ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ದಿಢೀರ್ ಕಡ್ಡಾಯ!
ಪೈಲಟ್ ಯೋಜನೆ ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿ
Team Udayavani, Feb 19, 2022, 8:05 AM IST
ಕುಂದಾಪುರ: ರಾಜ್ಯದ ನಾಲ್ಕು ಉಪನೋಂದಣಿ ಕಚೇರಿಗಳಲ್ಲಿ ಪ್ರಾಪರ್ಟಿ ಕಾರ್ಡ್ ಇಲ್ಲದೆ ಆಸ್ತಿ ನೋಂದಣಿ ಮಾಡದಂತೆ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗಿದೆ. ಇದಿನ್ನೂ ಪೈಲಟ್ ಹಂತವಾದ ಕಾರಣ ದಿನಕ್ಕೆ 45ರಷ್ಟು ನೋಂದಣಿಯಾಗುವ ಕಚೇರಿಗಳಲ್ಲಿ ಕಷ್ಟಪಟ್ಟು 12ರಷ್ಟು ನೋಂದಣಿ ಆಗುತ್ತಿದೆ.
ಸಂಯೋಜಿತ ತಂತ್ರಾಂಶ
ಈ ವರೆಗೆ ಕಾವೇರಿ ತಂತ್ರಾಂಶದಲ್ಲಿ ನೋಂದಣಿಯಾಗುತ್ತಿತ್ತು. ಭೂಮಿ ತಂತ್ರಾಂಶ ಜೋಡಣೆಯಾಗಿತ್ತು. ಸರ್ವೆ ನಂಬರ್ ಹಾಕಿ ದಾಗ ಭೂಮಿ ಮೂಲಕ ಮಾಹಿತಿ ದೊರೆತು, ಕಾವೇರಿ ತಂತ್ರಾಂಶದಲ್ಲಿ ಆಸ್ತಿ ಪರ ಭಾರೆ ಮಾಹಿತಿ ಅಪ್ ಡೇಟ್ ಆಗಿ ಎರಡೂ ತಂತ್ರಾಂಶಗಳಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತಿತ್ತು. ಈಗ ಕಾವೇರಿ ಬ್ಲಾಕ್ ಚೈನ್ ಎಂಬ ಸಂಯೋಜಿತ ತಂತ್ರಾಂಶ ಜಾರಿಗೆ ಬಂದಿದೆ.
ಕೊಂಕಣ ಸುತ್ತಿ ಮೈಲಾರಕ್ಕೆ
ಹೊಸ ತಂತ್ರಾಂಶದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು. ಆರಂಭದಲ್ಲಿ ಆಸ್ತಿ ಮಾರುವ, ಕೊಳ್ಳುವವರ ಹೆಬ್ಬೆಟ್ಟಿನ ಗುರುತು ಆಧಾರ್ ಸರ್ವರ್‌ಗೆ ಪಡೆದು ಪರಿಶೀಲಿಸಲ್ಪಡಬೇಕು. ಬಳಿಕ ಎಟಿಎಂ ಕಾರ್ಡ್ ಮಾದರಿಯ, ನಂಬರ್ ಹೊಂದಿದ ಪ್ರಾಪರ್ಟಿ ಕಾರ್ಡ್ ಪ್ರಿಂಟ್ ತೆಗೆಯ ಬೇಕು. ಆ ಬಳಿಕ ನೋಂದಣಿ ಪ್ರಕ್ರಿಯೆ, ದಾಖಲೆಗಳ ಸಲ್ಲಿಕೆ. ಮತ್ತೆ ಪರಿಶೀಲನೆ (ಸರ್ವರ್ ಮೂಲಕ ವೇರಿಫೈ) ಆಗಿ ರಿಜಿಸ್ಟ್ರೇಶನ್. ಬಳಿಕ ಉಪನೋಂದಣಾಧಿಕಾರಿ ಅಧಿಕೃತಗೊಳಿಸಬೇಕು. ಆಗ ಸರ್ವರ್‌ನಿಂದ ಮೊದಲೇ ಕಳುಹಿಸಿದ ಸ್ಕ್ಯಾನ್ ಮಾಡಿದ ದಾಖಲೆ ಗಳು ಪರಿಶೀಲನೆಗೆ ಒಳಪಟ್ಟು ಉಪ ನೋಂದಣಾಧಿಕಾರಿಯ ಕಂಪ್ಯೂಟರ್‌ಗೆ ಬರುತ್ತವೆ. ಆಮೇಲೆ ಡಿಜಿಟಲ್ ಸಹಿ ಹಾಕಿ, ಹೆಬ್ಬೆಟ್ಟಿನ ಗುರುತು ನೀಡಬೇಕು. ಉಪ ನೋಂದಣಿ ಕಚೇರಿ ಅವಧಿಯನ್ನು ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ವಿಸ್ತರಿಸಲಾಗಿದೆ.
