ಬಹುಮತವಿದ್ದರೂ ‘ ಕೈಯಲ್ಲಿ ಮೂಡದ ಒಮ್ಮತ ‘
ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಇಂದು
Team Udayavani, Mar 19, 2022, 12:33 PM IST
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ 10 ತಿಂಗಳ ಬಳಿಕ ನಿಗದಿಯಾಗಿರುವ ಮೇಯರ್, ಉಪಮೇಯರ, ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ಮಾ.19 ರಂದು ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ಆದರೆ, ಬಹುಮತವುಳ್ಳ ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಆಯ್ಕೆಗೆ ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಒಮ್ಮತ ಮೂಡದಿರುವುದು ಕುತೂಹಲ ಮೂಡಿಸಿದೆ.
ಆಪರೇಷನ್ ಕಮಲ ಭೀತಿಯಿಂದಾಗಿ ಕಾಂಗ್ರೆಸ್‌ನ 21, ಕಾಂಗ್ರೆಸ್ ಬಂಡಾಯ ಪಕ್ಷೇತರ 4 ಸೇರಿ 25 ಸದಸ್ಯರು ಮಾ.16 ರಂದು ಬೆಂಗಳೂರಿನ ರೆಸಾರ್ಟ್‌ಗೆ ತೆರಳಿದ್ದಾರೆ. ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಕಾರ್ಯದರ್ಶಿ ಮಂಜುನಾಥ್, ವೀಕ್ಷಕ ಯು.ಟಿ. ಖಾದರ್ ಅವರು ಗುರುವಾರ, ಶುಕ್ರವಾರ ಎರಡು ದಿನಗಳ ಕಾಲ ಪಾಲಿಕೆ ಸದಸ್ಯರು, ಶಾಸಕರು, ಜಿಲ್ಲೆಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಈ ವೇಳೆ 3ನೇ ವಾರ್ಡ್‌ನ ಕಾಂಗ್ರೆಸ್ ಬಂಡಾಯ, ಪಕ್ಷೇತರ ಸದಸ್ಯ ಮುಂಡೂರು ಪ್ರಭಂಜನ್ ಕುಮಾರ್ ಸೇರಿ ಹಲವರು ಕೆಲ ಹೆಸರುಗಳನ್ನು ಸೂಚಿಸಿದ್ದಾರೆ. ಆದರೆ, ಅಂತಿಮವಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರು ವರ್ಸಸ್ ಸದಸ್ಯರು
ಪಾಲಿಕೆ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಹಿಂದಿನ ಮೀಸಲಾತಿಯಂತೆ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ 18ನೇ ವಾರ್ಡ್‌ನ ಮುಲ್ಲಂಗಿ ನಂದೀಶ್ ಕುಮಾರ್ ಬೆಂಬಲಿತ 13ಕ್ಕೂ ಹೆಚ್ಚು ಸದಸ್ಯರನ್ನು ಹಿಡಿದಿಟ್ಟುಕೊಂಡಿದ್ದರು. ಆದರೆ, ಬದಲಾದ ಮೀಸಲಾತಿಯಿಂದ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ನಂದೀಶ್ ಮೇಯರ್ ಸ್ಥಾನವನ್ನು ಕೈಬಿಟ್ಟರಾದರೂ, ಬೆಂಬಲಿತ 13 ಸದಸ್ಯರನ್ನು ಮಾತ್ರ ಬಿಡದೆ ಹಿಡಿದಿಟ್ಟುಕೊಂಡಿದ್ದಾರೆ. ನಂದೀಶ್ ಗುಂಪು ಸೂಚಿತ ಅಭ್ಯರ್ಥಿಗಳನ್ನು ಮೇಯರ್ ನ್ನಾಗಿ ಆಯ್ಕೆ ಮಾಡುವಂತೆ ಪಟ್ಟುಹಿಡಿದಿರುವ ಅವರು, 6ನೇ ವಾರ್ಡ್‌ನ ಪದ್ಮರೋಜಾ ವಿವೇಕಾನಂದ, 26ನೇ ವಾರ್ಡ್‌ನ ಸುಕುಂ (ಅಯಾಜ್) ಮತ್ತು 37ನೇ ವಾರ್ಡ್‌ನ ಮಾಲನ್ ಬೀ ಅವರನ್ನು ಮತ್ತು ಉಪಮೇಯರ್ ಸ್ಥಾನಕ್ಕೆ 18ನೇ ವಾರ್ಡ್‌ನ ಮುಲ್ಲಂಗಿ ನಂದೀಶ್ ಕುಮಾರ್, 23ನೇ ವಾರ್ಡ್‌ನ ಪಿ.ಗಾದೆಪ್ಪ, 20ನೇ ವಾರ್ಡ್‌ನ ಪೇರಂ ವಿವೇಕ್, 27ನೇ ವಾರ್ಡ್ ನಿಯಾಜ್ ಅಹ್ಮದ್ ಹೆಸರುಗಳನ್ನು ವೀಕ್ಷಕರ ಬಳಿ ಶಿಫಾರಸ್ಸು ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಮುಂದಿನ 2023ರ ರಾಜ್ಯ ವಿಧಾನಸಭೆ ಚುನಾವಣೆ ಗುರಿಯಾಗಿಸಿಕೊಂಡಿರುವ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು, ಸಹ 34ನೇ ವಾರ್ಡ್‌ನ ರಾಜೇಶ್ವರಿ ಸುಬ್ಬರಾಯುಡು, 28ನೇ ವಾರ್ಡ್‌ನ ಮುಬೀನಾ ಬೀ ಅವರ ಹೆಸರುಗಳನ್ನು ಮೇಯರ್ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದಾರೆ. ಮೇಯರ್ ಆಯ್ಕೆ ವಿಷಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತಿರುವ ಶಾಸಕ ನಾಗೇಂದ್ರ, ಮುಸ್ಲಿಂ ಸಮುದಾಯಕ್ಕೆ ಮೇಯರ ಇಲ್ಲವೇ ಉಪಮೇಯರ್ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಮೇಯರ್ ಮಾಡಿದರೆ ಉತ್ತಮ ಎಂದು ವೀಕ್ಷಕರಲ್ಲಿ ಕೋರಿದ್ದಾರೆ ಎನ್ನಲಾಗುತ್ತಿದೆ. ಆದರೆ, ಎರಡೂ ಗುಂಪುಗಳ ಅಭಿಪ್ರಾಯ ಸಂಗ್ರಹಿಸಿರುವ ಪಕ್ಷದ ವರಿಷ್ಠರು ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡದೆ ಗೌಪ್ಯವಾಗಿಟ್ಟಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಅಥವಾ ಶನಿವಾರ ಬೆಳಗ್ಗೆ 8 ಗಂಟೆಗೆ ಅಧಿಕೃತ ಅಭ್ಯರ್ಥಿಗಳ ಹೆಸರುಗನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಂಟಕವಾದ ಹಿಜಾಬ್
