ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ
Team Udayavani, Jan 20, 2022, 5:33 PM IST
1.ನೈಟ್ ಕರ್ಫ್ಯೂ ಸಡಿಲಿಕೆ: ಇಕ್ಕಟ್ಟಿನಲ್ಲಿ ಸಿಎಂ
ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಸಡಿಲಿಕೆ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳದ ಮಧ್ಯೆಯೇ ಸಂಪುಟದ ಸದಸ್ಯರು ಹಾಗೂ ಸಂಸದರು ಕರ್ಫ್ಯೂ ಸಡಿಲಿಸುವಂತೆ ಸಿಎಂ ಮೇಲೆ ಒತ್ತಡ ಹಾಕಿದ್ದಾರೆ. ಶುಕ್ರವಾರ ಕೋವಿಡ್, ಹೊಸ ಗೈಡ್ಲೈನ್ಸ್ ಬಗ್ಗೆ ಚರ್ಚೆಗೆ ಸಿಎಂ ನೇತೃತ್ವದಲ್ಲಿ 1ಗಂಟೆಗೆ ಮಹತ್ವದ ಸಭೆ ಕರೆದಿದ್ದಾರೆ.
2. ನಲಪಾಡ್ ಹಲ್ಲೆ ಮಾಡಿಲ್ಲ,ಯಾರಾದರೂ ದೂರು ಕೊಟ್ಟಿದ್ದಾರಾ : ಈಶ್ವರ್ ಖಂಡ್ರೆ ಪ್ರಶ್ನೆ
ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದು, ನಲಪಾಡ್ ಯಾರ ಮೇಲೂ ಹಲ್ಲೆ ಮಾಡಿಲ್ಲ, ಹಲ್ಲೆ ಸಂಬಂಧ ಯಾರಾದ್ರೂ ದೂರು ಕೊಟ್ಟಿದ್ದಾರಾ? ನಾನು ಅಲ್ಲಿಗೆ ಹೋಗೇ ಇಲ್ಲ ಅಂತಾ ಸಿದ್ದು ಹೇಳಿದ್ದಾನೆ, ಇದೆಲ್ಲಾ ಕಪೋಲ ಕಲ್ಪಿತ ಸುದ್ದಿ. ಗಲಾಟೆ ನಡೆದಿದೆ ಅಂತಾ ಹೋಮ್ ಮಿನಿಸ್ಟರ್ ಹೇಳಿರೋದು ಸುಳ್ಳು. ಖಚಿಯ ಮಾಹಿತಿ ಇದ್ದರೆ ಪ್ರಕರಣ ದಾಖಲು ಮಾಡಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.
3. ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ
ಬಿಜೆಪಿ ಶಾಸಕರಾದ ಬಸವನ ಗೌಡ ಪಾಟೀಲ್ ಯತ್ನಾಳ್ ಮತ್ತು ಎಂ.ಪಿ. ರೇಣುಕಾಚಾರ್ಯ ಭೇಟಿ ಮಾಡಿ ಚರ್ಚೆ ನಡೆಸಿರುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಭೇಟಿಯ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಕಾಲ ಬಂದರೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇವೆ. ಯತ್ನಾಳ್ ಹಿರಿಯರಿದ್ದಾರೆ, ಅವರು ಮಂತ್ರಿಯಾಗಲಿ ಎಂದರು.
4. ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್ ಪುರ್ ಕ್ಷೇತ್ರದಿಂದ ಆಜಾದ್ ಸಮಾಜ್ ಪಕ್ಷದ ವರಿಷ್ಠ ಚಂದ್ರಶೇಖರ್ ಆಜಾದ್ ಅಖಾಡಕ್ಕಿಳಿಯಲಿದ್ದಾರೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಿದೆ.
5. ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,17,532 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 491 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,87,693ಕ್ಕೆ ಏರಿಕೆಯಾಗಿದ್ದು, ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 9,287ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
6. ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ
ಪಾಕಿಸ್ಥಾನದ ಲಾಹೋರ್ನ ಲೋಹಾರಿ ಗೇಟ್ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
7. ಕಿರಾತಕ ಖ್ಯಾತಿಯ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ಕೋವಿಡ್ ಗೆ ಬಲಿ
ಕನ್ನಡದ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಯಶ್ ಅಭಿನಯದ ಕಿರಾತಕ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಪ್ರದೀಪ್ ರಾಜ್ ಅವರು ಗುರುವಾರ ನಿಧನ ಹೊಂದಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನುಕೋವಿಡ್ ಬಲಿ ಪಡೆದಿದೆ.
8. ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ
ಕೋವಿಡ್ ಕಾರಣದಿಂದ ನಾಯಕ ಸೇರಿ ತಂಡದ ಹಲವು ಆಟಗಾರರು ಪಂದ್ಯಕ್ಕೆ ಅಲಭ್ಯರಾದರೂ, ಅಂಡರ್ 19 ವಿಶ್ವಕಪ್ ನ ಎರಡನೇ ಪಂದ್ಯದಲ್ಲೂ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಸಾಂಘಿಕ ಹೋರಾಟ ನಡೆಸಿದ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ 174 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ.