳಿಗೆ ನಿಕ್‌ನೇಮ್
ಗೂಗಲ್, ಕೆರೋಸಿನ್, ಬ್ಯಾಟರಿ, ತಲೆಮಾಂಸ, ಕಡ್ಡಿಪುಡಿ ಎಂಬ ತರಹೇವಾರಿ ಹೆಸರು
Team Udayavani, Jan 10, 2022, 2:18 PM IST
ರೌಡಿಶೀಟರ್‌ಗಳ ಕಡತಗಳನ್ನು ಒಮ್ಮೆ ತೆರೆದರೆ ಆರೋಪಿಗಳ ಚಿತ್ರ-ವಿಚಿತ್ರ ರೀತಿಯ ಹೆಸರುಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ರೌಡಿಗಳ ಹಾವ-ಭಾವ ಕೃತ್ಯಗಳಿಗೆ ಸಂಬಂಧಿಸಿದಂತೆ ಸಿಗುವ ಹೆಸರುಗಳು ಒಂದೆಡೆಯಾದರೆ, ರೌಡಿಗಳ ಸಹಚರರು ಅಥವಾ ಪೊಲೀಸರು ನೀಡುವ ನಿಕ್‌ನೇಮ್‌ಗಳು ಅವರನ್ನು ಪ್ರಸಿದ್ಧಿಗೆ ತಂದಿವೆ. ಅದೇ ಹೆಸರುಗಳು ಒಂದು ಕಾಲದಲ್ಲಿ ಜನಸಾಮಾನ್ಯರಲ್ಲಿ ಆತಂಕ- ಭಯವನ್ನೂ ಉಂಟು ಮಾಡಿದ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ರೌಡಿಗಳ ಹೆಸರುಗಳ ವೈವಿಧ್ಯತೆ ಕುರಿತು ಪೊಲೀಸ್ ಅಧಿಕಾರಿಗಳ ಅಭಿಮತವೂ ಸೇರಿದಂತೆ ವಿಶೇಷ ಸುದ್ದಿಸುತ್ತಾಟ ನಿಮ್ಮ ಮುಂದೆ.
ಜೆಲ್ಲಿ, ಪೆಟ್ರೋಲ್, ಔಷಧಿ, ಕಡ್ಡಿ, ಬಾಂಬ್, ಸೀಮೆಎಣ್ಣೆ, ಕೆರೋಸಿನ್, ಬ್ಯಾಟರಿ, ತಲೆಮಾಂಸ, ಚಿಕನ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಇದ್ಯಾವುದೋ ಮಿಲ್ಟ್ರಿ ಹೋಟೆಲ್‌ನಲ್ಲಿ ಸಿಗುವ ಮೆನು ಅಲ್ಲ. ಬದಲಿಗೆ ರೌಡಿಗಳೇ ಇಟ್ಟುಕೊಂಡಿರುವ ನಿಕ್ ನೇಮ್(ಅಡ್ಡ ಹೆಸರು)ಗಳು.
ಈ ರೀತಿಯ ಅಡ್ಡ ಹೆಸರುಗಳನ್ನು ಕೇಳಲು ಕುತೂಹಲದ ಜತೆಗೆ ಅಚ್ಚರಿ, ಹಾಸ್ಯಸ್ಪದವಾಗಿಯೂ ಇರುತ್ತದೆ. ಆದರೆ, ಆ ಹೆಸರಿನಲ್ಲಿ ಕರೆದರೆ ರೌಡಿಗಳು ಎದೆ ಉಬ್ಬುತ್ತದೆ. ಅದಕ್ಕೆ ಕಾರಣ, ಅಪರಾಧ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸುವುದರ ಜತೆಗೆ, ನ್ಯಾಯಾಲಯದಲ್ಲಿ ಆ ಹೆಸರಿನ ವ್ಯಕ್ತಿಯನ್ನು ಆತನೇ ಎಂಬುದನ್ನು ಸಾಬೀತು ಪಡಿಸಲು ಅನುಕೂಲವಾಗುತ್ತದೆ. ಶೇ.99 ರೌಡಿಗಳಿಗೆ ಅವರ ಸಹಚರರೇ ಅಡ್ಡ ಹೆಸರುಗಳನ್ನು ಇಡುತ್ತಾರೆ. ಇನ್ನು ಶೇ.1 ಪೊಲೀಸರು ನಿಕ್‌ನೇಮ್ ಕೊಡುತ್ತಾರೆ.
