ಬಜೆಟ್: ಕರಾವಳಿಗೆ ಭರವಸೆಗಳ ತೃಪ್ತಿ; ನಿರೀಕ್ಷೆಗಳಿಗೆ ನಿರಾಶೆ
Team Udayavani, Mar 5, 2022, 7:25 AM IST
ಮಂಗಳೂರು: ಬಹು ನಿರೀಕ್ಷಿತ 2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರಾವಳಿಯ ಪಾಲಿಗೆ ಒಂದಷ್ಟು ಘೋಷಣೆಗಳನ್ನು ಮಾಡಲಾಗಿದೆ. ಹೊಸ ಭರವಸೆಗಳ ತೃಪ್ತಿಯ ಜತೆಗೆ ಕರಾವಳಿಯ ಪೂರಕವಾಗಿ ಬಹುಕಾಲದ ಕೆಲವು ನಿರೀಕ್ಷೆಗಳು ಸಾಕಾರಗೊಳ್ಳದ ನಿರಾಶೆ ಕಾಡಿದೆ.
ಮಂಗಳೂರು ಬಂದರಿನ ವಿಸ್ತರಣೆ, ಸಾಗರಮಾಲಾ ಯೋಜನೆಯಲ್ಲಿ ಕರಾವಳಿಯ ಬಂದರುಗಳ ಅಭಿವೃದ್ಧಿ, ಕರಾವಳಿ ಭಾಗದ ಜಲಮೂಲಗಳನ್ನು ಕಲುಷಿತಗೊಳಿಸುವ ಪ್ಲಾಸ್ಟಿಕ್ ಮಾಲಿನ್ಯ ನಿರ್ವಹಣೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಬ್ಲೂಪ್ಲಾಸ್ಟಿಕ್ ನಿರ್ವಹಣೆ ಯೋಜನೆ, ಮಂಗಳೂರು ವಿ.ವಿ.ಯಲ್ಲಿ ಆರೆಭಾಷೆ ಸಂಶೋಧನ ಕೇಂದ್ರ, ದ.ಕ., ಉಡುಪಿ ಜಿಲ್ಲೆಗಳಲ್ಲಿ ಶ್ರೀ ನಾರಾಯಣಗುರು ಹೆಸರಿನಲ್ಲಿ ವಸತಿ ಶಾಲೆ, ಮಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ, ಕಾಸರಗೋಡಿನಲ್ಲಿ ಕಯ್ನಾರ ಕಿಂಞಣ್ಣ ರೈ ಹೆಸರಿನಲ್ಲಿ ಕನ್ನಡ ಭವನ, ಕಡಲ್ಕೊರೆತ ತಡೆಗೆ ಹೊಸ ತಂತ್ರಜ್ಞಾನ, ಆಳಸಮುದ್ರ ಮೀನುಗಾರರಿಗೆ ದೋಣಿ ಖರೀದಿಗೆ ಮತ್ಸéಸಿರಿ ಯೋಜನೆ, 8 ಮೀನುಗಾರಿಕಾ ಬಂದರುಗಳ ಹೂಳೆತ್ತುವುದು, ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಮುಂತಾದ ಘೋಷಣೆಗಳನ್ನು ಮಾಡಲಾಗಿದೆ.
ಕರಾವಳಿಯಲ್ಲಿ ವಿಪುಲ ಅವಕಾಶಗಳಿರುವ ಸಾಗರತೀರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಯಾವುದೇ ಯೋಜನೆ ಕಂಡುಬಂದಿಲ್ಲ.
ಕೈಗಾರಿಕೆಗಳಿಗೆ ಉತ್ತೇಜನ ನಿರೀಕ್ಷಿಸಲಾಗಿತ್ತು. ಮಂಗಳೂರು ಸೇರಿದಂತೆ ಎರಡನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್‌ಗಳು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಪೂರಕವಾಗುತ್ತದೆ. ಇದರ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಪಶ್ಚಿಮವಾಹಿನಿಗೆ ಮೊದಲ ಹಂತದ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದು ಇದು ಕಳೆದ ವರ್ಷ ಘೋಷಿಸಿದ ಮೊತ್ತವೇ ಅಥವಾ ಹೊಸ ಘೋಷಣೆಯೇ ಎಂಬ ಬಗ್ಗೆ ಗೊಂದಲವೇರ್ಪಟ್ಟಿದೆ.
ಮೌನಕ್ಕೆ ಜಾರಿದ ಯೋಜನೆಗಳು
ಭತ್ತ ಕೃಷಿ ಉತ್ತೇಜನಕ್ಕೆ ವಿಶೇಷ ಪ್ಯಾಕೇಜ್, ತಾಲೂಕು ಸರಕಾರಿ ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಗಿ ಉನ್ನತೀಕರಣ, ಐಟಿ, ಆಹಾರ ಸಂಸ್ಕರಣೆ ಪಾರ್ಕ್ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಹೂಡಿಕೆಗಳನ್ನು ಆಕರ್ಷಿಸಲು ಕ್ರಮ, ಮಲೆನಾಡು ಅಭಿವೃದ್ಧಿ ಮಾದರಿಯಲ್ಲೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ, ಆರ್ಥಿಕ ಸಂಪನ್ಮೂಲ, ಪ್ರವಾಸೋದ್ಯಮ ಅಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ಉಲ್ಲೇಖೀಸಿದ್ದ ಮಂಗಳೂರು-ಪಣಜಿ ಜಲಮಾರ್ಗ, ಗುರುಪುರ, ನೇತ್ರಾವತಿ ನದಿಗಳಲ್ಲಿ ಜಲಮಾರ್ಗ ಯೋಜನೆ, ಕೋಣಾಜೆ -ಮಣಿಪಾಲ ನಾಲೆಡ್ಜ್-ಹೆಲ್ತ್ ಕಾರಿಡಾರ್, ಬೆಂಗಳೂರು ಮಾದರಿಯಲ್ಲಿ ಮೆಟ್ರೋ ವ್ಯವಸ್ಥೆ ಅನುಷ್ಠಾನಕ್ಕೆ ಪೂರಕ ಕ್ರಮ ಮುಂತಾದುವುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಉಡುಪಿ ಜಿಲ್ಲೆಗೆ ದಕ್ಕಿದ್ದು-ದಕ್ಕದ್ದು
ಉಡುಪಿ: ರಾಜ್ಯ ಬಜೆಟ್ ಮೇಲೆ ಉಡುಪಿ ಜಿಲ್ಲೆಯ ಜನರ ನಿರೀಕ್ಷೆ ಸಾಕಷ್ಟಿತ್ತು. ಜಿಲ್ಲೆಗೆ ಸೀಮಿತವಾಗಿ ವಿಶೇಷ ಯೋಜನೆ ಘೋಷಣೆಯಾಗದೇ ಇದ್ದರೂ ಕರಾವಳಿಗೆ ಲಭಿಸಿರುವ ಯೋಜನೆಗಳ ಫಲ ಜಿಲ್ಲೆಗೂ ಸಿಗುವ ನಿರೀಕ್ಷೆಯಿದೆ.
100 ಆಳಸಮುದ್ರ ಮೀನುಗಾರಿಕಾ ಬೋಟುಗಳಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ ಮತ್ಸéಸಿರಿ ಎಂಬ ಹೊಸ ಯೋಜನೆ ಘೋಷಿಸಲಾಗಿದೆ.
ಇದರಿಂದ ಮಲ್ಪೆ, ಗಂಗೊಳ್ಳಿ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳುವ ಬೋಟುಗಳ ಮೀನುಗಾರಿಗೆ ಅನುಕೂಲ ಆಗಬಹುದು. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ರಹಿತ ಮೀನುಗಾರರ ಕುಟುಂಬಕ್ಕೆ 5 ಸಾವಿರ ಮನೆ ನಿರ್ಮಾಣ ಮಾಡುವ ಯೋಜನೆಯಿಂದಲೂ ಜಿಲ್ಲೆಯ ಬಡ ಮೀನುಗಾರ ಕುಟುಂಬಕ್ಕೆ ಅನುಕೂಲವಾಗಲಿದೆ. ನ್ಯಾವಿಗೇಶನ್ ಚಾನಲ್ ಮೂಲಕ ಬಂದರುಗಳ ಹೂಳೆತ್ತುವ ಯೋಜನೆಯಲ್ಲಿ ಉಡುಪಿ ಜಿಲ್ಲೆಯ ಬಂದರುಗಳು ಸೇರಲಿವೆ.
