‘ಮೇಕೆದಾಟು’ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆ: ಕುಮಾರಸ್ವಾಮಿ ಆರೋಪ
Team Udayavani, Mar 6, 2022, 9:41 AM IST
ಬೆಂಗಳೂರು: ಮೇಕೆದಾಟು ಯೋಜನೆ ‘ವಿವಾದ’ವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಅವರೇ ʼವಿವಾದʼ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ʼಬಿಕ್ಕಟ್ಟಿನ ಲೇಪನʼ ಹಚ್ಚಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಿಕೊಂಡು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ, ʼಮೇಕೆದಾಟು ಯೋಜನೆಗೆ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅನುಮತಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆʼ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಮುಂಗಡ ಪತ್ರದಲ್ಲಿ ಯೋಜನೆಗೆ 1,000 ಕೋಟಿ ರೂ. ಕೊಟ್ಟೆವು ಎಂದು ಬಿಜೆಪಿ ಹಾಗೂ ನಮ್ಮ ಪಾದಯಾತ್ರೆಯಿಂದಲೇ ಹಣ ಘೋಷಿಸಲಾಯಿತು ಎಂದು ಕಾಂಗ್ರೆಸ್ ಕುಣಿಯುತ್ತಿವೆ. ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು, ಈಗ ಮೇಕೆದಾಟು ಇಟ್ಟುಕೊಟ್ಟುಕೊಂಡು ʼಚುನಾವಣಾ ಆಟʼ ಶುರು ಮಾಡಿವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಪೋಕ್ಸೋ: ಸಂತ್ರಸ್ತ ಮಕ್ಕಳ ರಕ್ಷಣೆಗೆ ಹೈಕೋರ್ಟ್ ನಿರ್ದೇಶ
ವಾಸ್ತವ ಏನು ಎಂಬುದನ್ನು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೇಂದ್ರದ ಕಾನೂನು ಸುಳಿಯಲ್ಲಿ ಸಿಕ್ಕಿರುವ ಹಾಗೂ ಕೇಂದ್ರದ ಜಲ ಆಯೋಗ (ಸಿಡಬ್ಲ್ಯೂ ಸಿ)ದಲ್ಲಿ ಕೊಳೆಯುತ್ತಿರುವ ಮೇಕೆದಾಟು ಯೋಜನೆಯು ಪಾದಯಾತ್ರೆಯಿಂದ ಬರುವುದಿಲ್ಲ. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿಯೇ ತಂದುಕೊಳ್ಳಬೇಕು ಎಂದಿದ್ದೆ. ಈಗ ಕೇಂದ್ರ ಸಚಿವರಾದ ಶೇಖಾವತ್ ಅವರು; “ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಉಂಟು, ತಮಿಳುನಾಡು ಉಂಟು. ನೀವು ನೀವೇ ಮಾತನಾಡಿಕೊಳ್ಳಿ” ಎಂದು ಕೈ ಎತ್ತಿಬಿಟ್ಟಿದ್ದಾರೆ. ಹಾಗಾದರೆ, ಯೋಜನೆಗೆ ಒಪ್ಪಿಗೆ ನೀಡುವಲ್ಲಿ ಕೇಂದ್ರ ಸರಕಾರದ ಪಾತ್ರವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪಾಲಿನ ನೀರನ್ನು ದಕ್ಕಿಸಿಕೊಳ್ಳುವುದು ಮತ್ತು ನಮ್ಮ ಜನರಿಗೆ ಕುಡಿಯುವ ನೀರು ಕೊಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದು ಕರ್ನಾಟಕದ ಹಕ್ಕು. ಆದರೆ, ಕೇಂದ್ರ ಸಚಿವರು ʼನೀವೇ ಬಗೆಹರಿಸಿಕೊಳ್ಳಿʼ ಎಂದು ಹೇಳಿದ ಒಳಮರ್ಮವೇನು? ಕಾವೇರಿ ಬಗ್ಗೆ ಬಿಜೆಪಿ ʼಹೊಸ ವರಸೆʼ ಶುರು ಮಾಡಿತೇ ಎನ್ನುವ ಸಂಶಯ ನನ್ನದು. ಈ ಬಗ್ಗೆ; 1,000 ಕೋಟಿ ಹಣ ಘೋಷಣೆ ಮಾಡಿದೊಡನೆ ಪಾದಯಾತ್ರೆಯಿಂದಲೇ ಆಯಿತು ಎಂದು ʼಹಿಗ್ಗಿ ಹೀರೆಕಾಯಿʼ ಆಗಿದ್ದ ಕಾಂಗ್ರೆಸ್ ನಿಲುವೇನು? ಅವರೀಗ ತಮ್ಮ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡು ಸರಕಾರದ ಜತೆ ಮಾತುಕತೆ ನಡೆಸಿ ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಾರಾ ಎಂದು ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.