ರೆಟಿನಾ ಪರೀಕ್ಷೆಯಿಂದ ಹೃದಯ ಸಂಬಂಧಿ ಕಾಯಿಲೆ ಪತ್ತೆ ಸಾಧ್ಯ!


Team Udayavani, Feb 7, 2022, 8:15 AM IST

ರೆಟಿನಾ ಪರೀಕ್ಷೆಯಿಂದ ಹೃದಯ ಸಂಬಂಧಿ ಕಾಯಿಲೆ ಪತ್ತೆ ಸಾಧ್ಯ!

ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸಮಸ್ಯೆಗಳು ಒಂದೇ ಸಮನೆ ಹೆಚ್ಚುತ್ತಿದೆ. ಕಳೆದೆರಡು ವರ್ಷಗಳ ಅವಧಿಯ ಅಂಕಿಅಂಶಗಳನ್ನು ಗಮನಿಸಿದಾಗ ಹೃದಯದ ಮತ್ತು ಮೆದುಳಿನ ಆಘಾತದ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸಾಬೀತಾಗುತ್ತದೆ. ಮತ್ತೂಂದು ಆತಂಕಕಾರಿ ವಿಚಾರ ಎಂದರೆ ಇವೆರಡೂ ಮಾರಣಾಂತಿಕ ಕಾಯಿಲೆಗಳಿಗೆ ಎಳೆ ವಯಸ್ಸಿನವರೂ ತುತ್ತಾಗುತ್ತಿರುವುದು. ಸಹಜವಾಗಿಯೇ ವೈದ್ಯಕೀಯ ತಜ್ಞರು ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿದ್ದು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲ ಕಾಯಿಲೆಗಳಂತೆ ಹೃದಯ ಮತ್ತು ಮೆದುಳಿನ ಆಘಾತದ ಕಾಯಿಲೆಗಳ ಸಂಭಾವ್ಯತೆ ಮತ್ತು ಇದನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚುವ ನಿಟ್ಟಿನಲ್ಲಿ ತಜ್ಞರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಇವೆಲ್ಲದರ ನಡುವೆ ಅಮೆರಿಕದ ವೈದ್ಯಕೀಯ ಸಂಶೋಧಕರು ಒಂದು ಆಶಾದಾಯಕ ವರದಿಯನ್ನು ಬಹಿರಂಗಪಡಿಸಿದ್ದಾರೆ.

ತಜ್ಞರಿಂದ ಅಚ್ಚರಿಯ ಅಂಶ ಬಹಿರಂಗ
ವಿಶ್ವಾದ್ಯಂತ ದಿನೇದಿನೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವಂತೆಯೇ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿಗೆ ತುತ್ತಾಗುತ್ತಿರುವವರ ಸಂಖ್ಯೆ ಅಧಿಕಗೊಳ್ಳುತ್ತಿವೆ. ಇದಕ್ಕೆ ಬದಲಾಗುತ್ತಿರುವ ಜೀವನಶೈಲಿ, ಆಹಾರ-ವಿಹಾರಗಳಲ್ಲಿನ ಬದಲಾವಣೆ, ವಿವಿಧ ಕಾಯಿಲೆಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಔಷಧಗಳ ಪಾರ್ಶ್ವ ಪರಿಣಾಮ ಸಹಿತ ಹಲವು ಕಾರಣಗಳಿವೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಕೊರೊನೋತ್ತರ ಕಾಲಘಟ್ಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಮಂದಿ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದು ಕೇವಲ ಜನತೆಗೆ ಮಾತ್ರವಲ್ಲದೆ ವೈದ್ಯ ಲೋಕಕ್ಕೆ ಕೂಡ ಸವಾಲಾಗಿ ಪರಿಣಮಿಸಿದ್ದು ಈ ಬಗ್ಗೆ ಗಂಭೀರ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿದೆ. ಹೃದಯ ಸಂಬಂಧಿ ಕಾಯಿಲೆ ಮತ್ತು ಲಕ್ವಾ ಅಥವಾ ಪಾರ್ಶ್ವವಾಯುಗೆ ಕಾರಣವಾಗಿರುವ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸಮರ್ಪಕ ಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿ ಫ‌ಲಿತಾಂಶವನ್ನು ಪಡೆಯಬಹುದಾಗಿದೆ. ಇದರಿಂದ ಹಲವರ ಪ್ರಾಣವನ್ನು ಉಳಿಸಬಹುದಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೆದುಳಿನ ಆಘಾತದಂತಹ ಕಾಯಿಲೆಗಳನ್ನು ಮೂಲದಲ್ಲಿ ಪತ್ತೆ ಹಚ್ಚುವುದರ ಜತೆಯಲ್ಲಿ ಇಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ಮೊದಲೇ ತಿಳಿದುಕೊಳ್ಳುವ ಪ್ರಯತ್ನಗಳನ್ನು ವೈದ್ಯಕೀಯ ಸಂಶೋಧಕರು ನಡೆಸುತ್ತಿದ್ದಾರೆ. ಅಮೆರಿಕದ ಸಂಶೋಧಕರು ಇತ್ತೀಚೆಗೆ ನಡೆಸಿದ ವೈದ್ಯಕೀಯ ಅಧ್ಯಯನದ ವೇಳೆ ಅಚ್ಚರಿಯ ಅಂಶವೊಂದನ್ನು ಕಂಡುಕೊಂಡಿದ್ದು ಇದು ಇಂಥ ಕಾಯಿಲೆಗಳ ಪತ್ತೆಯನ್ನು ಸುಲಭಸಾಧ್ಯವಾಗಿಸಲಿದೆ.

