ಜಿಲ್ಲಾಧಿಕಾರಿ ನಡೆ ಮುದರಂಗಡಿ ಕಡೆ: ಅರ್ಜಿ ಪರಿಶೀಲನೆ, ಸೌಲಭ್ಯ ವಿತರಣೆ
Team Udayavani, Mar 20, 2022, 4:50 AM IST
ಪಡುಬಿದ್ರಿ: ಜಿಲ್ಲಾಧಿಕಾರಿ ಅವರು ಸಾಂತೂರು ಪಿಲಾರು ಗ್ರಾಮಗಳನ್ನು ಒಳಗೊಂಡಿರುವ ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ದುರ್ಗಾಮಂದಿರಕ್ಕೆ ಆಗಮಿಸಿ ಸ್ಥಳೀಯರ ವಿವಿಧ ಬೇಡಿಕೆಗಳ 15 ಅರ್ಜಿಗಳನ್ನು ಪರಿಶೀಲಿಸಿದರು.
ಅರ್ಜಿಗಳನ್ನು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ. ಪಂ. ಸಿಇಒ ಡಾ| ವೈ. ನವೀನ್ ಭಟ್, ಸಹಾಯಕ ಕಮಿಶನರ್ ರಾಜು ಕೆ., ಗ್ರಾ. ಪಂ. ಉಪಾಧ್ಯಕ್ಷ ಶರತ್ ಶೆಟ್ಟಿ ಆಲಿಸಿದರು.
30 ವರ್ಷ ಹಿಂದಿನ ಹಕ್ಕುಪತ್ರ ಹುಡುಕಿಕೊಡಿ :
ವಿದ್ಯಾನಗರ ಪರಿಸರದ ಸುಮಾರು ಕೆಲ ಮನೆಗಳಿಗೆ ಆಶ್ರಯ ಯೋಜನೆಯಡಿಯಲ್ಲಿ 30ವರ್ಷಗಳ ಹಿಂದೆ 1992ರಲ್ಲಿ ಹಕ್ಕು ಪತ್ರವನ್ನೂ ನೀಡಲಾಗಿತ್ತು. ಆಶ್ರಯ ಯೋಜನೆಯ ಸಾಲ ತೀರಿಸಿಕೊಳ್ಳಲು ಹಕ್ಕುಪತ್ರಗಳನ್ನು ತಹಶೀಲ್ದಾರ್ ಕಚೇರಿಗೆ ನೀಡಲಾಗಿತ್ತು. ಈಗ ಬ್ಯಾಂಕ್‌ಗಳಿಗೆ ಸಾಲಕ್ಕಾಗಿ ಸಂಪರ್ಕಿಸಿದಾಗ ಹಕ್ಕುಪತ್ರವಿಲ್ಲದೆ ಸಾಲ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರನ್ನು ವಿದ್ಯಾನಗರ ಆಶ್ರಯ ಕಾಲನಿ ನಿವಾಸಿಗಳು ದುಂಬಾಲು ಬಿದ್ದರು. ಕಡತಗಳನ್ನು ಪರಿಶೀಲಿಸಿ ಹಕ್ಕುಪತ್ರವನ್ನು ಹುಡುಕಿಕೊಡಿ ಎಂದು ಪಿಡಿಒಗೆ ಆದೇಶಿಸಿದರು.
ಡಿನೋಟಿಫಿಕೇಶನ್‌ಗೆ ವರದಿ :
ಯುಪಿಸಿಎಲ್‌ನ ಎರಡನೇ ಹಂತದ ವಿಸ್ತರಣೆಗಾಗಿ ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡ ಜಮೀನಿನ ಮಾಲಕರು ಮನೆ ದುರಸ್ತಿ ಅಥವಾ ಅಭಿವೃದ್ಧಿ ಪಡಿಸಲು ಅವಕಾಶ ವಂಚಿತರಾಗಿದ್ದಾರೆ. ಎಲ್ಲೂರು ಗ್ರಾಮದ 220 ಎಕ್ರೆ ಹಾಗೂ ಸಾಂತೂರು ಗ್ರಾಮದ 200 ಎಕ್ರೆ ಜಾಗವನ್ನು ಸರಕಾರದ ಮಟ್ಟದಲ್ಲಿ ಡಿನೋಟಿಫೈ ಮಾಡುವಂತೆ ಸರಕಾರಕ್ಕೆ ವರದಿ ಕಳುಹಿಸಲಾಗುವುದೆಂದು ಸಂತ್ರಸ್ತರಿಗೆ ತಿಳಿಸಲಾಯಿತು.
ಧನ್ಯತೆಯ ಕಣ್ಣೀರು
ವೃದ್ಧೆ ಲಕ್ಷ್ಮೀ ಆಚಾರ್ಯ ಮನೆ ದುರಸ್ತಿ ಕುರಿತು ಅರ್ಜಿಯನ್ನು ಸಲ್ಲಿಸಿದರು. ಶಾಸಕರು ಮಾನವೀಯ ನೆಲೆಯಲ್ಲಿ ದುರಸ್ತಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಸಹಾಯವೀಯಲು ತಿಳಿಸಿದರು. ಕಾಪು ತಹಶೀಲ್ದಾರ್ ಕಚೇರಿಗೆ ಒಮ್ಮೆ ಬರಬೇಕಾದೀತು. ತಹಶೀಲ್ದಾರ್ ಅವರು ತಮ್ಮನ್ನು ಸಂಪರ್ಕಿಸುತ್ತಾರೆ. ದುರಸ್ತಿಗೆ ಸರಕಾರ ಸಹಾಯ ಮಾಡಲಿದೆ ಎಂದಾಗ ವೃದ್ಧೆ ಕಣ್ಣಂಚಿನಲ್ಲಿ ನೀರು ಬಂತು.
ಕೇರಳಕ್ಕೆ ವಿದ್ಯುತ್ ಲೈನ್: ಸಾರ್ವಜನಿಕ ಸಂವಾದ :
ಯುಪಿಸಿಎಲ್ ಸ್ಥಾವರದಿಂದ ಕೇರಳಕ್ಕೆ ಹೈಟೆನ್ಶನ್ ವಿದ್ಯುತ್ ಲೈನ್ ನಿರ್ಮಾಣಕ್ಕಾಗಿ ಜಿಲ್ಲೆಯ ಇನ್ನಾ ಗ್ರಾ. ಪಂ. ಪ್ರದೇಶವನ್ನು ಹೊರತುಪಡಿಸಿ ಎಲ್ಲೂರು, ಮುದರಂಗಡಿ ಹಾಗೂ ಪಲಿಮಾರು ಗ್ರಾಮಗಳ ಸಾರ್ವಜನಿಕರನ್ನು ಕರೆಸಿ ಈಗಾಗಲೇ ಸಂವಾದ ಕಾರ್ಯಕ್ರಮ ನಡೆಸಲಾಗಿದೆ. ಇನ್ನಾ ಗ್ರಾಮದಲ್ಲೂ ಸಾರ್ವ ಜನಿಕ ಸಂವಾದವನ್ನು ನಡೆಸಲಾಗುತ್ತದೆ. ಉಳಿದಂತೆ ಕೃಷಿ, ಕೃಷಿಯೇತರ ಭೂಮಿ, ತೋಟ ಹಾಗೂ ಪುಂಜ ಪ್ರದೇಶಗಳ ದರ ನಿಗದಿ ನಿರ್ಧಾರವನ್ನು ಇನ್ನಷ್ಟೇ ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮುಂದಿನ ತಿಂಗಳು ಯುಪಿಸಿಎಲ್ ಸಮಸ್ಯಾ ಪ್ರದೇಶಕ್ಕೆ :
ಮಧ್ಯಾಹ್ನದ ಬಳಿಕ ಜಿಲ್ಲಾಧಿಕಾರಿ ಅವರು ಪರಿಶಿಷ್ಟ ಜಾತಿ – ಪಂಗಡಗಳ ಕುಂಜುಗುಡ್ಡೆ ಕಾಲನಿ, ಅಂಗನವಾಡಿಗೆ ಭೇಟಿ ನೀಡಿದರು. ಎಲ್ಲೂರು, ಮುದರಂಗಡಿ ಗ್ರಾಮಗಳ ಜನತೆಗೆ ಯುಪಿಸಿಎಲ್ ಮೂಲಕ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಲು ಎಪ್ರಿಲ್ ಮೊದಲ ವಾರದಲ್ಲೇ ಇನ್ನೊಂದು ದಿನ ನಿಗದಿಪಡಿಸುವಂತೆ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ರಿಕ್ಷಾ ತಂಗುದಾಣ ತೆರವಿಗೆ ಸೂಚನೆ :
ಮುದರಂಗಡಿ ಪೇಟೆಯಲ್ಲಿ ಘನವಾಹನಗಳಿಗೆ ತಡೆಯಾಗುತ್ತಿರುವ ರಿಕ್ಷಾ ತಂಗುದಾಣದ ತಗಡು ಶೀಟಿನ ಮಾಡನ್ನು ತೆಗೆಸಲು ಪಿಡಬ್ಲ್ಯುಡಿ ಅಧಿಕಾರಿಗೆ ಸೂಚಿಸಿದರು. ಹಿಂದೆಯೂ ಜಿಲ್ಲಾಧಿಕಾರಿ ಆದೇಶಿಸಿದ್ದರು. ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದ ಮಾಡನ್ನು ತೆಗೆಯುವವರಾರು ಎಂಬಲ್ಲಿಗೆ ಸಮಸ್ಯೆ ನಿಂತಿತ್ತು. ಈಗ ಜಿಲ್ಲಾಧಿಕಾರಿ ಸೂಕ್ತ ನಿರ್ದೇಶನ ವಿತ್ತಿದ್ದಾರೆ.