ಸೌಕೂರು-ಎಣ್ಣೆಹೊಳೆ ನೀರಾವರಿ ಯೋಜನೆಯಿಂದ ಜಿಲ್ಲೆಯ ಕಾರ್ಕಳ, ಕುಂದಾಪುರ ಭಾಗಕ್ಕೆ ಅನುಕೂಲವಾಗಲಿದೆ. ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದನ್ನು ತಡೆಯಲು ರೂಪಿಸಿರುವ ಖಾರ್‌ಲ್ಯಾಂಡ್ ಯೋಜನೆಯನ್ನು ಜಿಲ್ಲೆಗೂ ವಿಸ್ತರಿಸಲಾಗಿದೆ.
ಈಡೇರದ ಬೇಡಿಕೆಗಳು
ಜಿಲ್ಲೆಗೆ ಸರಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು ಈ ಬಾರಿಯೂ ಈಡೇರಿಲ್ಲ. ಬ್ರಹ್ಮಾವರ ಕೃಷಿ ಕಾಲೇಜಿನ ಕನಸು ಪ್ರಸ್ತಾವನೆಯಲ್ಲೇ ಉಳಿದುಕೊಂಡಿದೆ. ತೋಕೂರು- ಬೈಂದೂರು ರೈಲು ಹಳಿ ದ್ವಿಪಥಕ್ಕೆ ಹೆಚ್ಚುವರಿ ಅನುದಾನ, ಜಿಲ್ಲೆಯಲ್ಲೊಂದು ವಿಮಾನ ನಿಲ್ದಾಣ ನಿರ್ಮಾಣ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ, ಭತ್ತ ಕಟಾವು ಆದ ತತ್‌ಕ್ಷಣವೇ ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳು ವರ್ಷಗಳಿಂದ ಸರಕಾರದ ಮುಂದಿದೆ. ಇದ್ಯಾವುದಕ್ಕೂ ಅನುದಾನ ಮೀಸಲಿಟ್ಟಿಲ್ಲ.
ಉಡುಪಿ ಒಳಚರಂಡಿ ವ್ಯವಸ್ಥೆ 330 ಕೋ.ರೂ.
ಬಜೆಟ್‌ನಲ್ಲಿ ಉಡುಪಿಯಲ್ಲಿ ವ್ಯವಸ್ಥಿತವಾದ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ 330 ಕೋ.ರೂ. ಮೀಸಲಿಟ್ಟಿದ್ದಾರೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರತ್ಯೇಕ ಘೋಷಣೆಯಾಗಿಲ್ಲ. ಆದರೆ ರಾಜ್ಯದ ವಿವಿಧ ಭಾಗದ ಒಳಚರಂಡಿ ವ್ಯವಸ್ಥೆಗೆ ಮೀಸಲಿಟ್ಟಿರುವ ಅನುದಾನದಲ್ಲಿ ಇದು ಕೂಡ ಸೇರಿಕೊಂಡಿದೆ. ಹೀಗಾಗಿ ಉಡುಪಿ ನಗರದ ಒಳಚರಂಡಿ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು ಈ ಹಿಂದೆ ನೀಡಿರುವ ಭರವಸೆಯಂತೆ ಅನುದಾನ ಬರಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಮಾಹಿತಿ ನೀಡಿದರು.