ಈ ಅಡ್ಡ ಹೆಸರುಗಳಿಂದ ಪೊಲೀಸರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಯಾಕೆಂದರೆ, ಒಂದೇ ಹೆಸರಿನಲ್ಲಿ ಹತ್ತಾರು ಮಂದಿ ಇರುತ್ತಾರೆ. ಕೆಲವೊಮ್ಮೆ ಆತನ ತಂದೆ ಹೆಸರು ಸೇರಿ ಕರೆದರೂ ಪತ್ತೆ ಕಷ್ಟವಾಗುತ್ತದೆ. ಉದಾಹರಣೆಗೆ ಒಂದೇ ಪ್ರಕರಣದಲ್ಲಿ ಶ್ರೀನಿವಾಸ ಎಂಬ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರೆ, ಅವರಲ್ಲಿ ಈತನೇ ಆರೋಪಿ 1, ಆರೋಪಿ 2 ಎಂದು ಗುರುತಿಸಲು ಶ್ರೀನಿವಾಸ ಅಲಿಯಾಸ್ ಸೀನಾ ಅಥವಾ ಇತರೆ ನಿಕ್‌ನೇಮ್ ಕೊಡಲಾಗುತ್ತದೆ. ಅದು ಬೆಂಗಳೂರಿನ ರೌಡಿಯಿಸಂನಲ್ಲಿ ಅಲಿಯಾಸ್ ಎಂದೇ ಚಿರಪರಿಚಿತ. ಅದರಿಂದ ಪೊಲೀಸರಿಗೆ ಹಾಗೂ ದಫೇದಾರ್(ಕೋರ್ಟ್‌ನಲ್ಲಿ ಆರೋಪಿಗಳನ್ನು ಮೂರು ಬಾರಿ ಕೂಗುವ ಸಿಬ್ಬಂದಿ)ಗೂ ಅನುಕೂಲವಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರೌಡಿಪಟ್ಟಿ ಜತೆ ನಿಕ್‌ನೇಮ್ ಓಪನ್: ಪ್ರಸ್ತುತ ನಗರದಲ್ಲಿ ಸುಮಾರು 5300ಕ್ಕೂ ಅಧಿಕ ರೌಡಿಗಳು ಇದ್ದಾರೆ. ಅವರೆಲ್ಲ ಪದೇ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸ್ ಭಾಷೆಯಲ್ಲಿ ಎಂಒಬಿ(ಅಪರಾಧ ಹಿನ್ನೆಲೆಯುಳ್ಳವರು)ಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿಗಳ ವರದಿಯನ್ನಾಧರಿಸಿ ರೌಡಿಪಟ್ಟಿ ತೆರೆಯಲಾಗುತ್ತದೆ. ವಿಪರ್ಯಾಸವೆಂದರೆ ಪ್ರಸ್ತುತ ಸಮಾಜದಲ್ಲಿರುವ ಸಾಕಷ್ಟು ಮಂದಿ ಗಣ್ಯವ್ಯಕ್ತಿಗಳು ಮತ್ತು ಜನಪ್ರತಿನಿಧಿಗಳು ರೌಡಿಪಟ್ಟಿಯಲ್ಲಿದ್ದಾರೆ. ಇದೀಗ ಅದರಿಂದ ಕೋರ್ಟ್ ಮೊರೆ ಹೋಗಿ ತಮ್ಮ ರೌಡಿ ಪಟ್ಟಿ ತೆಗೆಸಿಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಪದೇ ಪದೆ ರೌಡಿ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗೆ ರೌಡಿಪಟ್ಟಿ ತೆರೆಯಲಾಗುತ್ತದೆ. ಈ ವೇಳೆ ಆತನಿಗೆ ನಿಕ್‌ನೇಮ್ ಕೊಡಲಾಗುತ್ತದೆ.
