ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ
ಹತ್ತಾರು ತೊಡಕುಗಳ ದಾಟಿ ಸಿದ್ಧವಾಗುತ್ತಿದೆ ಸಿಆರ್‌ಝಡ್ ಹೊಸ ನಕ್ಷೆ
Team Udayavani, Jan 24, 2022, 7:05 PM IST
ಮಹಾನಗರ: ಕರಾವಳಿ ಜಿಲ್ಲೆಯ ಬಹುಬೇಡಿಕೆಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಧಿಸೂಚನೆ-2019’ರ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 3 ತಿಂಗಳುಗಳೊಳಗೆ ಹೊಸ ನಕ್ಷೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.
ಹೊಸ ನಕ್ಷೆ ರಚನೆ ಬಗ್ಗೆ ಹಲವು ಕಾಲದಿಂದ ಪ್ರಕ್ರಿಯೆಗಳು ಮಂಗಳೂರಿನಲ್ಲಿ ನಡೆಯುತ್ತಿದೆಯಾದರೂ ನಕ್ಷೆ ಮಾತ್ರ ಬರುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಕೊರೊನಾ ಕಾರಣ, ನಕ್ಷೆ ರಚನೆ ಕಾನೂನು ಪ್ರಕಾರ ಮತ್ತು ಬಹುಸೂಕ್ಷ್ಮ ವಿಚಾರವಾದ್ದರಿಂದ ಕೊಂಚ ತಡವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಆಗಿದ್ದೇನು?
ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು (ಕೆಎಸ್‌ಸಿಝಡ್‌ಎಂಎ), ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಧಿಸೂಚನೆ 2019ರಂತೆ ತಯಾರಿಸಿರುವ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಯೋಜನೆಯ ಕರಡು (ಸಿಝಡ್‌ಎಂಪಿ) ನಕ್ಷೆಯನ್ನು ಚೆನ್ನೈನ ನ್ಯಾಶನಲ್ ಸೆಂಟರ್ ಫಾರ್ ಸಸ್ಟೆನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ತಯಾರಿಸಿದ್ದಾರೆ. ಈ ಕರಡು ನಕ್ಷೆಯನ್ನು ಸಾರ್ವಜನಿಕರು, ಭಾಗಿ ದಾರರ ಅವಗಾಹನೆಗೆ ಪ್ರಕಟಿಸಿ ಅವರಿಂದ ಯಾವುದೇ ಆಕ್ಷೇಪಣೆ, ಸಲಹೆ, ಅನಿಸಿಕೆ ಆಹ್ವಾನಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರವು ಕಳೆದ ವರ್ಷ ಎ. 27ರಂದು ಅಧಿಸೂಚನೆ ಹೊರಡಿ ಸಿತ್ತು. ಇದರಂತೆ ಕರಡು ನಕ್ಷೆ ಬಗ್ಗೆ ಜುಲೈ 31ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆದಿತ್ತು.
ಪೂರಕ ವರದಿಗೆ ಸೂಚನೆ
ಆಕ್ಷೇಪಣೆಗಳ ವಿವರ ಸಹಿತ ವರದಿಯನ್ನು ಸೆ. 30ರಂದು ದ.ಕ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಸಭೆಯಲ್ಲಿ ಮತ್ತೂಮ್ಮೆ ಅನುಮೋದಿಸಿ ನ. 23ರಂದು ಬೆಂಗಳೂರಿ ನಲ್ಲಿ ನಡೆದ ರಾಜ್ಯದ ಉನ್ನತ ಮಟ್ಟದ ಸಭೆಗೆ ಕಳುಹಿಸಲಾಗಿತ್ತು. ಆದರೆ ಸಾರ್ವಜನಿಕ ಆಕ್ಷೇಪಣೆ ಸರಿಪಡಿಸಲು ಇರಬಹುದಾದ ಸಾಧ್ಯತೆಗಳ ವಿವರ ನೀಡುವಂತೆ ಬೆಂಗಳೂರಿ ನಿಂದ ಮಂಗಳೂರು ಅಧಿಕಾರಿಗಳಿಗೆ ಮತ್ತೆ ನಿರ್ದೇಶನ ಬಂದಿತ್ತು. ಅದರಂತೆ ಸೂಕ್ತ ದಾಖಲೆ, ವರದಿಯನ್ನು ಸಿದ್ಧಪಡಿಸಿ ಈ ವರ್ಷ ಜ. 4ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ಪಡೆದು ಜ. 5ರಂದು ಬೆಂಗಳೂರಿಗೆ ಕಳುಹಿಸಲಾಗಿದೆ.
