ಅಳಿವೆಬಾಗಿಲಿನ 4 ಕಿ.ಮೀ. ವ್ಯಾಪಿಯಲ್ಲಿ ಮಹಾ ‘ಡ್ರೆಜ್ಜಿಂಗ್’
ಸಾಗರಮಾಲಾ ಯೋಜನೆ: ಸುಮಾರು 29 ಕೋ.ರೂ. ವೆಚ್ಚದ ಕಾಮಗಾರಿ
Team Udayavani, Apr 11, 2022, 10:50 AM IST
ಬಂದರು: ಮೀನುಗಾರರಿಗೆ ಹಾಗೂ ವಾಣಿಜ್ಯ ವ್ಯವಹಾರದ ಹಡಗುಗಳಿಗೆ ನಿತ್ಯ ಸಮಸ್ಯೆ ಆಗುತ್ತಿರುವ ಮಂಗಳೂರಿನ ಅಳಿವೆಬಾಗಿಲು (ನೇತ್ರಾವತಿ ಹಾಗೂ ಗುರುಪುರ ನದಿ ಸಂಗಮಿಸಿ ಸಮುದ್ರ ಸೇರುವ ಸ್ಥಳ)ವ್ಯಾಪ್ತಿಯಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ಮೇಲಕ್ಕೆತ್ತುವ (ಡ್ರೆಜ್ಜಿಂಗ್) ಮಹಾ ಯೋಜನೆ ಜಾರಿಗೆ ಕಾಲ ಸನ್ನಿಹಿತವಾಗಿದೆ.
ಅಳಿವೆಬಾಗಿಲು ವ್ಯಾಪ್ತಿಯ 4 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 29 ಕೋ.ರೂ. ವೆಚ್ಚದಲ್ಲಿ ಸಾಗರಮಾಲಾ ಯೋಜನೆಯಡಿ ಡ್ರೆಜ್ಜಿಂಗ್ ಕಾಮಗಾರಿ ನಡೆಯಲಿದೆ. ಮಳೆಗಾಲದ ಬಳಿಕ ಇದರ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
ಮಂಗಳೂರಿನ ಬಂದರು ಇಲಾಖೆ ಕೈಗೊಂಡ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿ, ಕೇಂದ್ರಕ್ಕೆ ಕಳುಹಿಸಿತ್ತು. ಒಂದೆರಡು ವರ್ಷದ ಹಿಂದೆಯೇ ಕೇಂದ್ರ ಸರಕಾರವೂ ಇದಕ್ಕೆ ಹಸುರು ನಿಶಾನೆ ತೋರಿತ್ತು. ಕೇಂದ್ರ ಸರಕಾರದಿಂದ 14.5 ಕೋ.ರೂ. ಹಾಗೂ ಇಷ್ಟೇ ಪ್ರಮಾಣದ ಹಣವನ್ನು ರಾಜ್ಯ ಸರಕಾರ ನೀಡಲಿದೆ. ‘ಸಾಗರ ಮಾಲಾ’ ಯೋಜನೆಯಡಿಯಲ್ಲಿ ಕೋಸ್ಟಲ್ ಬರ್ತ್ ಸ್ಕೀಂ ನಡಿಯಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ.
ಹೂಳು ಬಾರೀ ಡೇಂಜರ್
ಮೀನುಗಾರಿಕಾ ದೋಣಿಗಳ ಸಂಚಾರ ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಬಂದರಿನ ಅಳಿವೆಬಾಗಿಲಿನಲ್ಲಿ ತುಂಬಿರುವ ಬೃಹತ್ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿ. ಇದರಿಂದಾಗಿ ಇಲ್ಲಿ ಹಲವು ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ. ಪ್ರತೀವರ್ಷವೂ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಬೋಟುಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಅಳಿವೆಬಾಗಿಲು ವ್ಯಾಪ್ತಿಯಲ್ಲಿ ತುಂಬಿರುವ ಹೂಳು ಸಂಪೂರ್ಣ ತೆಗೆದರೆ, ಮೀನುಗಾರಿಕೆ ದೋಣಿಗಳ ಸಂಚಾರ ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ (ಮಂಜಿ) ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಲಾರದು.