ಹೇಗೆ ಅಡ್ಡ ಹೆಸರು ಕೊಡುತ್ತಾರೆ?: ಸಾಮಾನ್ಯವಾಗಿ ರೌಡಿಯ ವರ್ತನೆ, ದೇಹದ ಆವಭಾವ,ಆತನ ಕೃತ್ಯದ ಕೌರ್ಯತೆ, ಕೆಲಸ ಈ ಎಲ್ಲ ವಿಚಾರಗಳನ್ನು ಆಧರಿಸಿ ಆತನ ಸಹಚರರೇ ಅಡ್ಡ ಹೆಸರುಗಳನ್ನು ಇಡುತ್ತಾರೆ. ಇನ್ನು ಕೆಲವಕ್ಕೆ ಕಾರಣಗಳೇ ಇಲ್ಲ. ಅಂಥ ಕೆಲ ಹೆಸರುಗಳು ಇಟ್ಟುಕೊಳ್ಳುತ್ತಾರೆ. ಇನ್ನು ಕೆಲ ಸಂದರ್ಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಅನೀರಿಕ್ಷಿತವಾಗಿ ಕರೆಯುವ ಹೆಸರನ್ನೇ ತಮ್ಮ ನಿಕ್‌ನೇಮ್‌ಗಳಾಗಿ ಇಟ್ಟುಕೊಳ್ಳುವ ವಾಡಿಕೆ ಭೂಗತಲೋಕದಲ್ಲಿ ಸಾಮಾನ್ಯ. ಈ ನೇಮ್‌ಗಳು ಕೇಳುಗನಿಗೆ ಅಚ್ಚರಿ ಉಂಟುಮಾಡಿದರೂ ರೌಡಿಯ ಎದೆ ಉಬ್ಬಿಸುತ್ತದೆ. ಅದು ದೇವರು, ಪ್ರಾಣಿ, ಪಕ್ಷಿ, ದಿನಬಳಕೆ ವಸ್ತುಗಳು, ಉದ್ಯೋಗ ಹೀಗೆ ನಾನಾ ರೀತಿಯ ನಿಕ್‌ನೇಮ್ ಗಳು ರೌಡಿ ಹೆಸರಿನ ಮುಂದೆ ಕಾಣಿಸಿಕೊಳ್ಳುತ್ತವೆ. ಆ ಹೆಸರಿನಿಂದ ಕೂಗಿದರೆ ರೌಡಿ ಎದೆ ಉಬ್ಬಿಸುತ್ತಾನೆ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್.
ರಾಮಾಯಣದ ಪಾತ್ರಗಳು
ಯಲಹಂಕದ ಮೂವರು ರೌಡಿಗಳು ರಾಮಾಯಣದ ಪಾತ್ರಗಳನ್ನು ನೆನಪಿಸುತ್ತದೆ. ಮೂರು ವರ್ಷಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ರಾಮ, ಲಕ್ಷ್ಮಣ, ಹನುಮಂತ ಎಂಬವರನ್ನು ಬಂಧಿಸಲಾಗಿತ್ತು. ಆಗ ವಿಚಾರಣೆ ಸಂದರ್ಭದಲ್ಲಿ ಈ ತಂಡಕ್ಕೆ ರಾಮನೇ ಮುಖ್ಯಸ್ಥ. ರಾಮ, ಲಕ್ಷ್ಮಣ ಹೇಳಿದ ಕೆಲಸವನ್ನು ಹನುಮಂತ ಚಾಚು ತಪ್ಪದೇ ಮಾಡುತ್ತಾನೆ. ಅದು ಕೊಲೆ, ದರೋಡೆ, ಸುಲಿಗೆ ಸೇರಿ ಯಾವುದೇ ಕೃತ್ಯವಿರಲಿ ಯಶಸ್ವಿಯಾಗಿ ಹನುಮಂತ ನಿರ್ವಹಿಸುತ್ತಾನೆ. ಈ ಮೂವರ ವಿರುದ್ಧ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಆ ಪ್ರಕರಣ ನಿರ್ವಹಿಸಿದ ಪೊಲೀಸ್ ಅಧಿಕಾರಿಯೊಬ್ಬರು ನೆನಪು ಮಾಡಿಕೊಳ್ಳುತ್ತಾರೆ.
ಯಾವೆಲ್ಲಾ ಅಡ್ಡ ಹೆಸರುಗಳು ಬಳಕೆ?
