ನವ ಭಾರತದತ್ತ ದೃಷ್ಟಿ ಹರಿಸಿದ ನವ ಯುಪಿಯ ನೇತಾರ


Team Udayavani, Mar 28, 2022, 10:05 AM IST

ನವ ಭಾರತದತ್ತ ದೃಷ್ಟಿ ಹರಿಸಿದ ನವ ಯುಪಿಯ ನೇತಾರ

ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರುವ ಮೂಲಕ ಯೋಗಿ ಆದಿತ್ಯನಾಥ್‌ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಾಯಕರೋರ್ವರು 37 ವರ್ಷಗಳ ಬಳಿಕ ಸತತ ಎರಡನೇ ಅವಧಿಗೆ ಈ ಹುದ್ದೆಗೇರಿದ ಹೆಗ್ಗಳಿಕೆ ಯೋಗಿ ಅವರದ್ದಾಗಿದೆ.

2017ರಲ್ಲಿ ಬಿಜೆಪಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಪಕ್ಷ ಪೂರ್ಣ ಬಹುಮತದಿಂದ ಚುನಾಯಿತವಾದಾಗ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಎಲ್ಲರದಾಗಿತ್ತು. ಮುಖ್ಯಮಂತ್ರಿ ಗಾದಿಗೆ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರಾದಿಯಾಗಿ ಹತ್ತು ಹಲವು ಹೆಸರುಗಳು ಕೇಳಿಬಂದವಾದರೂ ಬಿಜೆಪಿ ವರಿಷ್ಠರು ಗೋರಖ್‌ಪುರದ ಸಂಸದರಾಗಿದ್ದ ಯೋಗಿ ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಯೋಗಿ ಆದಿತ್ಯನಾಥ್‌ ಬಿಜೆಪಿಯ ಸಕ್ರಿಯ ನಾಯಕರಾಗಿದ್ದರಾದರೂ ಅವರಿಗೆ ಪಕ್ಷ ಮುಖ್ಯಮಂತ್ರಿಯಂಥ ಮಹತ್ವದ ಹೊಣೆಗಾರಿಕೆ ನೀಡೀತು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕಟು ಹಿಂದುತ್ವವಾದಿ, ರಾಷ್ಟ್ರವಾದಿಯಾಗಿರುವ ಯೋಗಿ ಆದಿತ್ಯನಾಥ್‌ ತಮ್ಮ ಪ್ರಖರ ಮಾತುಗಳಿಂದಲೇ ಅಲ್ಪಸಂಖ್ಯಾಕರ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡವರು. ಸಂಸದರಾದ ಬಳಿಕವೂ ಇವರು ನೀಡುತ್ತಿದ್ದ ಹೇಳಿಕೆಗಳು ಸದಾ ವಿವಾದವನ್ನು ಸೃಷ್ಟಿಸುತ್ತಿದ್ದವು. ಈ ಮೂಲಕವೇ ಯೋಗಿ ಆದಿತ್ಯನಾಥ್‌ ದೇಶದಲ್ಲಿ ಜನಪ್ರಿಯರಾಗಿದ್ದರು. ಹಿಂದೂ ಸಮಾವೇಶಗಳು, ಬಿಜೆಪಿ ರ್ಯಾಲಿಗಳಲ್ಲಿ ಯೋಗಿ ಆದಿತ್ಯನಾಥ್‌ ಅವರಿಗೆ ಅಗ್ರ ಮಣೆ. ಬಿಜೆಪಿಯ ಚುನಾವಣ ಪ್ರಚಾರದ ನಾಯಕರ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್‌ ಅವರ ಹೆಸರು ಇದ್ದೇ ಇತ್ತು. ಇಂಥ ಯೋಗಿ ಆದಿತ್ಯನಾಥ್‌ ಅವರಿಗೆ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದ ರಾಜ್ಯವಾಗಿದ್ದ ಉತ್ತರ ಪ್ರದೇಶದ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ನಾಯಕರು ವಹಿಸಿದಾಗ ಸಹಜವಾಗಿ ದೇಶದ ಜನತೆ ಅವರ ಆಡಳಿತದತ್ತ ಕುತೂಹಲದ ದೃಷ್ಟಿ ಹರಿಸಿದ್ದು ಮಾತ್ರ ಸುಳ್ಳಲ್ಲ.

