ಧೂಳು ತಿನ್ನುತ್ತಿದೆ ಪ್ರಾದೇಶಿಕ ವಿಜ್ಞಾನ ಕೇಂದ್ರ!
Team Udayavani, Feb 1, 2022, 1:15 PM IST
ಬೀದರ: ಯುವ ಜನತೆಯಲ್ಲಿ ವಿಜ್ಞಾನದತ್ತ ಆಸಕ್ತಿ ಮೂಡಿಸುವ ಮತ್ತು ಅನ್ವೇಷಣೆಯತ್ತ ಆಕರ್ಷಿಸುವ ಉದ್ದೇಶದೊಂದಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ “ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ’ ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ ಧೂಳು ತಿನ್ನುತ್ತಿದೆ. ಸೂಕ್ತ ನಿರ್ವಹಣೆ ಮತ್ತು ಸದ್ಬಳಕೆಯಾಗದೇ ಕಟ್ಟಡ ಅಕ್ರಮ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಹಲವಾರು ನಿರೀಕ್ಷೆ, ಮಹತ್ವಾಕಾಂಕ್ಷೆಗಳೊಂದಿಗೆ ಸ್ಥಾಪಿಸಿರುವ ವಿಜ್ಞಾನ ಕೇಂದ್ರವನ್ನು ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 2015ರಲ್ಲಿ ಲೋಕಾರ್ಪಣೆ ಮಾಡಿದ್ದರು. ಆದರೆ, ವಿಜ್ಞಾನ ಕೇಂದ್ರವನ್ನು ಕ್ರಿಯಾಶೀಲವಾಗಿರಲು ಅಗತ್ಯ ಹುದ್ದೆಗಳನ್ನು ನೇಮಕ ಮಾಡದಿರುವುದರಿಂದ ಮತ್ತು ಕೇಂದ್ರವನ್ನು ಮುನ್ನಡೆಸಲು ಜಿಲ್ಲಾಡಳಿತ ಉತ್ಸಾಹ ತೊರದೇ ಹಿನ್ನೆಲೆ ಸದ್ಯ ಇದ್ದು ಇಲ್ಲದಂತಾಗಿದೆ.
ಮಕ್ಕಳು, ಯುವ ಜನರಲ್ಲಿ ವೈಜ್ಞಾನಿಕ ಮನೋಭಾವ ರೂಢಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೀದರ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಆರಂಭಿಸಿದೆ. ವಿಜ್ಞಾನದ ಬಗ್ಗೆ ಅರಿವು ಹಾಗೂ ಅದಕ್ಕೆ ಸಂಬಂಧಿತ ಚಟುವಟಿಕೆ ನಡೆಸುವುದು ಕೇಂದ್ರದ ಮೂಲ ಉದ್ದೇಶವಾಗಿದೆ.
ಬೀದರ ಹೊರತುಪಡಿಸಿ ರಾಜ್ಯದ ಇತರೆ 8 ಕಡೆಗಳಲ್ಲಿ ಈ ಮಹತ್ವದ ಕೇಂದ್ರ ಸರಿಯಾಗಿ ನಡೆಯುತ್ತಿದ್ದು, ಮಕ್ಕಳು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಜ್ಞಾನ ಕೇಂದ್ರ ಒಟ್ಟು 5 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಆರಂಭಿಕವಾಗಿ ಬಿಡುಗಡೆಯಾದ 2.60 ಕೋಟಿ ರೂ. ವೆಚ್ಚದಲ್ಲಿ ನಗರದ ಹೊರವಲಯದ ಗಾದಗಿ ರಸ್ತೆಯ, ಕೋಟೆ ಬಲ ಭಾಗದ 5 ಎಕರೆ ವಿಶಾಲ ಪ್ರದೇಶದಲ್ಲಿ ಈ ಕೇಂದ್ರ ನಿರ್ಮಿಸಲಾಗಿದೆ. ಇನ್ನುಳಿದ ಅನುದಾನವನ್ನು ಹಂತ-ಹಂತವಾಗಿ ನೀಡುವುದು ಜತೆಗೆ ಪ್ರತಿ ವರ್ಷ 30 ಲಕ್ಷ ರೂ. ನಿರ್ವಹಣಾ ವೆಚ್ಚ ಬಿಡುಗಡೆ ಮಾಡುವುದು ಇಲಾಖೆಯ ಉದ್ದೇಶವಾಗಿತ್ತು.
