ಒಡಲೆಂಬ ಹುತ್ತಕ್ಕೆ ನುಡಿವ ನಾಲಿಗೆ ಸರ್ಪ
Team Udayavani, Mar 6, 2022, 6:00 AM IST
ಬಸವಣ್ಣನವರು ಮಾತನ್ನು ಮುತ್ತಿನ ಹಾರಕ್ಕೆ ಹೋಲಿಸಿದರು. ಅಲ್ಲಮನು ಮಾತೆಂಬುದು ಜ್ಯೋತಿರ್ಲಿಂಗ ಎಂದನು. ಸರ್ವಜ್ಞನ ಪಾಲಿಗೆ ಮಾತೇ ಮಾಣಿಕ್ಯ. ಹಿತ ವಾದ, ಮಿತವಾದ ಹಾಗೂ ಮೃದುವಾದ ವಚನಗಳೆಂದರೆ ಪಂಪನಿಗೆ ಇಷ್ಟ. ದಾಸರಂತೂ ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ ಎಂದು ನಾಲಿಗೆಯನ್ನೇ ತರಾಟೆಗೆ ತೆಗೆದುಕೊಂಡರು.
ನಮ್ಮ ಹಿರಿಯರು ಭಾಷೆಗೆ ಅತ್ಯಂತ ಪ್ರಾಧಾನ್ಯ ನೀಡಿದರು. ಶ್ರೀ ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ನಡೆದನು. ಪುಣ್ಯಕೋಟಿ ಎಂಬ ಹಸುವು ಕೊಟ್ಟ ಭಾಷೆಗೆ ತಪ್ಪಲಾರೆನು ಎಂದು ವ್ಯಾಘ್ರನಿಗೆ ಕೊಟ್ಟ ಮಾತನ್ನು ಪಾಲಿಸಿತು. ಮಹಾಭಾರತದಲ್ಲಿ ಕರ್ಣನು ಯುದ್ಧದ ನಡುವೆ ಮಾತೆಗಿತ್ತ ಭಾಷೆಯನ್ನು ಮುರಿಯಲಾರೆ ಎಂದು ಸಾರಥಿಯ ಸಲಹೆಯನ್ನು ತಿರಸ್ಕರಿಸಿದನು. ಭಾಷೆ ಅಥವಾ ಕೊಟ್ಟ ಮಾತನ್ನು ಮುರಿಯುವುದು ಇಂದು ವ್ಯವಹಾರದಲ್ಲಿ ಸಾಮಾನ್ಯ. ಪಡೆದ ಕೈಸಾಲವನ್ನು ಒಂದು ವಾರದಲ್ಲಿ ಮರುಪಾವತಿ ಮಾಡುತ್ತೇನೆಂದು ಮಾತು ಕೊಟ್ಟವನು ವರ್ಷವಾದರೂ ಹಣ ಕೊಡದಿರುವ ಪ್ರಕರಣಗಳೂ ಇವೆ.
ಮಾತಿನಲ್ಲಿ ತೂಕಡಿಸಿದಾಗ: ಮಾತನಾಡುವ ಮೊದಲು ಮನಸ್ಸಿನಲ್ಲಿ ಏನೋ ಭಾವನೆ ಇರುತ್ತದೆ. ಆದರೆ ಅದನ್ನು ಮಾತಿನ ಮೂಲಕ ಹೊರಹಾಕುವಾಗ ಬೇರೆಯೇ ಅರ್ಥ ಪಡೆಯುತ್ತದೆ. ಕೆಲವೊಮ್ಮೆ ಅರಿತು ಈ ತಪ್ಪಾದರೆ, ಮಾತಿನ ಆವೇಶದಲ್ಲಿ ಅರಿಯದೆಯೂ ಆಗಬಹುದು. ಕೆಲವು ಸಂದರ್ಭದಲ್ಲಿ ತಪ್ಪೆಂದು ಬೇರೆಯವರು ಹೇಳಿದ ಮೇಲೆಯೇ ಅರಿವಾಗುವುದೂ ಉಂಟು. ಒಮ್ಮೆ ಒಂದು ಸಭೆಯಲ್ಲಿ ಗಣ್ಯರೊಬ್ಬರು ಮಾತನಾಡಿದರು. ಅವರ ಅನಂತರ ಇನ್ನೊಬ್ಬ ಅತಿಥಿಯ ಸರದಿ ಬಂತು. ಈ ಅತಿಥಿಯು ಮಾತನಾಡುವಾಗ ತನಗಿಂತ ಹಿಂದೆ ಮಾತನಾಡಿದ ಗಣ್ಯರ ಭಾಷಣವನ್ನು ಮೆಚ್ಚಿಕೊಳ್ಳುತ್ತಾ ಕತ್ತೆ ಮೇದಲ್ಲಿ ಮತ್ತೆ ಮೇವಿಲ್ಲ ಎಂಬ ಗಾದೆಯ ಮಾತನ್ನು ಉಲ್ಲೇಖೀಸಿದರು. ಅವರ ದೃಷ್ಟಿಯಲ್ಲಿ ಅವರು ಮಾತನಾಡಿದ ಮೇಲೆ ಇನ್ನು ಹೇಳಲು ಏನೂ ಉಳಿದಿಲ್ಲ ಎಂಬ ಮೆಚ್ಚುಗೆಯ ಅರ್ಥ. ಆದರೆ ಬಳಸಿದ ಗಾದೆಯು ಬೇರೆಯೇ ಅರ್ಥ ಕೊಡುವಂತಿತ್ತು. ಇನ್ನು ಕೆಲವರಿಗೆ ಕನ್ನಡ ಮಾತನಾಡುವಾಗ ನಡುವೆ ಇಂಗ್ಲಿಷ್ ಬಳಸುವ ಅಭ್ಯಾಸ. ಒಮ್ಮೆ ಒಬ್ಬರು ಸಾಧನಾಶೀಲರೊಬ್ಬರ ಕುರಿತು ಭಾಷಣ ಮಾಡುತ್ತಾ noted ಎಂಬ ಅರ್ಥ ಬರುವಂತೆ ಹೇಳಲು ಹೊರಟರು. ಒಳಗಿನ ಸದ್ಭಾವನೆ ಮಾತಿನ ರೂಪದಲ್ಲಿ ಹೊರಬರುವಾಗ ಬಂದ ಶಬ್ದ notorious.
ಬರಹದಲ್ಲಿ ಎಡವಟ್ಟು: ಕೆಲವೊಮ್ಮೆ ಬರವಣಿಗೆಯಲ್ಲೂ ಎಡವಟ್ಟು ಆಗುವುದುಂಟು. ಕೆಲವರಿಗೆ ಆಮಂತ್ರಣ ಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸುವ ಆತುರ. ಎರಡೂ ಭಾಷೆಗೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಆದರೆ ಇಂಥ ಪ್ರಯೋಗ ಮಾಡುವವರಿಗೆ ಭಾಷೆಯ ಬಳಕೆಯ ಬಗ್ಗೆ ಜ್ಞಾನವಿದ್ದರೆ ಉತ್ತಮ. ಒಮ್ಮೆ ಒಬ್ಬರು ತಮ್ಮ ಸ್ನೇಹಿತರಿಗೆ ಮಗಳ ಮದುವೆ ಪತ್ರಿಕೆ ನೀಡಿದರು. ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿದಾತ ಅವರ ಎದುರೇ ಅದನ್ನು ಮನಸ್ಸಿನಲ್ಲಿಯೇ ಓದಿದನು. ಓದಿ ಮುಗಿಸುತ್ತಿರುವಂತೆ ಪತ್ರಿಕೆ ನೀಡಿದವರ ಮುಖವನ್ನೇ ಕೆಲವು ಹೊತ್ತು ನೋಡಿದನು. ಆಮಂತ್ರಣ ಪತ್ರ ನೀಡಿದವರು ಸ್ವಾಮಿ, ಬರಲೇಬೇಕು. ತಪ್ಪಿಸಬೇಡಿ ಎಂದು ನಗುಮೊಗದಿಂದ ಮತ್ತೆ ಮತ್ತೆ ಕರೆಯುತ್ತಿದ್ದರು. ಓದಿದವನಿಗೆ ಸ್ವಲ್ಪ ಭಾಷಾಜ್ಞಾನವಿರಬೇಕು. ಕನ್ನಡದಲ್ಲಿ ಮದುಮಗಳ ಹೆಸರ ಹಿಂದೆ ಚಿ || ಸೌ || ಎಂದು ಬರೆಯಲಾಗಿತ್ತು. ಇಂಗ್ಲಿಷಿನಲ್ಲಿ Chi.Sow ಎಂದು ಬರೆಯಲಾಗಿತ್ತು. ಇಂಗ್ಲಿಷಿನಲ್ಲಿ Sow ಎಂದರೆ ಹೆಣ್ಣುಹಂದಿ. ಆದರೆ ಪತ್ರಿಕೆ ಓದಿದವರ ಸಮಯಪ್ರಜ್ಞೆ, ಔಚಿತ್ಯಪ್ರಜ್ಞೆ ಶ್ಲಾಘನೀಯ. ಅವರು ಏನೂ ಹೇಳದೆ ಖಂಡಿತ ಬರುತ್ತೇನೆ ಎಂದರು.
