![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Apr 5, 2022, 3:26 PM IST
ಬೆಂಗಳೂರು: ವಾಯುವಿಹಾರ ಮಾಡುತ್ತಿದ್ದ ಮಹಿಳೆಯರ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಆರೋಪಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಜಯನಗರ 7ನೇ ಬ್ಲಾಕ್ ನಿವಾಸಿ ಪ್ರಸನ್ನ (38) ಬಂಧಿತ. ಖಾಸಗಿ ಕಂಪನಿಯಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಆರೋಪಿ, ವಾಯುವಿಹಾರಕ್ಕೆ ಹೋಗುವ ಮಹಿಳೆಯರ ವಿಡಿಯೋ ಮಾಡಿ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.
ಮಾ.31ರಂದು ಸಂಜೆ ಜಯನಗರ 4ನೇ ಬ್ಲಾಕ್‌ನಲ್ಲಿರುವ ಅಕ್ಕಮಹಾದೇವಿ ಪಾರ್ಕ್‌ನಲ್ಲಿ ಮಹಿಳೆಯರು ವಾಯುವಿಹಾರ ಮಾಡುವುದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ. ಜಯನಗರ ನಿವಾಸಿ ಶಿಲ್ಪಾ ಎಂಬುವವರು ಸ್ನೇಹಿತೆ ಜತೆಗೆ ವಾಯು ವಿಹಾರ ಮಾಡುತ್ತಿದ್ದಾಗ ಆರೋಪಿ ಅವರನ್ನು ಹಿಂಬಾಲಿಸಿಕೊಂಡು ಬಂದು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ.
ಈ ಬಗ್ಗೆ ಶಿಲ್ಪಾ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಪ್ರಸನ್ನನನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಶಿಲ್ಪಾ ಮತ್ತು ಅವರ ಸ್ನೇಹಿತೆ ಹಾಗೂ ಪಾರ್ಕ್‌ಗೆ ಬಂದಿದ್ದ ಹಲವು ಮಹಿಳೆಯರು ನಡೆದುಕೊಂಡು ಹೋಗುವ ವಿಡಿಯೋ ಆತನ ಮೊಬೈಲ್‌ನಲ್ಲಿ ಪತ್ತೆಯಾಗಿತ್ತು.
ನಂತರ ಸ್ಥಳೀಯರು ಆರೋಪಿಯನ್ನು ಹಿಡಿದು ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.