![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 14, 2022, 10:05 AM IST
ಮಂಗಳೂರು: ನೈಋತ್ವ ರೈಲ್ವೇ ವಲಯದ ಮೈಸೂರು-ಮಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್‌ನಿಂದ ಮಂಗಳೂರುವರೆಗಿನ ಸುಮಾರು 85 ಕಿ.ಮೀ. ಹಳಿ ವಿದ್ಯುದೀ ಕರಣಕ್ಕೆ ಯೋಜನೆ ರೂಪಿಸಲಾಗಿದೆ.
ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕಾಮಿಕ್ಸ್ ಸರ್ವಿಸ್ ಲಿ. (ರೈಟ್ಸ್) ಸಂಸ್ಥೆಯು ಈ ಬಗ್ಗೆ ಟೆಂಡರ್ ಆಹ್ವಾನಿಸಿದೆ. ಈ ಮೂಲಕ ಕರಾವಳಿ ಭಾಗದ ಬಹು ಕಾಲದ ನಿರೀಕ್ಷೆ ಸಾಕಾರಗೊಳ್ಳುತ್ತಿದೆ.
ಮೈಸೂರು-ಹಾಸನ- ಮಂಗಳೂರು ಮಧ್ಯೆ 347 ಕಿ.ಮೀ. ವಿದ್ಯುದೀಕರಣ ಕಾಮಗಾರಿಗೆ 461.23 ಕೋ.ರೂ. ವೆಚ್ಚದ ಯೋಜನೆಯಲ್ಲಿ ಈಗಾಗಲೇ ಹಾಸನ-ಅರಸೀಕೆರೆ ವಿಭಾಗದಲ್ಲಿ 2021ರ ಡಿಸೆಂಬರ್‌ನಲ್ಲಿ ಪೂರ್ವಭಾವಿ ಪ್ರಕ್ರಿಯೆ ಗಳೆಲ್ಲ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮೈಸೂರು-ಹಾಸನ ವಲಯದ ಟೆಂಡರ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಈಗ ಮಂಗಳೂರು ಭಾಗದಿಂದ ಸುಬ್ರಹ್ಮಣ್ಯ ರಸ್ತೆಯ ವರೆಗೆ ವಿದ್ಯುದೀಕರಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
65.68 ಕೋ.ರೂ. ವೆಚ್ಚ
ಸುಬ್ರಹ್ಮಣ್ಯ ರೋಡ್‌ನಿಂದ ಮಂಗಳೂರು ವರೆಗೆ ನೈಋತ್ಯ ರೈಲ್ವೇಯ ವ್ಯಾಪ್ತಿಗೆ ಬರುವ ಸಿಂಗಲ್ ಹಳಿ ರೈಲುಮಾರ್ಗದ ವಿದ್ಯುದೀಕರಣ, ಸಿಗ್ನಲಿಂಗ್, ಸಿವಿಲ್ ಎಂಜಿನಿಯರಿಂಗ್ ಕಾಮಗಾರಿಗಳ ಸಹಿತ ಒಟ್ಟು 65.68 ಕೋ.ರೂ. ವೆಚ್ಚದ ಕಾಮಗಾರಿಗೆ ರೈಲು ಇಲಾಖೆಯ ರೈಟ್ಸ್ ಸಂಸ್ಥೆ ಮಾ. 9ರಂದು ಟೆಂಡರ್ ಆಹ್ವಾನಿಸಿದೆ. ಮಾ. 30 ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಮಾ. 31ಕ್ಕೆ ಟೆಂಡರ್ ತೆರೆಯಲಾಗುವುದು. ಟೆಂಡರ್ ನೀಡಿದ ಬಳಿಕ ಕಾಮಗಾರಿ ಪೂರ್ಣಗೊಳಿಸಲು 12 ತಿಂಗಳ ಕಾಲಾವಕಾಶ ನೀಡಲಾಗಿದೆ.
ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ದೀರ್ಘವಾಗಿದ್ದು, ಇದನ್ನು ಕಡಿಮೆಗೊಳಿಸಲು ವಿದ್ಯುದೀಕರಣ ಮಾಡಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ 2017ರ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಲಾಗಿತ್ತು. ಮೈಸೂರು-ಹಾಸನ-ಮಂಗಳೂರು ಮಧ್ಯೆ 347 ಕಿಮೀ. ಮಾರ್ಗದ ವಿದ್ಯುದೀಕರಣ ಕಾಮಗಾರಿಗೆ 461.23 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು.
ಕೊಂಕಣ ರೈಲು ಮಾರ್ಗದಲ್ಲಿ ರೈಲು ಮಾರ್ಗ ವಿದ್ಯುತ್ ಕಾಮಗಾರಿ ಶೇ. 87ರಷ್ಟು ಪೂರ್ಣ ಗೊಂಡಿದ್ದು, ರೋಹಾ-ರತ್ನಾಗಿರಿ ಮಾರ್ಗದಲ್ಲಿ 204 ಕಿ.ಮೀ. ಹಾಗೂ ತೋಕೂರು-ಕಾರವಾರ ವರೆಗಿನ 239 ಕಿ.ಮೀ. ಮಾರ್ಗ ವಿದ್ಯುದೀಕರಣವಾಗಿದೆ.
ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಲ್ಲಿ ಶೊರ್ನೂರು-ಮಂಗಳೂರು ಜಂಕ್ಷನ್- ಪಣಂಬೂರು ವಿದ್ಯುದೀಕರಣ ಪೂರ್ಣಗೊಂಡಿದೆ. ಕೊಂಕಣ ರೈಲು ಮಾರ್ಗದಲ್ಲಿ ಕಾರವಾರದ ವರೆಗೆ ವಿದ್ಯುದೀಕರಣಗೊಂಡಿರುವ ಹಿನ್ನೆಲೆಯಲ್ಲಿ ಕೇರಳ ದಿಂದ ಕೊಂಕಣ ರೈಲು ಮಾರ್ಗದಲ್ಲಿ ಚಲಿಸುವ ರೈಲುಗಳು ಕಾರವಾರದ ವರೆಗೆ ವಿದ್ಯುತ್ ಚಾಲಿತವಾಗಿ ಸಂಚರಿಸಬಹುದಾಗಿದೆ. ಮಂಗಳೂರಿನಿಂದ ಸುಬ್ರಹ್ಮಣ ರಸ್ತೆ ವರೆಗೆ ವಿದ್ಯುದೀಕರಣಗೊಂಡರೆ ರೈಲು ಸಂಚಾರ ಇನ್ನಷ್ಟು ಸುಗಮವಾಗಲಿದೆ.
ಮೈಸೂರು – ಹಾಸನ – ಮಂಗಳೂರು ಮಧ್ಯೆ 347 ಕಿ.ಮೀ. ಮಾರ್ಗ ವಿದ್ಯುದೀಕರಣ ಕಾಮಗಾರಿಯನ್ನು ಹಂತಹಂತವಾಗಿ ಕೈಗೊಳ್ಳ ಲಾಗುತ್ತಿದೆ. ರೈಟ್ಸ್ ಸಂಸ್ಥೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
-ಅನೀಸ್ ಹೆಗಡೆ, ಪಿಆರ್‌ಒ, ನೈಋತ್ಯ ರೈಲ್ವೇ
-ಕೇಶವ ಕುಂದರ್
You seem to have an Ad Blocker on.
To continue reading, please turn it off or whitelist Udayavani.