“ಯುದ್ಧವಲ್ಲ,  ಶಾಂತಿ; ಭಕ್ತಿ, ಪ್ರೇಮ: ಶಕ್ತಿ’


Team Udayavani, Mar 19, 2022, 6:10 AM IST

“ಯುದ್ಧವಲ್ಲ,  ಶಾಂತಿ; ಭಕ್ತಿ, ಪ್ರೇಮ: ಶಕ್ತಿ’

“ಜೀವಿಗಳಿಗೆ ಎಲ್ಲ ಅನುಗ್ರಹಗಳನ್ನೂ ನೀಡಬಲ್ಲದ್ದು ನಿನ್ನ ಪವಿತ್ರ ನಾಮವೊಂದೇ’ – ಚೈತನ್ಯ ಮಹಾಪ್ರಭುಗಳ ಶಿಕ್ಷಾಷ್ಟಕ ದಲ್ಲಿ ಬರುವ ಮಾತು ಇದು.  ಒಬ್ಬ ದೊಡ್ಡ ಸಂತ ಲೋಕಕ್ಕೆ ತೋರುವ ಬೆಳಕಿನ ಮಾರ್ಗ: ಭಗವಂತನ ನಾಮಸ್ಮರಣೆ. ಸ್ಮರಣೆ ಏಕೆ ಬೇಕೆಂದರೆ ನಮಗೆ ಮರವೆಯಾಗಿರುವುದರಿಂದ! “ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ; ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ’ ಈ ಮಂತ್ರದಿಂದ ಚೈತನ್ಯ ಪ್ರಭುಗಳು ಜನಸಮುದಾಯದ ಮೇಲೆ ಬೀರಿದ, ಬೀರುತ್ತಿರುವ ಪ್ರಭಾವ ಅಸದೃಶವಾದುದು. ನಾಮಸಂಕೀರ್ತನೆಯ ಅನನ್ಯ ಮಹತ್ವವನ್ನು, ಈ ಯುಗದಲ್ಲಿ ಲೋಕಕ್ಕೆ ಅದರ ಅಗತ್ಯವನ್ನು ಸಾರಿ ಹೇಳಿದ, ಹಾಡಿ  ಕುಣಿದ ಗುರುಶ್ರೇಷ್ಠರು ಶ್ರೀ ಚೈತನ್ಯ ಮಹಾಪ್ರಭುಗಳು.

ಸಾವು, ನೋವು ಭೂಮಿಯ ಬಾಳಿಗೆ ಬೆಂಕಿ ಹಚ್ಚಿರುವ ಬೇಗುದಿಯ ದಿನಗಳಿವು. ರಷ್ಯಾ-ಉಕ್ರೇನ್‌ ನಡುವೆ ನಡೆಯು ತ್ತಿರುವ ಸಮರ ವಿಶ್ವದ ಎಲ್ಲೆಡೆ ವಿಷಮ ಸನ್ನಿವೇಶ ಹುಟ್ಟಿಸಿದೆ. ಚೈತನ್ಯ ಮಹಾಪ್ರಭುಗಳು ಕಲಹದ ಒಡಕಿನ ಹಾದಿಯನ್ನಲ್ಲ, ಭಕ್ತಿಯ ಬೆಳಕಿನ ಹಾದಿಯನ್ನು ಬೆಳಗಿದವರು. ಸಂತರ ಸಾಲಿನಲ್ಲಿ ಒಬ್ಬೊಬ್ಬರೂ ಅತಿವಿಶಿಷ್ಟರು. ಬದುಕಿದ ನಲವತ್ತೆಂಟು  ವರ್ಷ ಗಳಲ್ಲೇ ಚೈತನ್ಯರು ಭಕ್ತಿಯ ನವ ಆಂದೋಲನವನ್ನೇ ಹಬ್ಬಿಸಿ ಲೋಕದ ಶೋಕಕ್ಕೆ ಪರಿಹಾರದ ಪಥ ತೋರಿದರು. ತಮ್ಮ ಜೀವಿತ ಕಾಲದಲ್ಲಿ ಅವರು ಬೋಧಿಸಿದುದೆಲ್ಲವೂ “ಶಿಕ್ಷಾಷ್ಟಕ’ದ ಎಂಟು ಶ್ಲೋಕಗಳಲ್ಲಿವೆ. ಅಧ್ಯಾತ್ಮದ ಸಾರವೆಲ್ಲವನ್ನೂ ಅಷ್ಟಕದಲ್ಲಿ ಅಡಕಗೊಳಿಸಿದ ಅದ್ವಿತೀಯ ಅಗ್ಗಳಿಕೆ ಅವರದು. ಈ ಲೇಖನದಲ್ಲಿ ಆ ಕುರಿತೂ ಮುಂದೆ  ಕಿರು ಅವಲೋಕನ ಮಾಡೋಣ. ಜೀವಹಿಂಸೆಗೆ ಅವರ ಶಿಕ್ಷಾಷ್ಟಕ ಪರಿಹಾರ ನೀಡಬಲ್ಲುದೇ? ನೀಡುವುದೆಂದು ಕಂಡುಕೊಳ್ಳೋಣ!