ಕೆಲವೊಂದು ಪ್ರಾಣಿ,ಪಕ್ಷಿ, ದಿನಬಳಕೆ ವಸ್ತುಗಳು ಹೆಸರುಗಳಿದ್ದರೆ, ಇನ್ನು ಕೆಲವಕ್ಕೆ ಯಾವುದೇ ಅರ್ಥ ಇರವುದಿಲ್ಲ. ಕೊತ್ವಾಲ್ ರಾಮಚಂದ್ರ, ಡೆಡ್ಲಿ ಸೋಮ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ಕೋತಿಮಂಜ, ಕವಳ ವಿಜಯಕುಮಾರ್, ಕುಟ್ಟಿ ತಿರುಕುಮಾರನ್, ಗೇಟ್ ಗಣೇಶ, ಸ್ಪಾಟ್ ನಾಗ, ಕಡ್ಡಿಪುಡಿ ಆನಂದ್, ಬಾಂಬ್ ನಾಗ, ಸೈಲೆಂಟ್ ಸುನೀಲ್, ಹಫ್ತಾ ಅಜ್ಮಲ್, ಹೆಬ್ಬೆಟ್ಟು ಮಂಜ, ಆಯಿಲ್ ಕುಮಾರ, ಜಿಂಕೆ ರವಿ, ರೆಕ್ಕೆ ರಮೇಶ್, ಬ್ಯಾಟರಿ, ಮುಲಾಮ್ ಲೋಕಿ, ಔಷಧಿ ಗಿರೀಶ್, ಸೈಟ್ ಗೋಪಿ, ವಿಸ್ಕಿ ಸೀನ, ಕೆರೋಸಿನ್ ರಾಮಪ್ಪ, ಇಸ್ತ್ರೀಗಾಡಿ ವೆಂಕ, ಜೆಲ್ಲಿ ವೆಂಕಟೇಶ್, ಟಿಂಕರ್ ಇಸ್ಮಾಯಿಲ್, ಪಾಯ್ಸನ್ ರಾಮ, ಆ್ಯಸಿಡ್ ರಾಜ, ಸೈಕಲ್ ರವಿ, ಒಂಟೆ ರೋಹಿತ್, ಬೇಕರಿ ರಘು, ಕೇಬಲ್ ಶ್ರೀಧರ ಹೀಗೆ ನಗರದಲ್ಲಿರುವ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿಗೂ ಅಡ್ಡ ಹೆಸರುಗಳಿವೆ.
ರೌಡಿಗಳ ಪರೇಡ್‌ನಲ್ಲಿ ಅಡ್ಡ ಹೆಸರುಗಳದ್ದೇ ಹವಾ!
ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅಥವಾ ಶುಭ ಕಾರ್ಯಗಳು ಹಾಗೂ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ರೌಡಿಗಳ ಪರೇಡ್ ನಡೆಸಲಾಗುತ್ತದೆ. ಇನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಆಗಾಗ್ಗೆ ಪರೇಡ್ ನಡೆಸುತ್ತಾರೆ. ಈ ವೇಳೆ ಅವರ ಹೆಸರು ಕೂಗುವುದನ್ನು ಕೇಳಿಸಿಕೊಂಡರೆ ಒಂದು ರೀತಿಯ ಕೂತುಹಲ ಜತೆಗೆ ಏನೋ ಒಂದು ರೀತಿ ಖುಷಿ. ರೌಡಿಗಳ ಪರೇಡ್ ಸಂದರ್ಭದಲ್ಲಿ ಕರೆದಾಗ ಆತ ತಲೆ ತಗ್ಗಿಸುತ್ತಾನೆ. ಆದರೆ, ಜನರು, ಆತನ ಸಹಚರರು ಕೂಗಿದಾಗ ಹಿಗ್ಗುತ್ತಾರೆ. ಕೆಲವೊಮ್ಮೆ ಅವರ ಹೆಸರು ಕೂಗಿದಾಗ ಅದರ ಅರ್ಥವೇ ನಮಗೆ ಗೊತ್ತಾಗುವುದಿಲ್ಲ. ಆಗ ಆತನಿಗೆ ಕೇಳಿ ತಿಳಿದುಕೊಳ್ಳುತ್ತೇವೆ. ಆಗ ಅವರು, ನಮ್ಮ ಸ್ನೇಹಿತರು, ಜನ ಕೊಟ್ಟಿರುವ “ಬಿರುದು’ ನಾವೇನೂ ಮಾಡೋದು ಸಾರ್ ಎಂದು ತಲೆ ತಗ್ಗಿಸುತ್ತಾರೆ. ಕೆಲ ಹೆಸರುಗಳು ದಿನಬಳಕೆ ವಸ್ತುಗಳಂತೆ ರೂಢಿಗತವಾಗಿದೆ. ಇನ್ನು ಹಳೇ ರೌಡಿಗಳ ಹೆಸರು ಕೂಗಿದಾಗ ಅವರು ನಮ್ಮನ್ನೇ ಗುರಿಯಾಸಿದ ಪ್ರಸಂಗಗಳು ನಡೆದಿವೆ. ಅದನ್ನು ಗಮನಿಸಿದ ಹಿರಿಯ ಅಧಿಕಾರಿಗಳು, ಆತನಿಗೆ ಕಪಾಳಮೋಕ್ಷ ಮಾಡಿ ಎಚ್ಚರಿಕೆ ನೀಡಿದ ಘಟನೆಗಳು ನಡೆದಿವೆ ಎಂದು ಪರೇಡ್‌ನಲ್ಲಿ ರೌಡಿಗಳ ಹೆಸರು ಕೂಗುವ ಸಿಬ್ಬಂದಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.
– ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.