ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?
ಚಾ.ನಗರ ಉಸ್ತುವಾರಿ ಸಚಿವರಾಗಿ ವಿ. ಸೋಮಣ್ಣ ನೇಮಕ
Team Udayavani, Jan 24, 2022, 7:04 PM IST
ಚಾಮರಾಜನಗರ: ಒಂದೇ ಜಿಲ್ಲೆಗೆ ಸೀಮಿತರಾದ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಹಲವು ತಿಂಗಳಿಂದ ಬಳಲುತ್ತಿದ್ದ ಚಾಮರಾಜನಗರ ಜಿಲ್ಲೆಗೆ ನೂತನ ಜಿಲ್ಲಾ ಉಸ್ತುವಾರಿ ಹಾಗೂ ಕೋವಿಡ್ ಉಸ್ತುವಾರಿ ಸಚಿವರಾಗಿ ವಿ. ಸೋಮಣ್ಣ ಅವರನ್ನು ನೇಮಕ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳಲ್ಲಿ ನಿಂತ ನೀರಾಗಿರುವ ಜಿಲ್ಲೆಗೆ ಸೋಮಣ್ಣ ಹರಿಯುವ ಹೊಳೆಯಾಗಲಿದ್ದಾರೆಯೇ ಎಂದು ಜನರು ನಿರೀಕ್ಷಿಸುತ್ತಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುರೇಶ್‌ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡರು. ಅವರ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೂ, ಜಿಲ್ಲೆಗೊಬ್ಬ ಉಸ್ತುವಾರಿ ಸಚಿವರಿದ್ದಾರೆ ಎಂದು ಗುರುತಿಸಲ್ಪಡುವಂತಿದ್ದರು. ಬೆಂಗಳೂರಿನಲ್ಲೇ ಕುಳಿತುಕೊಳ್ಳದೇ ಉಸ್ತುವಾರಿ ಜಿಲ್ಲೆಗೆ ಪದೇ ಪದೇ ಭೇಟಿ ನೀಡಿ ಅಧಿಕಾರಿಗಳ ಸಭೆ, ಕಾಮಗಾರಿಗಳ ವೀಕ್ಷಣೆ ಇತ್ಯಾದಿಗಳಲ್ಲಿ ಸಕ್ರಿಯರಾಗಿದ್ದರು. ಅವರ ಅವಧಿಯಲ್ಲಿ ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆ ತಲೆದೋರಿದವು. ಕೋವಿಡ್ ನಿಯಂತ್ರಣ ಕೆಲಸ ಕಾರ್ಯಗಳಲ್ಲೇ ಸರ್ಕಾರ ಗಮನ ಹರಿಸಬೇಕಾದ್ದರಿಂದ ಜಿಲ್ಲೆಗೆ ನಿರೀಕ್ಷಿತ ಅಭಿವೃದ್ಧಿ ಕೆಲಸ ಮಾಡಲಾಗಲಿಲ್ಲ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ 2021ರ ಮೇ 2 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ದುರಂತದ ಕರಿಛಾಯೆ ಸುರೇಶ್‌ಕುಮಾರ್ ಅವರನ್ನೂ ಕಾಡಿತು. ಸ್ಥಳೀಯ ಜಿಲ್ಲಾಡಳಿತದಿಂದಾದ ಲೋಪಕ್ಕೆ ಅವರೂ ಹೊಣೆ ಹೊರಬೇಕಾಯಿತು. ಆ ಘಟನೆಗೆ ಪಶ್ಚಾತ್ತಾಪ ಪಟ್ಟು ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಆದರೆ ಮುಖ್ಯಮಂತ್ರಿಯವರು ಅವರ ರಾಜೀನಾಮೆ ಅಂಗೀಕರಿಸಲಿಲ್ಲ.
ಇದಾದ ಹಲವು ತಿಂಗಳ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡಲಾಯಿತು. ಅದರಲ್ಲಿ ಸುರೇಶ್‌ಕುಮಾರ್ ಸಹ ಒಬ್ಬರಾಗಿದ್ದರು. ಆ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಯಿತು.
