21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು
Team Udayavani, Jan 23, 2022, 3:17 PM IST
ಭಾರತದ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಮತ್ತು ಇಡೀ ಚಳವಳಿಯನ್ನು ತೀವ್ರಗಾಮಿತ್ವದತ್ತ ಹೊರಳಿಸಿ ಕೇವಲ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸುಭಾಷ್‌ಚಂದ್ರ ಬೋಸ್ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವಕ್ಕೆ ಸ್ಫೂರ್ತಿಯಾಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದತ್ತ ಕಣ್ಣು ಹಾಯಿಸಿದಾಗ ಬೋಸರ ಅಪ್ರತಿಮ ದೇಶಪ್ರೇಮ ಮತ್ತು ತ್ಯಾಗಕ್ಕೆ ಸಿಗಬೇಕಾದ ಗೌರವ ಸಿಗದಿರುವುದು ಸ್ಪಷ್ಟವಾಗುತ್ತದೆ. ಅದೇನೇ ಇರಲಿ ದೇಶವಿನ್ನೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವಾಗಲೇ ಸ್ವತಂತ್ರ ಭಾರತ ಹೇಗಿರಬೇಕು, ಪ್ರಜೆಗಳ ಹಕ್ಕು, ಕರ್ತವ್ಯಗಳೇನು, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ, ವಿದೇಶಗಳೊಂದಿಗೆ ಭಾರತದ ಸಂಬಂಧ ವೃದ್ಧಿ, ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ನಂಟನ್ನು ಬಲಪಡಿಸುವ ಮೂಲಕ ದೇಶದ ಘನತೆಯನ್ನು ಎತ್ತಿ ಹಿಡಿಯುವುದು ಇವೇ ಮೊದಲಾದ ವಿಚಾರಗಳ ಬಗೆಗೆ ಸುಭಾಷ್ ಚಂದ್ರ ಬೋಸ್ ಅವರು ತಮ್ಮದೇ ಆದ ದೂರದೃಷ್ಟಿಯನ್ನು ಹೊಂದಿದ್ದರು. ಈ ಬಗೆಗೆ ತಮ್ಮ ಭಾಷಣಗಳಲ್ಲಿ ಮತ್ತು ಲೇಖನಗಳಲ್ಲಿಯೂ ಪ್ರಸ್ತಾವಿಸಿದ್ದರು.
ದೇಶದ ಸ್ವಾತಂತ್ರ್ಯ ಹೋರಾಟ, ಈ ಹೋರಾಟದಲ್ಲಿ ಪಾಲ್ಗೊಂಡ ಮತ್ತು ನೇತೃತ್ವ ವಹಿಸಿದ ನಾಯಕರ ಬಗೆಗೆ ನಿರಂತರವಾಗಿ ಚರ್ಚೆ, ಅಧ್ಯಯನಗಳು ನಡೆಯುತ್ತಲೇ ಬಂದಿದ್ದು ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ವಹಿಸಿದ್ದ ಪಾತ್ರದ ಕುರಿತಂತೆ ದೇಶವಿದೇಶಗಳ ರಾಜಕೀಯ ವಿಶ್ಲೇಷಕರು, ಲೇಖಕರು ಬೆಳಕು ಚೆಲ್ಲತೊಡಗಿದ್ದಾರೆ. ಸ್ವಾತಂತ್ರ್ಯಹೋರಾಟದ ನೇತೃತ್ವ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾದರೂ ಮಹಾತ್ಮಾ ಗಾಂಧಿ ಮತ್ತವರ ಬೆಂಬಲಿಗ ನಾಯಕರೊಂದಿಗಿನ ಅಭಿಪ್ರಾಯಭೇದದ ಕಾರಣದಿಂದಾಗಿ ಪದತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮದೇ ಆದ ಪ್ರತ್ಯೇಕ ವಿಧಾನವನ್ನು ಅನುಸರಿಸಿದ್ದರು. ಬೋಸ್ ಅವರಲ್ಲಿನ ಅಪ್ರತಿಮ ದೇಶಪ್ರೇಮ, ಪ್ರಖರ ಮಾತುಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಅವರಲ್ಲಿದ್ದ ತುಡಿತದ ಕಾರಣಗಳಿಂದಾಗಿಯೇ ಜನಸಾಮಾನ್ಯರಿಂದ “ನೇತಾಜಿ’ ಎಂದು ಸಂಬೋಧಿಸಲ್ಪಟ್ಟಿದ್ದರು. ಮಹಾತ್ಮಾ ಗಾಂಧಿ ಅವರ ಅಹಿಂಸೆ, ಅಸಹಕಾರದಂತಹ ಮಂದಗಾಮಿತ್ವದಿಂದ ಬೇಸತ್ತು ಬೋಸ್ ತೀವ್ರಗಾಮಿ ಹೋರಾಟಕ್ಕೆ ಧುಮುಕಿದರು. ಈ ಸಂದರ್ಭದಲ್ಲಿ “ಇಂಡಿಯನ್ ನ್ಯಾಶನಲ್ ಆರ್ಮಿ’ಯನ್ನು ಪುನರುಜ್ಜೀವನಗೊಳಿಸಿ ತಮ್ಮದೇ ಆದ ಯುವ ಸೇನಾಪಡೆಯನ್ನು ಸಜ್ಜುಗೊಳಿಸಿ ಬ್ರಿಟಿಷರಿಗೆ ಸಡ್ಡು ಹೊಡೆದರು. ಈ ಕ್ರಾಂತಿಕಾರಿ ಹೋರಾಟದಲ್ಲಿ ದೇಶದ ಕೆಲವೊಂದಿಷ್ಟು ಭಾಗಗಳನ್ನು ವಶಪಡಿಸಿಕೊಂಡು ಸ್ವತಂತ್ರ ಭಾರತದ ಘೋಷಣೆಯನ್ನೂ ಮಾಡಿ ರಾಷ್ಟ್ರಧ್ವಜವನ್ನು ಹಾರಿಸಿದ್ದು ಈ ಸೇನೆಯ ಸಾಧನೆ. ಇಷ್ಟು ಮಾತ್ರವಲ್ಲದೆ ನೇತಾಜಿ ಅವರು ಬ್ರಿಟಿಷರಿಂದ ಬಂಧನಕ್ಕೊಳಗಾದ ಸಂದರ್ಭದಲ್ಲಿ ಜೈಲಿನಿಂದ ತಪ್ಪಿಸಿಕೊಂಡು ವಿದೇಶಗಳಿಗೆ ತೆರಳಿ ಅಲ್ಲಿಯೂ ಇಂಡಿಯನ್ ಆರ್ಮಿಗೆ ಯುವಕರನ್ನು ಸೇರ್ಪಡೆಗೊಳಿಸಿದ್ದೇ ಅಲ್ಲದೆ ಕೆಲವೊಂದಿಷ್ಟು ದೇಶಗಳ ಬೆಂಬಲವನ್ನೂ ಪಡೆದುಕೊಂಡರು. ಈ ಮೂಲಕ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ ಬೋಸ್ ದೇಶದ ಯುವಶಕ್ತಿಯ ಪಾಲಿಗೆ ಹೊಸ ಆಶಾಕಿರಣವಾಗಿ ಗೋಚರಿಸಿದ್ದರು.
ಆದರೆ ಬೋಸ್‌ರ ಈ ಎಲ್ಲ ಕ್ರಾಂತಿಕಾರಿ ಹೋರಾಟ ಆಗಿನ ಕಾಂಗ್ರೆಸ್ ನಾಯಕರಿಗೂ ಒಂದಿಷ್ಟು ಮುಜುಗರ ಉಂಟು ಮಾಡಿತ್ತು. ಆದರೆ ಸುಭಾಷ್ ಚಂದ್ರ ಬೋಸರ ಈ ಕ್ರಾಂತಿಕಾರಿ ಸಮರ ಬ್ರಿಟಿಷರ ಜಂಘಾಬಲವನ್ನೇ ಉಡುಗಿಸಿತ್ತು.