ಬೃಹತ್ ಕಟ್ಟಡ ನಿರ್ಮಾಣ ಹಾಗೂ ನೋಡುಗರ ಆಸಕ್ತಿ ಕೆರಳಿಸುವ, ಮನರಂಜನೆ ಜತೆಗೆ ವಿಜ್ಞಾನದ ಅರಿವು ಮೂಡಿಸುವ ಪ್ರದರ್ಶಿಕೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಜಿಲ್ಲಾಡಳಿತ ಕೇಂದ್ರವನ್ನು ಆರಂಭಿಸುವಲ್ಲಿ ತೋರಿದ ಆಸಕ್ತಿಯನ್ನು ಕ್ರಿಯಾಶೀಲವಾಗಿಡುವ ಉತ್ಸುಕತೆ ತೋರಲಿಲ್ಲ. ಶಿಕ್ಷಕರು, ಮಕ್ಕಳಿಗೆ ವಿಜ್ಞಾನದ ಮಾಹಿತಿ ನೀಡುವ ನುರಿತ ವಿಶ್ಲೇಷಣಾಕಾರರು, ನಿರ್ವಹಣೆ ಮಾಡಬೇಕಾದ ಸಿಬ್ಬಂದಿ ಮತ್ತು ಸಹಾಯಕರ ಹುದ್ದೆಗಳನ್ನೇ ಭರ್ತಿ ಮಾಡಿಕೊಳ್ಳಲಿಲ್ಲ. ಕೇವಲ ನಿರ್ವಹಣೆಗಾಗಿ ಸಮಿತಿಯೊಂದನ್ನು ರಚಿಸಿ ಜಿಲ್ಲಾಡಳಿತ ಕೈ ತೊಳೆದುಕೊಂಡಿದೆ.
ಹುದ್ದೆಗಳ ಕೊರತೆ ಕೇಂದ್ರ ನಿಷ್ಕ್ರೀಯಕ್ಕೆ ಕಾರಣವಾಗಿದ್ದು, ಕೇವಲ ಓರ್ವ ಪ್ರಾಥಮಿಕ ಶಾಲಾ ಶಿಕ್ಷಕನನ್ನು ನೇಮಿಸಲಾಗಿದೆ. ಇನ್ನೊಂದೆಡೆ ಜಿಲ್ಲಾಡಳಿತ ಸಮಿತಿಯ ಒಮ್ಮೆಯೂ ಸಭೆ ನಡೆಸದಿರುವುದು ಹಾಗೂ ಹುದ್ದೆಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಅಥವಾ ತಾತ್ಕಾಲಿಕ ಸಿಬ್ಬಂದಿ ನೇಮಕಕ್ಕೂ ಮುಂದಾಗದಿರುವುದು ವಿಜ್ಞಾನ ಆಸಕ್ತರಲ್ಲಿ ಬೇಸರ ಮೂಡಿಸಿದೆ.
ಕೇಂದ್ರದಲ್ಲಿ ಏನೇನಿದೆ?
ನವೀನ ತಂತ್ರಜ್ಞಾನ ಆಧಾರಿತ ಈ ವಿಜ್ಞಾನ ಕೇಂದ್ರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪವನ ಶಕ್ತಿ, ಬಾಹ್ಯಾಕಾಶ, ಮಣ್ಣು, ನೀರು, ಗಾಳಿಯಲ್ಲಿರುವ ವೈವಿಧ್ಯ ಮತ್ತು ನ್ಯೂಟನ್ ಸೇರಿದಂತೆ ವಿಜ್ಞಾನಿಗಳ ನಿಯಮಗಳ ಪ್ರಾತ್ಯಕ್ಷಿಕೆಗಳು ಇವೆ. ನಾಲ್ಕು ಹಂತಗಳಲ್ಲಿ ಸಜ್ಜುಗೊಳ್ಳುತ್ತಿರುವ ಈ ಉಪ ವಿಜ್ಞಾನ ಕೇಂದ್ರ ಒಟ್ಟು 4 ವಿಜ್ಞಾನ ಪ್ರದರ್ಶನಾಲಯ ಹಾಲ್‌ಗಳು ಹಾಗೂ ಒಂದು ಸಭಾ ಭವನ ಹೊಂದಿದೆ. ಪ್ರದರ್ಶನಾಲಯದಲ್ಲಿ ಭೌತಶಾಸ್ತ್ರ, ಖಗೋಳಶಾಸ್ತ್ರ, ಜೀವಶಾಸ್ತ್ರದ ಮಾದರಿಗಳು, ಯಂತ್ರಗಳಿವೆ. ಬಿರ್ಲಾ ವಿಜ್ಞಾನ ಕೇಂದ್ರ-ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಗಳ ತಜ್ಞರು ಅವನ್ನು ಸಿದ್ಧಪಡಿಸಿದ್ದಾರೆ.
ಬೀದರನಲ್ಲಿ 2.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೂಕ್ತ ನಿರ್ವಹಣೆ ಕೊರತೆಯಿಂದ ನಿಷðಯೋಜಕವಾಗಿದೆ. ಹುದ್ದೆಗಳ ನೇಮಕಾತಿ ಮತ್ತು ಕೇಂದ್ರವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗದ ಕಾರಣ ಇದ್ದು ಇಲ್ಲದಂತಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ವೀಕ್ಷಣೆಗೆ ಬಾರದಿರುವುದು ಕೋಟಿ ರೂ. ವೆಚ್ಚದ ವಿಜ್ಞಾನದ ಮಾದರಿಗಳು ಸಹ ನಿರುಪಯುಕ್ತವಾಗಿವೆ. ಕೇಂದ್ರವನ್ನು ಸದ್ಬಳಕೆಯಾಗುವ ದಿಸೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕಿದೆ. -ಬಾಬುರಾವ್ ದಾನಿ, ಕಾರ್ಯದರ್ಶಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬೀದರ
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.