ಬಾಯ್ಮಾತಿಗೆ ಸೀಮಿತಗೊಳ್ಳದ ನಾಯಕ: 2017ರಲ್ಲಿ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯೋಗಿ ಆದಿತ್ಯನಾಥ್‌ ಅವರು ಮೊದಲ ಆದ್ಯತೆ ನೀಡಿದ್ದು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯತ್ತ. ಗೂಂಡಾ ರಾಜ್ಯ, ಮಾಫಿಯಾರಾಜ್‌, ಜಂಗಲ್‌ರಾಜ್‌ ಹೀಗೆ ಹತ್ತು ಹಲವು ವಿಶೇಷಣಗಳಿಂದ ಕುಪ್ರಸಿದ್ಧವಾಗಿದ್ದ ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಮರುಸ್ಥಾಪನೆ ಗಂಭೀರ ಸವಾಲಾಗಿತ್ತು. ಆದರೆ ಈ ಸವಾಲನ್ನು ಅತ್ಯಂತ ಜಾಣ ಮತ್ತು ಅಷ್ಟೇ ದಿಟ್ಟ ನಡೆಯ ಮೂಲಕ ನಿಭಾಯಿಸಿದ ಶ್ರೇಯ ಯೋಗಿ ಆದಿತ್ಯನಾಥ್‌ ಅವರಿಗೆ ಸಲ್ಲಲೇಬೇಕು. ಈ ಹಿಂದೆ ಉತ್ತರಪ್ರದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ, ಬಿಎಸ್‌ಪಿಯ ಆಡಳಿತ ವೈಖರಿಗೆ ಸಂಪೂರ್ಣ ತದ್ವಿರುದ್ಧವಾಗಿ ಆಡಳಿತ ನಡೆಸುವ ಮೂಲಕ ದೇಶವಿರೋಧಿ ಶಕ್ತಿಗಳು, ಭ್ರಷ್ಟರು, ಗೂಂಡಾಗಳು, ಮಾಫಿಯಾಗ ಳೆಲ್ಲವನ್ನೂ ಹೆಡೆಮುರಿ ಕಟ್ಟಿ ಉತ್ತರ ಪ್ರದೇಶದಲ್ಲಿ ಶಾಂತಿ-ನೆಮ್ಮದಿಯ ವಾತಾವರಣ ನೆಲೆಸುವಂತೆ ಮಾಡಿದರು.