ಮುಂದೇನು?
ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿ ನಲ್ಲಿ ರಾಜ್ಯಮಟ್ಟದ ಸಮಿತಿ ಸಭೆ ನಡೆದು ವರದಿಗಳಿಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಬಳಿಕ ಅದನ್ನು ಚೆನ್ನೈನ ನ್ಯಾಶನಲ್ ಸೆಂಟರ್ ಫಾರ್ ಸಸ್ಟೆನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಕಳುಹಿಸಲಾಗುತ್ತದೆ. ಈಗಾಗಲೇ ಒಟ್ಟುಗೂ ಡಿಸಿದ ತಿದ್ದುಪಡಿಗಳನ್ನು ನಕ್ಷೆಯಲ್ಲಿ ನಮೂದಿ ಸುವ ಕಾರ್ಯ ಸುಮಾರು 2 ವಾರಗಳಲ್ಲಿ ನಡೆಯಲಿದೆ. ಅನಂತರ ನಕ್ಷೆ ಸಿದ್ಧಗೊಳಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ, ಒಪ್ಪಿಗೆ ದೊರೆಯಬೇಕಿದೆ. ಇದಕ್ಕೆ ಕನಿಷ್ಠ 3 ತಿಂಗಳುಗಳು ಅವಶ್ಯವಿದೆ.
ಹೊಸ ನಕ್ಷೆಯಿಂದ 10 ಬೀಚ್‌ಗಳಿಗೆ ಅನುಕೂಲ
ಪ್ರಸಕ್ತ ಕಡಲ ತೀರದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಹೊಸ ಅಧಿಸೂಚನೆ ಪ್ರಕಾರ ಆಯ್ದ ಕಡಲ ತೀರದಲ್ಲಿ ಪ್ರವಾಸೋದ್ಯಮ ಪೂರಕವಾಗಿ ಕೆಲವೊಂದು ತಾತ್ಕಾಲಿಕ ರಚನೆ, ಫುಡ್ ಸ್ಟಾಲ್ ಮಾಡಲು ಅವಕಾಶವಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಲಹೆ ಮಾಡಿರುವ ಸೋಮೇಶ್ವರ, ಪಣಂಬೂರು, ಇಡ್ಯಾ, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು, ಬೆಂಗ್ರೆ ಸಹಿತ ಜಿಲ್ಲೆ 10 ಬೀಚ್‌ಗಳನ್ನು ಅಧಿಸೂಚಿಸಲಾಗಿದೆ. ಮೀನುಗಾರರ ಮನೆ ನಿರ್ಮಾಣಕ್ಕಾಗಿ ಸದ್ಯ 100 ಮೀ.ದೂರದವರೆಗೆ ಸಿಆರ್‌ಝಡ್ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ 50 ಮೀ.ವರೆಗೆ ಮಾತ್ರ ಇರಲಿದೆ. ಇಂತಹ ಹಲವು ಅವಕಾಶ ಹೊಸ ನಕ್ಷೆಯ ಮೂಲಕ ದೊರೆಯಲಿದೆ.
ಶೀಘ್ರ ಹೊಸ ನಕ್ಷೆ
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)ನ ಹೊಸ ಅಧಿ ಸೂಚಿತ ನಕ್ಷೆ ರಚನೆ ಈಗಾಗಲೇ ಕೊನೆಯ ಹಂತದಲ್ಲಿದೆ. ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ನಕ್ಷೆಯ ಕೆಲವು ತಿದ್ದುಪಡಿಗಳಿಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಅದಾದ ಬಳಿಕ ಸುಮಾರು 3 ತಿಂಗಳುಗಳ ಒಳಗೆ ಹೊಸ ನಕ್ಷೆ ಸಿದ್ಧಗೊಳ್ಳುವ ಸಾಧ್ಯತೆಯಿದೆ.
-ಡಾ| ದಿನೇಶ್ ಕುಮಾರ್ ವೈ.ಕೆ., ಪ್ರಾದೇಶಿಕ ನಿರ್ದೇಶಕರು, ಪರಿಸರ-ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.