ಎಸ್‌ಎಲ್‌ಆರ್‌ಎಂ ಘಟಕ ಉದ್ಘಾಟನೆ :
ಮುದರಂಗಡಿ ಗ್ರಾ.ಪಂ. ನ 22 ಲಕ್ಷ ರೂ. ಗಳಿಂದ ಆರಂಭಿಸಲಾದ ಎಸ್‌ಎಲ್‌ಆರ್‌ಎಂ ಘಟಕವನ್ನು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು. ಯುಪಿಸಿಎಲ್ ಉಚಿತವಾಗಿ ಗ್ರಾ.ಪಂ.ಗೆ ನೀಡಿದ 8 ಲಕ್ಷ ರೂ.ಗಳ ಕಸ ವಿಲೇವಾರಿ ವಾಹನವನ್ನೂ ಲೋಕಾರ್ಪಣೆಗೈಯ್ಯಲಾಯಿತು. ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ. ಸಿಇಒ ಡಾ| ವೈ. ನವೀನ್ ಭಟ್, ಸಹಾಯಕ ಕಮಿಶನರ್ ರಾಜು ಕೆ. , ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾ. ಪಂ. ಇಒ ಶಿವಪ್ರಕಾಶ್, ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ, ಡಿಜಿಎಂ ರವಿ ಜೇರೆ, ಜಿ.ಪಂ. ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಗ್ರಾ. ಪಂ. ಉಪಾಧ್ಯಕ್ಷ ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ತಹಶೀಲ್ದಾರ್ ನಡೆ ಬೈರಂಪಳ್ಳಿ ಕಡೆ :
ಗ್ರಾಮದ ಕಡೆ ಕಾರ್ಯಕ್ರಮದ ಅಂಗವಾಗಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಬೈರಂಪಳ್ಳಿ ಗ್ರಾಮ ಭೇಟಿ, ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರರು ಗ್ರಾಮದ ಅಂಗನವಾಡಿ,ಶಾಲೆ ಮತ್ತು ಗ್ರಾಮ ಒನ್ ಸೆಂಟರ್‌ಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. 94ಸಿ, 94ಸಿಸಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ, ರಸ್ತೆ ಅಭಿವೃದ್ಧಿ, ಸರ್ವೇ ಕಾರ್ಯಗಳು, ಮೂಲ ಸೌಕರ್ಯ ಅಭಿವೃದ್ಧಿ ಕುರಿತಾದ ಅಹವಾಲುಗಳನ್ನು ಜನರು ತಹಶೀಲ್ದಾರ್‌ಗೆ ಸಲ್ಲಿಸಿದರು. ಗ್ರಾ.ಪಂ. ಅಧ್ಯಕ್ಷ ಜಿಯಾನಂದ್ ಹೆಗ್ಡೆ, ಉಪಾಧ್ಯಕ್ಷೆ ಸುಚೇತಾ ರಾವ್, ಕಂದಾಯ ನಿರೀಕ್ಷಕ ಉಪೇಂದ್ರ, ಪಿಡಿಒ ರಾಘವೇಂದ್ರ ಪ್ರಭು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ| ಅರ್ಚನಾ, ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಬ್ರಹ್ಮಾವರ ತಹಶೀಲ್ದಾರ್ ನಡೆ ಬಿಲ್ಲಾಡಿ ಕಡೆ :
ಕೋಟ: ಬಿಲ್ಲಾಡಿ ಗ್ರಾ.ಪಂ.ನಲ್ಲಿ ಬ್ರಹ್ಮಾವರ ತಹಶೀಲ್ದಾರ್‌ರಾಜಶೇಖರ್ ಮೂರ್ತಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗ್ರಾ.ಪಂ. ಅಧ್ಯಕ್ಷೆ ರತ್ನಾ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿತು. ತಹಶೀಲ್ದಾರ್ ಕಾರ್ಯಕ್ರಮ ಉದ್ಘಾಟಿಸಿದರು.
