ಪುತ್ತೂರಿನಲ್ಲಿ ಅನಾಥರ ಪುನರ್ವಸತಿ ಕೇಂದ್ರಕ್ಕೆ ಬೇಡಿಕೆ
Team Udayavani, Mar 14, 2022, 5:53 PM IST
ಪುತ್ತೂರು: ಹೊರ ರಾಜ್ಯ, ಜಿಲ್ಲೆಗಳಿಂದ ನಗರಕ್ಕೆ ಬಂದು ರಸ್ತೆ ಬದಿಗಳಲ್ಲಿ ಉಳಿದುಕೊಳ್ಳುತ್ತಿರುವ ಅನಾಥರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಉಪವಿಭಾಗ ವ್ಯಾಪ್ತಿಗೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಅನಾಥರ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಬೇಡಿಕೆ ಕೇಳಿ ಬಂದಿದೆ.
ಮಳೆಗಾಲ, ಬೇಸಗೆ ಕಾಲದಲ್ಲಿ ಬೀದಿ ಬದಿಯಲ್ಲಿರುವ ಅನಾಥರ ಸಂರಕ್ಷಣೆ ಸಾಧ್ಯವಾಗದ ಸ್ಥಿತಿಯಲ್ಲಿ ಇರುವ ಕಾರಣ ಭಿಕ್ಷುಕರು ಮತ್ತು ಪರಿತ್ಯಕ್ತರ ಪುನರ್ವಸತಿ ಕೇಂದ್ರ ನಿರ್ಮಿಸಬೇಕೆಂಬ ಬೇಡಿಕೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹೊರ ಜಿಲ್ಲೆಯಿಂದ ಆಗಮನ
ಪರಿತ್ಯಕ್ತರು, ಅನಾಥರಲ್ಲಿ ಬಹುಪಾಲು ಮಂದಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ದವರು. ಉದ್ಯೋಗ ನಿಮಿತ್ತ ಹೊರ ಭಾಗದಿಂದ ಜಿಲ್ಲೆಗೆ ಬರುವ ಕುಟುಂಬ ಗಳಲ್ಲಿ ಕೆಲವರು ತಮ್ಮ ಹಿರಿಯರನ್ನು ಇಲ್ಲೇ ಬಿಟ್ಟು ಹೋಗುವುದು, ಕುಟುಂಬ ದೊಂದಿಗೆ ಮುನಿಸಿಕೊಂಡ ಹಿರಿಯ ಜೀವಗಳು ಬಂದು ಭಿಕ್ಷೆ ಬೇಡಲಾರಂಭಿ ಸುವುದು, ಕೌಟುಂಬಿಕ ಸಮಸ್ಯೆಯಿಂದ ಏಕಾಂಗಿಯಾದವರು ತೀರ್ಥಾ ಟನೆ ರೂಪದಲ್ಲಿ ಬಂದು ಇಲ್ಲೇ ಬಾಕಿಯಾಗುವುದು, ಇವೂ ಸೇರಿದಂತೆ ನಾನಾ ಕಾರಣಗಳಿಂದ ಅನಾಥರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ವರ್ಷಗಳ ಹಿಂದೆ ಮಂಗಳೂರು ನಗರಕ್ಕೆ ಸೀಮಿತರಾಗಿದ್ದ ಅವರು, ಈಗ ಗ್ರಾಮಾಂತರದಲ್ಲೂ ಕಂಡು ಬರುತ್ತಿದ್ದಾರೆ.
ಲಾಕ್‌ಡೌನ್ ತೆರವು
ಬಳಿಕ ಬೀದಿಗೆ
ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಭಿಕ್ಷುಕರು ಮತ್ತು ಪರಿತ್ಯಕ್ತರಿಗೆ ವಸತಿ ವ್ಯವಸ್ಥೆಯ ಸಮಸ್ಯೆ ತೀವ್ರವಾಗಿ ಕಾಡಿತು. ಯಾವುದೇ ರೀತಿಯ ಆಸರೆ ಇಲ್ಲದೆ ಅಲೆಮಾರಿಗಳಂತೆ ತಿರುಗಾಡುತ್ತಾ ಇರುವ ಈ ಅನಾಥ ವ್ಯಕ್ತಿಗಳು ಅಲ್ಲಲ್ಲಿ ಭಿಕ್ಷೆ ಬೇಡುತ್ತಾ ದಿನ ದೂಡುವುದು ಸಹಜ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಸಿಗದೆ ಅಲೆದಾಡುವ ಸ್ಥಿತಿ ನಿರ್ಮಾಣವಾಯಿತು. ಅಂಗಡಿ, ಹೊಟೇಲ್‌ಗಳೆಲ್ಲ ಮುಚ್ಚಿದ ಕಾರಣ ಈ ಅನಾಥರು ಹಸಿವಿನಿಂದ ಬಳಲುವ ಸ್ಥಿತಿಗೆ ತಲುಪಿದ್ದರು. ಇದನ್ನರಿತ ಅಂದಿನ ಆಡಳಿತ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಾತ್ಕಾಲಿಕ ಪಾಲನಾ ಕೇಂದ್ರಗಳನ್ನು ತೆರೆಯಿತು. ಐದು ತಾ| ಗಳಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಅನಾಥರು ಪಾಲನಾ ಕೇಂದ್ರದ ಪ್ರಯೋಜನ ಪಡೆದುಕೊಂಡಿದ್ದರು. ಲಾಕ್‌ಡೌನ್ ತೆರವಾಗುತ್ತಲೇ ಪಾಲನಾ ಕೇಂದ್ರವೂ ಮುಚ್ಚಲ್ಪಟ್ಟಿದ್ದು, ಬಳಿಕ ಇವರೆಲ್ಲ ಬೀದಿ ಪಾಲಾದರು. ಈಗ ಮತ್ತೆ ರಸ್ತೆ, ಮನೆ, ಅಂಗಡಿ ಮುಂಭಾಗ ಅಲೆದಾಡುವ ಮೂಲಕ ಉದರ ತುಂಬಿಸಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಅಂಗಡಿ, ಬಸ್ ನಿಲ್ದಾಣ, ರಸ್ತೆ ಬದಿಯೇ ಇವರ ವಾಸಸ್ಥಾನವಾಗಿದೆ.