ಹಿಂದುತ್ವದ ಗರಡಿಯಲ್ಲಿ ಬೆಳೆದುಬಂದಿದ್ದ ಯೋಗಿ ಆದಿತ್ಯನಾಥ್‌ ರಾಜ್ಯದ ಆಡಳಿತ ಸೂತ್ರವನ್ನು ಹಿಡಿದ ಬಳಿಕ ಇತರೆಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರಂತೆ ಏರಿದ ಏಣಿಯನ್ನು ತುಳಿಯುವ ಕೆಲ ಸಕ್ಕೆ ಮುಂದಾಗಲಿಲ್ಲ ಮಾತ್ರವಲ್ಲ ತಾವು ನೀಡಿದ್ದ ಭರವಸೆ, ಆಶ್ವಾಸನೆ ಗಳನ್ನೂ ಮರೆಯಲಿಲ್ಲ. ಇದು ಅವರ ಯಶಸ್ವಿಗೆ ಮುಖ್ಯ ಕಾರಣಗಳ ಲ್ಲೊಂದು. ತೀವ್ರ ವಿವಾದಾಸ್ಪದ ಮತ್ತು ಚರ್ಚಾಸ್ಪದವಾಗಿದ್ದ ಅಕ್ರಮ ಕಸಾಯಿಖಾನೆಗಳಿಗೆ ನಿಷೇಧ, ಗೋಹತ್ಯೆ ನಿಷೇಧ, ಲವ್‌ ಜೆಹಾದ್‌ ನಿಷೇಧ ಮತ್ತಿತರ ಕಾನೂನುಗಳನ್ನು ಸಂವಿಧಾನದ ನಿಯಮಾವಳಿ ಗಳಡಿಯಲ್ಲಿಯೇ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದರು. ಈ ಮೂಲಕ ಚುನಾವಣೆಗೂ ಮುನ್ನ ಪಕ್ಷ ನೀಡಿದ್ದ ಭರವಸೆಯನ್ನು ಈಡೇರಿಸಿ, ಹಿಂದುತ್ವವಾದವನ್ನು ಕೇವಲ ಬಾಯಿಮಾತಿಗೆ ಸೀಮಿತಗೊಳಿಸದೆ ಅದನ್ನು ಅಕ್ಷರಶಃ ಜಾರಿಗೆ ತಂದರು. ಯೋಗಿ ಅವರ ಈ ದಿಟ್ಟ ನಡೆಗಳು ಇನ್ನಿತರ ರಾಜ್ಯಗಳಿಗೂ ಮಾದರಿಯಾದವು ಎಂಬುದು ಇಲ್ಲಿ ಉಲ್ಲೇಖನೀಯ. ಇನ್ನು ಗೂಂಡಾಗಳು, ರೌಡಿಗಳು, ಡಕಾಯಿತರ ವಿರುದ್ಧ ಕಾನೂನಾತ್ಮಕವಾಗಿ ಮತ್ತು ಕಾನೂನಿಗೆ ಬೆಲೆ ಕೊಡದವರ ವಿರುದ್ಧ ಎನ್‌ಕೌಂಟರ್‌ನಂಥ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದರು. ವಿವಿಧ ಪಕ್ಷಗಳ ಕೃಪಾಶ್ರಯದಿಂದ ಮಾಫಿಯಾರಾಜ್‌ನಲ್ಲಿ ನಿರತರಾಗಿದ್ದವರಿಗೆ ಕಾನೂನನ್ನೇ ಪ್ರತ್ಯಸ್ತ್ರವನ್ನಾಗಿಸಿಕೊಂಡದ್ದೇ ಅಲ್ಲದೆ ಅಕ್ರಮ ನಿರ್ಮಾಣಗಳನ್ನು ಬುಲ್ಡೋಜರ್‌ ಬಳಸಿ ಕೆಡವಿ ಹಾಕಿ ಆಡಳಿತದ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟರು.

ಕೇಂದ್ರದ ಸಹಕಾರದಿಂದ ಅಭಿವೃದ್ಧಿ: ಮತ್ತೊಂದೆಡೆಯಿಂದ ಕೇಂದ್ರ ದಲ್ಲಿನ ಪ್ರಧಾನಿ ಮೋದಿ ನೇತೃತ್ವದ ಸರಕಾರದಿಂದ ರಾಜ್ಯಕ್ಕೆ ಭರಪೂರ ಅನುದಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಯೋಗಿ ಆದಿತ್ಯ ನಾಥ್‌ ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಇದೇ ವೇಳೆ ಅಯೋಧ್ಯೆ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ದೇಶದ ಆಸ್ತಿಕ ಬಾಂಧವರ ಬಹು ದಶಕ ಗಳ ಕನಸು ಸಾಕಾರಗೊಳ್ಳಲು ಕಾರಣವಾಯಿತು. ಇದೀಗ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗು ತ್ತಿದ್ದು ನಿಗದಿತ ಅವಧಿಯಲ್ಲಿ ಅಂದರೆ 2024ರ ವೇಳೆಗೆ ಪೂರ್ಣಗೊ ಳ್ಳುವ ನಿರೀಕ್ಷೆ ಇದೆ. ಚುನಾವಣೆಗೂ ಮುನ್ನ ಲೋಕಾರ್ಪಣೆಗೊಂಡ ಕಾಶಿ ವಿಶ್ವನಾಥ ದೇಗುಲ ಕಾರಿಡಾರ್‌, ವಿವಿಧ ಹೆದ್ದಾರಿ ಕಾರಿಡಾರ್‌ಗಳು, ಎಕ್ಸ್‌ಪ್ರೆಸ್‌ ವೇ, ವಿಮಾನ ನಿಲ್ದಾಣ ನಿರ್ಮಾಣ, ಕೈಗಾರಿಕ ವಲಯಗಳು, ಜನಕಲ್ಯಾಣ ಯೋಜನೆಗಳು… ಹೀಗೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ “ಡಬಲ್‌ ಎಂಜಿನ್‌’ ಸರಕಾರದಿಂದ ಸಾಧ್ಯವಾಗಿದೆ. ಇವೆಲ್ಲದರ ಪರಿಣಾಮವಾಗಿ ಆಡಳಿತ ವಿರೋಧಿ ಅಲೆಯ ಭೀತಿಯ ಹೊರತಾಗಿಯೂ ಬಿಜೆಪಿಯನ್ನು ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೇರಿಸುವಲ್ಲಿ ಯೋಗಿ ಆದಿತ್ಯನಾಥ್‌ ಯಶಸ್ವಿಯಾಗಿದ್ದಾರೆ. 2017ರಲ್ಲಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಆಡಳಿತ ವೈಖರಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವಲ್ಲಿ ನೆರವಾಗಿದ್ದರೆ ಈ ಬಾರಿ ಮೋದಿ ಅವರೊಂದಿಗೆ ಯೋಗಿಯ ಆಡಳಿತ, ಕಾರ್ಯಶೈಲಿಯೂ ಜತೆಗೂಡಿದೆ ಎಂಬುದು ಚುನಾವಣ ಫ‌ಲಿತಾಂಶವನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.

