ಮಂಗಳೂರು-ಮೈಸೂರು ವಿಮಾನಯಾನ: ವಿಸ್ತರಣೆಯೊಂದಿಗೆ ಪುನರಾರಂಭದ ನಿರೀಕ್ಷೆ
Team Udayavani, Mar 28, 2022, 7:13 AM IST
ಮಂಗಳೂರು: ಮಂಗಳೂರು-ಮೈಸೂರು ಮಧ್ಯೆ ಸ್ಥಗಿತಗೊಂಡಿರುವ ವಿಮಾನಯಾನವನ್ನು ವಿಸ್ತರಣೆಯೊಂದಿಗೆ ಮರು ಆರಂಭಿಸುವ ಸಾಧ್ಯತೆಗಳ ಬಗ್ಗೆ ಉನ್ನತ ಮಟ್ಟದಲ್ಲಿ ಚಿಂತನೆಗಳು ನಡೆದಿವೆ. ಕೊರೊನಾ ದ್ವಿತೀಯ ಅಲೆ ಮತ್ತು ಪ್ರಯಾಣಿಕರ ಕೊರತೆಯಿಂದ ಕಳೆದ ವರ್ಷ ಇದು ಸ್ಥಗಿತಗೊಂಡಿತ್ತು.
ಮಂಗಳೂರು-ಮೈಸೂರು ನಡುವೆ ವಿಮಾನಯಾನ ಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪಸಿಂಹ ಪ್ರಯತ್ನ ನಡೆಸಿದ್ದು, 2020ರ ಡಿ. 11ರಂದು ಅಲಯನ್ಸ್ ಏರ್‌ನಿಂದ ಆರಂಭಗೊಂಡಿತ್ತು. ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತಿತ್ತು. ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರಟು ಮಂಗಳೂರಿಗೆ 12.15ಕ್ಕೆ ಬರುತ್ತಿತ್ತು. ಮಂಗಳೂರಿನಿಂದ 12.40ಕ್ಕೆ ಹೊರಟು ಮೈಸೂರಿಗೆ 1.40ಕ್ಕೆ ತಲುಪುತ್ತಿತ್ತು. ಆರಂಭದಲ್ಲಿ ಸುಮಾರು 80ರಿಂದ 100 ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಕೆಲವೇ ತಿಂಗಳಲ್ಲಿ ಕೊರೊನಾ ದ್ವಿತೀಯ ಅಲೆ ತೀವ್ರಗೊಂಡು ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿ ಯಾನ ಸ್ಥಗಿತಗೊಂಡಿತು.
ಇದನ್ನು ಪುನರಾರಂಭಿಸಬೇಕು ಎಂಬ ಬೇಡಿಕೆ ಮತ್ತೆ ಕೇಳಿಬರುತ್ತಿದೆ. ಆದರೆ ಪ್ರಯಾಣಿಕರ ಕೊರತೆ ಈಗಲೂ ತೊಡಕಾಗಿದೆ. ಹೀಗಾಗಿ ಹೆಚ್ಚು ಆದಾಯ ಸಾಧ್ಯತೆ ಹೊಂದಿಸಿಕೊಂಡು ಪುನರಾರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮಂಗಳೂರಿನಿಂದ ಮೈಸೂರಿಗೆ ತೆರಳುವ ವಿಮಾನವನ್ನು ಅಲ್ಲಿಂದ ಬೆಂಗಳೂರು ಅಥವಾ ಮುಂಬಯಿಗೆ ವಿಸ್ತರಿಸಿದರೆ ಆರ್ಥಿಕವಾಗಿ ಲಾಭದಾಯಕವಾಗಬಹುದು ಎಂಬ ಲೆಕ್ಕಾಚಾರ ಇದೆ.
ದೇಶದಲ್ಲಿ ಸ್ಥಗಿತಗೊಂಡಿರುವ ಆಂತರಿಕ ವಿಮಾನಯಾನ ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿ ಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಈಗಾಗಲೇ ಅನುಮತಿ ನೀಡಿದ್ದಾರೆ. ಪ್ರಸ್ತಾವಿತ ಬೇಸಗೆ ವೇಳಾಪಟ್ಟಿ ಪ್ರಕಾರ ಈ ವಾರದಿಂದ ಹೊಸದಿಲ್ಲಿ ಮತ್ತು ಪುಣೆಗೆ ವಿಮಾನಯಾನ ಆರಂಭಗೊಳ್ಳಲಿದೆ. ಇಂಡಿಗೋ ಸಂಸ್ಥೆಯಿಂದ ಮಾ. 28ರಂದು ಮಂಗಳೂರಿನಿಂದ ಪುಣೆ ಮಾರ್ಗವಾಗಿ ಹೊಸದಿಲ್ಲಿಗೆ ವಿಮಾನಯಾನ ಆರಂಭವಾಗಲಿದೆ.
ಪ್ರಚಾರ, ಜನಾಕರ್ಷಣೆಗೆ ಕ್ರಮ ಅಗತ್ಯ
ಮೈಸೂರಿನಲ್ಲಿ ದಕ್ಷಿಣ ಕನ್ನಡ ಮೂಲದ ಸುಮಾರು 60 ಸಾವಿರ ಮಂದಿ ಇದ್ದಾರೆ. ಸಾಂಸ್ಕೃತಿಕ ನಗರಿ ಎಂದು ಖ್ಯಾತಿ ಪಡೆದಿರುವ ಮೈಸೂರಿಗೆ ಪ್ರತೀ ದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮಂಗಳೂರು ಸುಂದರ ಬೀಚ್‌ಗಳಿಗೆ ಹೆಸರಾಗಿದೆ. ಇದಲ್ಲದೆ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿವೆ. ಮೈಸೂರು- ಮಂಗಳೂರು ನಡುವೆ 250 ಕಿ.ಮೀ. ದೂರವಿದ್ದು, ದಿನವೊಂದಕ್ಕೆ ಸಾವಿರಾರು ಮಂದಿ ಬಸ್, ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಾರೆ. ವಿಮಾನಯಾನ ಪುನರಾರಂಭವಾದರೆ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ.
ಮಂಗಳೂರು-ಮೈಸೂರು ವಿಮಾನಯಾನ ಆರಂಭ ಅತೀ ಅಗತ್ಯ. ಮಂಗಳೂರು ವಿಮಾನ ನಿಲ್ದಾಣದಿಂದ ಆಂತರಿಕ ವಿಮಾನಯಾನ ಹೆಚ್ಚುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜತೆಗೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ಲಭಿಸಲಿದೆ.
– ಶಶಿಧರ ಪೈ ಮಾರೂರು ಅಧ್ಯಕ್ಷ,
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಬಹಳಷ್ಟು ಪ್ರಯತ್ನಗಳ ಫಲವಾಗಿ ಮೈಸೂರು-ಮಂಗಳೂರು ಮಧ್ಯೆ ವಿಮಾನಸಂಚಾರ ಆರಂಭಗೊಂಡಿತ್ತು. ಆದರೆ ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಂಡಿದೆ. ಇತರ ನಗರಗಳನ್ನು ಜೋಡಿಸಿಕೊಂಡು ಆರ್ಥಿಕವಾಗಿ ಲಾಭದಾಯಕವಾಗಿಸಿಕೊಂಡು ಪುನರಾರಂಭಿಸುವ ಬಗ್ಗೆ ಚಿಂತನೆ ಇದೆ.
– ಪ್ರತಾಪಸಿಂಹ, ಸಂಸದ, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.