ಏನಿದು ಸಂಶೋಧನೆ?
ಮಾನವನ ಕಣ್ಣಿನ ಒಂದು ಸರಳ ಪರೀಕ್ಷೆಯಿಂದ ಹೃದ್ರೋಗದ ಅಪಾಯವನ್ನು ಪತ್ತೆ ಹಚ್ಚಬಹುದಾಗಿದೆ. ಈ ಪರೀಕ್ಷೆಯಿಂದ ಒಬ್ಬ ವ್ಯಕ್ತಿಗೆ ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅಮೆರಿಕದ ಸಂಶೋಧಕರ ಪ್ರಕಾರ ರೆಟಿನಾವನ್ನು ಪರೀಕ್ಷಿಸುವ ಮೂಲಕ ಮಾನವನ ಕಣ್ಣಿನಲ್ಲಿ ರಕ್ತ ಪರಿಚಲನೆ ಯಾವ ಪ್ರಮಾಣದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದು ಹೃದಯಕಾಯಿಲೆಗಳ ಸುಳಿವನ್ನೂ ನೀಡುತ್ತದೆ.

ರಕ್ತ ಪರಿಚಲನೆಯಲ್ಲಿನ ಏರುಪೇರಿನಿಂದ ಪತ್ತೆ
ಅಮೆರಿಕದ ಸ್ಯಾನ್‌ಡಿಯಾಗೋದ ಕ್ಯಾಲಿಪೋರ್ನಿಯಾ ವಿವಿ ಸಂಶೋಧಕರು ತಮ್ಮ ಇತ್ತೀಚಿನ ಸಂಶೋಧನೆಯಲ್ಲಿ ಈ ವಿಷಯವನ್ನು ಕಂಡುಕೊಂಡಿದ್ದಾರೆ. ಕಣ್ಣಿನ ಪರೀಕ್ಷೆಯಿಂದ ನಿಖರವಾದ ಫ‌ಲಿತಾಂಶ ದೊರೆಯುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಕಡಿಮೆಯಾದಾಗ ಅಥವಾ ರಕ್ತದ ಕೊರತೆ ಉಂಟಾದಾಗ ರೆಟಿನಾದ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ರೆಟಿನಾ ಪರೀಕ್ಷಿಸುವ ಮೂಲಕ ಸ್ಕೀಮಿಯಾ ಎಂಬ ಹೃದ್ರೋಗವನ್ನು ಕಂಡುಹಿಡಿಯಬಹುದು. ಅಂಥ ಪರಿಸ್ಥಿತಿಯಲ್ಲಿ ದೇಹದಲ್ಲಿನ ಆಮ್ಲಜನಕ ಮಟ್ಟವು ಕಡಿಮೆಯಾಗುತ್ತದೆ ಮತ್ತು ಅಪಧಮನಿಗಳಿಗೆ ಹಾನಿಯುಂಟಾಗುವ ಸಂಭವ ಹೆಚ್ಚಿರುತ್ತದೆ. ಇನ್ನು ಕ್ಯಾಲಿಫೋರ್ನಿಯಾ ವಿವಿ ವಿಜ್ಞಾನಿಗಳು ರೆಟಿನಾದ ಪರೀಕ್ಷೆಯಲ್ಲಿ ಸ್ಕಿಜೊಫ್ರೆàನಿಯಾದ ರೋಗಲಕ್ಷಣಗಳನ್ನು ಪತ್ತೆ ಹಚ್ಚಿ ಆ ಬಗ್ಗೆ ಹೃದ್ರೋಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಅಲ್ಲಿನ ವೈದ್ಯಕೀಯ ವಿಜ್ಞಾನಿಗಳು ಇದೇ ಮಾದರಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮಾಹಿತಿ ಕಲೆ ಹಾಕತೊಡಗಿದ್ದಾರೆ.