ದ್ವಿತೀಯ ಪಾಳಿ ಆರಂಭ: ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಯಾಗಿ ತಮ್ಮ ದ್ವಿತೀಯ ಪಾಳಿ ಆರಂಭಿಸಿದ್ದಾರೆ. ಉತ್ತರಪ್ರದೇಶವನ್ನು ದೇಶದ ನಂಬರ್‌ ಒನ್‌ ರಾಜ್ಯವನ್ನಾಗಿಸುವ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನಿರಿಸಿದ್ದಾರೆ. ಸಚಿವರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ವರಿಷ್ಠರ ಜತೆಗೂಡಿ ಅತ್ಯಂತ ಜಾಣ್ಮೆಯಿಂದ ಪೂರ್ಣ ಗೊಳಿಸಿರುವ ಅವರು ಜಾತಿ ಸಮೀಕರಣ, ಪ್ರಾದೇಶಿಕ ಅಸಮಾನತೆಗೆ ಆಸ್ಪದವಿಲ್ಲದಂತೆ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿ ದ್ದಾರೆ. ಸಚಿವ ಸಂಪುಟದಲ್ಲಿ ಯುವ ಮತ್ತು ಮಧ್ಯ ವಯಸ್ಕರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಎಲ್ಲ ಮತ, ಜಾತಿ, ವರ್ಗ, ಸಮುದಾಯ ದವರಿಗೂ ತಮ್ಮ ಸಂಪುಟದಲ್ಲಿ ಯೋಗಿ ಆದಿತ್ಯನಾಥ್‌ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮಾಜಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಸ್ನಾತಕೋತ್ತರ ಪದವೀಧರರು, ಪದವೀಧರರು ಹೀಗೆ ಕೇಂದ್ರದ ಮಾದರಿಯಲ್ಲಿ ಸಂಪುಟಕ್ಕೆ ಶಾಸಕರನ್ನು ಸೇರ್ಪಡೆಗೊಳಿಸಲಾಗಿದೆ. ಪ್ರದೇಶವಾರು ಲೆಕ್ಕಾಚಾರ ಮಾಡಿ ಸಚಿವ ಸ್ಥಾನ ಹಂಚಲಾಗಿದೆ. ಇನ್ನೂ 8 ಸಚಿವ ಸ್ಥಾನಗಳು ಖಾಲಿ ಇದ್ದು ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅಥವಾ ಅತ್ಯಗತ್ಯ ಎಂದೆನಿಸಿದಾಗ ಈ ಸ್ಥಾನಗಳನ್ನು ಭರ್ತಿ ಮಾಡುವ ಇರಾದೆ ಯೋಗಿ ಅವರದ್ದಾಗಿದೆ.

