ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಬೆಲೆ ಏರಿಕೆ
Team Udayavani, Apr 19, 2022, 6:15 AM IST
ಆರ್ಥಿಕತೆಯ ದೃಷ್ಟಿಯಲ್ಲಿ ಎಲ್ಲ ಕಡೆಗಳಿಂದಲೂ ನಕಾರಾತ್ಮಕ ಬೆಳವಣಿಗೆಗಳದ್ದೇ ಸುದ್ದಿ. ಕೊರೊನಾದ ಕರಾಳತೆ ಮುಗಿಯುತ್ತಿದೆ ಹಾಗೂ ಆರ್ಥಿಕತೆ ಹಳಿಗೆ ಮರಳುತ್ತಿದೆ ಎನ್ನುವಷ್ಟರಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿದೆ ಹಾಗೂ ಯುದ್ಧವು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಪರಿಣಾಮವೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪಿಲ್ಲ.
ಕೊರೊನಾದ ಬಳಿಕ ದೇಶದ ಆರ್ಥಿಕತೆಯ ಅತೀದೊಡ್ಡ ಕುಸಿತದಿಂದ ಹೊರಬಂದು ನಿರೀಕ್ಷೆಗಿಂತಲೂ ಹೆಚ್ಚಿನ ಬೆಳವಣಿಗೆಯೊಂದಿಗೆ ಅತ್ಯಂತ ವೇಗದ ಪ್ರಗತಿ ದಾಖಲಿಸಿತ್ತು. ಇದೀಗ ಪ್ರಸಕ್ತ 2022-23ರ ಹಣಕಾಸು ವರ್ಷದಲ್ಲಿ ನೈಜ ಜಡಿಪಿ ಬೆಳವಣಿಗೆಯ ದರ ಶೇ.7.2 ಕ್ಕೆ ಕುಸಿಯಲಿದೆ ಎಂದು ಆರ್‌ಬಿಐ ಹಣಕಾಸು ನೀತಿಯ ಸಮಿತಿ ಅಂದಾಜಿಸಿದೆ. ಈ ಹಿಂದೆ ಶೇ.7.8 ಇರಲಿದೆ ಯೆಂದು ಅಂದಾಜಿಸಿತ್ತು. ಫೆಬ್ರವರಿಯಲ್ಲಿ ಹಣದುಬ್ಬರ ಶೇ.4.5 ರಷ್ಟು ಇರಲಿದೆಯೆಂದು ಅಂದಾಜಿಸಿತ್ತು.
ಆದರೆ ಕಚ್ಚಾತೈಲ ಮತ್ತು ಸರಕುಗಳ ಬೆಲೆಯೇರಿಕೆಯಿಂದಾಗಿ ಹಣದುಬ್ಬರವನ್ನು ಶೇ. 5.7 ಕ್ಕೆ ಹೆಚ್ಚಿಸಿದೆ. ಅದೂ ಕೂಡ 2022-23ನೇ ಹಣಕಾಸು ವರ್ಷಕ್ಕೆ ಅಂದಾಜಿಸಿದ ಹಣದುಬ್ಬರವು ಕಚ್ಚಾತೈಲ ಬ್ಯಾರಲ್‌ಗೆ 100 ಡಾಲರ್ ಮಟ್ಟದಲ್ಲಿ ಮುಂದುವರಿದರೆ ಮಾತ್ರ ಇದು ಸಾಧ್ಯ. ರಷ್ಯಾ-ಉಕ್ರೇನ್ ನಡುವಣ ಯುದ್ಧವು ಆರ್ಥಿಕ ಚೇತರಿಕೆಗೆ ಅಡ್ಡಿಯಾಗುವ ಆತಂಕವನ್ನು ವ್ಯಕ್ತಪಡಿಸಿದೆ ಹಾಗೂ ಈಗಾಗಲೇ ಹಣದುಬ್ಬರ ಗ್ರಾಹಕ ಸೂಚ್ಯಂಕ ಪ್ರಮಾಣವು ಜನವರಿಯಲ್ಲಿ ಶೇ.6.01 ಮತ್ತು ಫೆಬ್ರವರಿ ಶೇ.6.7 ಕ್ಕೆ ಏರಿಕೆಯಾಗಿ ಮಾರ್ಚ್‌ನಲ್ಲಿ 6.95ಕ್ಕೆ ತಲುಪಿ 17 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸತತ ಮೂರು ತಿಂಗಳುಗಳಿಂದ ಆರ್‌ಬಿಐನ ನಿಗದಿತ ಗುರಿಯನ್ನು ದಾಟಿರುವುದಲ್ಲದೆ ಇನ್ನೂ ಕೂಡ ಏರುಗತಿಯಲ್ಲಿಯೇ ಸಾಗುತ್ತಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವುದು ಸರಕಾರಗಳ ಹೊಣೆಗಾರಿಕೆ ಮತ್ತು ಪ್ರಥಮ ಆದ್ಯತೆಯಾಗಬೇಕು.