ಮೈಸೂರು ಉಸ್ತುವಾರಿ ಸಚಿವರಾಗಿದ್ದ ಸೋಮಶೇಖರ್ ಅವರು ಚಾಮರಾಜನಗರದತ್ತ ಬಂದದ್ದು ಬಹಳ ಕಡಿಮೆ. ಮೈಸೂರಿನ ಉಸ್ತುವಾರಿ ಕೆಲಸದ ಒತ್ತಡವೇ ಹೆಚ್ಚಿದ್ದು, ಚಾಮರಾಜನಗರ ಜಿಲ್ಲೆಯ ಬಗ್ಗೆ ವಿಶೇಷ ಗಮನ ಹರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಅವಧಿ ಒಂದು ರೀತಿಯಲ್ಲಿ ಉಸ್ತುವಾರಿ ಸಚಿವ ರಹಿತ ಜಿಲ್ಲೆಯಂತೆಯೇ ಇತ್ತು.
ಸೋಮಣ್ಣ ನೇಮಕ ಅಭಿವೃದ್ಧಿಗೆ ದೊರೆತೀತೆ ಚಾಲನೆ?: ಸಚಿವ ವಿ. ಸೋಮಣ್ಣ ಚಾಮರಾಜನಗರ ಜಿಲ್ಲೆಯವರೇನೋ ಎಂಬಷ್ಟು ಈ ಜಿಲ್ಲೆಗೆ ಹಳಬರು. ಕಾಂಗ್ರೆಸ್‌ನಲ್ಲಿದ್ದಾಗಲೂ ಅವರನ್ನು ಚಾಮರಾಜನಗರ ಜಿಲ್ಲೆಯ ಪಕ್ಷ ಸಂಘಟನೆಯ ಹೊಣೆ ಹೊರಿಸಲಾಗಿತ್ತು. ತದನಂತರ ಬಿಜೆಪಿಗೆ ಬಂದಾಗಲೂ ಅವರಿಗೆ ಚಾಮರಾಜನಗರ ಜಿಲ್ಲೆಯ ಸಂಘಟನೆಯ ಹೊಣೆ ನೀಡಲಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ, ಅನೇಕ ಅಭಿವೃದ್ಧಿ ಕಾರ್ಯಗಳ ಕನಸು ಹೊತ್ತಿದ್ದರು. ಆದರೆ ಸರ್ಕಾರದ ಕೊನೆಯ ತಿಂಗಳುಗಳಲ್ಲಿ ಬಂದ ಕಾರಣ ಹೆಚ್ಚಿನ ಕೆಲಸ ಮಾಡಲಾಗಲಿಲ್ಲ. ಬಳಿಕ ಕಾಂಗ್ರೆಸ್ ಸರ್ಕಾರ ಬಂತು. ನಂತರ ಬಿಜೆಪಿ ಸರ್ಕಾರದಲ್ಲಿ ಬಿ ಎಸ್ ವೈ ಅವರ ಬಣ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಲು ಅವಕಾಶ ನೀಡಲಿಲ್ಲ. ಈಗ ಮತ್ತೆ ಅವರಿಗೆ ಉಸ್ತುವಾರಿ ಸ್ಥಾನ ದೊರೆತಿದೆ. ಈ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬ ನಿರೀಕ್ಷೆಗಳಿವೆ. ಅಭಿವೃದ್ಧಿಯಲ್ಲಿ ನಿಂತ ನೀರಾಗಿರುವ ಚಾಮರಾಜನಗರ ಜಿಲ್ಲೆಗೆ ಹೊಸ ಹರಿವು ನೀಡುವರೇ ಎಂದು ಜನತೆ ಕಾಯುತ್ತಿದ್ದಾರೆ.