2024ರ ಚುನಾವಣೆಯತ್ತ ದೃಷ್ಟಿ: 2024ರ ಲೋಕಸಭೆ ಚುನಾವಣೆ ಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಉತ್ತರ ಪ್ರದೇಶ ಸಂಪುಟ ರಚನೆ ಯಾಗಿರುವುದಂತೂ ಸುಸ್ಪಷ್ಟ. 80 ಲೋಕಸಭಾ ಸ್ಥಾನಗಳನ್ನು ಹೊಂದಿ ರುವ ಉತ್ತರ ಪ್ರದೇಶ ಎಲ್ಲ ಪಕ್ಷಗಳ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಜತೆಗೂಡಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ನಿಚ್ಚಳ ಬಹುಮತ ಪಡೆಯಲು ಬಿಜೆಪಿಗೆ ಸಾಧ್ಯವಾಗಿತ್ತು. 2024ರ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ರಾಜ್ಯದಿಂದ ಗರಿಷ್ಠ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ಈಗ ಯೋಗಿ ಅವರ ಹೆಗಲಿಗೇರಿದೆ. ಇದೇ ವೇಳೆ ನರೇಂದ್ರ ಮೋದಿ ಅವರ ಬಳಿಕ ಬಿಜೆಪಿಯ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಲ್ಪಟ್ಟಿರುವ ಯೋಗಿ ಆದಿತ್ಯನಾಥ್‌ ಅವರ ಎರಡನೇ ಇನಿಂಗ್ಸ್‌ ನತ್ತ ಸಹಜವಾಗಿ ಇಡೀ ದೇಶದ ಜನರ ದೃಷ್ಟಿ ನೆಟ್ಟಿದೆ.

ಕಳೆದ ಐದು ವರ್ಷಗಳಿಂದ ಅಧಿಕಾರ ನಡೆಸುತ್ತಿರುವುದರಿಂದ ಇಡೀ ರಾಜ್ಯದ ಸ್ಥಿತಿಗತಿ, ಆಗಬೇಕಿರುವ ಕೆಲಸಕಾರ್ಯಗಳು, ಅಭಿವೃದ್ಧಿ ಸಾಧ್ಯತೆಗಳು, ಕೈಗೆತ್ತಿಕೊಳ್ಳಬಹುದಾದ ಯೋಜನೆಗಳು, ಜನಕಲ್ಯಾಣ ಯೋಜನೆಗಳ ಸಂಪೂರ್ಣ ಅರಿವು ಅವರಿಗಿದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಕಾರ್ಯಾಂಗದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದರಿಂದ ತಮ್ಮ ಕನಸು, ಆಶಯಗಳನ್ನು ಕಾರ್ಯಗತ ಗೊಳಿಸಲು ಸಹಕಾರಿಯಾಗಲಿದೆ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರವಿರುವುದು ಮತ್ತು ಪ್ರಧಾನಿ ಮೋದಿ ರಾಜ್ಯದ ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಧನಾತ್ಮಕ ಅಂಶವಾಗಲಿದೆ. ಇನ್ನು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಿಗದಿತ ಅವಧಿಯಲ್ಲಿ ಲೋಕಾರ್ಪಣೆ ಗೊಂಡು ಭಕ್ತರ ದರ್ಶನಕ್ಕೆ ಮುಕ್ತವಾದಲ್ಲಿ ಉತ್ತರ ಪ್ರದೇಶ ಧಾರ್ಮಿಕ ಪ್ರವಾಸೋದ್ಯಮದ ರಾಜಧಾನಿಯಾಗಿ ಮಾರ್ಪಾಡಾಗಲಿದೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೊಸ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿರುವ ಆದಿತ್ಯನಾಥ್‌ ಅವರು ಚುನಾವಣೆಗೂ ಮುನ್ನ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಮತ್ತು ಘೋಷಿಸಿದ ಯೋಜನೆಗಳ ಜಾರಿಗಾಗಿ ನಿರ್ದಿಷ್ಟ ಕ್ರಿಯಾಯೋಜನೆ ರೂಪಿಸಲು ಸಲಹೆ ನೀಡಿದ್ದಾರೆ. ಮೊದಲ ಹಂತದಲ್ಲಿ 100 ದಿನ, ಆರು ತಿಂಗಳು ಮತ್ತು ವರ್ಷದ ಅವಧಿಯ ಕಾರ್ಯಯೋಜನೆ ರಚಿಸುವಂತೆ ಸೂಚನೆ ನೀಡಿದ್ದಾರೆ.

