ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ: ಗುಣಮಟ್ಟದಲ್ಲಿ ರಾಜಿ ಬೇಡ
Team Udayavani, Mar 31, 2022, 6:00 AM IST
ಕಳೆದ ಕೆಲವು ದಿನಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಬಿದ್ದ ಪ್ರಕರಣಗಳು ಸುದ್ದಿಯಲ್ಲಿದ್ದು, ಜನರೂ ಕೊಂಚ ಭೀತಿಗೆ ಒಳಗಾಗಿದ್ದಾರೆ. ಒಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವ ಮಧ್ಯೆಯೇ, ಪರ್ಯಾಯವೆಂಬಂತೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭರವಸೆ ಮೂಡಿಸಿವೆ. ಇದರಿಂದಾಗಿಯೇ ಇಂದು ರಸ್ತೆಗಳಲ್ಲಿ ಹೆಚ್ಚೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ನೋಡುತ್ತಿದ್ದೇವೆ.
ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಒಂದು ರೀತಿಯಲ್ಲಿ ಸಮಾಜಕ್ಕೆ ಉತ್ತಮವಾದ ವಿಚಾರ. ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳಂತೆ ಇವು ಹೊಗೆ ಸೂಸುವುದಿಲ್ಲ, ಹಾಗೆಯೇ ಹೆಚ್ಚಿನ ಸದ್ದನ್ನೂ ಮಾಡುವುದಿಲ್ಲ. ಸದ್ಯ ದೇಶದ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಮಧ್ಯಮ ವರ್ಗದವರೇ ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಇವರಿಗೆ ಪೆಟ್ರೋಲ್ ಹಾಕಿಸುವುದು ತುಸು ಕಷ್ಟವೇ ಆಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು, ತಮ್ಮ ನೌಕರರಿಗೆ ತುಟ್ಟಿ ಭತ್ತೆ ಲೆಕ್ಕಾಚಾರದಲ್ಲಿ ಈ ಖರ್ಚು ವೆಚ್ಚವನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತಿವೆ. ಆದರೆ, ಖಾಸಗಿ ವಲಯದಲ್ಲಿರುವ ನೌಕರರು ಮಾತ್ರ ದರ ಏರಿಕೆಯಿಂದ ಬಳಲಿ ಬೆಂಡಾಗಿದ್ದಾರೆ.
ಇಂಥ ಹೊತ್ತಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಹೆಚ್ಚಾಗಿರುವುದು ಒಂದು ರೀತಿಯ ಆಶಾದಾಯಕ ಬೆಳವಣಿಗೆ. ಅಲ್ಲದೆ ಇಂದು ಮಾರುಕಟ್ಟೆಯಲ್ಲಿ ನಾನಾ ಬ್ರ್ಯಾಂಡ್‌ಗಳ ಸ್ಕೂಟರ್‌ಗಳೂ ಮಾರಾಟವಾಗುತ್ತಿವೆ. ಅದರಲ್ಲೂ ಈಗಂತೂ ತಿಂಗಳುಗಟ್ಟಲೇ ಕಾಯುವಿಕೆಯ ಅವಧಿ ಇದೆ.
ಆದರೆ ಇದೆಲ್ಲ ಸಂಗತಿಗಿಂತ ಪ್ರಮುಖವಾಗಿ ಇಲ್ಲಿ ಹೇಳಲು ಹೊರಟಿರುವುದು ಗುಣಮಟ್ಟದ ಕುರಿತಾಗಿ. ತಮಿಳುನಾಡು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮೂರ್ನಾಲ್ಕು ಸ್ಕೂಟರ್‌ಗಳು ಸುಖಾಸುಮ್ಮನೆ ಹತ್ತಿಕೊಂಡು ಉರಿದಿವೆ. ತಮಿಳುನಾಡಿನ ಒಂದು ಪ್ರಕರಣದಲ್ಲಿ ಬೈಕ್ ಸ್ಫೋಟಗೊಂಡು ತಂದೆ-ಮಗಳು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ
ಈ ಘಟನೆಗಳು ಎಲ್ಲೋ ಒಂದು ಕಡೆ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಗೆ ಬೆದರುವಂಥ ಸ್ಥಿತಿಯೂ ನಿರ್ಮಾಣವಾಗಬಹುದು. ಏಕೆಂದರೆ ಈಗಂತೂ ಜನತೆ ಎಲೆಕ್ಟ್ರಿಕ್ ಕಾರುಗಳು ಮತ್ತು ಬೈಕ್‌ಗಳ ಬೆನ್ನು ಹತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾವುದೇ ಅವಘಡಗಳು ಅವರ ಉತ್ಸಾಹವನ್ನು ಕುಂದಿಸಬಹುದು. ಇದರಿಂದಾಗಿ ಮಾರಾಟದ ಮೇಲೂ ಅಡ್ಡಪರಿಣಾಮ ಬೀರಬಹುದು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಾನಾ ಎಲೆಕ್ಟ್ರಿಕ್ ಬೈಕ್‌ಗಳ ನಿರ್ಮಾಣ ಕಂಪೆನಿಗಳು ಹುಟ್ಟಿಕೊಳ್ಳುತ್ತಿವೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಂಪೆನಿಗಳು ಉಗಮವಾಗುತ್ತಿವೆ ಎಂಬುದು ಅಷ್ಟೇ ಸತ್ಯ. ಆದರೆ, ಈ ಎಲ್ಲ ಕಂಪೆನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಾಣ ಮಾಡುವಾಗ ಉತ್ತಮ ಗುಣಮಟ್ಟ ಅನುಸರಿಸುತ್ತಿವೆಯೇ ಎಂಬುದನ್ನು ಗಮನಿಸಬೇಕಾಗಿದೆ. ಬೈಕ್‌ಗಳಿಗೆ ಬೆಂಕಿ ಬಿದ್ದ ಮೇಲೆ ಕೇಂದ್ರ ಸರಕಾರ ತನಿಖೆಗಾಗಿ ಸಮಿತಿ ಯೊಂದನ್ನು ರಚಿಸುವ ಬಗ್ಗೆ ಮಾತನಾಡಿದೆ. ಇಂಥ ತನಿಖೆಗಳನ್ನು ಬೇಗನೇ ಮುಗಿಸಿ, ಯಾವ ಕಾರಣಕ್ಕಾಗಿ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಯಾವುದೇ ಕಾರಣಕ್ಕೂ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಅಪನಂಬಿಕೆ ಬರುವಂಥ ಪರಿಸ್ಥಿತಿ ನಿರ್ಮಾಣವಾಗಬಾರದು. ಇವೆೆಲ್ಲವೂ ಆಟೋಮೊಬೈಲ್ ಇಂಡಸ್ಟ್ರಿ ಮತ್ತು ಸರಕಾರಗಳ ಜವಾಬ್ದಾರಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.