ನವಭಾರತದ ಕನಸು
ಇದು ನೇತಾಜಿ ಅವರ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳಾದರೆ ನವ ಭಾರತ ನಿರ್ಮಾಣದ ಬೀಜವನ್ನೂ ಅವರು ಹೋರಾಟದ ಸಂದರ್ಭದಲ್ಲೇ ಬಿತ್ತಿದ್ದರು. ಸ್ವಾತಂತ್ರ್ಯೋತ್ತರ ಭಾರತ ಹೇಗಿರಬೇಕು, ಇಲ್ಲಿನ ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆ ಹೇಗಿರಬೇಕು ಎಂಬ ಕುರಿತಂತೆ ದೂರದೃಷ್ಟಿತ್ವವನ್ನೂ ಅವರು ಹೊಂದಿದ್ದರು. ಸ್ವಾತಂತ್ರ್ಯಕ್ಕೂ ಮುನ್ನವೇ ಸಮಗ್ರ ಭಾರತದ ಕನಸು ಕಂಡ ಮುಂಚೂಣಿಯ ಮತ್ತು ದೂರದೃಷ್ಟಿತ್ವದ ನಾಯಕ ಅವರಾಗಿದ್ದರು. 1938ರಲ್ಲಿ ಹರಿಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇಳೆ ಸುಭಾಷ್ ಚಂದ್ರ ಬೋಸ್ ಅವರು ನವ ಭಾರತದ ಬಗೆಗಿನ ತಮ್ಮ ನೀಲನಕಾಶೆಯನ್ನು ಬಿಚ್ಚಿಟ್ಟಿದ್ದರು. ಅವರು ತಮ್ಮ ಭಾಷಣದಲ್ಲಿ ಪ್ರತಿಯೊಬ್ಬ ಭಾರತೀಯನೂ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದು ಸ್ವಾತಂತ್ರ್ಯವನ್ನು ಅನುಭವಿಸಬೇಕು ಮತ್ತು ಭಾರತೀಯರ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸಿದ್ದರು. ಪ್ರತಿಯೊಬ್ಬನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತವಾಗಿ ಜತೆಗೂಡುವ ಮತ್ತು ಒಗ್ಗೂಡುವ ಹಕ್ಕು, ಕಾನೂನು ಮತ್ತು ನೈತಿಕ ಚೌಕಟ್ಟನ್ನು ಮೀರದೇ ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸೇರುವ ಹಕ್ಕಿನ ಕುರಿತಂತೆಯೂ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದರು. ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ನೈತಿಕತೆಯ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಧಾರ್ಮಿಕ ವಿಧಿವಿಧಾನಗಳ ಪ್ರತಿಪಾದನೆ ಮತ್ತು ಆಚರಣೆ ಹಾಗೂ ಅಲ್ಪಸಂಖ್ಯಾಕರ ಸಂಸ್ಕೃತಿ, ಭಾಷೆ ಮತ್ತು ಲಿಪಿಯ ರಕ್ಷಣೆಯ ಕುರಿತಂತೆಯೂ ಅವರು ಬೆಳಕು ಚೆಲ್ಲಿದ್ದರು. ಧರ್ಮ, ಮತ, ಜಾತಿ, ವರ್ಗ, ಕುಲ, ಲಿಂಗಗಳ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ನಾಗರಿಕನೂ ಈ ನೆಲದ ಕಾನೂನಿಗೆ ಸರಿಸಮಾನ ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು. ಬಡತನ ನಿವಾರಣೆಯೇ ದೇಶದ ಬಲುದೊಡ್ಡ ಸವಾಲು ಎಂಬುದನ್ನು ಬೋಸ್ ಎಂಟು ದಶಕಗಳ ಹಿಂದೆಯೇ ಹೇಳಿದ್ದರು. ದೇಶದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬೋಸ್‌ರ ಈ ದೂರದೃಷ್ಟಿಯ ಸ್ಪಷ್ಟ ಚಿತ್ರಣವನ್ನು ನಾವು ಮನಗಾಣಬಹುದಾಗಿದೆ. ಸ್ವಾತಂತ್ರ್ಯದ ಬಳಿಕ ಬಡತನ, ಅನಕ್ಷರತೆ ಮತ್ತು ಕಾಯಿಲೆಗಳು ಮುಖ್ಯ ಸಮಸ್ಯೆಗಳಾಗಿ ದೇಶವನ್ನು ಕಾಡಲಿವೆ ಎಂದೂ ಹೇಳಿದ್ದರು. ದೇಶದ ಅಂದಿನ ವಾಸ್ತವಿಕ ಚಿತ್ರಣಕ್ಕೆ ದರ್ಪಣ ಹಿಡಿದಿದ್ದ ಬೋಸ್ ಅವರು ಮುಂದಿನ ದಿನಗಳಲ್ಲಿ “ದೇಶ ವಿಭಜನೆ’ಯಾಗುವ ಸಾಧ್ಯತೆಗಳ ಬಗೆಗೆ ಎಚ್ಚರಿಕೆಯನ್ನೂ ನೀಡಿದ್ದರು. ಭಾರತ ಅಖಂಡವಾಗಿ ಉಳಿಯಬೇಕು ಎಂದು ಬಲವಾಗಿ ವಾದಿಸಿದ್ದ ಅವರು ವಿವಿಧ ಜಾತಿ, ಮತ, ಧರ್ಮಗಳ ಜನರ ನಡುವೆ ದ್ವೇಷದ ವಿಷ ಬೀಜ ಬಿತ್ತುತ್ತಿರುವ ಬ್ರಿಟಿಷರ ವಿಭಜನಕಾರಿ ನೀತಿಯ ವಿರುದ್ಧ ಗುಡುಗಿದ್ದರು ಮಾತ್ರವಲ್ಲದೆ ಈ ಬಗ್ಗೆ ಕಾಂಗ್ರೆಸ್ ನಾಯಕರನ್ನೂ ಎಚ್ಚರಿಸಿದ್ದರು. ಆದರೆ ಮಹಾತ್ಮಾ ಗಾಂಧಿ ಆದಿಯಾಗಿ ಕಾಂಗ್ರೆಸ್‌ನ ಅಂದಿನ ಬಹುತೇಕ ನಾಯಕರಿಗೆ ಬೋಸ್‌ರ ಈ ಮತುಗಳು ಅಪಥ್ಯವಾಗಿ ಕಂಡಿತ್ತು. ಬೋಸ್‌ರ ಕಾಲಾನಂತರ ದೇಶ ವಿಭಜನೆಯ ಹಾದಿಯಲ್ಲಿ ಮುನ್ನಡೆದದ್ದೇ ಅಲ್ಲದೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ದೇಶ ಎರಡು ಹೋಳಾಗಿ ವಿಭಜನೆಗೊಂಡುದುದು ವಿಪರ್ಯಾಸವೇ ಸರಿ.
ಇದನ್ನೂ ಓದಿ:ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿ
ಅಷ್ಟು ಮಾತ್ರವಲ್ಲದೆ ವಿದೇಶಗಳೊಂದಿಗಿನ ಭಾರತದ ಸಂಬಂಧ ವೃದ್ಧಿ, ಭಾರತೀಯ ಸಾಂಸ್ಕೃತಿಕ ಸಂಘಟನೆಗಳ ಮೂಲಕ ಅಂತಾರಾಷ್ಟ್ರೀಯ ಬಾಂಧವ್ಯ ವೃದ್ಧಿ ಮತ್ತು ಭಾರತೀಯ ಕೈಗಾರಿಕ ಮತ್ತು ವಾಣಿಜ್ಯ ಚೇಂಬರ್ ದೇಶದಲ್ಲಿನ ಕೈಗಾರಿಕ ಅಭಿವೃದ್ಧಿ ಸಾಧ್ಯತೆ ಮತ್ತು ದೇಶದ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.
1928ರ ಮೇ 3ರಂದು ಪುಣೆಯಲ್ಲಿ ನಡೆದ ಪ್ರಾಂತೀಯ ಸಮಾವೇಶದ ವೇಳೆ ಬೋಸ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಪ್ರಜಾಪ್ರಭುತ್ವವು ಪಾಶ್ಚಾತ್ಯ ವ್ಯವಸ್ಥೆಯಾಗಿರದೆ ಇದು ಮಾನವ ವ್ಯವಸ್ಥೆಯಾಗಿದೆ. ಎಲ್ಲೆಲ್ಲಿ ಮಾನವನು ರಾಜಕೀಯ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದಾನೆಯೋ ಅಲ್ಲೆಲ್ಲ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗಳು ಪ್ರಬಲವಾಗಿ ರೂಪುಗೊಂಡಿವೆ. ದೇಶದ ಇತಿಹಾಸದಲ್ಲಿ ಇಂತಹ ಪ್ರಜಾಪ್ರಭುತ್ವ ಸಂಸ್ಥೆಗಳ ಸಾಕಷ್ಟು ನಿದರ್ಶನಗಳನ್ನು ನಾವು ಕಾಣಬಹುದಾಗಿದೆ. ದೇಶದ ಹಳ್ಳಿ ಮತ್ತು ಪಟ್ಟಣಗಳಲ್ಲಿ ಈ ಹಿಂದಿನಿಂದಲೂ ಇಂತಹುದೇ ಪ್ರಜಾಪ್ರಭುತ್ವ ಸರಕಾರಗಳು ಆಡಳಿತ ನಿರ್ವಹಿಸುತ್ತಿದ್ದವು’ ಎನ್ನುವ ಮೂಲಕ ಪ್ರಜಾಪ್ರಭುತ್ವದ ಮಹತ್ವದ ಬಗೆಗೆ ಬೆಳಕು ಚೆಲ್ಲಿದ್ದರು ಮಾತ್ರವಲ್ಲದೆ ದೇಶದ ಮಟ್ಟಿಗೆ ಪ್ರಜಾಪ್ರಭುತ್ವ ಮಾದರಿಯ ಸರಕಾರವೇ ಸೂಕ್ತ ಎಂಬುದನ್ನು ಮನಗಂಡಿದ್ದರು.
1920ರ ದಶಕದ ಆರಂಭದಿಂದ 1941ರ ಜನವರಿಯಲ್ಲಿ ಅವರು ಭಾರತವನ್ನು ತೊರೆಯುವವರೆಗೆ ಸುಭಾಷ್ ಚಂದ್ರ ಬೋಸ್ ದೇಶದ ವಿವಿಧೆಡೆ ಮಾಡಿದ ಭಾಷಣ, ಬರೆದಿರುವ ಪುಸ್ತಕಗಳಲ್ಲಿ ಸ್ವತಂತ್ರ ಭಾರತದ ಕುರಿತಾಗಿನ ಅವರ ಚಿಂತನೆಗಳು, ದೂರದೃಷ್ಟಿ, ಆಲೋಚನೆಗಳು, ಯೋಜನೆಗಳ ಬಗೆಗೆ ವಿವರಣೆ, ಉಲ್ಲೇಖಗಳನ್ನು ನಾವು ಕಾಣಬಹುದಾಗಿದೆ.