ಚರಿತ್ರೆ :

ಶ್ರೀ ಚೈತನ್ಯರು ಭಾರತದ ಭಕ್ತಿಪಂಥದ ಇತಿಹಾಸದಲ್ಲಿ ಮೇರು ಶಿಖರ ಸದೃಶ ವ್ಯಕ್ತಿತ್ವವಾಗಿ ಬೆಳಗುತ್ತಿದ್ದಾರೆ. ಹದಿನೈದನೇ ಶತಮಾ ನದ ಅಂತ್ಯದ ಹೊತ್ತಿಗೆ ಬಂಗಾಲದ ನವದ್ವೀಪನಗರದ ಶ್ರೀಧಾಮ ಮಾಯಾಪುರದಲ್ಲಿ ಚೈತನ್ಯರು ಜನಿಸಿದರು. ಅಂದು ಫಾಲ್ಗುಣ ಹುಣ್ಣಿಮೆಯ ರಾತ್ರಿ. ಅವರ ತಂದೆ ಜಗನ್ನಾಥ ಮಿಶ್ರಾ ಪಂಡಿತರು, ತಾಯಿ ಶಚೀದೇವಿ ನಿರ್ಮಲ ಸ್ವಭಾವದ ಸಾತ್ವಿಕ ಸ್ತ್ರೀ. ಚೈತನ್ಯರು ಈ ದಂಪತಿಗಳ ಹತ್ತನೇ ಮಗು. ಇವರಿಗೆ ಇಟ್ಟ ಹೆಸರು ವಿಶ್ವಂಭರ. ಗೌರವರ್ಣದವನಾದುದರಿಂದ ಗೌರಾಂಗ, ಬೇವಿನಮರದ ಕೆಳಗೆ ಹುಟ್ಟಿದ್ದರಿಂದ ನಿಮಾಯಿ ಹೀಗೆ ಬಾಲಕನಿಗೆ ಇನ್ನೆರಡು ಹೆಸರುಗಳೂ ಇದ್ದವು. ತೊಟ್ಟಿಲಲ್ಲಿ ಮಲಗಿದ ಶಿಶು ಅತ್ತಾಗ ಹರಿನಾಮ ಹಾಡಿದರೆ ಸಾಕು, ಶಾಂತವಾಗುತ್ತಿತ್ತು. ಸ್ವಲ್ಪ ದೊಡ್ಡ ವರಾದ ಮೇಲೂ ಅಷ್ಟೇ, ಚೈತನ್ಯರು ಆಗಾಗ ಒಂದೇ ಸವನೆ ಅಳುತ್ತಿದ್ದರು. “ಹರಿಭೋಲ್‌’ ಅಂದರೆ ಅಳು ನಿಲ್ಲಿಸುತ್ತಿದ್ದರು.

