ಮರಳು ಸಾಗಾಣಿಕೆ ತಡೆಗೆ ಆಗ್ರಹಿಸಿ ಪ್ರತಿಭಟನೆ
ರೈತ ಸಂಘದ ನೇತೃತ್ವದಲ್ಲಿ ಜಾನುವಾರುಗಳ ಸಮೇತ ಪ್ರತಿಭಟನೆ
Team Udayavani, Mar 12, 2022, 5:32 PM IST
ಚಳ್ಳಕೆರೆ: ತಾಲೂಕಿನ ರೈತರಿಗೆ ಮಾರಕಗಿರುವ ಮರಳು ಸಾಗಾಣಿಕೆಯನ್ನು ಜಿಲ್ಲಾಡಳಿತ ತಡೆಗಟ್ಟಬೇಕೆಂದು ಆಗ್ರಹಿಸಿ ತೋರೆಬೀರನಹಳ್ಳಿ ಗ್ರಾಮದಲ್ಲಿ ರೈತ ಸಂಘದ ನೇತೃತ್ವದಲ್ಲಿ ಜಾನುವಾರುಗಳ ಸಮೇತ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ನೇತೃತ್ವದಲ್ಲಿ ಕಳೆದ ಫೆ. 25ರಂದು ನಡೆದಿದ್ದ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿ ಮರಳು ಸಾಗಾಣಿಕೆ ತಡೆಯುವಂತೆ ಒತ್ತಾಯಿಸಿದ್ದರು. ಅಲ್ಲದೆ ಈ ಭಾಗದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ತಮ್ಮ ಜಾನುವಾರುಗಳೊಂದಿಗೆ ನದಿ ಪಾತ್ರದಲ್ಲಿ ಬೀಡು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ತೋರೆಬೀರನಹಳ್ಳಿ ಬ್ಲಾಕ್ 1 ಮತ್ತು 2ರಲ್ಲಿ ಈಗಾಗಲೇ ಸಾಕಷ್ಟು ಮರಳು ದಾಸ್ತಾನು ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆಯಿಂದ ಗುತ್ತಿಗೆ ಪಡೆದ ಖಾಸಗಿ ಗುತ್ತಿಗೆದಾರರು ಡಿಸೆಂಬರ್ 2022ರ ತನಕ ಮರಳು ಸಾಗಾಣಿಕೆಗೆ ಸರ್ಕಾರಕ್ಕೆ ನಿಗದಿಪಡಿಸಿದ ಶುಲ್ಕ ಪಾವತಿಸಿ ಟೆಂಡರ್ ಮೂಲಕ ಅನುಮತಿ ಪಡೆದಿದ್ದರು. ಆದರೆ ಸರ್ಕಾರ ನೀಡಿದ ಅನುಮತಿ ಹಾಗೂ ನಿಬಂಧನೆಗಳನ್ನು ಖಾಸಗಿ ಮರಳು ಗುತ್ತಿಗೆದಾರರು ಗಾಳಿಗೆ ತೂರಿ ಮನಬಂದಂತೆ ಮರಳು ತೆಗೆದಿದ್ದಾರೆ. ಈಗ ಎರಡೂ ಬ್ಲಾಕ್‌ಗಳಲ್ಲಿ ನೂರಾರು ಲೋಡ್ ಮರಳು ದಾಸ್ತಾನಿದ್ದು, ಅದನ್ನು ಸಾಗಾಟ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯೂ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರು.
ಈ ಭಾಗದಿಂದ ಮರಳು ಸಾಗಾಟವಾದರೆ ಸಾವಿರಾರು ರೈತರು ಬೀದಿಪಾಲಾಗುತ್ತಾರೆ. ಮಾತ್ರವಲ್ಲ, ಜಾನುವಾರುಗಳು ಕೂಡ ಪ್ರಾಣಾಪಾಯಕ್ಕೆ ಸಿಲುಕುತ್ತವೆ. ಅಡಿಕೆ, ತೆಂಗು, ಈರುಳ್ಳಿ, ಬಾಳೆ ಮುಂತಾದ ಬೆಳೆಗಳು ನೀರಿಲ್ಲದೆ ಒಣಗಿ ಹೋಗಲಿವೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ತೋರೆಬೀರನಹಳ್ಳಿ, ಕೋನಿಗರಹಳ್ಳಿ, ಟಿ.ಎನ್. ಕೋಟೆ, ನಾರಾಯಣಪುರ, ಯಲಗಟ್ಟೆ, ಯಲಗಟ್ಟೆ ಗೊಲ್ಲರಹಟ್ಟಿ ಸೇರಿದಂತೆ ಹಲವಾರು ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ಆಗಮಿಸಿದ್ದರು. ಟಿ. ಗೋಪಾಲಕೃಷ್ಣ, ತಿಪ್ಪಮ್ಮ, ಎಚ್. ರಂಗಸ್ವಾಮಿ, ರಾಧಮ್ಮ, ಆರ್. ವೀರಭದ್ರ, ಆರ್. ಪ್ರೇಮಾ, ದುರುಗಪ್ಪ, ವಿ. ಮಂಜುಳಾ, ಟಿ.ಎಸ್. ಹನುಮಂತರಾಯ, ಸಿ. ಕವಿತಾ, ಆರ್. ರಾಜಪ್ಪ, ವೀಣಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.