ಮತ್ತೆ ಮತ್ತೆ ಏಕಾಂಗಿ ಆದ ಪಾಕಿಸ್ಥಾನ; ಪುಲ್ವಾಮಾ ದಾಳಿಗೆ 3 ವರ್ಷ
Team Udayavani, Feb 14, 2022, 6:55 AM IST
ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಗೆ ಈಗ 3 ವರ್ಷ. ಅಂದು ಪಾಕ್ ಮೂಲದ ಉಗ್ರರು ಸೇನಾ ವಾಹನವೊಂದರ ಮೇಲೆ ದಾಳಿ ಮಾಡಿ 40 ಯೋಧರ ಸಾವಿಗೆ ಕಾರಣರಾಗಿದ್ದರು. ಇದಾದ ಮೇಲೆ ಭಾರತ ಬಾಲಾಕೋಟ್‌ನ ಮೇಲೆ ದಾಳಿ ಮಾಡಿ ಪಾಕ್ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಈ ಘಟನೆಯಾದ ಮೇಲೆ ಭಾರತ, ಪಾಕಿಸ್ಥಾನವನ್ನು ಹೆಚ್ಚು ಕಡಿಮೆ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗುವಂತೆ ಮಾಡಿದೆ. ಇತ್ತ ಚೀನ, ಅತ್ತ ಟರ್ಕಿ ಬಿಟ್ಟರೆ ಪಾಕಿಸ್ಥಾನವನ್ನು ಮಾತನಾಡಿಸುವವರೇ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ.
ಪುಲ್ವಾಮಾ ದಾಳಿಯ ಕಹಿ ನೆನಪು
ಅದು 2019, ಫೆ. 14. ಜಮ್ಮುವಿನಿಂದ ಶ್ರೀನಗರಕ್ಕೆ 2,500 ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಲಿನಲ್ಲಿ ಸಾಗುತ್ತಿದ್ದವು. ಮಧ್ಯಾಹ್ನ 3.30 ಇರಬಹುದು; ಆವಂತಿಪುರ ನಗರದ ಲೇಥಿಪೋರಾದ ಬಳಿ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನವೊಂದಕ್ಕೆ ಬಂದು ಅಪ್ಪಳಿಸಿತು. ಅಲ್ಲಿ ಏನಾಯಿತು ಎಂದು ಗೊತ್ತಾಗುವ ಹೊತ್ತಿಗೆ ಸೇನಾ ವಾಹನವೊಂದು ಹೊತ್ತಿ ಉರಿಯುತ್ತಿತ್ತು. ಇದರಲ್ಲಿ ಇದ್ದ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು.
ಕಾಶ್ಮೀರದಲ್ಲೇ ಅತ್ಯಂತ ದೊಡ್ಡ ದಾಳಿ
2019, ಫೆ. 14ರಂದು ಸೇನಾ ವಾಹನಗಳನ್ನೇ ಗುರಿಯಾಗಿಸಿಕೊಂಡು ನಡೆದ ಈ ದಾಳಿ ಕಣಿವೆ ರಾಜ್ಯಗಳಲ್ಲೇ ಅತ್ಯಂತ ದೊಡ್ಡ ಪ್ರಮಾಣದ್ದು. ಕಳೆದ ಮೂರು ದಶಕಗಳಿಂದಲೂ ಕಣಿವೆ ರಾಜ್ಯದಲ್ಲಿ ಭಯೋತ್ಪಾದನ ಚಟುವಟಿಕೆಗಳು ನಡೆಯುತ್ತಲೇ ಇದ್ದು, ಅಂದು ಮಾತ್ರ ದೊಡ್ಡ ಮಟ್ಟದಲ್ಲಿ ಹಾನಿಯಾಗಿತ್ತು. ಈ ದಾಳಿಯನ್ನು 20 ವರ್ಷದ ಉಗ್ರ ಆದಿಲ್ ಅಹ್ಮದ್ ದರ್ ಎಂಬಾತ ನಡೆಸಿದ್ದ. 12ನೇ ತರಗತಿ ಪರೀಕ್ಷೆಗೆ ಹಾಜರಾಗಬೇಕಿದ್ದ ಈತ ಮನೆಯಿಂದ ಕಾಣೆಯಾಗಿದ್ದ ಎಂದು ಪೋಷಕರು ಹೇಳುತ್ತಾರೆ. ಆರಂಭದಲ್ಲಿ ಐಇಡಿ ಸ್ಫೋಟಕಗಳನ್ನು ಬಳಸಿ ಈ ದಾಳಿ ನಡೆಸಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಅನಂತರ 350 ಕೆಜಿ ಸ್ಫೋಟಕಗಳನ್ನು ಹೊತ್ತ ಸ್ಕಾರ್ಪಿಯೋವೊಂದು ಸೇನಾ ವಾಹನಕ್ಕೆ ಢಿಕ್ಕಿ ಹೊಡೆಯಿತು. ಪಾಕಿಸ್ಥಾನ ಮೂಲದ ಜೈಶೆ ಮೊಹಮ್ಮದ್ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತು. ಆದರೆ ಈ ಘಟನೆಗೆ ನಾವು ಕಾರಣವಲ್ಲ ಎಂದೇ ಪಾಕಿಸ್ಥಾನ ವಾದ ಮಾಡಿತು.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಬೆಂಬಲ
ಈ ಘಟನೆ ಬಳಿಕ ಭಾರತದ ಜತೆಗೆ ಅಮೆರಿಕ ಸೇರಿ ಹಲವಾರು ದೇಶಗಳು, ಉಗ್ರರಿಗೆ ಆಶ್ರಯ ನೀಡಬೇಡಿ ಎಂದು ಪಾಕಿಸ್ಥಾನಕ್ಕೆ ಕಠಿನ ಸಂದೇಶ ರವಾನಿಸಿದವು. ಚೀನ, ರಷ್ಯಾ ಕೂಡ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದವು. ಒಟ್ಟಾರೆಯಾಗಿ 45 ದೇಶಗಳು ಭಾರತದ ಜತೆಗೆ ನಿಂತವು. ಫ್ರಾನ್ಸ್ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿತಲ್ಲದೇ ಉಗ್ರರ ಮೇಲೆ ದಾಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿತು. ಚೀನ ಕೂಡ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ, ಉಗ್ರರ ಕೃತ್ಯವನ್ನು ಖಂಡಿಸಿತು. ಆದರೂ ಪಾಕಿಸ್ಥಾನಕ್ಕೆ ತಾನು ನೀಡುತ್ತಿರುವ ಬೆಂಬಲವನ್ನು ಮಾತ್ರ ನಿಲ್ಲಿಸಲಿಲ್ಲ.
ರಾಜತಾಂತ್ರಿಕ ಸಂಬಂಧ ಕಡಿತ
ಪುಲ್ವಾಮಾ ಘಟನೆಯಾಗುತ್ತಿದ್ದಂತೆ ಭಾರತ ಪಾಕಿಸ್ಥಾನದ ಜತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕತ್ತರಿಸಿಕೊಂಡಿತು. ಅಲ್ಲದೆ ಪಾಕಿಸ್ಥಾನಕ್ಕೆ ನೀಡಲಾಗಿದ್ದ ಅತ್ಯಂತ ಪರಮಾಪ್ತ ದೇಶ ಎಂಬ ಸ್ಟೇಟಸ್ ಅನ್ನೂ ಹಿಂಪಡೆಯಲಾಯಿತು. ಈ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವ ಮುನ್ನ ಭಾರತ ಅಮೆರಿಕ, ಚೀನ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಸೇರಿ 25 ದೇಶಗಳಿಗೆ ಮಾಹಿತಿ ನೀಡಿತು.