ಕಣ್ಣಿನ ಕಾಯಿಲೆಗಳ ಬಗೆಗೆ ತಿಳಿದುಕೊಳ್ಳಲು ಸಂಶೋಧಕರು 13, 940 ರೋಗಿಗಳ ರೆಟಿನಾ ಪರೀಕ್ಷೆ ನಡೆಸಿ ಅಧ್ಯಯನ ನಡೆಸಿದ್ದರು. ಈ ರೋಗಿಗಳ ರೆಟಿನಾವನ್ನು 2014ರ ಜುಲೈ ಮತ್ತು 2019ರ ಜುಲೈ ನಡುವೆ ಪರೀಕ್ಷಿಸಲಾಯಿತು. ಈ ಪರೀಕ್ಷೆಯಲ್ಲಿ 84 ಜನರಲ್ಲಿ ಹೃದ್ರೋಗ ದೃಢಪಟ್ಟಿದೆ. ಈ 84 ಮಂದಿಯಲ್ಲಿ 58 ಮಂದಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅದರಲ್ಲಿ 26 ಮಂದಿ ಸ್ಟ್ರೋಕ್‌ಗೆ ಒಳಗಾಗಿದ್ದರು.

ರೆಟಿನಾ ಪರೀಕ್ಷೆ ಏಕೆ ಅಗತ್ಯ?
ರೆಟಿನಾ ಪರೀಕ್ಷೆಯ ಸಹಾಯದಿಂದ ತಜ್ಞರು ಗ್ಲುಕೋಮಾ ಮತ್ತು ಮ್ಯಾಕ್ಯುಲಾರ್‌ ಹೋಲ್‌ನಂತಹ ರೋಗಗಳನ್ನು ನಿರ್ಣಯಿಸುತ್ತಾರೆ. ಅಲ್ಲದೆ ಇದು ಸರಳವಾದ ಪರೀಕ್ಷೆಯಾಗಿದ್ದು ಇದರಿಂದ ರೋಗಿ ಯಾವುದೇ ರೀತಿಯ ನೋವನ್ನು ಅನುಭವಿಸಬೇಕಾಗಿಲ್ಲ. ಸಂಶೋಧಕರ ಹೇಳುವ ಪ್ರಕಾರ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹೃದ್ರೋಗದಿಂದ ಬಳಲುತ್ತಿಲ್ಲ ಎಂದಾದರೆ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಅಂತಹ ಸಂದರ್ಭ ರೆಟಿನಾ ಪರೀಕ್ಷೆ, ರೋಗಿಯ ಕಣ್ಣುಗಳ ಪರೀಕ್ಷೆ ಅವನ ಹೃದಯದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಹೃದ್ರೋಗಗಳನ್ನು ಮೊದಲೇ ಪತ್ತೆ ಮಾಡಿದಲ್ಲಿ ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ವ್ಯಾಯಾಮದ ಮೂಲಕ ಗಂಭೀರ ಪರಿಣಾಮಗಳನ್ನು ತಡೆಯಬಹುದು.