ವಾರಾಹಿ ನೀರಿನಿಂದ ನೈಲಾಡಿ ಭಾಗ ದಲ್ಲಿ ವಾರದ ಮಟ್ಟಿಗೆ ನೀರಿನ ಹರಿವು ಸ್ಥಗಿತಗೊಳಿಸಿ ಕಟಾವಿಗೆ ಅನುಕೂಲ ಮಾಡಿಕೊಡಿ ಎಂದು ಕೃಷಿಕರೋರ್ವರು ಮನವಿ ಮಾಡಿದಾಗ ವಾರಾಹಿ ಎಂಜಿನಿಯರ್‌ಗೆ ತಿಳಿಸಿ ಪರಿಹರಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.
ವಸತಿರಹಿತರಿಗೆ ನಿವೇಶನ ಹಂಚಿಕೆ, ರಸ್ತೆ ಸಮಸ್ಯೆ ಪರಿಹಾರಕ್ಕೆ ಒತ್ತು, ಪಂ.ನಲ್ಲಿ ಆಧಾರ್ ಸೆಂಟರ್ ತೆರೆಯಬೇಕು, ವಾರಾಹಿ ಕಾಲುವೆ ಮೂಲಕ ವಂಡಾರಿನ ಸುಮಾರು 20 ಎಕ್ರೆ ಮದಗಕ್ಕೆ ವಾರಾಹಿ ನೀರನ್ನು ಹಾಯಿಸಬೇಕು, ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಕುರಿತು ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಜಯಪ್ರಕಾಶ್ ಶೆಟ್ಟಿ ಮನವಿ ಮಾಡಿದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ಹೆಚ್ಚು ಚರ್ಚೆಯಾಯಿತು. ಮಾರ್ವಿ ರಸ್ತೆಯಲ್ಲಿ ಮರಗಳು ರಸ್ತೆಗೆ ತಾಗಿಕೊಂಡಿದ್ದು ರಸ್ತೆ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ. ಶಾಲಾ ವಾಹನಗಳು ಊರಿಗೆ ಬರುತ್ತಿಲ್ಲ. ಆದ್ದರಿಂದ ಮರಗಳ ತೆರವಿಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಲಿ ಎಂದು ಗ್ರಾಮಸ್ಥರೋರ್ವರು ತಿಳಿಸಿದರು.
50ಕ್ಕೂ ಹೆಚ್ಚು ಮನವಿಗಳು ಗ್ರಾಮಸ್ಥರಿಂದ ಸಲ್ಲಿಕೆಯಾಯಿತು. ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ತಹಶೀಲ್ದಾರರು ಪರಿಶೀಲಿಸಿದರು.