ಇವೆಲ್ಲವುಗಳಿಗೂ ಸಾಕ್ಷ್ಯ ಎಂಬಂತೆ 1928ರಲ್ಲಿ ಬೋಸ್ ಮಾಡಿದ ಭಾಷಣದ ತುಣುಕೊಂದನ್ನು ಉಲ್ಲೇಖೀಸಬಹುದು. “ನಾವು ನಿಜಕ್ಕೂ ದೇಶವನ್ನು ಶ್ರೇಷ್ಠವಾಗಿಸಲು ಬಯಸಿದ್ದೇ ಆದಲ್ಲಿ ಪ್ರಜಾಪ್ರಭುತ್ವ ಸಮಾಜದ ತಳಹದಿಯ ಮೇಲೆ ರಾಜಕೀಯ ಪ್ರಜಾಸತ್ತೆಯನ್ನು ನಿರ್ಮಿಸಬೇಕು. ಹುಟ್ಟು, ಜಾತಿ, ವರ್ಗಗಳ ಆಧಾರದ ಮೇಲೆ ಅಧಿಕಾರ, ಸವಲತ್ತುಗಳು ಹಂಚಿಕೆಯಾಗಬಾರದು. ಈ ಎಲ್ಲ ತಾರತಮ್ಯಗಳು ಇಲ್ಲವಾಗಿ ಸಮಾಜದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶಗಳು ಲಭ್ಯವಾಗಬೇಕು. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕೂಡ ಹೆಚ್ಚಾಗಬೇಕು. ಸಾರ್ವಜನಿಕ ವ್ಯವಹಾರದಲ್ಲಿ ಇನ್ನಷ್ಟು ಹೆಚ್ಚು ಕ್ರಿಯಾಶೀಲರಾಗಿ ಮತ್ತು ಬುದ್ಧಿವಂತರಾಗಿ ಕಾರ್ಯನಿರ್ವಹಿಸುವಂತಾಗಲು ಸೂಕ್ತ ತರಬೇತಿ ಪಡೆಯಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.
ಸುಭಾಷ್ ಚಂದ್ರ ಬೋಸ್ ಪ್ರತಿಪಾದಿಸಿದ್ದ ಬಹುತೇಕ ವಿಚಾರಗಳು 21ನೇ ಶತಮಾನದಲ್ಲೂ ಪ್ರಸ್ತುತವಾಗಿರುವುದು ಸ್ವಯಂವೇದ್ಯ. ಬೋಸ್ ಅವರು 8 ದಶಕಗಳ ಹಿಂದೆ ಸ್ವತಂತ್ರ ಭಾರತಕ್ಕೆ ಯಾವೆಲ್ಲ ಸಮಸ್ಯೆಗಳು ಕಾಡಲಿವೆ ಎಂದು ಹೇಳಿದ್ದರೋ ಆ ಸಮಸ್ಯೆಗಳಿಂದ ದೇಶವಿನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಅದು ಬಡತನ, ಅನಕ್ಷರತೆ ಅಥವಾ ಆರೋಗ್ಯ ಸಮಸ್ಯೆಯಾಗಿರಲಿ ಇವೆಲ್ಲವೂ ದೇಶವನ್ನು ಇಂದಿಗೂ ಕಾಡುತ್ತಲೇ ಇದೆ. ಈ ವಿಚಾರಗಳಲ್ಲಿ ದೇಶ ಬಹಳಷ್ಟು ಸುಧಾರಣೆ ಅಥವಾ ಪ್ರಗತಿ ಕಂಡಿದೆ ಎಂದು ಬೆನ್ನು ತಟ್ಟಿಕೊಂಡರೂ ವಾಸ್ತವ ಚಿತ್ರಣ ನಮ್ಮ ಮುಂದೆಯೇ ಇದೆ. ಸುಭಾಷ್ ಚಂದ್ರ ಬೋಸ್‌ರ ದೂರದೃಷ್ಟಿತ್ವ, ಅವರು ಸ್ವತಂತ್ರ ಭಾರತದ ಬಗೆಗೆ ಹೊಂದಿದ್ದ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮನ್ನಾಳುವವರು ಮರುಸಂಕಲ್ಪ ಮಾಡಬೇಕಿದೆ. ಕೇವಲ ಸರಕಾರ ಅಥವಾ ಆಡಳಿತ ವ್ಯವಸ್ಥೆಯ ಸಂಕಲ್ಪ, ಇಚ್ಛಾಶಕ್ತಿ ಮತ್ತು ಬದ್ಧತೆಯಿಂದ ಇದು ಈಡೇರಲು ಸಾಧ್ಯವಿಲ್ಲ. ಬೋಸ್ ಅವರೇ ಹೇಳಿದಂತೆ ಇಲ್ಲಿ ಜನತೆಯ ಸಹಭಾಗಿತ್ವ ಅತೀಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.