ಫ್ರಾನ್ಸ್ ಚುನಾವಣೆ : ಯಾರು ಹಿತವರು ಈ ಇಬ್ಬರೊಳಗೆ ?
Team Udayavani, Apr 25, 2022, 6:05 AM IST
ಜಗತ್ತಿನ ಆಗುಹೋಗುಗಳ ಮೇಲೆ ಭಾರೀ ಪ್ರಭಾವ ಬೀರುವ ಚುನಾವಣೆ ಎಂದೇ ಬಿಂಬಿಸಲ್ಪಡುತ್ತಿರುವ ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ಹೊತ್ತಿಗೆ ಇಮ್ಯಾನುವಲ್ ಮ್ಯಾಕ್ರಾನ್ ಮತ್ತು ಮರೀನ್ ಲೇ ಪೆನ್ ಅವರ ಫ್ರಾನ್ಸ್ ಗಾದಿಯ ಭವಿಷ್ಯ ನಿರ್ಧಾರವಾಗಿರುತ್ತದೆ. ಪ್ರತಿಬಾರಿಯಂಥಲ್ಲ ಈ ಬಾರಿಯ ಚುನಾವಣೆ! ಅತ್ತ, ಉಕ್ರೇನ್ ಮೇಲಿನ ರಷ್ಯಾ ದಾಳಿ, ಈ ಯುದ್ಧದ ಮೇಲೆ ನ್ಯಾಟೋದ ಪಾತ್ರ, ಐರೋಪ್ಯ ಒಕ್ಕೂಟದ ಪ್ರಭಾವಳಿ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಮೇಲೂ ಈ ಚುನಾವಣ ಫಲಿತಾಂಶ ಪರಿಣಾಮ ಬೀರುವುದು ಖಚಿತ. ಇದಕ್ಕೆ ಕಾರಣಗಳೂ ಇವೆ. ಒಂದು ಹಾಲಿ ಅಧ್ಯಕ್ಷ, ನಡುಪಂಥೀಯ ಇಮ್ಯಾನುವಲ್ ಮ್ಯಾಕ್ರಾನ್ ಅವರು ಮತ್ತೂಮ್ಮೆ ಆರಿಸಿ ಬಂದರೆ ಮುಂದೇನಾಗುತ್ತದೆ? ಅಥವಾ ಕಟ್ಟರ್ ಬಲಬಂಥೀಯ ನಾಯಕಿ ಮರೀನ್ ಲೇ ಪೆನ್ ಅವರು ಆಯ್ಕೆಯಾದರೆ ಮುಂದೇನು ಎಂಬ ಕುರಿತ ಚರ್ಚೆಗಳೂ ನಡೆಯುತ್ತಿವೆ. ಅಷ್ಟೇ ಅಲ್ಲ, ಹಾಲಿ ಅಧ್ಯಕ್ಷರೇ ಆಯ್ಕೆಯಾದರೆ, ಈಗಿರುವಂತೆಯೇ ಎಲ್ಲ ಬೆಳವಣಿಗೆಗಳು ಮುಂದುವರಿಯಬಹುದು. ಆದರೆ, ಕಟ್ಟರ್ ಬಲಪಂಥೀಯ ನಾಯಕಿ ಎಂದೇ ಖ್ಯಾತರಾಗಿರುವ, ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮರೀನ್ ಲೇ ಪೆನ್ ಅವರು ಆಯ್ಕೆಯಾದರೆ ಮಾತ್ರ ಐರೋಪ್ಯ ಒಕ್ಕೂಟದಿಂದ ಹಿಡಿದು, ನ್ಯಾಟೋ ವಿಚಾರಗಳು, ಅಂತಾರಾಷ್ಟ್ರೀಯ ಸಂಬಂಧಗಳು ಬಹಳಷ್ಟು ಮಟ್ಟಿಗೆ ಬದಲಾಗುತ್ತವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದೆಲ್ಲದಕ್ಕಿಂತ ಮೊದಲಿಗೆ ಭಾರತ ಮತ್ತು ಫ್ರಾನ್ಸ್ ಸಂಬಂಧದ ಬಗ್ಗೆ ಇಲ್ಲಿ ಹೇಳಲೇಬೇಕು. ವಿಶೇಷವೆಂದರೆ, ಉಭಯ ದೇಶಗಳ ಸಂಬಂಧ ಮೊದಲಿನಿಂದಲೂ ಅತ್ಯುತ್ತಮವಾಗಿಯೇ ಇದೆ. ಐರೋಪ್ಯ ಒಕ್ಕೂಟದ ದೇಶಗಳ ಸಾಲಿನಲ್ಲಿ ಫ್ರಾನ್ಸ್ ಜತೆಗಿನ ಸಂಬಂಧ ಇನ್ನೂ ಗಾಢವಾದದ್ದು. ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಫ್ರಾನ್ಸ್ ಭಾರತಕ್ಕೆ ನೀಡಿರುವ ಸಹಾಯ ತುಸು ಹೆಚ್ಚೇ ಎನ್ನಬಹುದು. ಅದರಲ್ಲೂ ಅಮೆರಿಕದ ಎಫ್ 17 ಯುದ್ಧ ವಿಮಾನಕ್ಕಿಂತಲೂ ಅತ್ಯಂತ ಆಧುನಿಕ ಎಂದು ಎನ್ನಿಸಿಕೊಂಡಿರುವ ರಫೇಲ್ ಯುದ್ಧ ವಿಮಾನ ನೀಡಿದ ದೇಶ ಫ್ರಾನ್ಸ್. ಹಾಲಿ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ಅಷ್ಟೇ ಅಲ್ಲ, ಹಿಂದಿನ ಹೋಲೆಂದ್ ಅವಧಿಯಲ್ಲಿಯೂ ಭಾರತ ಮತ್ತು ರಷ್ಯಾ ಸಂಬಂಧ ಉತ್ತಮವಾಗಿಯೇ ಇತ್ತು. ಈಗಿನ ಚುನಾವಣೆ ಬಗ್ಗೆ ವಿಶೇಷವಾಗಿ ಹೇಳಬೇಕು ಅಂದರೆ ಇದು ನಡುಪಂಥೀಯ ಅಥವಾ ಎಡಪಂಥೀಯ ವಿಚಾರಧಾರೆಯ ಮನಃಸ್ಥಿತಿಯುಳ್ಳ ಇಮ್ಯಾನುವಲ್ ಮ್ಯಾಕ್ರಾನ್ ಮತ್ತು ಕಟ್ಟರ್ ಬಲಪಂಥೀಯ ವಿಚಾರಧಾರೆಯ ಮರೀನ್ ಲೇ ಪೆನ್ ಅವರು ಆಯ್ಕೆಯಾದರೆ, ಭಾರತಕ್ಕೆ ಯಾವ ರೀತಿಯ ಲಾಭ ಅಥವಾ ನಷ್ಟಗಳಿವೆ ಎಂಬುದರ ಕುರಿತಂತೆ ವಿಶ್ಲೇಷಣೆಗಳಿವೆ. ಆದರೆ ಕೆಲವು ತಜ್ಞರ ಪ್ರಕಾರ,
ಫ್ರಾನ್ಸ್‌ಗೆ ಯಾರೇ ಆಯ್ಕೆಯಾದರೂ ಇದರಿಂದ ಭಾರತಕ್ಕೇನೂ ನಷ್ಟವಿಲ್ಲ.
ಆದರೆ ಮರೀನ್ ಲೇ ಪೆನ್ ಅವರು ಆಯ್ಕೆಯಾದರೆ? ಸದ್ಯ ಈ ಬಗ್ಗೆ ಏನನ್ನೂ ಹೇಳುವುದು ಕಷ್ಟ ಎಂಬುದು ವಿಶ್ಲೇಷಕರ ಅಭಿಪ್ರಾಯ. ಆದರೂ ಲೇ ಪೆನ್ ಅವರು ಅಮೆರಿಕದ ಹಿಂದಿನ ಅಧ್ಯಕ್ಷ ಮತ್ತು ಕಟ್ಟರ್ ಬಲಪಂಥೀಯ ಎಂದೇ ಗುರುತಿಸಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಅವರಂತೆ ವರ್ತಿಸಿದರೆ ಕೆಲವೊಂದು ವಿಚಾರಗಳಲ್ಲಿ ಭಾರತಕ್ಕೆ ನಷ್ಟವೂ ಆಗಬಹುದು ಮತ್ತು ಲಾಭವೂ ಆಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಹೇಳುವುದಾದರೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಮೇಲೆ, ಅಮೆರಿಕವೇ ಮೊದಲು ಎಂಬ ನೀತಿ ಜಾರಿಗೆ ತಂದು, ಭಾರತೀಯ ಟೆಕ್ಕಿಗಳಿಗೆ ಮತ್ತು ವ್ಯಾಪಾರ-ವಾಣಿಜ್ಯ ಸಂಬಂಧಗಳಲ್ಲಿ ಒಂದಷ್ಟು ಹಿನ್ನಡೆಯಾಗಿತ್ತು. ಹಾಗೆಯೇ ಲೇ ಪೆನ್ ಕೂಡ, ಫ್ರಾನ್ಸ್ ಮೊದಲು ಎಂಬ ನೀತಿ ಮೂಲಕ ವಾಣಿಜ್ಯ-ವ್ಯಾಪಾರ ಸಂಬಂಧಗಳ ಮೇಲೆ ಏನಾದರೂ ತೊಂದರೆ ನೀಡಬಹುದೇ ಎಂಬ ಆತಂಕಗಳಿವೆ. ಆದರೆ ಈ ಬಗ್ಗೆ ಈಗಲೇ ವಿಶ್ಲೇಷಿಸುವುದು ತೀರಾ ಅವಸರದ್ದಾಗುತ್ತದೆ ಎಂಬ ಮಾತುಗಳೂ ಇವೆ.
