ನೋಡಬನ್ನಿ ನಂಜನಗೂಡು ದೊಡ್ಡ ಜಾತ್ರೆ ವೈಭವ
Team Udayavani, Mar 15, 2022, 1:30 PM IST
ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡು ನಂಜುಂಡೇಶ್ವರ ಸೇರಿದಂತೆ ಆತನ ಪರಿವಾರದ ಪಂಚಮಹಾರಥೋತ್ಸವ ಮಾ.16 ರಂದು ಬೆಳಗಿನ ಜಾವ 3.30ರಿಂದ 4.30ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಡೆಯಲಿದೆ.
ಕೊರೊನಾ ಹಾವಳಿಯಿಂದ ಕಳೆದರೆಡು ವರ್ಷಗಳಿಂದ ದೇವಾಲಯದ ಒಳಾವರಣಕ್ಕೆ ಸೀಮಿತವಾಗಿ ನಡೆದು ಭಕ್ತರ ಪಾಲಿಗೆ ಮರೀಚಿಕೆ ಯಾಗಿದ್ದ ದೊಡ್ಡ ಜಾತ್ರೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ದೇವಾಲಯ ಆಡಳಿತ ಮಂಡಳಿಯಿಂದ ಅದ್ಧೂರಿ ಸಿದ್ಧತೆ ನಡೆದಿದೆ. ಲಕ್ಷಾಂತ ಭಕ್ತರು ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ಮೂಲ ಸೌಕರ್ಯ ಒದಗಿಸಲು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ 77 ಲಕ್ಷ ರೂ. ವೆಚ್ಚದಲ್ಲಿ ಸಕಲ ಸಿದ್ಧತೆ ಆರಂಭಿಸಿದೆ.
ದೇವರಿಗೆ ವಿಶೇಷ ಪೂಜೆ: ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತರು, ನೀಲಕಂಠ ದೀಕ್ಷಿತರು, ವಿಶ್ವನಾಥ ದೀಕ್ಷಿತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರು ಸೇರಿದಂತೆ ದೇವಾಲಯದ ಅರ್ಚಕರು ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಜಾತ್ರೋತ್ಸವದ ಪೂಜಾ ಕೈಂಕರ್ಯಗಳಾದ ಈಶ್ವರನ ಶಿರದಿಂದ ಪಾದವರಿಗೆ ವಿವಿಧ ಹೋಮಗಳ ಹವನಗಳ ಮೂಲಕ ಅರ್ಚನೆ ಮಾಡಿ ನಂತರ ಪಾರ್ವತಿ, ಗಣಪತಿ ಹಾಗೂ ಸುಬ್ರಹ್ಮಣ್ಯ ಮತ್ತು ಚಂಡೇಕೇಶ್ವರಿಗೂ ಹೋಮ ಹವನಗಳ ಮೂಲ ಪೂಜೆ ಸಲ್ಲಿಸುತ್ತಾರೆ.
ಗೌತಮ ಮಹರ್ಷಿಗಳು ಸ್ಥಾಪಿಸಿದ ರಥ: ನಂತರ ಮಕರ ಲಗ್ನದಲ್ಲಿ ಕೃತಯುಗದ ಗೌತಮ ಮಹರ್ಷಿಗಳು ಸ್ಥಾಪಿಸಿದ್ದಾರೆ ಎಂದು ಪ್ರತಿತಿಯುಳ್ಳ ಗೌತಮ ನಾಮಧೇಯದ ಚತುರ್ಮುಖ ಬ್ರಹ್ಮನೇ ಚಾಲನಾ ಸ್ಥಾನದಲ್ಲಿರುವ ರಥಕ್ಕೆ ಮತ್ತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಅರ್ಪಿಸಿ ಶ್ರೀಕಂಠೇಶ್ವರನನ್ನು ಪ್ರತಿಷ್ಠಾಪಿ ಸುವುದರೊಂದಿಗೆ ಅಧಿಕೃತವಾಗಿ ದೊಡ್ಡ ಜಾತ್ರೆಯ ರಥೋತ್ಸವದ ಚಾಲನೆಗೆ ನಾಂದಿ ಹಾಡಲಾಗುತ್ತದೆ. ಶ್ರೀಕಂಠೇಶ್ವರನ ರಥಾರೋಹಣವಾಗುತ್ತಿದ್ದಂತೆ ಆತನ ಪರಿವಾರದ ತಾಯಿ ಪಾರ್ವತಿ, ಗಣಪತಿ, ಸುಬ್ರಮಣ್ಯ ಹಾಗೂ ಚಂಡಿಕೇಶ್ವರನ ರಥಾರೋಹಣ ವಿಧಿವತ್ತಾಗಿ ಸಂಪ್ರದಾಯಕ ಬದ್ಧವಾಗಿ ನಡೆಯಲಿದೆ.