ಚೈತನ್ಯರು ಹದಿನಾರನೇ ವಯಸ್ಸಿಗೇ ತಮ್ಮ ಊರಿನಲ್ಲಿ ಚತುಷ್ಪಾಠಿ (ಹಳ್ಳಿಯ ಶಾಲೆ) ಆರಂಭಿಸಿದರು! ಅವರ ಸಹಜ ಪ್ರತಿಭೆ ಅಷ್ಟು ಬೇಗ ಅವರನ್ನು ಅಧ್ಯಾಪಕರ ಅಂತಸ್ತಿಗೆ ತಲುಪಿಸಿತ್ತು. ಅವರ ಪಾಠದಲ್ಲಿ  ಶ್ರೀಕೃಷ್ಣ ಮತ್ತೆ ಮತ್ತೆ ಅವತರಿಸುತ್ತಿದ್ದ! ಅವರ ಶಿಷ್ಯ ಶ್ರೀಲ ಜೀವ ಗೋಸ್ವಾಮಿಯವರು ಮಹಾಪ್ರಭುಗಳ ಪ್ರೀತ್ಯರ್ಥವಾಗಿ ‘ಹರಿ ನಾಮಾಮೃತ ವ್ಯಾಕರಣ’ ರಚಿಸಿದರು. ಅದರಲ್ಲಿ ವ್ಯಾಕರಣದ ನಿಯಮಗಳನ್ನು ಭಗವಂತನ ದಿವ್ಯನಾಮ ಬಳಸಿ ವಿವರಿಸಲಾಗಿದೆ! ನವದ್ವೀಪದಲ್ಲಿ ಅವರು ನಾಮಸಂಕೀರ್ತ ನೆಯ ಮೂಲಕ ಲೋಕಶಿಕ್ಷಣವನ್ನೂ ಆರಂಭಿಸಿದರು. ಕಲಿಯುಗ ದಲ್ಲಿ ಯಜ್ಞಯಾಗಗಳನ್ನು ಕ್ರಮಬದ್ಧವಾಗಿ ಮಾಡುವುದು ಕಷ್ಟ, ಅಂಥ ಸಮರ್ಥ ಬ್ರಾಹ್ಮಣರು ದೊರೆಯುವುದು ಅದಕ್ಕಿಂತ ಹೆಚ್ಚು ಕಷ್ಟ. ಆದರೆ ದೇವರು ಪ್ರೇಮಮಯಿ, ಅವನು ನಾಮ ಜಪಕ್ಕೆ ಒಲಿಯುತ್ತಾನೆ. ಅದೇ ಯಜ್ಞ ಎಂದು ಚೈತನ್ಯರು ಹೇಳಿ ದರು. ಆದರೆ ಅವರನ್ನು ಒಪ್ಪದ ಸಂಪ್ರದಾಯವಾದಿಗಳು,

ಅಸೂ ಯಾತತ್ಪರರು ಸಾಕಷ್ಟು ಜನರಿದ್ದರು. ಅಂಥವರು ಒಡ್ಡಿದ ಸಮಸ್ಯೆಗಳನ್ನು ಮಹಾಪ್ರಭುಗಳು ಶಾಂತಚಿತ್ತರಾಗಿಯೇ ಎದುರಿಸಿದರು.

ಚೈತನ್ಯರ ಪ್ರೇಮಮಯ ಕಾರ್ಯಗಳಿಂದ ನಾಮಸಂಕೀರ್ತನ ಒಂದು ಚಳವಳಿಯಂತೆ ಹಬ್ಬತೊಡಗಿತು. ಹರಿ ನಾಮವೇ ಚೈತನ್ಯರ ಬದುಕಿನ ಸರ್ವಸ್ವವೂ ಆಗಿತ್ತು.  ಶ್ರೀಲ ನಿತ್ಯಾನಂದ ಪ್ರಭು, ಠಾಕುರ ಹರಿದಾಸ, ಅದ್ವೆ„ತಪ್ರಭು, ಶ್ರೀನಿವಾಸ ಠಾಕುರ ಮುಂತಾಗಿ ಅನೇಕರು ಚೈತನ್ಯರ ಜತೆ ಕೈಜೋಡಿಸಿದರು. ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಚೈತನ್ಯರು ವಿಧ್ಯುಕ್ತವಾಗಿ ಸನ್ಯಾಸ ಸ್ವೀಕರಿಸಿದರು. ಮಗ ಸಂಸಾರದಿಂದ ದೂರ ಹೋಗಿರುವುದು ತಾಯಿ ಹೃದಯಕ್ಕೆ ಸಂಕಟದ ಮಾತಾಯಿತು. ತಾಯಿ ಬಯಸಿದಂತೆ ಚೈತನ್ಯರು ಪುರಿಯನ್ನು ತಮ್ಮ ಕಾರ್ಯಗಳ ಕೇಂದ್ರವನ್ನಾಗಿ ಮಾಡಿಕೊಂಡರು. ಆ ಪುಣ್ಯಕ್ಷೇತ್ರದಲ್ಲಿ ಆರಂಭದಲ್ಲಿ ಅವರು ಅನೇಕ  ವಿರೋಧಗಳನ್ನು ಎದುರಿಸಬೇಕಾಯಿತು.  ಸನ್ಯಾಸಧರ್ಮವನ್ನು ಅವರು ಕಟ್ಟುನಿಟ್ಟಾಗಿ  ಪಾಲಿಸಿದರು. ಆರು ಗೋಸ್ವಾಮಿಗಳು ಹಾಗೂ ಇನ್ನೂ ಕೆಲವು ಶಿಷ್ಯರನ್ನು ಸಂಕೀರ್ತನ ಪ್ರಚಾರಕ್ಕೆ ಪ್ರಭುಗಳು ನಿಯೋಜಿಸಿದರು. ವರ್ಣಭೇದ ಸಾಮಾಜಿಕ ಅಪರಾಧ. ಸತ್ಸಂಗ, ಹರಿ ಸಂದೇಶ ಶ್ರವಣ ಮತ್ತು ಹರಿಸಮರ್ಪಣ ಭಕ್ತರ ಸಾಧನಾಮಾರ್ಗದ ಮೂರು ಮುಖ್ಯ ಸಂಗತಿಗಳೆಂದು ಅವರು ತೋರಿಸಿಕೊಟ್ಟರು. ಭಾಗವತದ ಪಠಣ ಇನ್ನೊಂದು ಮುಖ್ಯ ಉಪಾಯ. ಈ ಕಾರ್ಯಗಳಿಗೆ  ಜಗನ್ನಾಥನ ಅನುಗ್ರಹ, ಜಗದ್ವಿಖ್ಯಾತಿ ಎರಡೂ ಲಭಿಸಿತು ಅವರಿಗೆ. ಇದರಿಂದ ಅವರು ಲೋಕಕ್ಕೆ ಬಂದ ಕಾರ್ಯವನ್ನು ಮಾಡಲು ಅನುಕೂಲವಾಯಿತು. ಪ್ರೇಮಮಯ ಭಕ್ತಿಯಿಂದ ಭಗವಂತನಲ್ಲಿ ಲೀನರಾಗುವ ಅವರಿಗೆ ಪ್ರಸಿದ್ಧಿಯಿಂದ ಆಗಬೇಕಾದುದೇನೂ ಇರಲಿಲ್ಲ. ಭಗವದಾRರ್ಯಕ್ಕೆ ಒದಗಿ ಬಂದ ಭಾಗ್ಯವದು ಎಂದೇ ತಿಳಿದರು.