ಚಾ.ನಗರ ಮತ್ತು ವಿ ಸೋಮಣ್ಣ ಬಾಂಧವ್ಯ :
2004ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ 2006ರಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಅವರನ್ನು ಜಿಲ್ಲೆಗೆ ನೇಮಿಸಲಾಯಿತು. ಲಿಂಗಾಯತ ಮತಗಳು ಹೆಚ್ಚಿರುವ ಚಾಮರಾಜನಗರ ಜಿಲ್ಲೆಗೆ ಆ ಸಮಾಜದವರನ್ನೇ ಉಸ್ತುವಾರಿಯಾಗಿ ನೇಮಿಸಿ ಆ ವರ್ಗದ ಮತಗಳನ್ನು ಕಾಂಗ್ರೆಸ್ ಗೆ ಸೆಳೆಯುವ ಲೆಕ್ಕಾಚಾರದೊಂದಿಗೆ ಅವರನ್ನು ಕೆಪಿಸಿಸಿ ಇಲ್ಲಿಗೆ ಕಳುಹಿಸಿತ್ತು. ಆಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣಾ ಸಮಯ. ಸೋಮಣ್ಣನವರ ಉಸ್ತುವಾರಿಯಲ್ಲಿ ಕಾಂಗ್ರೆಸ್ ಪಕ್ಷ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ತಾಲೂಕು ಪಂಚಾಯಿತಿಯಲ್ಲಿ ಜಯಗಳಿಸಿತು. ಮಾತ್ರವಲ್ಲ ಜಿಲ್ಲಾ ಪಂಚಾಯಿತಿಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆಲೂರಿನ ಎ.ಎಸ್. ನಟರಾಜು ಅಧ್ಯಕ್ಷರಾದರು.
ಆ ಸಂದರ್ಭದಲ್ಲಿ ಸಂತೆಮರಹಳ್ಳಿ ಕ್ಷೇತ್ರದಲ್ಲಿ ಧ್ರುವನಾರಾಯಣ 1 ಓಟಿನಿಂದ ಗೆದ್ದು ಬಂದು, ಜಿಲ್ಲೆಯಲ್ಲಿ ಕಾಂಗ್ರೆಸ್ ನ ಏಕೈಕ ಶಾಸಕರಾಗಿದ್ದರು! ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್, ಗುಂಡ್ಲುಪೇಟೆಯಲ್ಲಿ ಎಚ್.ಎಸ್. ಮಹದೇವಪ್ರಸಾದ್, ಹನೂರಿನಲ್ಲಿ ಪರಿಮಳಾ ನಾಗಪ್ಪ ಜೆಡಿಎಸ್ ಶಾಸಕರಾಗಿದ್ದರು. ಕೊಳ್ಳೇಗಾಲದಲ್ಲಿ ಎಸ್. ಬಾಲರಾಜು ಪಕ್ಷೇತರ ಶಾಸಕರಾಗಿದ್ದರು.
ಸೋಮಣ್ಣ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಸಿ. ಗುರುಸ್ವಾಮಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡರು. ಅದರ 1999ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಚಾಮರಾಜನಗರ ಶಾಸಕರಾಗಿದ್ದ ಸಿ. ಗುರುಸ್ವಾಮಿಯವರು, 2004ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸೇರಿದ್ದರು. ಸೋಮಣ್ಣ ಮತ್ತು ಗುರುಸ್ವಾಮಿ ಜೋಡಿಯ ನಡುವೆ ಹೊಂದಾಣಿಕೆ ಚೆನ್ನಾಗಿತ್ತು.
ಲಿಂಗಾಯತರು ಬೆಂಬಲಿಸುವ ಪಕ್ಷ ಎನಿಸಿದ ಬಿಜೆಪಿಯ ಅಬ್ಬರದ ನಡುವೆ ಕಾಂಗ್ರೆಸ್ ಗೆ ಸೋಮಣ್ಣ ಲಿಂಗಾಯತ ಮತಗಳ ಆಯಸ್ಕಾಂತದಂತಿದ್ದರು. ಚಾಮರಾಜನಗರ ಜಿಲ್ಲೆಯಲ್ಲೂ ಕಾಂಗ್ರೆಸ್‌ಗೆ ಲಿಂಗಾಯತರ ಒಲವು ಗಳಿಸಿಕೊಡುವ ಆಕರ್ಷಣೆಯಾಗಿದ್ದರು.