ರಾಜ್ಯ ಬಜೆಟ್ ಪ್ರತಿಕ್ರಿಯೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಹಿತ ಎಲ್ಲ ವರ್ಗದ ಜನತೆಯ ಆರ್ಥಿಕ ಸಶಕ್ತೀಕರಣಕ್ಕೆ ಆದ್ಯತೆ ನೀಡಲಾಗಿದೆ. ಆಳಸಮುದ್ರ ಮೀನುಗಾರಿಕೆಯ ಸಾಮರ್ಥ್ಯ ವೃದ್ಧಿಗೆ ಮತ್ಸé ಸಿರಿ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ರೂಪಿಸಲಾಗಿದೆ. ಕೇಂದ್ರದ ನೆರವಿನೊಂದಿಗೆ ಮಂಗಳೂರು ಬಂದರು ವಿಸ್ತರಣೆ ಸಹಿತ ವಿವಿಧ ಯೋಜನೆಗಳು ಕರಾವಳಿಗೆ ವರದಾನವಾಗಿವೆ. ಡಾ| ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿದ ಪ್ರಮುಖ ಸ್ಥಳಗಳ ಅಭಿವೃದ್ಧಿ, ಸಮಾನತೆಯ ಹರಿಕಾರ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆ ಮಾದರಿ ಯೋಜನೆಯಾಗಿದೆ. ಮಂಗಳೂರು ವಿ.ವಿ. ಅರೆಭಾಷೆ ಸಂಶೋಧನ ಕೇಂದ್ರದ ಸ್ಥಾಪನೆ ಘೋಷಿಸುವ ಮೂಲಕ ಅರೆಭಾಷೆಗೆ ಮಾನ್ಯತೆ ನೀಡಿರುವುದು ಸಂತಸ ತಂದಿದೆ.
– ಎಸ್. ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ
ಮುಂದಿನ 10 ವರ್ಷದ ಕಾರ್ಯಯೋಜನೆಗಳ ಪರಿಕಲ್ಪನೆಯಿಂದ ಕೂಡದ ದೂರದೃಷ್ಟಿಯ ಬಜೆಟ್. 4 ಜಿಲ್ಲೆಗಳಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ, ಧಾರ್ಮಿಕ ಯಾತ್ರೆ ಪ್ರೋತ್ಸಾಹ, ಗೋಶಾಲೆ, ಪುಣ್ಯಕೋಟಿ ದತ್ತಿನಿಧಿ, ರೈತರಿಗೆ ನಿರಂತರ ವಿದ್ಯುತ್ ನೀಡಲು ಕೆಪಿಟಿಸಿಎಲ್ ಮೂಲಕ ಸಬ್‌ಸ್ಟೇಷನ್, ಬೆಳಕು ಯೋಜನೆ ಮುಂದುವರಿಸುವುದು ಸೇರಿದಂತೆ ಕೈಗಾರಿಕಾ ವಲಯಕ್ಕೂ ಆದ್ಯತೆ ನೀಡಲಾಗಿದೆ. ಹೈಡ್ರೋಜನ್ ನೀತಿ ಸ್ಥಾಪಿಸಲು ಆದ್ಯತೆ ನೀಡಲಾಗಿದೆ. ಸಮಗ್ರ ಅಭಿವೃದ್ಧಿಯ ಬಜೆಟ್ ಇದು.
