ಗೆಲುವಿನ ಹುಡುಕಾಟದಲ್ಲಿ ಸನ್‌ರೈಸರ್ : ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ
Team Udayavani, Apr 4, 2022, 6:55 AM IST
ಮುಂಬಯಿ: ಕೂಟದಲ್ಲೇ ಅತ್ಯಂತ ಕಳಪೆ ಆರಂಭ ಪಡೆದಿರುವ ಸನ್‌ರೈಸರ್ ಹೈದರಾಬಾದ್ ಸೋಮವಾರ ನೂತನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸುಧಾರಿತ ಪ್ರದರ್ಶನ ನೀಡುವ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ.
ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ಮೊದಲ ಮುಖಾಮುಖೀಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 61 ರನ್ನುಗಳ ಸೋಲುಂಡಿತ್ತು. ತಂಡದ ಬ್ಯಾಟಿಂಗ್ ಬೌಲಿಂಗ್ ವಿಭಾಗಗಳೆರಡೂ ಕೈಕೊಟ್ಟಿದ್ದವು. ರಾಜಸ್ಥಾನ್‌ಗೆ 210 ರನ್ ಬಿಟ್ಟುಕೊಟ್ಟ ಬಳಿಕ 149 ರನ್ ಗಳಿಸಿ ಶರಣಾಗಿತ್ತು. ತಂಡದ 5 ವಿಕೆಟ್ 37 ರನ್ ಆಗುವಷ್ಟರಲ್ಲಿ ಉದುರಿ ಹೋಗಿತ್ತು.
ಸನ್‌ರೈಸರ್ನ ಅಗ್ರ ಸರದಿಯ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಾದ ಅಗತ್ಯವಿದೆ. ಸ್ವತಃ ಆರಂಭಿಕನಾಗಿ ಇಳಿಯುವ ಅನಿವಾರ್ಯತೆಗೆ ಸಿಲುಕಿದ ನಾಯಕ ಕೇನ್ ವಿಲಿಯಮ್ಸನ್, ಇವರ ಜತೆಗಾರ ಅಭಿಷೇಕ್ ಶರ್ಮ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರಣ್, ಅಬ್ದುಲ್ ಸಮದ್ ಅವರೆಲ್ಲರ ಬ್ಯಾಟ್‌ಗಳು ಮಾತಾಡಬೇಕಿವೆ. ರಾಜಸ್ಥಾನ್ ವಿರುದ್ಧ ಕ್ಲಿಕ್ ಆದವರು ಐಡನ್ ಮಾರ್ಕ್‌ರಮ್ (57) ಮತ್ತು ವಾಷಿಂಗ್ಟನ್ ಸುಂದರ್ (40) ಮಾತ್ರ. ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಸಿಡಿದು ನಿಂತರೂ ಬ್ಯಾಟಿಂಗ್ ವಿಸ್ತರಿಸಲು ವಿಫಲರಾಗಿದ್ದರು.
ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ರೊಮಾರಿಯೊ ಶೆಫರ್ಡ್, ಉಸ್ಮಾನ್ ಮಲಿಕ್ ಉತ್ತಮ ನಿಯಂತ್ರಣ ಸಾಧಿಸಿದ್ದರು. ಆದರೆ ಐಪಿಎಲ್‌ಗೆ ಮರಳಿದ ಟಿ. ನಟರಾಜನ್ ಜತೆಗೆ ವಾಷಿಂಗ್ಟನ್ ಸುಂದರ್ ದುಬಾರಿಯಾಗಿ ಪರಿಣಮಿಸಿದ್ದರು.
ಚೇತರಿಸಿದ ಲಕ್ನೋ :
ಕೆ.ಎಲ್. ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಆರಂಭವೂ ಗಮನಾರ್ಹ ಮಟ್ಟದಲ್ಲಿರಲಿಲ್ಲ. ಮತ್ತೂಂದು ನೂತನ ತಂಡವಾದ ಗುಜರಾತ್ ಟೈಟಾನ್ಸ್‌ಗೆ 5 ವಿಕೆಟ್‌ಗಳಿಂದ ಶರಣಾಗಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹೈ ಸ್ಕೋರಿಂಗ್ ಮ್ಯಾಚ್‌ನಲ್ಲಿ ಜಯಭೇರಿ ಮೊಳಗಿಸುವಲ್ಲಿ ಯಶಸ್ವಿಯಾಯಿತು. 211 ರನ್ ಗುರಿಯನ್ನು ನಾಲ್ಕೇ ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿತ್ತು.
ಇದನ್ನು ಕಂಡಾಗ ಲಕ್ನೋದ ಬ್ಯಾಟಿಂಗ್ ಲಯಕ್ಕೆ ಮರಳಿದ್ದು ಕಂಡುಬರುತ್ತದೆ. ಕ್ವಿಂಟನ್ ಡಿ ಕಾಕ್-ಕೆ.ಎಲ್. ರಾಹುಲ್ 99 ರನ್ ಜತೆಯಾಟ ನಿಭಾಯಿಸಿ ಭದ್ರ ಬುನಾದಿ ನಿರ್ಮಿಸಿದ್ದರು. ಬಳಿಕ ಎವಿನ್ ಲೆವಿಸ್ ಕೇವಲ 23 ಎಸೆತಗಳಿಂದ ಅಜೇಯ 55 ರನ್ ಹೊಡೆದು ತಂಡವನ್ನು ದಡ ಮುಟ್ಟಿಸಿದ್ದರು. ಈ ಐಪಿಎಲ್‌ನ ಕಿರಿಯ ಬ್ಯಾಟರ್ ಆಯುಷ್ ಬದೋನಿ ಹೊಸ ಭರವಸೆ ಮೂಡಿಸಿದ್ದಾರೆ. ಆದರೆ ಮನೀಷ್ ಪಾಂಡೆ ಎರಡರಲ್ಲೂ ವಿಫಲರಾಗಿರುವುದು ಯೋಚಿಸಬೇಕಾದ ಸಂಗತಿ.
ಲಕ್ನೋದ ಬೌಲಿಂಗ್ ಎರಡೂ ಪಂದ್ಯಗಳಲ್ಲಿ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ರವಿ ಬಿಷ್ಣೋಯಿ ಮಾತ್ರವೇ ಯಶಸ್ಸು ಕಂಡಿದ್ದರು. ಸ್ಟ್ರೆಕ್ ಬೌಲರ್‌ಗಳಾದ ಆವೇಶ್ ಖಾನ್, ದುಷ್ಮಂತ ಚಮೀರ ಪವರ್ ಪ್ಲೇ ಅವಧಿಯಲ್ಲಿ ನಿಯಂತ್ರಣ ಸಾಧಿಸಬೇಕಾದುದು ಅಗತ್ಯ. ಕೃಣಾಲ್ ಪಾಂಡ್ಯ, ಆ್ಯಂಡ್ರೂé ಟೈ ದುಬಾರಿಯಾಗಿದ್ದರು. ಲಕ್ನೋ ಬೌಲಿಂಗ್ ವಿಭಾಗದಲ್ಲಿ ಇನ್ನೂ ಉತ್ತಮ ಆಯ್ಕೆಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.