ನಂತರ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ, ಸೋಮಣ್ಣ ಬಿಜೆಪಿಗೆ ಹೋದರು. 2012-13ರಲ್ಲಿ ಬಿಜೆಪಿ ಸರ್ಕಾರದ ಕೊನೆಯ ವರ್ಷದಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ. ಆಗ ವಸತಿ ಸಚಿವರಾಗಿದ್ದ ಸೋಮಣ್ಣ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಲಾಯಿತು.
ಬಳಿಕ 2015-16ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ, ಬಿಜೆಪಿ, ಸೋಮಣ್ಣನವರನ್ನು ಚಾಮರಾಜನಗರ ಚುನಾವಣಾ ಉಸ್ತುವಾರಿಯಾಗಿ ನೇಮಿಸಿತು. ಆಗ ಕಾಂಗ್ರೆಸ್‌ನ ಪ್ರಬಲ ಹೋರಾಟದ ಅಲೆಯ ನಡುವೆಯೂ 8 ಸ್ಥಾನ ಬಿಜೆಪಿಗೆ ಬರಲು ಸೋಮಣ್ಣ ಕಾರಣಕರ್ತರಾದರು. ಚಾಮರಾಜನಗರ ತಾಲೂಕು ಪಂಚಾಯಿತಿಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿತು. ಆದರೆ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಮೀಸಲಾತಿಯ ಸದಸ್ಯ ಬಿಜೆಪಿಯಲ್ಲಿ ಇಲ್ಲದ ಕಾರಣ, ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಯಿತು.
ಪಕ್ಷ ಸಂಘಟನೆಯ ಉದ್ದೇಶದಿಂದ ನೇಮಕ? :
ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪಕ್ಷ ಸಂಘಟನೆಯ ಉದ್ದೇಶದಿಂದ ಸೋಮಣ್ಣನವರನ್ನು ಉಸ್ತುವಾರಿ ಸಚಿವರನ್ನಾಗಿ ಸಿಎಂ ಬೊಮ್ಮಾಯಿ ನಿಯೋಜಿಸಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಸ್ತುತ ನಾಯಕರೊಬ್ಬರ ಅಗತ್ಯವಿದೆ. ಸುರೇಶ್‌ಕುಮಾರ್ ಅವರು ಉಸ್ತುವಾರಿಯಾಗಿದ್ದಾಗ, ಪಕ್ಷ ಸಂಘಟನೆಗೆ ಹೆಚ್ಚು ಗಮನ ಹರಿಸಲಿಲ್ಲ ಹಾಗೂ ಕಾರ್ಯಕರ್ತರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಪಕ್ಷದ ಕಾರ್ಯಕರ್ತರೇ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಸೋಮಣ್ಣ ಅವರೇ ಉಸ್ತುವಾರಿಯಾಗಿ ಬರಬೇಕು ಎಂದು ಹಲವಾರು ಬಾರಿ ಕಾರ್ಯಕರ್ತರು ಪಕ್ಷದ ವೇದಿಕೆಗಳಲ್ಲಿ ಒತ್ತಾಯಿಸಿದ್ದೂ ಆಗಿದೆ.
ಸಂಘಟನಾ ಚತುರ ಎಂಬ ವಿಶೇಷಣ ಪಡೆದಿರುವ ಸೋಮಣ್ಣ ಅವರು ಬಿಜೆಪಿಯ ವಿವಿಧ ಬಣಗಳನ್ನು ಒಗ್ಗೂಡಿಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕೆಂಬ ಉದ್ದೇಶದಿಂದ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ. ಜಿಲ್ಲೆಯ ಹನೂರು ಕ್ಷೇತ್ರದ ಟಿಕೆಟ್ ಮೇಲೆ ಅವರು ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಪ್ರತಿ ಚುನಾವಣೆಯಲ್ಲೂ ಕೇಳಿಬರುತ್ತಿವೆ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.