ಮಾತಿನ ಹಿಂದೆ ಶಾಸ್ತ್ರಜ್ಞಾನ: ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮನು ಹನುಮಂತನ ಭಾಷಾಸೌಂದರ್ಯ ವನ್ನು ಕೊಂಡಾಡುವ ಸನ್ನಿವೇಶ ಕಿಷ್ಕಿಂದಾ ಕಾಂಡದಲ್ಲಿ ಸುಂದರವಾಗಿ ಮೂಡಿಬಂದಿದೆ. ಭಾಷೆಯ ಬಳಕೆಯಲ್ಲಿ ವ್ಯಾಕರಣ ಬೇಕೇ? ಅದರ ಉದ್ದೇಶ ಕೇವಲ ಸಂವಹನವಲ್ಲವೇ? ಹೀಗೆಲ್ಲ ವಾದಗಳು ಭಾಷೆಯ ಸುತ್ತ ಬೆಳೆದಿವೆ. ಋಷ್ಯಮೂಕ ಪರ್ವತದಲ್ಲಿದ್ದ ಸುಗ್ರೀವನ ಆಜ್ಞೆಯಂತೆ ರಾಮ, ಲಕ್ಷ್ಮಣರನ್ನು ಭಿಕ್ಷುವಿನ ರೂಪದಲ್ಲಿ ಬಂದು ಹನುಮಂತನು ಪ್ರಶ್ನಿಸುತ್ತಾನೆ. ಶ್ರೀರಾಮ ಹಾಗೂ ಲಕ್ಷ್ಮಣರನ್ನು ಭಿಕ್ಷುವಿನ ರೂಪದಲ್ಲಿ ಬಂದ ಹನುಮಂತನು ಹೊಗಳುತ್ತಾನೆ. ಅದು ಕೇವಲ ಹೊಗಳಿಕೆಯಾಗಿರಲಿಲ್ಲ. ಅದರಲ್ಲಿ ವಾಸ್ತವಾಂಶವೂ ಇತ್ತು. ಆದರೆ ಶ್ರೀರಾಮನು ಆ ಹೊಗಳಿಕೆಯ ನುಡಿಗಳ ಹಿಂದೆ ಬೀಳುವುದಿಲ್ಲ. ಹನುಮಂತನ ಮಾತಿನ ಕೌಶಲದ ಮೇಲೆಯೇ ಶ್ರೀರಾಮನ ಮನಸ್ಸು ಕೇಂದ್ರೀಕೃತವಾಗುತ್ತದೆ. ಹನುಮಂತನ ಮಾತುಗಳು ಮುಗಿದ ಮೇಲೆ ಶ್ರೀ ರಾಮನು ಲಕ್ಷ್ಮಣನೊಂದಿಗೆ ಮಾತನಾಡುತ್ತಾ ಅದಕ್ಕೊಂದು ಸುಂದರ ವ್ಯಾಖ್ಯಾನ ನೀಡುತ್ತಾನೆ. ಹನುಮಂತನು ಸಮಗ್ರ ವ್ಯಾಕರಣವನ್ನು ಅಧ್ಯಯನ ಮಾಡಿರಲೇಬೇಕು. ವೇದಗಳನ್ನು ಅಧ್ಯಯನ ಮಾಡದವನಿಗೆ ಹೀಗೆ ಮಾತನಾಡಲು ಸಾಧ್ಯವಿಲ್ಲ. ಮಾತನಾಡುವಾಗ ಕಣ್ಣು, ಹಣೆ, ಹುಬ್ಬು ಅಥವಾ ಇತರ ಯಾವುದೇ ಅಂಗಗಳಲ್ಲಿ ವಿಕಾರ ಕಾಣಲು ಸಾಧ್ಯವಿಲ್ಲ. ಒಂದೇ ಒಂದು ಅಪಶಬ್ದ ಇಲ್ಲ. ಅನಗತ್ಯ ವಿಸ್ತರಣೆ, ಅಸು#ಟ ಉಚ್ಚಾರ, ತಡವರಿಸುವಿಕೆ, ಅತಿಯಾದ ವೇಗ, ಅತಿಯಾದ ವಿಳಂಬ ಹೀಗೆ ಯಾವ ದೋಷವೂ ಈತನ ಮಾತಿನಲ್ಲಿ ಇಲ್ಲ. ಈ ವಿಧದ ವಾಕ್ ವೈಭವವನ್ನು ಹೊಂದಿದವರ ಮಾತು ಮನಸ್ಸಿಗೆ ಮುದ ನೀಡುತ್ತದೆ. ಇಂಥ ಮಾತುಗಾರರು ಯಾವ ರಾಜನ ಆಸ್ಥಾನದಲ್ಲಿ ದೂತರಾಗಿರುತ್ತಾರೋ ಆ ರಾಜನ ಎಲ್ಲ ಕೆಲಸಗಳೂ ಫಲ ನೀಡುವುವು.