ಶ್ರೀ ಚೈತನ್ಯರು ಬದುಕಿದ್ದು ನಲವತ್ತೆಂಟು ವರ್ಷಗಳು ಮಾತ್ರ. ಆ ಅಷ್ಟೂ ವರ್ಷಗಳ ಕಾಲ ಚೈತನ್ಯರು ಹರಿಸಂದೇಶ ಪ್ರಚುರ ಪಡಿಸಿದರು, ಪ್ರಚಾರ ಮಾಡಿದರು. ಅವರ ಅಂತ್ಯ ಅತ್ಯಂತ ನಿಗೂಢವಾಗಿದೆ. ಪುರಿಯ ಟೋಟ ಗೋಪಿನಾಥನ ದೇವಾಲ ಯದಲ್ಲಿ ಸಂಕೀರ್ತನ ಮಾಡುತ್ತ ಮಾಡುತ್ತಲೇ ಅಲ್ಲಿಂದ ಅತ್ಯಾಶ್ಚರ್ಯಕರವಾಗಿ ಕಣ್ಮರೆಯಾದರು. ಅಲ್ಲಿಯ ಕೃಷ್ಣನಲ್ಲಿ ಅವರು ಐಕ್ಯರಾದರು ಎಂಬ ನಂಬುಗೆ ಇದೆ.

“ಚೈತನ್ಯ ಚರಿತಾಮೃತ’ ಮಹಾಪ್ರಭುಗಳ ಕುರಿತು ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಬರೆದ ಜೀವನ ಚರಿತ್ರೆ. ಕೃಷ್ಣದಾಸರು ಕುಟುಂಬದ ಮನಸ್ತಾಪದಿಂದ ಬೇಸತ್ತು ವೃಂದಾವನಕ್ಕೆ ತೆರಳಿದಾಗ ಹಣ್ಣು ಹಣ್ಣು ಮುದುಕರು. ಅಲ್ಲಿ ಅವರಿಗೆ ಚೈತನ್ಯ ಪರಂಪರೆಯ ಪ್ರಮುಖ ಗೋಸ್ವಾಮಿಗಳ ಭೆಟ್ಟಿಯಾಯಿತು. ಅವರೆಲ್ಲರ ಆಗ್ರಹದಂತೆ ಕವಿರಾಜರು ಚೈತನ್ಯ ಚರಿತಾಮೃತ ಬರೆದರು. ಅವರ ಆ ವಯೋಮಾನದಲ್ಲಿ ಇದೊಂದು ಪವಾಡ ಸದೃಶ ಘಟನೆಯೇ ಸರಿ. ಇದು  ಮಹಾಪ್ರಭುಗಳ ಜೀವಿತದ ಕುರಿತ ಆಧಾರಕೃತಿ ಎಂದು ಪ್ರಸಿದ್ಧವಾಗಿದೆ. ಚೈತನ್ಯರ ಭಕ್ತಿಪಂಥ ಚಳವಳಿಯ ಕುರಿತು  ಎಂ.ಟಿ. ಕೆನೆಡಿ ಎಂಬ ಆಂಗ್ಲ ಲೇಖಕ ಮಾಡಿದ ಅಧ್ಯಯನ ಹೊಸಕಾಲದ ಕಣ್ಣುಗಳಿಂದ ಮಹಾ ಪ್ರಭುಗಳ ಜೀವಿತ ಸಾಧನೆಯನ್ನು ಪರಿಶೀಲಿಸಿದೆ.

