ಭುಗಿಲೆದ್ದ ಕೈ ಕಲಹ: ಪದ್ಮರೋಜಾ ರಾಜೀನಾಮೆ?
ಮೇಯರ್ ಸ್ಥಾನಕ್ಕೆ ಹಿರಿಯರನ್ನು ಪರಿಗಣಿಸದ್ದಕ್ಕೆ ಅಸಮಾಧಾನ
Team Udayavani, Apr 6, 2022, 3:09 PM IST
ಬಳ್ಳಾರಿ: ಹತ್ತು ತಿಂಗಳ ಬಳಿಕ ಮೇಯರ್-ಉಪಮೇಯರ್ ಗಳನ್ನು ಆಯ್ಕೆ ಮಾಡಿ ಪಾಲಿಕೆಯಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪಾಲಿಕೆಯ 6ನೇ ವಾರ್ಡ್ ಸದಸ್ಯೆ ಎಂ.ಕೆ.ಪದ್ಮರೋಜಾ ವಿವೇಕಾನಂದ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿದ್ದಾರೆ ಎನ್ನಲಾಗುತ್ತಿದ್ದು ಈ ಕುರಿತ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಅ ಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ಗೆ ಮೇಯರ್ ಆಯ್ಕೆಯಲ್ಲಿ ತೀವ್ರ ಕಗ್ಗಂಟು ಎದುರಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕಳೆದ ನಾಲ್ಕೈದು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಮುಂಡ್ಲೂರು ಕುಟುಂಬದ 6ನೇ ವಾರ್ಡ್ ಸದಸ್ಯೆ ಎಂ.ಕೆ. ಪದ್ಮರೋಜಾ ವಿವೇಕಾನಂದ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಸದಸ್ಯರ ಒಂದು ಬಣವೂ ಇವರನ್ನು ಬಲವಾಗಿ ಬೆಂಬಲಿಸಿತ್ತು.
ಆದರೆ ಮೇಯರ್ ಸ್ಥಾನಕ್ಕೆ ಪಕ್ಷಕ್ಕಾಗಿ ದುಡಿದವರಿಗೆ ಮೊದಲ ಆದ್ಯತೆ ನೀಡುವುದಾಗಿ ಸದಸ್ಯರೆಲ್ಲರನ್ನೂ ಬೆಂಗಳೂರಿಗೆ ಕರೆಸಿಕೊಂಡಿದ್ದ ಪಕ್ಷದ ರಾಜ್ಯ ಮುಖಂಡರು ಪಕ್ಷದಲ್ಲಿನ ಹಿರಿತನವನ್ನು ಪರಿಗಣಿಸದೆ ಇತ್ತೀಚೆಗೆ ಪಕ್ಷ ಸೇರ್ಪಡೆಯಾದವರಿಗೆ ಮೇಯರ್ ಸ್ಥಾನ ನೀಡಿರುವುದು ಸದಸ್ಯರಲ್ಲಿನ ಅಸಮಾಧಾನ ಸ್ಫೋಟಗೊಳ್ಳಲು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ಪ್ರಮುಖ ಕಾರಣಗಳಾಗಿವೆ ಎಂದು ತಿಳಿದು ಬಂದಿದ್ದು, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನಗರದ ಅಭಿವೃದ್ಧಿ ಕುರಿತು ಸರ್ಕಾರಿ ಅತಿಥಿಗೃಹದಲ್ಲಿ ಮಂಗಳವಾರ ಸಂಜೆ ಕರೆದಿದ್ದ ಸಭೆಗೆ ಮೇಯರ್ ಆಕಾಂಕ್ಷಿ ಪದ್ಮರೋಜಾ ಬೆಂಬಲಿತ ಸದಸ್ಯರೆಲ್ಲರೂ ಗೈರಾಗುವ ಮೂಲಕ ತಮ್ಮಲ್ಲಿನ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಗರ ಜಿಲ್ಲಾಧ್ಯಕ್ಷ ಜಿ.ಎಸ್. ಮಹ್ಮದ್ ರಫೀಕ್ ಅವರಿಗೆ ಪತ್ರ ಬರೆದಿರುವ 6ನೇ ವಾರ್ಡ್ ಸದಸ್ಯೆ ಎಂ.ಕೆ.ಪದ್ಮರೋಜಾ ಮತ್ತವರ ಪತಿ ಮಾಜಿ ಸದಸ್ಯ ಎಂ.ವಿವೇಕಾನಂದ ಅವರು, ಮೇಯರ್, ಉಪಮೇಯರ್ ಆಯ್ಕೆಗೆ ಸಂಬಂಧಿ ಸಿದಂತೆ ಕಳೆದ ಮಾರ್ಚ್ ತಿಂಗಳಲ್ಲಿ ಪಕ್ಷೇತರರು ಸೇರಿ ಎಲ್ಲ ಸದಸ್ಯರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಪಕ್ಷಕ್ಕಾಗಿ ದುಡಿದ ಹಿರಿತನವುಳ್ಳವರಿಗೆ ಮೊದಲ ಆದ್ಯತೆ ನೀಡುವುದಾಗಿ ಕೈಗೊಳ್ಳಲಾಗಿತ್ತು. ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಅವರು ಸಹ ಇದೇ ನಿರ್ಣಯ ಕೈಗೊಂಡಿದ್ದರು. ಆದರೆ, ಪಕ್ಷಕ್ಕಾಗಿ ದುಡಿದ ನಮಗೆ (ಎಂ.ಕೆ. ಪದ್ಮರೋಜಾ ವಿವೇಕಾನಂದ) ಮೇಯರ್ ಸ್ಥಾನವನ್ನು ತಪ್ಪಿಸಿ, ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಮೇಯರ್ ಸ್ಥಾನವನ್ನು ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಜೀನಾಮೆ ಪತ್ರದಲ್ಲಿ ಪ್ರಶ್ನಿಸಿರುವ ಅವರು, ಇದರಿಂದ ಅಸಮಧಾನಗೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ವಿವೇಕಾನಂದ ಅವರಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ಇವರ ಬೆಂಬಲಿತ ಸದಸ್ಯರಿಗೆ ಕರೆ ಮಾಡಿದರೂ, ಒಂದೆರಡು ಬಾರಿ ರಿಂಗ್ ಆದ ಮೊಬೈಲ್ ನಂತರ ಸ್ವಿಚ್ ಆಫ್ ಆಯಿತು. ಆದರೆ, ಮೇಯರ್ ಆಯ್ಕೆಗೂ ಮುನ್ನ ನಾವು ಕುದುರೆ ವ್ಯಾಪಾರ ಮಾಡೋಕೆ ಹೋಗಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತ ಲಭಿಸಿದ್ದು, ಜನರ ತೀರ್ಪನ್ನು ನಾವು ಗೌರವಿಸುತ್ತೇವೆ. ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡಿರುವ ಸದಸ್ಯರು ಅವರಾಗಿ ಬಂದಲ್ಲಿ ನಾವು ಬೆಂಬಲ ನೀಡುವುದಾಗಿ ಬಿಜೆಪಿಯವರು ಹೇಳುತ್ತಿದ್ದರಾದರೂ, ಕಾಂಗ್ರೆಸ್ ಸದಸ್ಯರಲ್ಲಿ ಅಸಮಾಧಾನ ಸ್ಫೋಟಗೊಳ್ಳುವುದನ್ನೇ ಕಾಯುತ್ತಿದ್ದ ಬಿಜೆಪಿಯವರು ಮುಂದೇನು ಮಾಡಲಿದ್ದಾರೆ ಕಾದು ನೋಡಬೇಕಾಗಿದೆ.
ಅನುದಾನ ಸಿಗುತ್ತಿಲ್ಲ
ಬಳ್ಳಾರಿ ಮಹಾನಗರ ಪಾಲಿಕೆಯು 39 ವಾರ್ಡ್‌ಗಳನ್ನು ಹೊಂದಿದ್ದು, ನಗರ ವಿಧಾನಸಭಾ ಕ್ಷೇತ್ರಕ್ಕೆ 28, ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 11 ವಾರ್ಡ್ ಗಳು ಬರಲಿವೆ. ಗ್ರಾಮೀಣ ಕ್ಷೇತ್ರದಲ್ಲಿನ ಕಾಂಗ್ರೆಸ್‌ನ 9 ಸದಸ್ಯರಿಗೆ ಶಾಸಕ ನಾಗೇಂದ್ರ ಅವರು ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಸದಸ್ಯರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ನಗರ ಕ್ಷೇತ್ರದ ಬಿಜೆಪಿ ಶಾಸಕರು ತಮ್ಮ 13 ವಾರ್ಡ್‌ಗಳಿಗಷ್ಟೇ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಮಗೆ ಬರೀ 15ನೇ ಹಣಕಾಸು ನಿಯಮದಡಿ ಕೇವಲ 15-16 ಲಕ್ಷ ಅನುದಾನ ನೀಡಿದ್ದಾರೆ. ಇದು ಯಾವುದಕ್ಕೂ ಸಾಲಲ್ಲ. ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಅಂದಮೇಲೆ ನಾವು ಕಾಂಗ್ರೆಸ್‌ನಿಂದ ಗೆದ್ದಿದ್ದು ಏಕೆ? ನಮಗೆ ಪಕ್ಷವೇಕೆ ಬೇಕು? ಎಂದು 18ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಮುಲ್ಲಂಗಿ ನಂದೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾಂಗ್ರೆಸ್ ಸದಸ್ಯರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಗ್ರಾಮೀಣ ಶಾಸಕ ನಾಗೇಂದ್ರ ಅವರು ಎಲ್ಲ ಸದಸ್ಯರನ್ನು ಸಮಾನವಾಗಿ ನೋಡಬೇಕು. ಆದರೆ, ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಿಗಷ್ಟೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನಮ್ಮ ಸಮಸ್ಯೆ ಕೇಳ್ಳೋಕೆ ಯಾರೂ ಇಲ್ಲವಾಗಿದ್ದಾರೆ. ಹಾಗಾಗಿ 6ನೇ ವಾರ್ಡ್ ಸದಸ್ಯೆ ಎಂ.ಕೆ.ಪದ್ಮರೋಜಾ ವಿವೇಕಾನಂದ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
-ಮುಲ್ಲಂಗಿ ನಂದೀಶ್ ಕುಮಾರ್, 18ನೇ ವಾರ್ಡ್ ಪಾಲಿಕೆ ಸದಸ್ಯರು, ಬಳ್ಳಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.