ರಕ್ತ ಹೆಪ್ಪುಗಟ್ಟುವಿಕೆ ಸಾಧ್ಯತೆ ಹೆಚ್ಚು
ಕೋವಿಡ್‌ ಆವರಿಸಿಕೊಂಡ ಅನಂತರದಲ್ಲಿ ಲಕ್ವ ಹಾಗೂ ಹೃದಯ ಸಂಬಂಧ ಕಾಯಿಲೆಗಳು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಯುವಜನತೆಯಲ್ಲೂ ಲಕ್ವ ಕಾಣಿಸಿಕೊಳ್ಳುತ್ತಿರುವುದು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಕೋವಿಡ್‌ ಬಾಧಿಸಿರುವವರಿಗೆ ಲಕ್ವ ಬರುವ ಸಾಧ್ಯತೆ ಇರುತ್ತದೆ. ಕಾರಣ, ಕೊರೊನಾದಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದರಿಂದ ಅದು ಲಕ್ವಕ್ಕೆ ಕಾರಣವಾಗಬಹುದು ಎಂದು ಉಡುಪಿ ಜಿಲ್ಲೆಯ ಕೋವಿಡ್‌ ನೋಡಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೆಚ್ಚುತ್ತಿರುವ ಸಾವಿನ ಪ್ರಮಾಣ
-ಯುಕೆಯಲ್ಲಿ ಪ್ರತೀ ವರ್ಷ 20 ಲಕ್ಷಕ್ಕೂ ಹೆಚ್ಚು ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದೇ ಅಮೆರಿಕದಲ್ಲಿ ಈ ಅಂಕಿ ಅಂಶ 8 ಲಕ್ಷ. ಇತರ ದೇಶಗಳಲ್ಲೂ ಇಂತಹ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸಲೇ ಬೇಕಾದ ಅನಿವಾರ್ಯತೆ ಇದೆ.
-ವಿಶ್ವಸಂಸ್ಥೆ ಪ್ರಕಾರ 2030ರ ವೇಳೆಗೆ ಸಾಂಕ್ರಾಮಿಕವಲ್ಲದ ರೋಗಗಳಿಂದ ಮೂರನೇ ಒಂದು ಭಾಗದಷ್ಟು ಜನರು ಅಕಾಲಿಕ ಮರಣಕ್ಕೆ ತುತ್ತಾಗಬಹುದು. ಇವುಗಳಲ್ಲಿ ರಕ್ತನಾಳದ ಕಾಯಿಲೆಗಳು, ದೀರ್ಘ‌ ಕಾಲದ ಉಸಿರಾಟದ ಕಾಯಿಲೆಗಳು, ಕ್ಯಾನ್ಸರ್‌ ಮತ್ತು ಮಧುಮೇಹದಂತಹ ಕಾಯಿಲೆಗಳು ಸೇರಿವೆ.
-ಗ್ಲೋಬಲ್‌ ಬರ್ಡನ್‌ ಆಫ್ ಡಿಸೀಸ್‌ ಪ್ರಕಾರ, ಭಾರತದಲ್ಲಿ ಸಂಭವಿಸುತ್ತಿರುವ ಒಟ್ಟಾರೆ ಸಾವುಗಳಲ್ಲಿ ಸುಮಾರು ಕಾಲು ಭಾಗದಷ್ಟು (24.8 ಪ್ರತಿಶತ) ಹೃದಯ ರಕ್ತನಾಳದ ಕಾಯಿಲೆಗಳಿಂದ(CVD) ಉಂಟಾಗುತ್ತದೆ.
-ವೈದ್ಯಕೀಯ ಪ್ರಮಾಣೀಕರಣದ ವರದಿಗಳ ವಿಶ್ಲೇಷಣೆಯು ಸಹ CVDಯಿಂದ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. 1990ರಲ್ಲಿ ಶೇ. 20.4ರಷ್ಟಿದ್ದ ಸಾವಿನ ಪ್ರಮಾಣ 2004ರಲ್ಲಿ ಶೇ. 27.1ಕ್ಕೆ ಏರಿತು.
-ಭಾರತ ಸೇರಿದಂತೆ ಕಡಿಮೆ ಆದಾಯದ ದೇಶಗಳಲ್ಲಿ ಇVಈಯಿಂದ ಉಂಟಾಗುವ ಸಾವಿನ ಪ್ರಕರಣಗಳು ಮಧ್ಯಮ ಮತ್ತು ಹೆಚ್ಚಿನ ಆದಾಯದ ದೇಶಗಳಿಗಿಂತ ಹೆಚ್ಚು.

