ಫೆಬ್ರವರಿ 21; ವಿಶ್ವ ಮಾತೃಭಾಷಾ ದಿನಾಚರಣೆಯ ಔಚಿತ್ಯ
ಕ್ರಿಕೆಟ್‌ನಲ್ಲಿ ಬಳಸಲ್ಪಡುವ ನೋಬಾಲ್‌ಗೆ ಕನ್ನಡದಲ್ಲಿ ಪದಕೊಟ್ಟರೆ ಯೋಗ್ಯವಾದ ಅರ್ಥ ಬರುವುದಿಲ್ಲ
Team Udayavani, Feb 21, 2022, 10:15 AM IST
ಮಳೆ ಸುರಿಯುವ ಕ್ರಮವನ್ನು ಗ್ರಹಿಸಿದ ಕನ್ನಡಿಗರು ತುಂತುರು ಮಳೆ, ಜಿನುಗು ಮಳೆ, ನರಿ ಮದುವೆ ಮಳೆ, ಸೂಜಿ ಮಳೆ, ಸೋನೆ ಮಳೆ, ಕಾಡು ಮಳೆ, ಜಡಿಮಳೆ ಹೀಗೆ ಮಳೆಯ ಸಾಂದ್ರತೆಯ ಕುರಿತು ಪದಪ್ರಯೋಗಗಳಿವೆ. ಒಂದು ಭಾಷೆಯೊಳಗೆ ಮಳೆಯ ಬಗ್ಗೆ ಇಷ್ಟೊಂದು ಹುಲುಸಾದ ಪದ ಪ್ರಯೋಗಗಳಿವೆ ಎಂದರೆ ಆ ಪರಿಸರದಲ್ಲಿ ಸುರಿಯುವ ಮಳೆಯ ಪ್ರಕೃತಿಯೂ ಹಾಗೆಯೇ ಇದೆ ಎಂದರ್ಥ. ಹಾಗಾಗಿ ಭಾಷೆ ಮತ್ತು ಬದುಕು ಬೇರೆಯಲ್ಲ.
ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಒಂದು ಭಾಷೆಯ ಸಾಂಸ್ಕೃತಿಕ ಪದಕೋಶವನ್ನು ಅನುವಾದಿಸಲು ಸಾಧ್ಯವಿಲ್ಲ, ವಿವರಿಸಲು ಮಾತ್ರ ಸಾಧ್ಯ. ನಮ್ಮ ಸಂಸ್ಕೃತಿಯ ಪದಗಳಾದ ಉತ್ಸವ ಬಲಿ, ಸುಗ್ಗಿ ಕುಣಿತ, ಪಿಂಡಪ್ರದಾನ, ಯಕ್ಷಗಾನ, ಕೀರ್ತನೆ, ವಚನ, ಭೂತಾರಾಧನೆ, ಅಣಿ, ಗಗ್ಗರ, ಕಡ್ತಲೆ ಮುಂತಾದ ಪದಗಳಿಗೆ ಇಂಗ್ಲಿಷ್‌ನಲ್ಲಿ ವಿವರಿಸಲು ಮಾತ್ರ ಸಾಧ್ಯ. ಕ್ರಿಕೆಟ್‌ನಲ್ಲಿ ಬಳಸಲ್ಪಡುವ ನೋಬಾಲ್‌ಗೆ ಕನ್ನಡದಲ್ಲಿ ಪದಕೊಟ್ಟರೆ ಯೋಗ್ಯವಾದ ಅರ್ಥ ಬರುವುದಿಲ್ಲ. ಒಬ್ಬ ವ್ಯಕ್ತಿ ತಲೆಮಾರಿನಿಂದ ಬಳಸಿಕೊಂಡು ಬಂದ ಭಾಷೆಗೆ ಸಾಂಸ್ಕೃತಿಕ ಆವರಣ ಬೆಳೆದಿರುತ್ತದೆ. ಅಂಥ ಸಾಂಸ್ಕೃತಿಕ ವಾತಾವರಣ ಬೆಳೆಸಿಕೊಂಡ ಭಾಷೆಯನ್ನು ಮಾತೃಭಾಷೆ ಎಂದು ಕರೆಯುತ್ತೇವೆ. ಪ್ರಸ್ತುತ ಪ್ರಪಂಚದಲ್ಲಿರುವ ಸುಮಾರು 6,000 ಭಾಷೆಗಳಲ್ಲಿ ಶೇ. 43ರಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಗುರುತಿಸಲಾಗಿದೆ. ಇಷ್ಟು ಪ್ರಮಾಣದ ಭಾಷೆಗಳು ನಾಶವಾದರೆ ನಾವು ಕೇವಲ ಭಾಷೆ ಯನ್ನು ಮಾತ್ರ ಕಳೆದುಕೊಳ್ಳುವುದಿಲ್ಲ, ಅದರ ಜತೆಗೆ ಆ ಭಾಷೆಯ ಸಂಸ್ಕೃತಿ ಮತ್ತು ಎಲ್ಲ ಜ್ಞಾನ, ಸಂಪ್ರದಾಯಗ ಳನ್ನು ಕಳೆದುಕೊಳ್ಳುತ್ತೇವೆ. ಈ ಹಿನ್ನೆಲೆಯಿಂದ ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಿ, ಉಳಿಸುವ ನೆಲೆಯಿಂದ 1999ರಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೊ ವಿಶ್ವ ಮಾತೃಭಾಷಾ ದಿನವನ್ನು ಆಚರಿಸುವ ನಿರ್ಧಾರ ಕೈಗೊಂಡಿತು. ಇದರ ಆಶಯದಂತೆ 2000ನೇ ಫೆಬ್ರವರಿ 21ರಂದು ಮೊದಲ ವಿಶ್ವ ಮಾತೃಭಾಷಾ ದಿನವನ್ನು ಆಚರಿಸಲಾಯಿತು.