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕಾಗಿ ಮೊದಲ ಬಾರಿಗೆ ತೀವ್ರ ಪೈಪೋಟಿ ನೀಡುತ್ತಿರುವ ಮುಸ್ಲಿಂ ಸಮುದಾಯಕ್ಕೆ ಹಿಜಾಬ್ ವಿವಾದ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಮುಸಲ್ಮಾನರನ್ನು ಓಲೈಸುತ್ತದೆ. ಅವರನ್ನು ಮತಬ್ಯಾಂಕಾಗಿ ಮಾಡಿಕೊಂಡಿದೆ ಎಂಬ ಆರೋಪಗಳಿವೆ. ರಾಜ್ಯದೆಲ್ಲೆಡೆ ಹಿಜಾಬ್ ವಿವಾದ ಬೇರೆಯಿದೆ. ಕಾಶ್ಮೀರಿ ಫೈಲ್ಸ್ ಚಿತ್ರದಲ್ಲೂ ಕಾಂಗ್ರೆಸ್ ಪಕ್ಷದ ಮೇಲೆ ಹಲವು ಟೀಕೆಗಳಿದ್ದು, ಯುವ ಸಮೂಹ ಕಾಂಗ್ರೆಸ್ ಮೇಲೆ ಅಸಮಾಧಾನ ಹೊರ ಹಾಕುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಿದಲ್ಲಿ ಕಾಂಗ್ರೆಸ್ ಬೆಂಬಲಿತ ಹಿಂದು ಮತಗಳು ಇನ್ನಷ್ಟು ವಿಮುಖವಾಗುವ ಸಾಧ್ಯತೆಯಿದೆ ಎಂದು ಹಲವು ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರಂತೆ. ಆದರೆ, ಅಂತಿಮವಾಗಿ ಪಕ್ಷದ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ವಿಪ್ ಜಾರಿ
ಆಪರೇಷನ್ ಕಮಲ ಭೀತಿಯಿಂದ ಬೆಂಗಳೂರಿನ ರೆಸಾರ್ಟ್ ಸೇರಿರುವ ಕಾಂಗ್ರೆಸ್‌ನ ಪಾಲಿಕೆ ಸದಸ್ಯರೆಲ್ಲರೂ, ಮೇಯರ್ ಚುನಾವಣೆ ಹಿನ್ನೆಲೆ ಶುಕ್ರವಾರ ರಾತ್ರಿ ವಾಪಸ್ ಬಳ್ಳಾರಿಗೆ ಬರಲಿದ್ದಾರೆ. ನಗರ ಹೊರವಲಯದ ಅಲ್ಲಂ ಭವನದಲ್ಲಿ ಕೆಲಹೊತ್ತು ತಂಗಲಿದ್ದಾರೆ. ಬೆಳಗ್ಗೆ ಎಲ್ಲರಿಗೂ ಪಕ್ಷ ಸೂಚಿಸುವ ಮೇಯರ್-ಉಪಮೇಯರ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿಪ್ ಜಾರಿಗೊಳಿಸಿ ನೇರವಾಗಿ ಪಾಲಿಕೆ ಕಚೇರಿಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಚುನಾವಣೆ
ಇಲ್ಲಿನ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಸ್ಥಾನಕ್ಕೆ ಮಾ.19 ರಂದು ಚುನಾವಣೆ ನಡೆಯಲಿದೆ. 39 ಸದಸ್ಯ ಸ್ಥಾನಗಳಲ್ಲಿ ಕಾಂಗ್ರೆಸ್ 21, ಕಾಂಗ್ರೆಸ್ ಬಂಡಾಯ ಪಕ್ಷೇತರ 5, ಬಿಜೆಪಿ 13 ಸದಸ್ಯರಿದ್ದು, ಕಾಂಗ್ರೆಸ್ ಬಹುಮತ ಸಾಧಿಸಿದೆ. ಬೆಳಗ್ಗೆ 10 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದೆ. ಆನಂತರ ಅವುಗಳ ಪರಿಶೀಲನೆ, ಹಿಂದಕ್ಕೆ ಪಡೆಯಲು ಕಾಲಾವಕಾಶ ನೀಡಿ. ಅಗತ್ಯ ಬಿದ್ದರೆ ಮಧ್ಯಾಹ್ನ 12:30 ರಿಂದ ಸಭೆ ನಡೆಸಿ ಮೇಯರ್-ಉಪಮೇಯರ್ ಆಯ್ಕೆಗೆ ಮತದಾನದ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಸುತ್ತಮುತ್ತ 500 ಮೀಟರ್ ನಿಷೇದಾಜ್ಞೆ ಜಾರಿಗೊಳಿಸಿದೆ.
-ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.