ರೆಟಿನಾ ಕಣ್ಣಿನ ಪ್ರಮುಖವಾದ ಅಂಗ. ಇದಕ್ಕೆ ರಕ್ತನಾಳದ ಮೂಲಕ ರಕ್ತ ಪೂರೈಕೆ ಆಗಬೇಕು. ರಕ್ತ ಎಲ್ಲಿಯಾದರೂ ಹೆಪ್ಪುಗಟ್ಟಿ ಪೂರೈಕೆ ನಿಂತಾಗ ದೃಷ್ಟಿ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳು ಪರೀಕ್ಷೆಗೆ ಬಂದಾಗ ರೆಟಿನಾ ಪರೀಕ್ಷೆ ವೇಳೆ ರಕ್ತ ಎಲ್ಲಿ ಹೆಪ್ಪುಗಟ್ಟಿದೆ ಎಂಬುದು ತಿಳಿದು ಬರುತ್ತದೆ. ಅದು ಕುತ್ತಿಗೆಯಲ್ಲಾಗಲಿ ಅಥವಾ ಹೃದಯದ ಯಾವುದೇ ಭಾಗದಲ್ಲಿ ಆಗಿದ್ದರೂ ತಿಳಿಯುತ್ತದೆ. ಪರೀಕ್ಷಿಸಿದ ಕೂಡಲೇ ಅದನ್ನು ಹೃದ್ರೋಗ ತಜ್ಞರಿಗೆ ರೆಫ‌ರ್‌ ಮಾಡುತ್ತೇವೆ. ಅವರು ಕೆಲವೊಂದು ಪರೀಕ್ಷೆ ನಡೆಸಿ, ಅನಂತರ ಚಿಕಿತ್ಸೆ ನೀಡುತ್ತಾರೆ. ರಕ್ತ ಹೆಪ್ಪುಗಟ್ಟಿದಾಗ ಕಾಣಿಸಿಕೊಳ್ಳುವ ಹೃದಯದ ಸಮಸ್ಯೆಗಳನ್ನು ರೆಟಿನಾ ಪರೀಕ್ಷೆಯಿಂದ ತಿಳಿಯಲು ಸಾಧ್ಯವಿದೆ.
– ಡಾ| ಕೃಷ್ಣಪ್ರಸಾದ್‌ ಕೂಡ್ಲು, ನೇತ್ರತಜ್ಞ, ಉಡುಪಿ

ಲಸಿಕೆಯಿಂದ ಅಡ್ಡಪರಿಣಾಮ ಇಲ್ಲ
ಕೋವಿಡ್‌ ಲಸಿಕೆ ಪಡೆದವರು ಲಕ್ವಕ್ಕೆ ಒಳಗಾಗುತ್ತಾರೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ ಮತ್ತು ಅಂತಹ ಪ್ರಕರಣ ವರದಿಯಾಗಿಲ್ಲ. ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಕೂಡ ತೀರಾ ಕಡಿಮೆಯಿದೆ. ಹೃದಯ ಸಂಬಂಧಿ ಕಾಯಿಲೆಗಳು ಇದರಿಂದ ಬರುತ್ತದೆ ಎಂಬುದಕ್ಕೂ ಯಾವುದೇ ಆಧಾರವಿಲ್ಲ. ರಕ್ತದೊತ್ತಡ(ಬಿ.ಪಿ) ಇದ್ದಾಗ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಜತೆಗೆ ರಕ್ತದ ಪರಿಚಲನೆಯಲ್ಲಿ ವ್ಯತ್ಯಾಸವಾದಾಗಲೂ ಹೆಪ್ಪುಗಟ್ಟುವ ಸಾಧ್ಯತೆ ಇದೆ. ಇದರಿಂದ ಲಕ್ವ ಕಾಣಿಸಿಕೊಳ್ಳುತ್ತದೆ. ಇದರ ಜತೆಗೆ ಬೇರೆ ಕಾರಣಗಳಿಂದಾಗಿಯೂ ಲಕ್ವ ಬರಬಹುದು.
– ಡಾ| ಎಂ.ಜಿ. ರಾಮ, ಉಡುಪಿ ಜಿಲ್ಲಾ ಲಸಿಕಾ ಅಧಿಕಾರಿ

-ಪ್ರೀತಿ ಭಟ್‌ ಗುಣವಂತೆ
-ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

muslim marriage

Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

muslim marriage

Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.