ನಿಧಾನ ಪ್ರಕ್ರಿಯೆ
ಆಧಾರ್, ಕಾವೇರಿ, ಭೂಮಿ ತಂತ್ರಾಶದಲ್ಲಿ ಅಧಿಕೃತಗೊಳಿಸುವ ಪ್ರಕ್ರಿಯೆ ನಡೆಯಬೇಕು. ಮೂರು ಸರ್ವರ್‌ಗಳ ಪೈಕಿ ಒಂದು ನಿಧಾನ ವಿದ್ದರೂ ವಿಳಂಬ ತಪ್ಪಿದ್ದಲ್ಲ. ಆಧಾರ್ ಹೆಬ್ಬೆಟ್ಟು ಪಡೆಯುವಾಗ ಸಮಸ್ಯೆ ಆಗುತ್ತದೆ. ಸ್ಥಳೀಯ ಕಂಪ್ಯೂಟರ್‌ನಲ್ಲೂ ಡ್ರೈವ್‌ಗಳು ಕೈ ಕೊಡುತ್ತವೆ. ಇದೆಲ್ಲ ಕಾರಣದಿಂದ ಒಟ್ಟು ಪ್ರಕ್ರಿಯೆ ತಡವಾಗುತ್ತಿದೆ.
ಎರಡು ಕಡೆ ಯಶಸ್ವಿ
ಗುಬ್ಬಿಯಲ್ಲಿ ಕಳೆದ ವರ್ಷ ಅ. 21ರಿಂದ, ಜಗಳೂರಿನಲ್ಲಿ ಅ. 28ರಿಂದ ಪೈಲಟ್ ಯೋಜನೆ ಯಶಸ್ವಿಯಾಗಿದೆ. ಈ ಹಿನ್ನೆಲೆ ಯಲ್ಲಿ ಕುಂದಾಪುರ, ಶಿರಸಿ, ಶಿಡ್ಲಘಟ್ಟ, ಹೊಸ ದುರ್ಗ ದಲ್ಲಿ ಫೆಬ್ರವರಿ ಎರಡನೆಯ ವಾರ ದಿಂದ ಹೊಸ ತಂತ್ರಾಂಶದ ಮೂಲಕ ನೋಂದಣಿ ಯಾಗಬೇಕೆಂದು ಆದೇಶ ಹೊರಡಿಸಲಾಗಿದೆ. ಶುಕ್ರವಾರದಿಂದ ತಂತ್ರಾಂಶವೇ ಬದಲಾಗಿದೆ. ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದ್ದು, ಈ 4 ಕಡೆ ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಮೂಲಗಳ ಪ್ರಕಾರ ವಿಳಂಬದಿಂದಾಗಿ ಗುಬ್ಬಿ, ಜಗಳೂರಿನಲ್ಲಿ ದಿನದಲ್ಲಿ ಶೇ. 40ರಷ್ಟು ಕಡಿಮೆ ನೋಂದಣಿ ನಡೆಯುತ್ತಿದೆ.
ಸಾರ್ವಜನಿಕರಿಗೆ ಸಮಸ್ಯೆ
ಆಸ್ತಿ ನೋಂದಣಿ, ಪಾಲುಪಟ್ಟಿ, ಬ್ಯಾಂಕ್ ಸಾಲಕ್ಕೆ ಅಡಮಾನ, ಸಾಲದ ದಾಖಲೆ ತೆಗೆಸುವುದು ಹೀಗೆ ನಾನಾ ಪ್ರಕ್ರಿಯೆಗೆ ದೂರದಲ್ಲಿರುವವರು ಊರಿಗೆ ಬರುತ್ತಾರೆ. ಆದರೆ ದಿಢೀರ್ ಆಗಿ ಇಂತಹ ಬದಲಾವಣೆ ಮಾಡಿದಾಗ ಸಮಸ್ಯೆಯಾಗುತ್ತದೆ.
ಪೈಲಟ್ ಹಂತ ಯಶಸ್ವಿಯಾಗುವ ವರೆಗೆ ಈ ಹಿಂದಿನ ಪದ್ಧತಿ ಮತ್ತು ಹೊಸ ಪದ್ಧತಿ ಎರಡೂ ಇರಲಿ. ಇಲ್ಲದಿದ್ದರೆ ದಿನಗಟ್ಟಲೆ ಕಾಯುವ ಪರಿಸ್ಥಿತಿ ಬರುತ್ತಿದೆ.
-ಗಿರೀಶ್ ಜಿ.ಕೆ.
ಸದಸ್ಯರು, ಪುರಸಭೆ
ಫೆ. 18ರಿಂದ ಬದಲಾದ ತಂತ್ರಾಂಶ ದಂತೆ ನೋಂದಣಿ ಮಾಡ ಲಾಗುತ್ತಿದೆ. ಮೊದಲಿಗೆ ಪ್ರಾಪರ್ಟಿ ಕಾರ್ಡ್ ಮಾಡಿ ಅನಂತರ ನೋಂದಣಿ ಯಾಗುತ್ತಿದೆ. ಇದಕ್ಕೆ ಬೇಕಾದ ಸಲಕರಣೆಗಳು ಇಲಾಖೆಯಿಂದ ಬಂದಿವೆ.
-ಯೋಗೇಶ್ ಎಂ.ಆರ್.
ಉಪನೋಂದಣಾಧಿಕಾರಿ, ಕುಂದಾಪುರ
- ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.