ಬಾಲಾಕೋಟ್ ದಾಳಿ
ಪುಲ್ವಾಮಾ ಘಟನೆಯ ವಿರುದ್ಧದ ಸೇಡು ಎಂಬಂತೆ ಭಾರತೀಯ ವಾಯು ಸೇನೆ 2019 ಫೆ.26ರ ಬೆಳಗಿನ ಜಾವ, ಪಾಕಿಸ್ಥಾನದಲ್ಲಿರುವ ಬಾಲಾಕೋಟ್‌ನ ಮೇಲೆ ವೈಮಾನಿಕ ದಾಳಿ ನಡೆಸಿತು. ಇಲ್ಲಿ ಉಗ್ರರ ಅಡಗುದಾಣಗಳು ಮತ್ತು ಸೇನೆಯ ನೆಲೆಗಳು ಇದ್ದವು. ಇವುಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಯಿತು. ಅಂದರೆ ಬಾಲಾಕೋಟ್‌ನಲ್ಲಿದ್ದ ಜೈಶೆ ಮೊಹಮ್ಮದ್(ಜೆಇಎಂ) ಮತ್ತು ಖೈಬರ್ ಪಕು¤ಂಖ್ವಾ ಪ್ರದೇಶದಲ್ಲಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ತರಬೇತಿ ನೆಲೆಗಳು ಇಲ್ಲಿದ್ದವು.
ಈ ದಾಳಿಗೆ ಭಾರತ ಇಸ್ರೇಲಿ ಸ್ಪೈಸ್ ಬಾಂಬ್‌ಗಳನ್ನು ಬಳಕೆ ಮಾಡಿತ್ತು. ಇವು ಕ್ಷಿಪಣಿಗಳಾಗಿದ್ದು, ಜಿಪಿಎಸ್ ಆಧರಿತವಾಗಿವೆ. ಟಾರ್ಗೆಟ್ ಅನ್ನು ಫಿಕ್ಸ್ ಮಾಡಿ ಇವುಗಳನ್ನು ಉಡಾಯಿಸಿದರೆ ನಿಖರವಾಗಿ ಗುರಿ ಮುಟ್ಟುವುದು ಇವುಗಳ ಸಾಮರ್ಥ್ಯ. ಇಡೀ ದಾಳಿಗೆ ಆಪರೇಶನ್ ಬಂದರ್ ಎಂಬ ಹೆಸರಿಡಲಾಗಿತ್ತು. 12 ಮಿರಾಜ್ 2000 ಯುದ್ಧ ವಿಮಾನಗಳನ್ನು ದಾಳಿಗಾಗಿ ಬಳಸಿಕೊಳ್ಳಲಾಗಿತ್ತು.
ಭಾರತೀಯ ಸೇನೆಯ ಮಾಹಿತಿ ಪ್ರಕಾರ, ಬಾಲಾಕೋಟ್ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿತ್ತು. ನಮ್ಮ ಬಾಂಬ್‌ಗಳು ಶೇ. 80ರಷ್ಟು ಗುರಿ ಮುಟ್ಟಿದ್ದವು. ಯಾವುದೇ ಸನ್ನಿವೇಶದಲ್ಲೂ ನಾವು ದಾಳಿ ಮಾಡಬಲ್ಲೆವು ಎಂಬುದಕ್ಕೆ ಈ ಬಾಲಾಕೋಟ್ ಕಾರ್ಯಾಚರಣೆ ಉದಾಹರಣೆಯಾಯಿತು.