1947ರಲ್ಲಿ ಭಾರತದಿಂದ ವಿಭಜನೆಗೊಂಡು ಹುಟ್ಟಿ ಕೊಂಡ ಪಾಕಿಸ್ಥಾನದಲ್ಲಿ ಪಶ್ಚಿಮ ಪಾಕಿಸ್ಥಾನ ಮತ್ತು ಪೂರ್ವ ಪಾಕಿಸ್ಥಾನಗಳೆಂದು ಎರಡು ಭಾಗಗಳಿದ್ದವು. ಪಶ್ಚಿಮ ಪಾಕಿಸ್ಥಾನದ ಜನರು ಉರ್ದು ಭಾಷೆಯನ್ನು ಮಾತನಾಡಿದರೆ ಪೂರ್ವ ಪಾಕಿಸ್ಥಾನದ ಜನರು ಬಂಗಾಲಿ ಭಾಷೆಯನ್ನು ಮಾತನಾಡುತ್ತಾರೆ. ಹೀಗಾಗಿ ಇಡೀ ಪಾಕಿಸ್ಥಾನಕ್ಕೆ ಅನ್ವಯವಾಗುವಂತೆ 1948ರಲ್ಲಿ ಉರ್ದು ತನ್ನ ರಾಷ್ಟ್ರ ಭಾಷೆ ಎಂದು ಘೋಷಿಸುತ್ತದೆ. ಸಹಜವಾಗಿಯೇ ಪೂರ್ವ ಪಾಕಿಸ್ಥಾನ ಪ್ರದೇಶದ ಜನರ ಆಕ್ರೋಶಕ್ಕೆ ಕಾರಣವಾಯಿತಲ್ಲದೆ ಸರಕಾರದ ಅದೇಶದ ವಿರುದ್ಧ ಪ್ರತಿಭಟನೆ ಆರಂಭಿಸಿದರು. 1952ರ ಫೆಬ್ರವರಿ 21ರಂದು ಪಾಕಿಸ್ಥಾನ ಸರಕಾರದ ವಿರುದ್ಧ ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಳಿದು ಹೋರಾಟ ಮಾಡಿದರು. ಈ ಹೋರಾಟ ತೀವ್ರತೆಯನ್ನು ಪಡೆದುಕೊಂಡಾಗ ಅದನ್ನು ಹತ್ತಿಕ್ಕುವ ಹಿನ್ನೆಲೆಯಲ್ಲಿ ಸರಕಾರದ ಅದೇಶದಂತೆ ಪೋಲಿಸರು ಪ್ರತಿಭಟನ ನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದರು. ಪರಿಣಾಮವಾಗಿ ಕೆಲವು ವಿದ್ಯಾರ್ಥಿಗಳು ಪ್ರಾಣ ಕಳೆದು ಕೊಂಡರು. ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಾಗ ಕೊನೆಗೆ ಪಾಕಿಸ್ಥಾನ ಸರಕಾರ 1956ರ ಫೆ. 29ರಂದು ಬಂಗಾಲಿ ಭಾಷೆಯನ್ನು ತನ್ನ ದೇಶದ ಇನ್ನೊಂದು ಅಧಿಕೃತ ಆಡಳಿತ ಭಾಷೆಯೆಂದು ಒಪ್ಪಿಕೊಂಡಿತು. ಮುಂದೆ 1971ರಲ್ಲಿ ಪೂರ್ವ ಪಾಕಿಸ್ಥಾನ ಸ್ವತಂತ್ರ ರಾಷ್ಟ್ರವಾಗಿ ಬಾಂಗ್ಲಾದೇಶ ಎಂದು ನಾಮಕರಣಗೊಂಡಿತು. ಪ್ರಸ್ತುತ ಈ ದೇಶದ ಅಧಿಕೃತ ರಾಷ್ಟ್ರ ಭಾಷೆ ಬಂಗಾಲಿಯಾಗಿದೆ. ಹೀಗೆ ಪೂರ್ವ ಪಾಕಿಸ್ಥಾನದ ಮಾತೃಭಾಷೆಯಾದ ಬಂಗಾಲಿಯನ್ನು ಆಡಳಿತ ಭಾಷೆ ಮಾಡಬೇಕೆಂದು ಪ್ರತಿಭಟನೆ ಮಾಡಿ ಪೊಲೀಸರ ಗುಂಡಿಗೆ ಬಲಿಯಾದ ವಿದ್ಯಾರ್ಥಿಗಳ ನೆನಪಿಗಾಗಿ ಫೆಬ್ರವರಿ 21 ಅನ್ನು ವಿಶ್ವ ಮಾತೃಭಾಷಾ ದಿನವಾಗಿ ಆಚರಿಸಿಕೊಂಡು ಬರಲಾಗಿದೆ. ಇದು ಮಾತೃ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂಬ ಅದಮ್ಯ ತುಡಿತ ಹಾಗೂ ಅದನ್ನು ಉಳಿಸುವ ಕಾಳಜಿ ಯಿಂದ ನಡೆದ ಹೋರಾಟ. ಆ ಕಾರಣಕ್ಕಾಗಿ ವಿಶ್ವಸಂಸ್ಥೆ ಈ ಹೋರಾಟಕ್ಕೆ ಜಾಗತಿಕ ಗೌರವ ಸಲ್ಲಿಸಿದೆ.