ಹಾಗೆಂದು ಯೋಗಿ ಅವರ ಮುಂದೆ ಸವಾಲುಗಳೇ ಇಲ್ಲ ಎಂದಲ್ಲ. ಕಳೆದ ಅವಧಿಯುದ್ದಕ್ಕೂ ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ಸರಿ ದಾರಿಗೆ ಆದ್ಯತೆ ನೀಡಿದ್ದರಿಂದ ಈ ಬಾರಿ ಸಹಜವಾಗಿ ರಾಜ್ಯದ ಅಭಿ ವೃದ್ಧಿ ಯೋಜನೆಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲೇಬೇಕಿದೆ. ಕಾನೂನು-ಸುವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ಜತೆಜತೆಯಲ್ಲಿ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿ ಸುವ ಗುರುತರ ಜವಾಬ್ದಾರಿ ಇದೆ. ರಾಜ್ಯದಲ್ಲಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸು ವುದು, ಕಬ್ಬು ಬೆಳೆಗಾರರ ಹಿಂಬಾಕಿ ಪಾವತಿ ಸಹಿತ ಹಲವಾರು ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಯೋಗಿ ಸರಕಾರದ ಮುಂದಿದೆ. ಇನ್ನು ಉತ್ತರ ಪ್ರದೇಶ ದೇಶದ ಅತೀದೊಡ್ಡ ರಾಜ್ಯವಾಗಿದ್ದರೂ ಕೈಗಾರಿಕ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದು ರಾಜ್ಯದ ಬೊಕ್ಕಸದ ಮೇಲೂ ಪರಿಣಾಮ ಬೀರುತ್ತಿದೆ. ಈಗ ಶಾಂತಿ-ಸುವ್ಯವಸ್ಥೆ ನೆಲೆಸಿರುವುದರಿಂದ ರಾಜ್ಯದತ್ತ ಹೂಡಿಕೆದಾರರು ಮತ್ತು ಕೈಗಾರಿಕ ಕಂಪೆನಿಗಳನ್ನು ಆಕರ್ಷಿಸಲು ಹೆಚ್ಚಿನ ಗಮನ ಹರಿಸಬೇಕಿದೆ. ಈ ದಿಸೆಯಲ್ಲಿ ಯೋಗಿ ಆದಿತ್ಯನಾಥ್‌ ಕಾರ್ಯೋನ್ಮುಖವಾದಲ್ಲಿ ಉತ್ತರ ಪ್ರದೇಶ ತನ್ನ ಮತ್ತೂಂದು ಕಳಂಕದಿಂದ ಮುಕ್ತವಾಗಲಿದೆ.

ಇದೇ ವೇಳೆ ವಿಧಾನಸಭೆಯಲ್ಲಿ ವಿಪಕ್ಷ ಸಮಾಜವಾದಿ ಪಾರ್ಟಿಯ ಬಲ ಈ ಬಾರಿ ವೃದ್ಧಿಸಿದೆ. ಸ್ವತಃ ಅಖಿಲೇಶ್ ಯಾದವ್‌ ಅವರೇ ಯೋಗಿ ಸರಕಾರದ ಲೋಪದೋಷಗಳ ವಿರುದ್ಧ ಹೋರಾಟ ನಡೆಸಲು ಸನ್ನದ್ಧರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಏನಿದ್ದರೂ ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿಯ ನಡುವೆಯೇ ಪೈಪೋಟಿ. ಈ ಹಿನ್ನೆಲೆಯಲ್ಲಿ ಯೋಗಿ ಈ ಬಾರಿ ಒಂದಿಷ್ಟು ಹೆಚ್ಚೇ ಶ್ರಮ ವಹಿಸಬೇಕಿದೆ.

-ಹರೀಶ್‌.ಕೆ

ಟಾಪ್ ನ್ಯೂಸ್

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.