ಆರ್ಥಿಕ ದೃಷ್ಟಿಯಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಅವಲೋಕಿಸುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ತಲೆನೋವಾದರೆ ಬೆಲೆ ಏರಿಕೆಯ ಹೊಡೆತದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬದುಕು ನಡೆಸುವುದು ಹೇಗೆ ಎಂಬ ಚಿಂತೆ ಕಾಡತೊಡಗಿದೆ. ಮಾರ್ಚ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 1.42 ಲಕ್ಷ ಕೋಟಿ ರೂ. ವರಮಾನ ಸಂಗ್ರಹವಾಗಿದೆ ಮತ್ತು ಇದು ಈವರೆಗಿನ ಗರಿಷ್ಠ ಮೊತ್ತ. ಇದು ತೆರಿಗೆ ಪರಿಷ್ಕರಣೆ ಮತ್ತು ದಕ್ಷತೆಯಿಂದ ಸಾಧ್ಯವಾಗಿದೆ. ಜಿಎಸ್‌ಟಿ ಸಂಗ್ರಹವು ಉತ್ತಮವಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡಬಹುದು.
ಸರಕಾರಗಳು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಡೆಯೊಡ್ಡಿ ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕಿದೆ. ಶ್ರೀಸಾಮಾನ್ಯರು ಕುಟುಂಬ ಹಂತದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ ಮತ್ತು ಅವರ ಮಿತವ್ಯಯದ ಮಂತ್ರವೂ ಫಲಪ್ರದವಾಗುತ್ತಿಲ್ಲ. ಯಾವುದೇ ಆಡಂಬರವಿಲ್ಲದೆ ಸರಳ ಜೀವನದೊಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದೇ ಕಷ್ಟಕರವಾಗಿದೆ. ಹಣದುಬ್ಬರದ ಮೇಲೆ ಕಚ್ಚಾತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯ ಪರಿಣಾಮ ಮತ್ತು ಹೆಚ್ಚುತ್ತಿರುವ ಆಹಾರ ವಸ್ತುಗಳ ಬೆಲೆ ಸಾಮಾನ್ಯ ಸಣ್ಣ ಕುಟುಂಬಕ್ಕೆ ಪ್ರತೀ ತಿಂಗಳು ಸರಾಸರಿ 3,000 ರೂ.ಗಳವರೆಗೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಅಂದಾಜಿಸಲಾಗಿದೆ. ಇನ್ನು ರಷ್ಯಾ-ಉಕ್ರೇನ್ ನಡುವೆ ಕದನ ವಿರಾಮ ಏರ್ಪಟ್ಟರೂ ಆರ್ಥಿಕತೆ ಸಹಜಸ್ಥಿತಿಗೆ ಬರಲು ಒಂದಿಷ್ಟು ಕಾಲಾವಕಾಶ ಬೇಕೇಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಿ ಅನಗತ್ಯ ವೆಚ್ಚಗಳನ್ನು ತಡೆಯಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಭಿವೃದ್ಧಿಯ ಇತರ ಪ್ರಕ್ರಿಯೆಗಳು ನಿಷ#ಲಗೊಳ್ಳುವುದರಲ್ಲಿ ಸಂದೇಹವಿಲ್ಲ.
ವಿಶ್ವದೆಲ್ಲೆಡೆಯ ಆರ್ಥಿಕ ಆಗು-ಹೋಗುಗಳು ಜಾಗತಿಕ ಆರ್ಥಿಕ ದೃಷ್ಟಿಕೋನವನ್ನು ಸಂಕೀರ್ಣ ಗೊಳಿಸಿದೆ. ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನ ತೆಗಳು ದೇಶದ ಆರ್ಥಿಕತೆಗೆ ಹೊಡೆತವಾಗಿ ಪರಿಣ ಮಿಸಿದುದಲ್ಲದೆ ಪ್ರಸಕ್ತ ಯೂರೋಪಿನಲ್ಲಿ ನಡೆಯುತ್ತಿ ರುವ ಸಂಘರ್ಷಗಳು ಅನಿರೀಕ್ಷಿತವಾಗಿ ಆಗಾಧ ಆರ್ಥಿಕ ಸವಾಲುಗಳನ್ನು ಎದುರಿಸುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲಾಗದೆ, ಹಣದುಬ್ಬರವನ್ನು ನಿಯಂತ್ರಿಸಲಾಗದೆ ಜನರನ್ನು ಅಸಹಾಯಕ ಸ್ಥಿತಿಗೆ ತಳ್ಳಿವೆ. ಪ್ರಸಕ್ತ ಸನ್ನಿವೇಶದಲ್ಲಿ ಕೇಂದ್ರ ಸರಕಾರವು ಜನ ಸಾಮಾನ್ಯರ ಹಿತ ಮತ್ತು ಆರ್ಥಿಕತೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲೇಬೇಕಾದಂತಹ ಅನಿವಾರ್ಯತೆಯಲ್ಲಿ ಸಿಲುಕಿದೆ.