80 ಅಡಿ 110 ಟನ್ ತೂಕ ಭವ್ಯರಥ: ಅತ್ಯಂತ ಪುರಾತನವಾದ ಸುಮಾರು 80 ಅಡಿ ಎತ್ತರದ 110 ಟನ್ ತೂಕದ ಈ ಗೌತಮ ರಥದಲ್ಲಿ ಪವಡಿಸುವ ನಂಜುಂಡೇಶ್ವರ ರಥ ಪ್ರಯಾಣ ದೇವಾಲಯದ ಮುಂಭಾಗದಿಂದ ಆರಂಭವಾಗಿ ಬಲಭಾಗದ ರಾಷ್ಟ್ರಪತಿ ರಸ್ತೆಯ ರಾಕ್ಷಸ ಮಂಟಪದ ಮೂಲಕ ಮಹಾತ್ಮಾಗಾಂಧಿ ರಸ್ತೆಯಲ್ಲಿ ಸಾಗಿ ದೇವಾಲಯದ ಎಡ ಭಾಗಕ್ಕೆ ಬರುವುದರೊಂದಿಗೆ ಶ್ರೀಕಂಠೇಶ್ವರ ದೊಡ್ಡ ತೇರು ನೆಲೆ ಸೇರಿದಂತಾಗುತ್ತದೆ.
ರಥೋತ್ಸವ ನೋಡುವುದೇ ಒಂದು ಭಾಗ್ಯ: ಆರಂಭದಲ್ಲಿ ಗಣಪತಿ ನಂತರ ಕ್ರಮವಾಗಿ ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ಸೇರಿದಂತೆ ಪಂಚರಥಗಳ ಮಿಣಿ ಹಿಡಿದು ಉಘೇ ನಂಜುಂಡೇಶ್ವರ ಎಂದು ಬಹು ಪರಾಕಿನೊಡನೆ ರಥಬೀದಿಯಲ್ಲಿ ರಥವನ್ನು ಎಳೆದೊಯ್ಯತ್ತಿದ್ದರೆ 80 ಅಡಿ ಎತ್ತರದ ಭವರೋಗ ವೈದ್ಯ ಹಕಿಂ ನಂಜುಂಡೇಶ್ವರ ಪವಡಿಸಿದ ಗೌತಮ ರಥ ಬೀದಿಯುದ್ದಕ್ಕೂ ಬಕುಕುತ್ತ ಬಾಗುತ್ತ ಸಾಗುವ ವೈಭವವನ್ನು ನೋಡುವುದೇ ಒಂದು ಚೆಂದ.
ಅರವಟ್ಟಿಗೆ ಜಾತ್ರೋತ್ಸವ! :ದೊಡ್ಡ ಜಾತ್ರೆ ಅರವಟ್ಟಿಗೆಗಳ ಜಾತ್ರೆಯೂ ಹೌದು. ಶ್ರೀಕಂಠೇಶ್ವರನ ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಆತನ ಭಕ್ತ ಸಮೂಹ ಮಾರು ಮಾರಿಗೆ ನೀರು, ಮಜ್ಜಿಗೆ, ಬೇಲದ, ಹಣ್ಣಿನ ಪಾನಕ, ಸಿಹಿ ತಿನಿಸುಗಳು, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆ ಬಾತ್, ಪುಳಯೋಗರೆಗಳ ಓತಣ ಸೇರಿದಂತೆ ಹಣ್ಣು ಹಂಪಲಗಳನ್ನು ಮಾರು ಮಾರಿಗೆ ಬೀದಿಯುದ್ದಕ್ಕೂ ಭಕ್ತರಿಗೆ ನೀಡಿ ಅವರ ಹೊಟ್ಟೆ ತುಂಬಿಸುವ ಅರವಟ್ಟಿಗೆಗಳು ಈ ಜಾತ್ರೆಯ ಇನ್ನೊಂದು ಮುಖವೇ ಆಗಿದೆ.
– ಶ್ರೀಧರ್ ಆರ್, ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.