ಟೆಂಡರ್ ಹಿನ್ನಡೆ
ಯೋಜನೆ ಎಲ್ಲ ಹಂತದ ಅನುಮೋದನೆ ಪಡೆದ ಬಳಿಕ ಮೊದಲು ಟೆಂಡರ್ ಕರೆದಾಗ ಒಬ್ಬರು ಮಾತ್ರ ಭಾಗವಹಿಸಿದ್ದರು. ಹೀಗಾಗಿ ಅನುಮತಿ ದೊರಕಿರಲಿಲ್ಲ. ಕೊರೊನಾ ಸಂದರ್ಭ ಟೆಂಡರ್‌ನಲ್ಲಿ ಯಾರೂ ಭಾಗವಹಿಸಿರಲಿಲ್ಲ. ಒಂದೆರಡು ಬಾರಿಯ ಟೆಂಡರ್‌ನಲ್ಲಿ ಕೆಲವರು ಭಾಗವಹಿಸಿ ತಾಂತ್ರಿಕ ಪರಿಶೀಲನೆ ವೇಳೆ ಅನುಮತಿ ಸಿಗದ ಕಾರಣದಿಂದ ಪ್ರಕರಣ ನ್ಯಾಯಾಲಯಕ್ಕೆ ಹೋಗಿತ್ತು. ಪರಿಣಾಮ ಟೆಂಡರ್ ಪ್ರಕ್ರಿಯೆ ತಡವಾಗಿತ್ತು. ಇದೀಗ 6ನೇ ಟೆಂಡರ್ ಆಹ್ವಾನಿಸಲಾಗಿದ್ದು, ಶೀಘ್ರದಲ್ಲಿ ಇದು ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಡ್ರೆಜ್ಜಿಂಗ್ ಮರಳು ಉಳ್ಳಾಲ-ಸೋಮೇಶ್ವರ ಕಡಲ್ಕೊರತ ತಡೆ
ಡ್ರೆಜ್ಜಿಂಗ್ ಮಾಡಿದ ಮರಳನ್ನು ಸಂಗ್ರಹಿಸಲಿಡಲು ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಅದನ್ನು ಮತ್ತೆ ಕಡಲಿನ ಸುಮಾರು 20 ಕಿ.ಮೀ. ದೂರದಲಿ ವಿಲೇವಾರಿ ಮಾಡುವುದು ಈ ಹಿಂದಿನ ಕ್ರಮ. ಅದರ ಬದಲು, ಈ ಮರಳನ್ನು ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರತೆ ಪ್ರದೇಶಕ್ಕೆ ತಡೆಗೋಡೆಯಾಗಿ ಬಳಸಬಹುದೇ? ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಸಾಮಾನ್ಯವಾಗಿ 1 ಕೋ.ರೂ.ಗಳ ಅಂದಾಜು ವೆಚ್ಚದಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಕೈಗೊಳ್ಳುವುದಾದರೆ, 40,000 ಕ್ಯುಬಿಕ್ ಮೀಟರ್ ಮರಳು ದೊರೆಯುತ್ತದೆ. ಮುಂದೆ 29 ಕೋ.ರೂ. ವೆಚ್ಚದಲ್ಲಿ ಮಹಾಡ್ರೆಜ್ಜಿಂಗ್ ಕೈಗೊಂಡರೆ ದುಪ್ಪಟ್ಟು ಪ್ರಮಾಣದಲ್ಲಿ ಮರಳು ಸಿಗುವ ಸಾಧ್ಯತೆಯಿದೆ. ಇದೆಲ್ಲದರ ಮಧ್ಯೆ, ಡ್ರೆಜ್ಜಿಂಗ್ ಮರಳನ್ನು ಸರಕಾರದ ಕಾಮಗಾರಿಗಳ ಬಳಕೆಗೆ ಅವಕಾಶ ನೀಡುವಂತೆ ದ.ಕ. ಹಾಗೂ ಉಡುಪಿ ಜಿಲ್ಲಾಡಳಿತ ಸರಕಾರವನ್ನು ಈ ಹಿಂದೆಯೇ ಕೋರಿದ್ದು, ಇನ್ನೂ ಅಂತಿಮವಾಗಿಲ್ಲ
ಮಳೆಗಾಲದ ಬಳಿಕ ಕಾಮಗಾರಿ ಆರಂಭದ ನಿರೀಕ್ಷೆ
ಅಳಿವೆಬಾಗಿಲಿನಲ್ಲಿ 29 ಕೋ. ರೂ. ವೆಚ್ಚದಲ್ಲಿ ಹೂಳೆತ್ತುವ ಮಹತ್ವದ ಯೋಜನೆಗೆ ಸರಕಾರದಿಂದ ಒಪ್ಪಿಗೆ ದೊರೆತು ಸದ್ಯ ಟೆಂಡರ್ ಹಂತದಲ್ಲಿದೆ. ಟೆಂಡರ್ ಅಂತಿಮವಾಗಿ ಮಳೆಗಾಲದ ನಂತರ ಈ ಮಹತ್ವದ ಕಾಮಗಾರಿ ಚಾಲನೆ ಪಡೆಯುವ ಸಾಧ್ಯತೆಯಿದೆ. 4 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್ ನಡೆಯಲಿದೆ. 2 ವರ್ಷದೊಳಗೆ ಕಾಮಗಾರಿ ಪೂರ್ಣವಾಗಲಿದೆ. –ಪ್ರವೀಣ್ ಕುಮಾರ್, ಸಹಾಯಕ ಅಭಿಯಂತ ರರು, ಬಂದರು ಇಲಾಖೆ, ಮಂಗಳೂರು
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.