ಕೋಟ ಉಪತಹಶೀಲ್ದಾರ್ ಭಾಗ್ಯಲಕ್ಷ್ಮೀ, ಕಂದಾಯ ಅಧಿಕಾರಿ ರಾಜು, ಗ್ರಾ.ಪಂ. ಸದಸ್ಯರಾದ ಅರುಣ್, ರವಿ, ಶಕುಂತಲಾ, ಗಿರಿಜಾ, ವೆಂಕಪ್ಪ ಕುಲಾಲ, ಇಂದುಮತಿ, ಅಮರ, ಸರಸ್ವತಿ, ತೋಟಗಾರಿಕೆ ಇಲಾಖೆಯ ಹೇಮಂತ್, ಗ್ರಾಮಲೆಕ್ಕಾಧಿಕಾರಿ ಶರತ್ ಶೆಟ್ಟಿ, ವಿಜಯ್, ಮೆಸ್ಕಾಂ ಇಲಾಖೆಯ ವೈಭವ ಶೆಟ್ಟಿ, ಆರ್.ಎಫ್.ಒ. ಮಂಜುನಾಥ ಶೆಟ್ಟಿ, ಶಿಶು ಕಲ್ಯಾಣ ಇಲಾಖೆಯ ಹೇಮಲತಾ, ತಾಲೂಕು ಕಚೇರಿಯ ಹಿಜಾದ್ ಶಬೀರ್, ಗ್ರಾಮಸಹಾಯಕರಾದ ಪ್ರತಾಪ್ ಮರಕಾಲ, ಅಶೋಕ್ , ಅಣ್ಣಯ್ಯ ಕುಲಾಲ್, ಕೃಷ್ಣ ಮರಕಾಲ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ನೈಲಾಡಿ ಸ್ವಾಗತಿಸಿ ಸದಸ್ಯ ಪ್ರಥ್ವಿರಾಜ್ ಶೆಟ್ಟಿ ಪ್ರಸ್ತಾವನೆಗೈದರು. ಪಿಡಿಒ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ತಹಶೀಲ್ದಾರ್ ಭರವಸೆ :
- ಆಧಾರ್ ಕ್ಯಾಂಪ್ ಮಾಡಿಸಲು ಶೀಘ್ರ ಕ್ರಮ.
- ವಾರಾಹಿ ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ
- 94 ಸಿ ಅರ್ಜಿಗಳನ್ನು ವಿಲೇವಾರಿಗೆ ಶೀಘ್ರ ಕ್ರಮ.
- ಮರಗಳ ತೆರವಿಗೆ ಡಿಎಫ್‌ಒ ಜತೆ ಮಾತುಕತೆ.
ಪ್ರಮುಖ ಸಮಸ್ಯೆ-ಬೇಡಿಕೆಗಳು :
- ಆಶ್ರಯ ಯೋಜನೆಯಡಿ ಮನೆ ಮಂಜೂರಾಗದೆ ಮೂರು ವರ್ಷವಾಗಿದ್ದು ಹೊಸ ಮನೆ ನಿರ್ಮಾಣ ಮಾಡಲು ಸಮಸ್ಯೆಯಾಗುತ್ತಿದೆ.
- ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ಅಗತ್ಯ.
- ಜಲ್ ಜೀವನ್ ಮಿಶನ್ ಯೋಜನೆ ಅನುಷ್ಠಾನವಾಗಲು ಎರಡು- ಮೂರು ವರ್ಷ ಬೇಕು. ಅಲ್ಲಿಯ ತನಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿ.
- ಮರಗಳೇ ಇಲ್ಲದ ಜಾಗವನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಲಾಗಿದೆ. 77ಕ್ಕೂ ಹೆಚ್ಚು 94 ಸಿ ಅರ್ಜಿಗಳು, 125 ಕ್ಕೂ ಹೆಚ್ಚು 53 ನಮೂನೆ ಅರ್ಜಿಗಳು ಬಾಕಿ ಇವೆ.
- ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ಸಮಸ್ಯೆ ಸಾಕಷ್ಟಿದೆ. ಇದಕ್ಕೆ ಪರಿಹಾರ ಬೇಕು.
- ಕಟಾವು ಯಂತ್ರಗಳ ಬಾಡಿಗೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.
- ನಿವೇಶನ ರಹಿತರಿಗೆ ಮೀಸಲಿರಿಸಲು ಸೂಕ್ತ ಸ್ಥಳ ಇಲ್ಲ. 350 ಜನ ವಸತಿ ರಹಿತರಿದ್ದು ಕನಿಷ್ಠ ಹತ್ತು ಎಕರೆ ಜಾಗ ಮೀಸಲಿರಿಸಿ.
- ಶಿರಿಯಾರ- ಮೆಕ್ಕೆಕಟ್ಟು, ನೈಲಾಡಿ, ಕಕ್ಕುಂಜೆ ರಸ್ತೆ ಯಲ್ಲಿ ಅಪಾಯಕಾರಿ ಮರಗಳು ರಸ್ತೆಗೆ ವಾಲಿಕೊಂಡಿದ್ದು ಅಪಾಯವಿದೆ. ಮರ ಕಟಾವಿಗೆ ಕ್ರಮಕೈಗೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.