ಹಣದುಬ್ಬರದ ನಿರಂತರ ಏರಿಕೆಯು ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುವುದಲ್ಲದೆ ಇದು ಮಿತಿಮೀರಿದರೆ ದೇಶದ ಜಿಡಿಪಿ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಉತ್ಪಾದನೆ ಕಡಿಮೆಯಾಗುವುದರ ಜತೆಯಲ್ಲಿ ನಿರುದ್ಯೋಗ ಹೆಚ್ಚಾಗಿ ಬೇಡಿಕೆಯು ಇನ್ನಷ್ಟು ಕಡಿಮೆಯಾಗಬಹುದು.
ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯ ಪರಿಣಾಮ ಒಂದೆರಡಲ್ಲ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಮ್ಮ ಜೀವನದ ಎಲ್ಲ ಮಗ್ಗಲುಗಳ ಮೇಲೆ ದುಷ್ಪರಿಣಾಮವನ್ನು ಬೀರುವುದಲ್ಲದೆ ಜನರ ಖರೀದಿ ಸಾಮರ್ಥ್ಯ, ವ್ಯಾಪಾರ, ವಹಿವಾಟು ಮತ್ತು ಹಣದುಬ್ಬರದ ಮೇಲೆ ಗಾಢ ಪರಿಣಾಮ ಬೀರಲಿದೆ. ತೈಲ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳು ಕಾರಣವಾದರೂ ಈ ಸಂದಿಗ್ಧ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್, ಡೀಸೆಲ್ ಬೆಲೆಯ ಮೇಲಿನ ಎಕ್ಸೆ„ಸ್ ಸುಂಕ ಹಾಗೂ ಮೌಲ್ಯ ವರ್ಧಿತ ತೆರಿಗೆ ಪ್ರಮಾಣವನ್ನು ತಗ್ಗಿಸಿ ದೇಶೀ ಮಾರುಕಟ್ಟೆಯನ್ನು ನಿಯಂತ್ರಿಸಬೇಕು. ಭಾರತದಲ್ಲಿ ತೈಲ ಬೆಲೆಯ ಹೆಚ್ಚಿನ ಭಾಗವು ತೆರಿಗೆಗಳಿಂದಲೇ ಒಳಗೊಂಡಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಇತ್ತೀಚಿನ ಸಭೆಯಲ್ಲಿ ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಕ್ರಮವಾಗಿ ಶೇ.4 ಮತ್ತು ಶೇ.3.35 ರಲ್ಲಿಯೇ ಉಳಿಸುವ ಮೂಲಕ ಪ್ರಮುಖ ನೀತಿ ದರದಲ್ಲಿ ಸತತ 11ನೇ ಬಾರಿಯೂ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಆರ್ಥಿಕ ಬೆಳವಣಿಗೆ ಬೆಂಬಲಿಸುವು ದಕ್ಕಾಗಿ ಆರ್‌ಬಿಐ ಎಂಪಿಸಿ ಸಮಿತಿಯ ಎಲ್ಲ ಸದಸ್ಯರ ಒಪ್ಪಿಗೆಯ ಮೇರೆಗೆ ಬಡ್ಡಿದರ ಬದಲಾವಣೆ ಮಾಡದೆ ಹೊಂದಾಣಿಕೆ ನೀತಿಯನ್ನು ಅನುಸರಿಸಿದೆ. ಇನ್ನು ಮುಂದೆ ಹಣದುಬ್ಬರ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿ ಆ ಬಳಿಕ ಆರ್ಥಿಕ ಬೆಳವಣಿಗೆಯ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಂಪಿಸಿ ಒಪ್ಪಿಗೆ ನೀಡಿದೆ ಮತ್ತು ತನ್ನ ಹೊಂದಾಣಿಕೆ ನೀತಿಯನ್ನು ಹಿಂದೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆ ಪೂರಕವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಪ್ರಸಕ್ತ ಸನ್ನಿವೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣ ದಲ್ಲಿರಿಸಲು ಇಂಧನಗಳ ಮೇಲಿನ ತೆರಿಗೆ ಕಡಿಮೆ ಗೊಳಿಸುವುದು ಸರಕಾರದ ಮುಂದಿರುವ ಏಕೈಕ ತಾತ್ಕಾಲಿಕ ಪರಿಹಾರ ಮಾರ್ಗವಾಗಿದೆ.
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.