ಜೀವನಾದ್ಯಂತ ಅಷ್ಟೊಂದು ಕಡೆ ಸಂಚರಿಸಿ ಜನಸಾಮಾನ್ಯರಿಗೆ ಉಪದೇಶಿಸಿ ಉದ್ಧರಿಸಿದ ಚೈತನ್ಯರು ಆ ಎಲ್ಲ ನುಡಿಗಳ  ಸಾರ ಸರ್ವಸ್ವವನ್ನೂ ಕೇವಲ ಎಂಟು ಶ್ಲೋಕಗಳಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಅದೇ ಶಿಕ್ಷಾಷ್ಟಕ. ಶ್ರೀ ಕೃಷ್ಣನಲ್ಲಿ ಸಂಪೂರ್ಣ ಶರಣಾಗತಿಯನ್ನು ಅದು ಬೋಧಿಸುತ್ತದೆ. ಗೀತೆಯಲ್ಲಿ ಭಗವಾನ್‌ ಶ್ರೀಕೃಷ್ಣ ಹೇಳಿದುದಕ್ಕೂ, ಶತಮಾನಗಳ ಬಳಿಕ ಪ್ರಭು ಚೈತನ್ಯರು ನೀಡಿದ ಉಪದೇಶಗಳಿಗೂ ಯಾವುದೇ ಅಂತರವಿಲ್ಲ. ಅಷ್ಟೇ ಅಲ್ಲ, ಅವು ಇಂದಿಗೂ ಪ್ರಸ್ತುತವಾಗಿವೆ. ಭಗವಂತನೇ ಭಕ್ತನಿಗೆ ಸದಾಕಾಲದ ಆಸರೆ. ಅವನಿಗೆ ಶರಣಾಗಬೇಕೆಂಬುದೇ ಅಂತಿಮ ಸತ್ಯ. ಅದೇ ಆದಿ ಸತ್ಯ!

ಭಗವಂತನ ಎಲ್ಲ ಆಧ್ಯಾತ್ಮಿಕ ಶಕ್ತಿಯೂ ಅವನ ನಾಮದಲ್ಲಿದೆ. ಅದನ್ನು ಸ್ಮರಿಸುತ್ತಾ ಅವನನ್ನು ಸುಲಭವಾಗಿ ಸಮೀಪಿಸಬಹುದು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಳ್ಳಬಹುದು.  ಈ ಲೇಖನದ ಆರಂಭದಲ್ಲಿ “ರಕ್ತದ ಹಸಿವೆ’ಯ ಯುದ್ಧೋನ್ಮಾದಕ್ಕೆ ಚೈತನ್ಯರ ಅಷ್ಟಕದಲ್ಲಿ ಉತ್ತರ ಸಿಗಬಹುದೇ ಎಂಬ ಪ್ರಶ್ನೆ ಎತ್ತಿದೆ. ನಮಗೆ ಈಗಿರುವ ಸೀಮಿತ  ಅವಕಾಶದಲ್ಲಿ ಅವರ ಅಸೀಮ ಅಷ್ಟಕದ ಮೊದಲ ಶ್ಲೋಕವನ್ನಷ್ಟೇ ಅಧ್ಯಯನ  ಮಾಡೋಣ:

ಚೇತೋ ದರ್ಪಣ ಮಾರ್ಜನಂ ಭವ ಮಹಾದಾವಾಗ್ನಿ ನಿರ್ವಾಪಣಂ

ಶ್ರೇಯಃ ಕೈರವ ಚಂದ್ರಿಕಾ ವಿತರ ಣಂ   ವಿದ್ಯಾ ವಧೂ ಜೀವನಂ

ಆನಂದಾಬುಧಿ ವರ್ಧನಂ ಪ್ರತಿ ಪದಂ ಪೂರ್ಣಾಮೃತಾಸ್ವಾದನಂ

ಸರ್ವಾತ್ಮ ಸ್ನಪನಂ ಪರಂ ವಿಜಯತೇ ಶ್ರೀ ಕೃಷ್ಣ ಸಂಕೀರ್ತನಂ

ಇದರ ಸಾರ ಹೀಗಿದೆ: ಶ್ರೀಕೃಷ್ಣ ಸಂಕೀರ್ತನೆಯು ಎಷ್ಟೋ ವರ್ಷಗಳಿಂದ ನಮ್ಮ ಹೃದಯಗಳಲ್ಲಿ ಸಂಗ್ರಹವಾದ ಧೂಳು, ಮಾಲಿನ್ಯಗಳನ್ನು ನಿರ್ಮೂಲನ ಗೈದು ಅದನ್ನು ಶುದ್ಧೀಕರಿಸುತ್ತದೆ ಮತ್ತು ಮತ್ತೆ ಮತ್ತೆ ಹುಟ್ಟುವ, ಸಾಯುವ ಜೀವಿತದ ಬೆಂಕಿಯನ್ನು ಆರಿಸುತ್ತದೆ. ಈ ಸಂಕೀರ್ತನ ಆಂದೋಲನವು ಮಾನವೀಯತೆಗೆ ದೊಡ್ಡ ಅನುಗ್ರಹದ ಚಂದ್ರ ಕಿರಣಗಳನ್ನು ಹರಡುತ್ತದೆ. ಇದು ಅತೀಂದ್ರಿಯ ಜೀವನದ ಆನಂದ ಸಾಗರವನ್ನು ಉಕ್ಕಿಸುತ್ತದೆ ಮತ್ತು ನಾವು ಯಾವಾಗಲೂ ಬಯಸುವ ಅಮೃತವನ್ನು ಸಂಪೂರ್ಣವಾಗಿ ಸವಿಯಲು ನಮಗೆ ಅನುವು ಮಾಡಿಕೊಡುತ್ತದೆ.

ಯುದ್ಧದ್ದು ಮರಣದ ಹಾದಿ. ಚೈತನ್ಯರ ಭಕ್ತಿ ಮಾರ್ಗದ್ದು ಅಮೃತದ ಹಾದಿ. ಯುದ್ಧದ್ದು ಉರಿಯುವ ಬೆಂಕಿಯ ತಾಪ. ಚೈತನ್ಯರ ಭಕ್ತಿ ಮಾರ್ಗದ್ದು ಚಂದ್ರ ಕಿರಣಗಳ ಮಧುರ ಪ್ರಶಾಂತತೆ. ಯುದ್ಧದ ಧೂಳು ಮನುಷ್ಯನ ಮನಸಿನಿಂದ ಮರೆಯಾಗಲು ಸತತ ನಾಮ ಸಂಕೀರ್ತನೆಯ ಬಲ, ಬೆಂಬಲ, ಹಂಬಲ ಬೇಕು. ಆಧ್ಯಾತ್ಮಿಕವಾಗಿ ಶಕ್ತಿಯುತರಾಗುವುದೇ ನಮ್ಮ ಬಾಳಿನ ನಿಜವಾದ ಸಾಧನೆ. ಮಿಕ್ಕೆಲ್ಲ ಸಾಧನೆಗಳೂ ಅಂತಿಮವಾಗಿ ನಿರರ್ಥಕ. ಇದೇ ಚೈತನ್ಯರಿಂದ ನಾವು ಪಡೆಯುವ ವಿವೇಕ, ಚೈತನ್ಯ. ಜೀವಹಿಂಸೆಗೆ ಪ್ರತಿಯಾಗಿ ಪ್ರೀತಿ, ಭಕ್ತಿ ಮಹಾ ಪರಿವರ್ತನೆ ಮಾಡಬಲ್ಲವು. ನಿಜವಾದ ಶಕ್ತಿಪ್ರದರ್ಶನ ಅಲ್ಲಿ ನಡೆಯಬೇಕು. ಗೆಲುವು ಅಲ್ಲಿ ಸಿದ್ಧವಾಗಬೇಕು.

 

ಚಿಂತಾಮಣಿ ಕೊಡ್ಲೆಕೆರೆ

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.