ಮೇಕೆದಾಟು ಶೀಘ್ರ ದಿಲ್ಲಿಗೆ ನಿಯೋಗ: ಬಸವರಾಜ ಬೊಮ್ಮಾಯಿ
Team Udayavani, Mar 7, 2022, 7:05 AM IST
ಹುಬ್ಬಳ್ಳಿ/ರಾಮನಗರ: ಮೇಕೆದಾಟು, ಕಳಸಾ-ಬಂಡೂರಿ, ಕೃಷ್ಣಾ ಸಹಿತ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಶೀಘ್ರವೇ ಸರ್ವಪಕ್ಷ ಸಭೆ ನಡೆಸಲಾಗುವುದು. ಬಳಿಕ ದಿಲ್ಲಿಗೆ ನಿಯೋಗ ತೆರಳಿ ಜಲಶಕ್ತಿ ಸಚಿವರ ಜತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರವಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಡಿಪಿಆರ್‌ಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವರನ್ನು ಕೋರುತ್ತೇನೆ. ಅದಕ್ಕೂ ಮುನ್ನ ಸರ್ವಪಕ್ಷಗಳ ಸಭೆ ನಡೆಸಿ ದಿಲ್ಲಿಗೆ ತೆರಳಿ ಮೇಕೆದಾಟು, ಕೃಷ್ಣಾ ಹಾಗೂ ಇತರ ಯೋಜನೆಗಳ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ಯೋಜನೆ ಕುರಿತಾಗಿ ಕಾವೇರಿ ನಿರ್ವಹಣ ಮಂಡಳಿ 3 ಸಭೆಗಳನ್ನು ನಡೆಸಿದ್ದು, 4ನೇ ಸಭೆಯಲ್ಲಿ ಸಕಾರಾತ್ಮಕ ನಿರ್ಣಯ ಹೊರ ಹೊಮ್ಮುವ ವಿಶ್ವಾಸವಿದೆ. ಇದೇ ಆಧಾರದಲ್ಲಿ ಯೋಜನೆಗೆ ಆಯವ್ಯಯದಲ್ಲಿ 1,000 ಕೋಟಿ ರೂ. ಮೀಸಲಿರಿಸಿದ್ದೇನೆಯೇ ಹೊರತು ಕಾಂಗ್ರೆಸ್ ಹೋರಾಟದ ಕಾರಣಕ್ಕಾಗಿ ಅಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರ ಅಂತಿಮ ಘಟ್ಟದಲ್ಲಿದ್ದು, ಆದಷ್ಟು ಶೀಘ್ರ ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.
ಡಿಕೆಶಿ ಕಿಡಿ: ಮೇಕೆದಾಟು ವಿವಾದವನ್ನು ಕರ್ನಾಟಕ ಮತ್ತು ತಮಿಳುನಾಡು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗೆ ಯಾವುದೇ ಅನು ಮತಿ ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗ ಕೇಂದ್ರ ಸರಕಾರ ಕರ್ನಾಟಕಕ್ಕೆ ಪರಿಸರ ಇಲಾಖೆ ಮೂಲಕ ಜ ಲಾ ಶಯ ನಿರ್ಮಿಸಲು ಅನುಮತಿ ಕೊಡುವ ಕೆಲಸ ಮಾಡಬೇಕು. ಮೇಕೆದಾಟು ಯೋಜನೆಯ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿದೆ ಎಂದರು.
ಕುಮಾರಸ್ವಾಮಿ ಆಕ್ರೋಶ: ಮಾಜಿ ಸಿಎಂ ಕುಮಾರಸ್ವಾಮಿ ಅವರೂ ರವಿವಾರ ಟ್ವೀಟ್ ಮಾಡಿ, ಮೇಕೆದಾಟು ಯೋಜನೆಯನ್ನು “ವಿವಾದ’ ಎನ್ನುವ ಮೂಲಕ ಕೇಂದ್ರ ಸಚಿವರು ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ಬಿಕ್ಕಟ್ಟಿನ ಲೇಪ ಹಚ್ಚಿದ್ದಾರೆ. ಹೊಣೆಗಾರಿಕೆಯಿಂದ ಕೇಂದ್ರ ನುಣುಚಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ’ ಎಂದಿದ್ದಾರೆ.