ವ್ಯಾಪಾರ-ಒಪ್ಪಂದಗಳ ವಿಚಾರದಲ್ಲಿ ಟ್ರಂಪ್ ಭಾರತಕ್ಕೆ ಒಂದಷ್ಟು ಅಡ್ಡಿಯಾದರೂ ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಭಾರತದ ಜತೆಗೇ ಇದ್ದರು. ಹಾಗೆಯೇ
ಫ್ರಾನ್ಸ್‌ಗೆ ಲೇ ಪೆನ್ ಹೊಸ ಅಧ್ಯಕ್ಷರಾದರೆ ಇದೇ ರೀತಿ ವರ್ತಿಸಬಹುದು ಎಂದೇ ಹೇಳಲಾಗುತ್ತಿದೆ. ಅದಲ್ಲದೇ ವಿಶ್ವಸಂಸ್ಥೆಯ ಭದ್ರತ ಮಂಡಳಿಯಲ್ಲಿಯೂ ಖಾಯಂ ಸದಸ್ಯ ದೇಶವಾಗಿರುವ ಫ್ರಾನ್ಸ್, ಇದುವರೆಗೆ ಭಾರತ ವಿರೋಧಿ ನೀತಿಯನ್ನು ತೆಗೆದುಕೊಂಡಿಲ್ಲ ಎನ್ನುವುದು ವಿಶೇಷ.
ನಿರ್ಣಾಯಕ ಹಂತದ ಚುನಾವಣೆ: ಈ ಬಾರಿಯ ಫ್ರಾನ್ಸ್‌ನ ಚುನಾವಣೆ ನಿರ್ಣಾಯಕ ಹಂತದಲ್ಲಿ ನಡೆಯುತ್ತಿದೆ. ವಿಶೇಷವಾಗಿ ಹೇಳಬೇಕು ಎಂದರೆ ಇಡೀ ಜಗತ್ತೇ ಇಂದು ಒಂದು ರೀತಿಯ ಸಂಕಷ್ಟದ ವಾತಾವರಣದಲ್ಲಿದೆ. ಮೊದಲಿಗೆ ಕೊರೊನಾ ಎಂಬ ಮಹಾಮಾರಿ, ಈಗ ಉಕ್ರೇನ್ ಮೇಲೆ ರಷ್ಯಾದ ಯುದ್ಧ. ಈ ಎರಡು ಸಂಗತಿಗಳು ಫ್ರಾನ್ಸ್ ಪಾಲಿಗೆ ನಿರ್ಣಾಯಕವಾದವು. 2017ರಲ್ಲಿ 39ರ ಹರೆಯದ ಯುವಕ ಇಮ್ಯಾನುವಲ್ ಮ್ಯಾಕ್ರಾನ್ ಗೆದ್ದಾಗ, ಇಡೀ ಫ್ರಾನ್ಸ್ ಅಚ್ಚರಿಗೊಂಡಿತ್ತು. ಅದಕ್ಕೂ ಹಿಂದಿನ ಅಧ್ಯಕ್ಷ ಹೋಲೆಂದ್ ಮತ್ತೂಮ್ಮೆ ಸ್ಪರ್ಧೆ ಮಾಡಲಾರೆ ಎಂದಾಗಲೇ ಮ್ಯಾಕ್ರಾನ್ ಅವರ ಗೆಲುವಿನ ದಾರಿ ಸುಗಮಗೊಂಡಿತ್ತು. ಆದರೆ, ಮ್ಯಾಕ್ರಾನ್ ಹೊಸ ಪಕ್ಷ ಕಟ್ಟಿ ಗೆಲುವಿನ ನಗೆ ಬೀರಿದರು ಎಂಬುದು ವಿಶೇಷ. ