ರಸ ಹೀರುವ ಕೀಟದಿಂದ ಅಡಿಕೆ ಬೆಳೆಗಾರ ಕಂಗಾಲು!
ತೋಟಗಳಲ್ಲಿ ವ್ಯಾಪಕವಾಗಿ ನೆಲಕ್ಕುರುಳುತ್ತಿದೆ ಎಳೆ ಅಡಿಕೆ
Team Udayavani, Apr 21, 2022, 6:40 AM IST
ಸುಳ್ಯ: ಇತ್ತೀಚೆಗಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಎಳೆ ಅಡಿಕೆ (ನಳ್ಳಿ) ಬೀಳುವ ಸಮಸ್ಯೆ ಸದ್ದಿಲ್ಲದೆ ವ್ಯಾಪಕವಾಗುತ್ತಿದೆ. ಇದಕ್ಕೆ ಮೂಲ ಕಾರಣವಾಗಿರುವ ರಸ ಹೀರುವ ಕೀಟ ಮುಂದಿನ ಒಂದು ತಿಂಗಳಲ್ಲಿ ವ್ಯಾಪಕವಾಗಿ ಕಾಟ ನೀಡುವ ಆತಂಕ ಬೆಳೆಗಾರರಲ್ಲಿ ಮನೆ ಮಾಡಿದೆ.
ಪ್ರತೀ ಬಾರಿ ಮೇ ತಿಂಗಳ ಆರಂಭ ದಲ್ಲಿ ರಸ ಹೀರುವ ಕೀಟಗಳು ಸಂತಾನಾಭಿವೃದ್ಧಿ ಮಾಡಿ ಎಳೆ ಅಡಿಕೆಯ ರಸ ಹೀರುತ್ತಿದ್ದವು.
ಪರಿಣಾಮವಾಗಿ ಮೇ ಮಧ್ಯ ಭಾಗದಿಂದ ಎಳೆ ಅಡಿಕೆ ಬೀಳುತ್ತಿತ್ತು. ಜೂನ್ ಮಧ್ಯ ಭಾಗದ ವರೆಗೆ ನಳ್ಳಿ ನೆಲಕ್ಕುರುಳುವ ಸಮಸ್ಯೆ ಇದ್ದು, ಬಳಿಕ ಮುಂದೆ ಸರಿಹೋಗುತ್ತಿತ್ತು. ಆದರೆ ಈ ಬಾರಿ ಅತಿಯಾದ ತಾಪಮಾನ ಮತ್ತು ದಿಢೀರ್ ಮಳೆ- ಇವೆರಡೂ ಕಾರಣಗಳಿಂದ ರಸ ಹೀರುವ ಪೆಂಟಟೊಮಿಡ್ ತಿಗಣೆ ಅಥವಾ ಪೆಂತಿ ಈಗಾಗಲೇ ಸಂತಾನಾಭಿವೃದ್ಧಿ ಮಾಡಿಕೊಂಡಿದೆ. ಸಾಮಾನ್ಯವಾಗಿ ಎಪ್ರಿಲ್ ಅನಂತರ ಇದರ ಬಾಧೆ ಕಂಡುಬರುತ್ತದೆ. ಜೂನ್-ಜುಲೈ ತಿಂಗಳಲ್ಲಿ ಸಮಸ್ಯೆ ಹೆಚ್ಚು. ಆದರೆ ಈ ವರ್ಷ ಮುಂಚಿತವಾಗಿಯೇ ಕಂಡುಬಂದಿರುವುದು ಆತಂಕಕಾರಿಯಾಗಿದೆ.
ಏನಿದು ಪೆಂಟಟೊಮಿಡ್ ತಿಗಣೆ?
ಇದು ಎಳೆ ಅಡಿಕೆಯ ರಸ ಹೀರುವ ಕೀಟ. ಇದಕ್ಕೆ ಉದ್ದನೆಯ ಚೂಪಾದ ಬಾಯಿಯ ಅಂಗವಿದ್ದು, ಎಳೆ ಅಡಿಕೆಯೊಳಕ್ಕೆ ತೂರಿಸಿ ರಸ ಹೀರುತ್ತದೆ. ಒಂದು ತಿಗಣೆಯು ಒಂದು ದಿನಕ್ಕೆ ಒಂದು ಎಳೆ ಅಡಿಕೆಯಿಂದ ಮಾತ್ರ ರಸ ಹೀರಬಲ್ಲುದು. ಇದರಿಂದ ಎಳೆ ಅಡಿಕೆ ಸತ್ವಹೀನವಾಗಿ 2-3 ದಿನಗಳಲ್ಲಿ ಉದುರುತ್ತದೆ. ಸಾಮಾನ್ಯವಾಗಿ ಮಾರ್ಚ್-ಆಗಸ್ಟ್ ತಿಂಗಳಲ್ಲಿ ಪೆಂಟಟೊಮಿಡ್ ತಿಗಣೆಯು ಹಾನಿ ಮಾಡುತ್ತದೆ.
ಉದುರಿದ ನಳ್ಳಿಯ ತೊಟ್ಟಿನ ಕೆಳಭಾಗದಲ್ಲಿ ಸೂಜಿಯಿಂದ ಚುಚ್ಚಿದಂತಹ ಕಪ್ಪು ಚುಕ್ಕೆ ಈ ತಿಗಣೆಯ ಬಾಧೆಯನ್ನು ಸೂಚಿಸುವ ಲಕ್ಷಣ. ಇಂತಹ ಎಳೆಕಾಯಿಯನ್ನು ಕತ್ತರಿಸಿ ನೋಡಿದರೆ ಸಿಪ್ಪೆಯ ಒಳಬದಿ ಮತ್ತು ಎಳೆಅಡಿಕೆಯಲ್ಲಿ ಬಣ್ಣ ಬದಲಾವಣೆ ಆಗಿರುವುದನ್ನು ಕಾಣಬಹುದು.
ಕೀಟ ನಿಯಂತ್ರಣ ಕ್ರಮ
ಈ ಬಾರಿ ಹಲವು ತೋಟಗಳಲ್ಲಿ ಈಗಾಗಲೇ ಪೆಂಟಟೊಮಿಡ್ ತಿಗಣೆ ಪಸರಿಸಿರುವುದು ಬೆಳಕಿಗೆ ಬಂದಿದೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಉತ್ತಮ. ಮಳೆ ಹೆಚ್ಚಾದ ಬಳಿಕ ಈ ಕೀಟದ ಬಾಧೆ ಕಡಿಮೆಯಾಗುತ್ತದೆ. ಇದರ ನಿವಾರಣೆಗೆ ಬಳಸುವ ಕೀಟನಾಶಕದ ಪ್ರಮಾಣ ಹೆಚ್ಚಾಗಬಾರದು ಮತ್ತು ಸಿಂಪಡಣೆ ಮಾಡುವಾಗ ಜಾಗರೂಕರಾಗಿರಬೇಕು. ಎತ್ತರಕ್ಕೆ ಔಷಧ ಸಿಂಪಡಣೆ ಮಾಡುವುದರಿಂದ ನಮ್ಮ ದೇಹ ಮತ್ತು ನೀರಿನ ಮೂಲಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚು.
ನಿರ್ವಹಣೆ ಅಗತ್ಯ
ಮುಂಗಾರು ಪೂರ್ವದಲ್ಲಿ ಬಿದ್ದ ಕಾಯಿಗಳನ್ನು ಗಮನಿಸುತ್ತಿರಬೇಕು. ಎಳೆ ಅಡಿಕೆ ಬಿದ್ದ ಮರ ಮತ್ತು ಸುತ್ತಮುತ್ತಲಿನ ಮರಗಳಿಗೆ ಸಿಂಪಡಣೆ ಮಾಡಿದರೆ ಪ್ರಾಥಮಿಕ ಹಂತದಲ್ಲಿಯೇ ಕೀಟಬಾಧೆಯನ್ನು ಹತೋಟಿಗೆ ತರಬಹುದು. ನಳ್ಳಿ ಉದುರಲು ಹಲವು ಕಾರಣಗಳು ಇರುವುದರಿಂದ ಬಿದ್ದ ನಳ್ಳಿಗಳ ಲಕ್ಷಣಗಳನ್ನು ನೋಡಿ ಪೆಂತಿ ಕೀಟದ ನಿರ್ವಹಣೆ ಮಾಡಬೇಕು.
ಹಿಂದೆ ಪೆಂಟಟೋಮಿಡ್ ಕೀಟದ ಬಾಧೆ ಎಪ್ರಿಲ್ ತಿಂಗಳಲ್ಲಿ ಕಡಿಮೆ ಇದ್ದು, ಅನಂತರ ಹೆಚ್ಚಾಗುತ್ತಿತ್ತು. ಈ ವರ್ಷ ಎಪ್ರಿಲ್‌ನಲ್ಲಿಯೇ ಹೆಚ್ಚಿರುವ ಬಗ್ಗೆ ಬೆಳೆಗಾರರು ಮಾಹಿತಿ ನೀಡುತ್ತಿದ್ದಾರೆ. ಸಮಸ್ಯೆ ಕಂಡ ಕೂಡಲೇ ಬೇವಿನ ಎಣ್ಣೆ, ಸೋಪ್ ಅಥವಾ ನಿಂಬಿಸಿಡಿನ್ ಅನ್ನು ಒಂದು ಲೀ. ನೀರಿಗೆ 5 ಮಿ.ಲೀ.ನಂತೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಸಮಸ್ಯೆ ಇದ್ದರೆ ಮಾತ್ರ ಕ್ಲೊತಿಯನಿದಿನ್ (ಒಂದು ಲೀ. ನೀರಿಗೆ 0.25 ಗ್ರಾಂ) ಸಿಂಪಡಿಸಬಹುದು. ಪ್ರಾರಂಭಿಕ ಹಂತದಲ್ಲೇ ರಸ ಹೀರಿದ ಚಿಹ್ನೆ ಗಮನಿಸಿ, ಹಸುರು ನಳ್ಳಿ ಉದುರಿದ ಮತ್ತು ಸುತ್ತಲಿನ ಮರಗಳಿಗೆ ಔಷಧ ಸಿಂಪಡಿಸಬಹುದು. ಕೀಟವನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಇತರ ಕೀಟಗಳು ಅಡಿಕೆ ಕೃಷಿ ಪ್ರದೇಶದಲ್ಲಿ ಇರುವ ಕಾರಣ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ರಾಸಾಯನಿಕ ಕೀಟನಾಶಕ ಬಳಸಬೇಕು. ಅವುಗಳಿಗೆ ತೊಂದರೆಯಾದರೆ ದೀರ್ಘಕಾಲದಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.
-ಡಾ| ಭವಿಷ್ಯ ವಿಜ್ಞಾನಿ, ಸಿಪಿಸಿಆರ್‌ಐ, ವಿಟ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.