ಮಂಗಳೂರಿನಲ್ಲಿ ಕೇಂದ್ರ
ಇಡೀ ಜಿಲ್ಲೆಗೆ ಸಂಬಂಧಿಸಿ ಮಂಗಳೂರಿನಲ್ಲಿರುವ ಏಕೈಕ ಪುನರ್ವಸತಿ ಕೇಂದ್ರವೇ ಅನಾಥರ ಆಸರೆಗೆ ಇರುವ ಆಧಾರ. ಆದರೆ ಎಲ್ಲ ತಾಲೂಕುಗಳ ಅನಾಥರನ್ನು ಇಲ್ಲಿ ಸೇರಿಸಲಾಗದ ಸ್ಥಿತಿಯಿದೆ. ಪುತ್ತೂರಿನಲ್ಲಿ ಇಂಥದೊಂದು ಕೇಂದ್ರ ಸ್ಥಾಪಿಸಿದರೆ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ, ಸುಳ್ಯ ತಾಲೂಕಿನ ಭಾರ ಕಡಿಮೆಗೊಳಿಸಲು ಸಾಧ್ಯವಿದೆ. ಬೀದಿಪಾಲಾದ ಪರಿತ್ಯಕ್ತರು ಅನಾರೋಗ್ಯಕ್ಕೆ ತುತ್ತಾದಾಗ ಯಾರಾದರೂ ಆಪತ್ಭಾಂಧವರು ತಾಲೂಕು ಸರಕಾರಿ ಆಸ್ಪತ್ರೆಗೆ ತಂದು ಸೇರಿಸುತ್ತಾರೆ. ಕೆಲವು ದಿನಗಳ ಕಾಲ ಅಲ್ಲಿ ಚಿಕಿತ್ಸೆ, ಉಚಿತ ಊಟ, ಆರೈಕೆ ಎಲ್ಲವೂ ಸಿಗುತ್ತದೆ. ಬಳಿಕ ಅವರನ್ನು ಅಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದ ಕಾರಣ ಆಸ್ಪತ್ರೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕರೆ ಹೋಗುತ್ತದೆ. ಇಲಾಖೆಯವರು ಬಂದು ಇವರನ್ನು ಕೊಂಡು ಹೋಗಿ ಸೇರಿಸುವುದು ಎಲ್ಲಿಗೆ ಎನ್ನುವುದೇ ಇರುವ ಪ್ರಶ್ನೆ.
ಕೇಂದ್ರ ತೆರೆಯಲು ಮನವಿ
ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಪರಿತ್ಯಕ್ತರ ಪುನರ್ವಸತಿ ಕೇಂದ್ರದ ಅಗತ್ಯತೆ ಇದೆ. ಈ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಇದಕ್ಕೆ ಜಮೀನಿನ ಆವಶ್ಯಕತೆ ಇದೆ. ಅದಕ್ಕಾಗಿ ಕಂದಾಯ ಇಲಾಖೆಗೂ ಮನವಿ ಮಾಡಲಾಗಿದೆ. ಒಂದು ವೇಳೆ ಜಮೀನು ಸಿಕ್ಕಿದಲ್ಲಿ ಪುನರ್ವಸತಿ ಕೇಂದ್ರ ತೆರೆಯಲು ಖಾಸಗಿಯವರು ಸಿದ್ಧರಿದ್ದಾರೆ.
-ಶ್ರೀಲತಾ, ಯೋಜನಾಧಿಕಾರಿ,
ತಾಲೂಕು ಶಿಶು ಅಭಿವೃದ್ಧಿ ಇಲಾಖೆ
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.