-ವಿ. ಸುನಿಲ್ ಕುಮಾರ್, ಇಂಧನ ಸಚಿವ
ಮಂಗಳೂರು: ಸರ್ವರನ್ನೂ ಒಳಗೊಂಡಂತೆ, ದುರ್ಬಲರು ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಕ್ಕೆ ಆದ್ಯತೆ ನೀಡಲಾಗಿದೆ. ರೈತರಿಗೂ ಡೀಸೆಲ್ ಒದಗಿಸಿರುವುದು ಬಹುಶಃ ದೇಶದಲ್ಲಿಯೇ ಪ್ರಥಮ. ಯಶಸ್ವಿನಿ ಯೋಜನೆ ಮತ್ತೆ ಜಾರಿ, ಹೆಚ್ಚುವರಿ ಗೋಶಾಲೆ ತೆರೆಯಲು ಅವಕಾಶ, ಕರಾವಳಿಯಾದ್ಯಂತ ಉಪ್ಪು ನೀರು ತಡೆಗೋಡೆಗೆ ಅನುದಾನ, ಅಸ್ಪೃಶ್ಯತೆ ನಿವಾರಣೆಗೆ ಯೋಜನೆ, ವಿವಿಧ ಇಲಾಖೆಗಳಿಗೆ ಹೆಚ್ಚುವರಿ ಅನುದಾನ, ನಾರಾಯಣಗುರುಗಳ ಹೆಸರಿನಲ್ಲಿ ವಸತಿ ಶಾಲೆ ಇತ್ಯಾದಿ ಯೋಜನೆಗಳನ್ನು ಪ್ರಸ್ತಾವಿಸಲಾಗಿದೆ. ಮಿನುಗಾರಿಕೆಗೆ ದೊಡ್ಡ ಮೊತ್ತ ಒದಗಿಸಲಾಗಿದೆ. 3 ಜಿಲ್ಲೆಗಳಲ್ಲಿ ಬಂದರುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಿದ್ದು, ಒಟ್ಟಿನಲ್ಲಿ ಇದು ಜನಪರ, ಅರ್ಥಪೂರ್ಣ ಬಜೆಟ್.
– ಕೋಟ ಶ್ರೀನಿವಾಸ ಪೂಜಾರಿ,
ಹಿಂದುಳಿದ ವರ್ಗಗಳ ಖಾತೆಯ ಸಚಿವ
ರಾಜ್ಯ ಸರಕಾರದ ಈ ಬಾರಿಯ ಬಜೆಟ್ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಹಿಂದಕ್ಕೆ ತಳ್ಳಿದ್ದು ರಿವರ್ಸ್‌ಗೇರ್ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಸ್ಪಷ್ಟತೆ ಮತ್ತು ಯೋಜನೆಗಳಲ್ಲಿ ನಿಖರತೆ ಇಲ್ಲ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದ್ದು ಯಾವುದೇ ಸ್ಪಷ್ಟ ಯೋಜನೆಗಳನ್ನು ನೀಡದೆ ಜನತೆಯನ್ನು ಸರಕಾರ ವಂಚಿಸಿದೆ. ದುರ್ಬಲ ವರ್ಗ, ಹಿಂದುಳಿದವರು, ಬಡವರನ್ನು ಅವಗಣಿಸಲಾಗಿದೆ. ಸಾಲ ಮತ್ತು ಸಾರಾಯಿಯ ಆದಾಯದಲ್ಲಿ ಆಡಳಿತ ನಡೆಸಲು ಸರಕಾರ ಹೊರಟಿದೆ. ಸಮಗ್ರ ಅಭಿವೃದ್ಧಿಯ ಬಜೆಟ್ ಇದು.
–ಯು.ಟಿ. ಖಾದರ್, ವಿಧಾನಸಭಾ ವಿಪಕ್ಷ ಉಪನಾಯಕ
ಅರೆಭಾಷೆಗೆ ಸ್ಥಾನಮಾನ
ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಅರೆಭಾಷೆಗೆ ಸೂಕ್ತ ಸ್ಥಾನ ಮಾನ ಸಿಗ ಬೇಕೆಂಬ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ನಾವು ಅರೆಭಾಷೆ ಅಧ್ಯಯನ ಪೀಠ ಮಾಡುವಂತೆ ಸರಕಾರಕ್ಕೆ ಆಗ್ರಹಿಸುತ್ತಿದ್ದೆವು. ಅರೆಭಾಷೆ ಅಕಾಡೆಮಿ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಅರೆಭಾಷೆ ಸಂಶೋಧನ ಕೇಂದ್ರ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವ ಮಾಡಿರುವುದು ಸ್ವಾಗತಾರ್ಹ. ಅರೆಭಾಷೆಯ ಬೆಳೆವಣಿಗೆಗೆ ಇದು ಪೂರಕವಾಗಲಿದೆ.
– ಲಕ್ಷ್ಮೀನಾರಾಯಣ ಕಜೆಗದ್ದೆ, ಅಧ್ಯಕ್ಷರು,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.