![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 14, 2022, 4:12 PM IST
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ಸಮಾಲೋಚನೆ ಸಭೆ ನಡೆಯಲಿದ್ದು ಆಯ್ದ ಮಠಾಧೀಶರುಗಳಿಗೆ ಸಭೆಯಲ್ಲಿ ಭಾಗವಹಿಸಲು
ಕನ್ನಡ ಸಾಹಿತ್ಯ ಪರಿಷತ್ತು ಆಹ್ವಾನ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಫೆ.17 ರಂದು ಬೆಳಗ್ಗೆ 11ಗಂಟೆಗೆ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಸಮಾಲೋಚನೆ ಸಭೆ ನಡೆಯಲಿದ್ದು ಬೆಂಗಳೂರಿನ ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ,
ಬೇಲಿಮಠದ ಸ್ವಾಮೀಜಿ ಹಾಗೂ ಸೊಲ್ಲಾಪುರದ ಅಕ್ಕಲಕೋಟೆಯ ವಿರಕ್ತ ಮಠದ ಸ್ವಾಮೀಜಿ ಸೇರಿದಂತೆ ಇನ್ನೂ ಕೆಲವು ಮಠಾಧೀಶರುಗಳಿಗೆ ಕಸಾಪ ವತಿಯಿಂದ ಆಹ್ವಾನ ನೀಡಲಾಗಿದೆ.
ಕನ್ನಡದ ಬಗ್ಗೆ ಎಲ್ಲಾ ಮಠಗಳಿಗೂ ಆಸಕ್ತಿ ಇದೆ. ಆದರೆ, ಎಲ್ಲ ಮಠಾಧೀಶರಿಗೆ ಆ ವೇಳೆ ಬರಲು ಸಾಧ್ಯವಾಗದು. ಆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಲು ಆಯ್ದ ಕೆಲವು ಮಠಾಧೀಶರಿಗೆ ಆಹ್ವಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಾಡಿನ ಮತ್ತಷ್ಟು ಮಠಾಧೀಶರಿಗೆ ಆಹ್ವಾನ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ
ಪರಿಷತ್ತಿನ ಮೂಲಗಳು ತಿಳಿಸಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ ಸಂಬಂಧಿಸಿದ ಈ ಸಮಾಲೋಚನಾ ಸಭೆಗೆ ಮಠಾಧೀಶರಲ್ಲದೆ ನಾಡಿನ ಹಿರಿಯ ಸಾಹಿತಿಗಳಿಗೆ, ಕನ್ನಡಪರ ಚಿಂತಕರುಗಳಿಗೆ ಮತ್ತು
ಹೋರಾಟಗಾರರಿಗೂ ಆಹ್ವಾನ ನೀಡಲಾಗಿದೆ. ಆ ಸಭೆಯಲ್ಲಿ ಈಗಾಗಲೇ ಬೈಲಾ ತಿದ್ದುಪಡಿ ಸಂಬಂಧ ಹಿರಿಯ ಕಾನೂನು ತಜ್ಞರು ನೀಡಿರುವ ಸಲಹೆಗಳ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲಿ
ಮಠಾಧೀಶರು, ಸಾಹಿತಿಗಳು, ಕನ್ನಡ ಪರ ಚಿಂತಕರು ತಮ್ಮ ಸಲಹೆಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ ವಿಷಯಗಳ ಬಗ್ಗೆ ಚರ್ಚೆ?: ಇದು ಪರಿಷತ್ತಿನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಸಮಾಲೋಚನೆ ಸಭೆ ಅಷ್ಟೇ. ಇಲ್ಲೆ ಎಲ್ಲ ನಿರ್ಣಯ ಆಗುವುದಿಲ್ಲ ಪರಿಷತ್ತಿನ ಬೈಲಾಗಳ
ಬೇಕು-ಬೇಡಗಳ ಬಗ್ಗೆ ಚರ್ಚೆ ನಡೆಯಲಿದೆ. ಆ ನಂತರ ಹಂತ-ಹಂತವಾಗಿ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ
ಮಾಹಿತಿ ನೀಡಿದ್ದಾರೆ. ಆ್ಯಪ್ ಮೂಲಕ ಸದಸ್ಯತ್ವ ನೋಂದಣಿ, ಸದಸ್ಯತ್ವ ಶುಲ್ಕ 500 ರಿಂದ 250 ರೂ.ಗೆ ಇಳಿಕೆ ಮಾಡುವುದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಓದಿನ ಮಿತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಕಾಗಿನೆಲೆಯಲ್ಲಿ ಪರಿಷತ್ತಿನ ವಿಶೇಷ ಸರ್ವ ಸದಸ್ಯರ ಸಭೆ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಠಾಧೀಶರು, ಸಾಹಿತಿಗಳು, ಕನ್ನಡಪರ ಹೋರಾಟ ಗಾರರ ಸಮಾಲೋಚನೆ ಸಭೆ ನಡೆದ ಬಳಿಕ ಪರಿಷತ್ತಿನ ಕಾರ್ಯಕಾರಿಣಿ ನಡೆಯಲಿದೆ. ಆ ನಂತರ ಕಾಗಿನೆಲೆಯಲ್ಲಿ ಪರಿಷತ್ತಿನ ವಿಶೇಷ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಗಿನೆಲೆಯಲ್ಲಿ ನಡೆಯಲಿರುವ ವಿಶೇಷ ಸರ್ವಸದಸ್ಯರ ಸಭೆಯ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ . ಶೀಘ್ರದಲ್ಲೆ ಈ ಬಗ್ಗೆ ವೇಳಾಪಟ್ಟಿ ನಿಗದಿಯಾಗಲಿದೆ. ಅಲ್ಲಿ ಹಾವೇರಿಯಲ್ಲಿ ನಡೆಯಬೇಕಾಗಿರುವ 86ನೇ ಅಖೀಲ ರತ ಕನ್ನಡ ಸಾಹಿತ್ಯ ಸಮ್ಮೇಳದ ಬಗ್ಗೆಯೂ ಸಮಾಲೋಚನೆ ನಡೆಯಲಿದೆ ಎಂದು ಹೇಳಿದ್ದಾರೆ.
– ದೇವೇಶ ಸೂರಗುಪ್ಪ
You seem to have an Ad Blocker on.
To continue reading, please turn it off or whitelist Udayavani.