ಪಾಕ್‌ಗೆ ಕಠಿನ ಎಚ್ಚರಿಕೆ
ಪುಲ್ವಾಮಾ ಘಟನೆ ಬಳಿಕ ದೇಶದಲ್ಲಿ ಪಕ್ಷ ಭೇದ ಮರೆತು ಎಲ್ಲ ಪಕ್ಷಗಳು ಒಂದಾದವು. ಪ್ರಧಾನಿ ನರೇಂದ್ರ ಮೋದಿ ಅವರು, ಉಗ್ರರ ಈ ಕೃತ್ಯವನ್ನು ಮರೆಯುವುದಿಲ್ಲ. ಸಕಾಲದಲ್ಲಿ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಪಾಕ್‌ನ ವಿಫಲ ದಾಳಿ
ಬಾಲಾಕೋಟ್ ಮೇಲಿನ ದಾಳಿಯಿಂದ ಕಂಗೆಟ್ಟ ಪಾಕಿಸ್ಥಾನ 2019ರ ಫೆ. 27ರಂದು ಕಾಶ್ಮೀರದಲ್ಲಿ ವೈಮಾನಿಕ ದಾಳಿ ನಡೆಸುವ ಯತ್ನಕ್ಕೆ ಕೈಹಾಕಿತು. ಆದರೆ ಮೊದಲೇ ಸಿದ್ಧಗೊಂಡಿದ್ದ ಭಾರತದ ಸಮರ ವಿಮಾನಗಳು ಪಾಕ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು. ಪಾಕಿಸ್ಥಾನ ಅಮೆರಿಕದಿಂದ ಪಡೆದಿದ್ದ ಎಫ್-16 ಯುದ್ಧ ವಿಮಾನಗಳನ್ನು ಬಳಕೆ ಮಾಡಿತ್ತು. ಆದರೆ ಭಾರತ ಮಿರಾಜ್ 3 ಯುದ್ಧ ವಿಮಾನಗಳನ್ನು ಬಳಸಿ ಎಫ್-16 ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿತು. ಆದರೆ ಈ ದಾಳಿಯ ಸಂದರ್ಭದಲ್ಲಿ ಮಿಗ್-21 ಯುದ್ಧ ವಿಮಾನದ ಮೂಲಕ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೊಡೆದುರುಳಿಸಿದರು. ಆದರೆ, ವಿಂಗ್ ಕಮಾಂಡರ್ ಅಭಿನಂದನ್ ಅವರ ವಿಮಾನವೂ ಧರೆಗುರುಳಿದ್ದರಿಂದ ಪ್ಯಾರಾಚೂಟ್ ಮೂಲಕ ಕೆಳಗಿಳಿದರು. ಆದರೆ ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಿದ್ದರು. ಆಗ ಪಾಕ್ ಇವರನ್ನು ಕರೆದುಕೊಂಡು ಹೋಗಿತ್ತು. ಎರಡು ದಿನಗಳ ಅನಂತರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕ್ ಅಭಿನಂದನ್ ಅವರನ್ನು ವಾಪಸ್ ಕಳುಹಿಸಿತ್ತು.
ಈಗಲೂ ಪಾಕ್ ಅತಂತ್ರ
ಪುಲ್ವಾಮಾ ದಾಳಿಯಾಗಿ ಈಗಾಗಲೇ ಮೂರು ವರ್ಷಗಳಾಗಿವೆ. ಪಾಕಿಸ್ಥಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಎಲ್ಲ ಗೌರವಗಳನ್ನು ಕಳೆದುಕೊಂಡಿದೆ. ಉಗ್ರರಿಗೆ ನೆರವು ಕೊಡುತ್ತಿರುವ ದೇಶವಾಗಿ ಈಗಲೂ ಗುರುತಿಸಿಕೊಂಡಿರುವ ಪಾಕಿಸ್ಥಾನವನ್ನು ಜಗತ್ತಿನ ಒಂದೆರಡು ದೇಶಗಳನ್ನು ಬಿಟ್ಟರೆ ಯಾರೂ ನಂಬುತ್ತಿಲ್ಲ. ಅತ್ತ ಅಮೆರಿಕವೂ ಪಾಕಿಸ್ತಾನವನ್ನು ಕೈಬಿಟ್ಟಿದೆ. ಈಗ ಪಾಕಿಸ್ಥಾನದ ಪಾಲಿಗೆ ಉಳಿದಿರುವುದು ಚೀನ ಮಾತ್ರ. ಆರ್ಥಿಕವಾಗಿಯೂ ಕಂಗೆಟ್ಟಿರುವ ಪಾಕಿಸ್ಥಾನಕ್ಕೆ ಮುಂದೇನು ಮಾಡುವುದು ಎಂಬುದೇ ಗೊತ್ತಾಗದ ಸನ್ನಿವೇಶ ಸೃಷ್ಟಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.