ಮಾತೃಭಾಷೆ ಎನ್ನುವುದು ನಮ್ಮನ್ನು ಯಜಮಾನರನ್ನಾಗಿ ಮಾಡುತ್ತದೆ. ನಮ್ಮ ಮಾತೃ ಭಾಷೆಯನ್ನು ಬದಿಗೆ ಸರಿಸಿ ಬೇರೆ ಭಾಷೆಯನ್ನು ನಾವು ಕಲಿತರೆ ಅದು ನಮ್ಮನ್ನು ಗುಲಾ ಮರನ್ನಾಗಿ ಮಾಡುತ್ತದೆ. ಮಾತೃಭಾಷೆಗೆ ಯಜಮಾನನ ಲಕ್ಷಣಗಳಿವೆ. ಉದಾಹರಣೆಗೆ ಕನ್ನಡಿಗರಾದ ನಮಗೆ ಕನ್ನಡದಲ್ಲಿ ಇರುವಷ್ಟು ಹಿಡಿತ ಬೇರೆ ಭಾಷೆಯಲ್ಲಿ ಬರಲಾರದು. ಇದರಿಂದ ನಮಗೆ ಸ್ವತಂತ್ರವಾಗಿ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಆದರೆ ನಾವು ಒಂದು ಪರಕೀಯ ಭಾಷೆಯಾದ ಇಂಗ್ಲಿಷ್‌ನ ಕಡೆಗೆ ಹೋದಾಗ, ಭಾಷೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಬಹಳಷ್ಟು ಸಮಯ ವನ್ನು ತೆಗೆದುಕೊಳ್ಳುತ್ತೇವೆ ಹಾಗೂ ಅದನ್ನು ಕನ್ನಡದ ಮೂಲಕ ಅರ್ಥೈಸಲು ಪ್ರಯತ್ನ ಮಾಡುತ್ತೇವೆ. ಆ ಭಾಷೆಯ ಸಾಂಸ್ಕೃತಿಕ ಆವರಣ ನಮಗಿಲ್ಲದ ಕಾರಣ ಅಲ್ಲಿಯ ಒಂದು ಪದವನ್ನು ಯಾವಾಗ ಹೇಗೆ ಬಳಸ ಬೇಕು ಎನ್ನುವ ಪ್ರಜ್ಞೆಯಿರುವುದಿಲ್ಲ. ಆಗ ನಮಗೆ ಸ್ವತಂತ್ರ ವಾಗಿ ಆಲೋಚನೆ ಮಾಡಲು ಸಾಧ್ಯವಾಗುವುದಿಲ್ಲ. ಯಾವಾಗ ನಾವು ಸ್ವತಂತ್ರವಾಗಿ ಆಲೋಚನೆ ಮಾಡು ವುದು, ಭಾವುಕವಾಗಿ ಮಾತನಾಡುವುದು, ಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗುವುದಿಲ್ಲವೋ ಆಗ ನಾವು ನಮ್ಮ ಯಜಮಾನತ್ವವನ್ನು ಕಳೆದುಕೊಳ್ಳುತ್ತೇವೆ. ಮಳೆ ಸುರಿಯುವ ಕ್ರಮವನ್ನು ಗ್ರಹಿಸಿದ ಕನ್ನಡಿಗರು ತುಂತುರು ಮಳೆ, ಜಿನುಗು ಮಳೆ, ನರಿ ಮದುವೆ ಮಳೆ, ಸೂಜಿ ಮಳೆ, ಸೋನೆ ಮಳೆ, ಕಾಡು ಮಳೆ, ಜಡಿಮಳೆ ಹೀಗೆ ಮಳೆಯ ಸಾಂದ್ರತೆಯ ಕುರಿತು ಪದಪ್ರಯೋಗಗಳಿವೆ. ಒಂದು ಭಾಷೆಯೊಳಗೆ ಮಳೆಯ ಬಗ್ಗೆ ಇಷ್ಟೊಂದು ಹುಲುಸಾದ ಪದ ಪ್ರಯೋಗಗಳಿವೆ ಎಂದರೆ ಆ ಪರಿಸರದಲ್ಲಿ ಸುರಿಯುವ ಮಳೆಯ ಪ್ರಕೃತಿಯೂ ಹಾಗೆಯೇ ಇದೆ ಎಂದರ್ಥ. ಹಾಗಾಗಿ ಭಾಷೆ ಮತ್ತು ಬದುಕು ಬೇರೆಯಲ್ಲ. ‘Rain, rain go away, Come again another day’ ’ ಎನ್ನುವುದು ಇಂಗ್ಲಿಷ್. ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ, ಲೋಕಾ ತಲ್ಲಣಿಸುತಾವೋ ಶಿವ ಶಿವ, ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು, ಉರಿಸಿ ಕೊಲ್ಲಲುಬಾರದೆ! ಎನ್ನುವುದು ಕನ್ನಡ. ಇದುವೇ ಮಾತೃಭಾಷೆಯ ಅನನ್ಯತೆಯಾಗಿದೆ.
ಭಾರತ ಬಹುಭಾಷಾ ಪರಿವಾರದ ದೇಶ. ಆಗ ಭಾರತದ ಮಾತೃಭಾಷೆ ಯಾವುದು ಎನ್ನುವ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಇಲ್ಲಿಯ ಭಾಷೆಗಳ ಪ್ರಾಚೀನತೆಯನ್ನು ಗಮನಿಸಿದಾಗ ಸಂಸ್ಕೃತ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾ ಭಾರತ, ಭಗವದ್ಗೀತೆ ಎಲ್ಲವೂ ಸಂಸ್ಕೃತದಲ್ಲಿವೆ. ಆದರೆ ಇವೆ ಲ್ಲವೂ ಇಂದು ದೇಶದ ಇತರ ಭಾಷೆಗಳಲ್ಲಿ ಓದಲು ದೊರೆ ಯುತ್ತವೆ. ಆದರೆ ಅರ್ಥೈಸುವಾಗ ಸಂಸ್ಕೃತದ ತಿಳಿವಳಿಕೆ ಅಗತ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಸಂಸ್ಕೃತ ಭಾರತದ ಮಾತೃ ಭಾಷೆ. ಸಂಸ್ಕೃತ ಉಳಿದರೆ ಭಾರತ ಉಳಿಯಲು ಸಾಧ್ಯ. ಸಂಸ್ಕೃತದಿಂದ ಭಾರತದ ಉಳಿದ ಮಾತೃಭಾಷೆಗಳು ಉಳಿಯಲು ಸಾಧ್ಯ. ಒಟ್ಟಿನಲ್ಲಿ ಭಾರತದ ವಿಶ್ವ ಮಾತೃ ಭಾಷಾ ದಿನಾಚರಣೆಯ ಘೋಷ ವಾಕ್ಯವಾದ “ಏಕ್ ಭಾರತ್ ಶ್ರೇಷ್ಠ ಭಾರತ್’ ಮತ್ತು ಯುನೆಸ್ಕೋದ 2022ನೇ ಸಾಲಿನ ಘೋಷ ವಾಕ್ಯವಾದ “ಬಹುಭಾಷಾ ಕಲಿಕೆಗಾಗಿ ತಂತ್ರ ಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು’- ಇವರೆಡೂ ಸಾಕಾರಗೊಳ್ಳಬೇಕಾದರೆ ನಮ್ಮ ಸಂಸ್ಕೃತ ಭಾಷಾ ಅಧ್ಯಯನ ವಿಸ್ತರಣೆಗೊಳ್ಳುವುದು ಅನಿವಾರ್ಯ. ಸಂಸ್ಕೃತದ ಮೂಲಕ ಭಾರತೀಯ ಇತರ ಭಾಷೆಗಳು ಉಳಿಯಬೇಕಾಗಿದೆ ಹೊರತು ಇಂಗ್ಲಿಷ್‌ನ ಮೂಲಕವಲ್ಲ.