ಶಾಸ್ತ್ರಗಳಲ್ಲಿ ಪಾಠಕನ ಲಕ್ಷಣ: ಭಾಷೆಯ ಪ್ರಧಾನ ಆಶಯ ಅಭಿವ್ಯಕ್ತಿ. ಆ ಮೂಲಕ ಪರಸ್ಪರ ಭಾವನೆಗಳ ವಿನಿಮಯ. ಭಾಷೆಯ ವಿಸ್ತಾರ ಅಷ್ಟೇ ಅಲ್ಲ. ಅದು ಉಪನ್ಯಾಸ, ಕಾವ್ಯ ವಾಚನ, ಪ್ರವಚನ, ಸಮರ್ಪಕ ಸಂವಹನ ಹೀಗೆ ಹಲವು ವಿಚಾರಗಳತ್ತ ಇಂದು ಬೆಳೆದು ನಿಂತಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಾತನಾಡುವಾಗ ಅಥವಾ ಪ್ರವಚನ ನೀಡುವಾಗ ಹೇಗಿರಬೇಕು?. ವಿದ್ವಾನ್ ಎನ್. ರಂಗನಾಥ ಶರ್ಮರು ವಾಲ್ಮೀಕಿ ರಾಮಾಯಣವನ್ನು ಅನುವಾದಿಸುತ್ತಾ ಶಿಕ್ಷಾ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟ ಪಾಠಕನಲ್ಲಿಬೇಕಾದ ಲಕ್ಷಣಗಳ ವಿವರ ನೀಡುತ್ತಾರೆ. ಕೇಳಲು ಇಂಪಾಗಿರುವುದು, ಸು#ಟವಾದ ಉಚ್ಚಾರಣೆ, ಅರ್ಥವಾಗುವಂತೆ ಪದವಿಭಾಗ, ಇತರರಿಗೆ ಕೇಳುವಷ್ಟು ಗಟ್ಟಿಯಾದ ಧ್ವನಿ, ಸಭಾಕಂಪನ ಇಲ್ಲದಿರುವುದು, ಲಯಬದ್ಧವಾಗಿರುವುದು.
ಇಂದು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರ ಅಗತ್ಯ. ದೇಶ, ದೇವರು, ಧರ್ಮದ ವಿಚಾರದಲ್ಲಿ ಯಾರ ಭಾವನೆಗಳಿಗೂ ನೋವಾಗದಂತೆ ಎಚ್ಚರ ವಹಿಸಿ ಮಾತನಾಡಿದಷ್ಟೂ ಕ್ಷೇಮ. ಕೋಪಕ್ಕೆ ಮನಸ್ಸನ್ನು ಅರ್ಪಿಸಿ, ಸಮತೆಯನ್ನು ಕಳೆದುಕೊಂಡು ಮಾತನಾಡಿದಲ್ಲಿ ವಿವಾದವನ್ನು ನಾವೇ ಎಳೆದುಕೊಂಡಂತಾಗಬಹುದು. ಸರ್ವಜ್ಞನು ಹೇಳುವಂತೆ ಒಡಲೆಂಬ ಹುತ್ತಕ್ಕೆ ನುಡಿವ ನಾಲಿಗೆ ಸರ್ಪ | ಕಡು ರೋಷ ಎಂಬ ವಿಷವೇರೆ ಸಮತೆ ಗಾರುಡಿಗನಂತಕ್ಕು.
– ಡಾ| ಶ್ರೀಕಾಂತ್ ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.