ಯುಗಾದಿ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು, ಬೆಲೆ ಏರಿಕೆ ಬಿಸಿ
ಬೆಂಡೆಕಾಯಿ 40 ರೂ., ಕ್ಯಾರೆಟ್, ಬೀಟ್ ರೋಟ್ 30 ರೂ.ಗೆ ಮಾರಾಟವಾಯಿತು
Team Udayavani, Apr 1, 2022, 5:40 PM IST
ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರ, ಬನಶಂಕರಿ, ಕೆ.ಆರ್.ಪುರ, ಗಾಂಧಿ ಬಜಾರ್ ಸೇರಿದಂತೆ ಮತ್ತಿತರ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಯೂ ತಾಗಿದೆ.
ಯುಗಾದಿಯ ವಿಶೇಷ ಮಾವು, ಬೇವಿನ ಸೊಪ್ಪಿನ ಖರೀದಿ ಭರಾಟೆ ಜೋರಾಗಿತ್ತು. ಒಂದು ಕಟ್ಟು ಮಾವಿನ ಸೊಪ್ಪು 20 ರೂ. ಮತ್ತು ಬೇವಿನ ಸೊಪ್ಪು 30 ರೂ.ಗೆ ಮಾರಾಟವಾಯಿತು. ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಸೇವಂತಿಗೆ ಹೂವು ಕೆ.ಜಿ. 180 ರಿಂದ 200 ರೂ., ಕನಕಾಂಬರ ಹೂವು ಕೆ.ಜಿ.ಗೆ 600 ರೂ., ಮಲ್ಲಿಗೆ ಮೊಗ್ಗು 300 ರೂ.ಗೆ ಮಾರಾಟ ವಾಯಿತು. ಹಾಗೆಯೇ ಕನಕಾಂಬರ ಹೂವು ಮಾರಿಗೆ 80 ರೂ. ಮತ್ತು ಮಲ್ಲಿಗೆ ಹೂವು ಮಾರಿಗೆ 40-50 ರೂ. ವರೆಗೂ ಖರೀದಿ ಆಯಿತು. ಸೇಬು ಹಣ್ಣು ಕೆ.ಜಿ.ಗೆ 110 ರೂ., ದ್ರಾಕ್ಷಿ 75 ರೂ., ಬಾಳೆ ಹಣ್ಣು 40 ರೂ., ಕಿತ್ತಳೆ ಹಣ್ಣು 60 ರೂ., ದಾಳಿಂಬೆ 80 ರೂ.ಗೆ ಮಾರಾಟ ವಾಯಿತು ಎಂದು ವ್ಯಾಪಾರಿಗಳು ತಿಳಿಸಿದರು.
80 ರೂ.ದಾಟಿದ ಬೀನ್ಸ್: ಈ ಹಿಂದೆ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಗ್ರಾಹಕರ ಕೈ ಸುಡುತ್ತಿತ್ತು. ಇದರ ಜತೆಗೆ ಬೀನ್ಸ್, ತೊಂಡೆಕಾಯಿ ಸೇರಿದಂತೆ ಮತ್ತಿತರ ತರಕಾರಿಗಳ ಬೆಲೆಗಳು ಶತಕದ ಗಡಿ ದಾಟಿದ್ದವು. ಪ್ರತಿ ಕೆ.ಜಿ.ಗೆ 40 ರಿಂದ 50 ರೂ.ಗೆ ಮಾರಾಟವಾಗುತ್ತಿದ್ದ ಬೀನ್ಸ್ ಗುರುವಾರ 60 ರಿಂದ 80 ರೂ.ವರೆಗೂ ಖರೀದಿ ಆಯಿತು. ಬೆಂಡೆಕಾಯಿ 40 ರೂ., ಕ್ಯಾರೆಟ್, ಬೀಟ್ ರೋಟ್ 30 ರೂ.ಗೆ ಮಾರಾಟವಾಯಿತು. ಹಬ್ಬದ ಹಿನ್ನೆಲೆಯಲ್ಲಿ ತರಕಾರಿ
ಬೆಲೆಗಳಲ್ಲಿ ಕೊಂಚ ಏರಿಕೆಯಾಗಿದೆ ಎಂದು ತಳ್ಳುಗಾಡಿ ವ್ಯಾಪಾರಿ ಪೀಣ್ಯದ ಜಗದೀಶ್ ಹೇಳುತ್ತಾರೆ.
ಅಕಾಶ್ ಮೆಣಸಿನ ಕಾಯಿ ದರ 100-120 ರೂ.
ಹಸಿ ಮೆಣಸಿನ ಕಾಯಿ ಮತ್ತು ಬೀನ್ಸ್ ಸೇರಿದಂತೆ ಕೆಲವು ಪದಾರ್ಥಗಳ ಬೆಲೆಗಳಲ್ಲಿ ಮತ್ತೆ ಬೆಲೆ ಏರಿಕೆಯಾಗಿದ್ದು ಈ ಹಿಂದೆ ಮಾರುಕಟ್ಟೆಯಲ್ಲಿ ಹಸಿ ಮೆಣಸಿನ ಕಾಯಿ ಬೆಲೆ ಕೆ.ಜಿ.ಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಹಸಿ ಮೆಣಸಿನ ಕಾಯಿ ಪೂರೈಕೆ ಕಡಿಮೆಯಾಗಿದ್ದು, ಆ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಮೆಣನಸಿನ ಕಾಯಿ ಪ್ರತಿ ಕೆ.ಜಿ.ಗೆ 80 ರಿಂದ ರೂ.ಗೂ ಖರೀದಿ ಆಗುತ್ತಿದೆ.
ಆಕಾಶ್ ಎಂಬ ವಿಶೇಷ ಮೆಣಸಿನ ಕಾಯಿ ತಳಿಯ ಬೆಲೆ ಪ್ರತಿ ಕೆ.ಜಿ.ಗೆ 100 ರಿಂದ 120 ರೂ.ವರೆಗೂ ಖರೀದಿ ಆಯಿತು. ಆಕಾಶ್ ಮೆಣಸಿನ ಕಾಯಿ(ಡೆಮನ್ ತಳಿ)ಯನ್ನು ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಸುತ್ತ ಕೆಲವು ಪ್ರದೇಶಗಳಲ್ಲಿ ರೈತರು ಬೆಳೆಯುತ್ತಾರೆ.
ಈ ಮೆಣಸಿನಲ್ಲಿ ಹಲವು ಪೌಷ್ಟಿಕಾಂಶದ ಗುಣಗಳಿದ್ದು, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಹದಲ್ಲಿರುವ ಕೋಲೆಸ್ಟ್ರಾಲ್ ಬರ್ನ್ ಮಾಡುವ ಶಕ್ತಿ ಈ ಮೆಣಸಿನ ತಳಿಗೆ ಇದೆ ಎನ್ನುತ್ತಾರೆ ಕಲಾಸಿಪಾಳ್ಯ ಮಾರುಕಟ್ಟೆಯ ಹೋಲ್ ಸೇಲ್ ವ್ಯಾಪಾರಿ ರವಿರಾಜ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.