ಮನುಷ್ಯನನ್ನು ಕುರಿತ ಅಧ್ಯಯನ ಶಾಖೆಗಳಾದ ಮಾನವಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ಭಾಷಾಶಾಸ್ತ್ರಗಳ ಮೂಲಕ ಮನುಷ್ಯನ ಹುಟ್ಟು ಬೆಳವಣಿಗೆಗಳ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಜೀವಶಾಸ್ತ್ರದ ಮೂಲಕ ವೈದ್ಯಕೀಯಶಾಸ್ತ್ರ, ವಂಶವಾ ಹಿನಿಯ ಅಧ್ಯಯನಗಳು ನಡೆಯುತ್ತವೆ. ಇದರಲ್ಲಿ ಭಾಷೆಯ ಕಲಿಕೆ ಎನ್ನುವುದು ವಿಶಿಷ್ಟವಾದುದು. ಇದು ತಲೆಮಾರಿನಿಂದ ತಲೆಮಾರಿಗೆ ಸಹಜವಾಗಿ ಹರಿದು ಬರುವುದಿಲ್ಲ. ಅದನ್ನು ಪ್ರಯತ್ನಪೂರ್ವಕವಾಗಿ ದಾಟಿಸ ಬೇಕಾಗುತ್ತದೆ, ಪರಿಶ್ರಮದಿಂದ ರೂಢಿಸಿಕೊಳ್ಳಬೇಕಾ ಗುತ್ತದೆ. ಇದರ ಅಗತ್ಯವೇನು ಎಂದು ಪ್ರಶ್ನೆ ಮಾಡಿದಾಗ, ಒಂದು ಮಾತೃಭಾಷೆ ಮಾತನಾಡುವ ಹಲವು ಕುಟುಂಬ ಒಟ್ಟು ಸೇರಿದಾಗ ಅಲ್ಲಿ ಹುಟ್ಟಿಕೊಳ್ಳುವ ಸಂಪ್ರದಾಯ, ಉಡುಗೆತೊಡುಗೆ, ವಾಸಿಸುವ ಮನೆಗಳ ನಿರ್ಮಾಣ, ಆರಾಧನೆಗಳು, ಧಾರ್ಮಿಕ ಸಂಗತಿಗಳು ಒಂದು ಸಂಸ್ಕೃತಿಯ ಅಸ್ಮಿತೆಯನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ಕವಿ ಡಾ| ಜಿ.ಎಸ್. ಶಿರುದ್ರಪ್ಪನವರ ಹಣತೆ ಕವನದ ಸಾಲುಗಳಾದ ಆದರೂ ಹಣತೆ ಹಚ್ಚುತ್ತೇನೆ ನಾನೂ ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನುನೋಡಬಹುದೆಂಬ ಒಂದೇ ಒಂದು ಆಸೆಯಿಂದ;ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ.
ಎನ್ನುವಲ್ಲಿ ಹುಟ್ಟಿಕೊಳ್ಳುವ ಸಾಮೀಪ್ಯ ಬೇರೆ ಭಾಷೆಯ ಕವನಗಳನ್ನು ಎಷ್ಟೂ ಓದಿದರೂ ಸಿಗುವುದಿಲ್ಲ. ನಮ್ಮೆಲ್ಲರ ಹೃದಯದ ಭಾಷೆ ಎಂದು ಏನಾದರೂ ಇದ್ದರೆ ಅದು ನಮ್ಮ ಮಾತೃಭಾಷೆ.
-ಮನಮೋಹನ ಎಂ., ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.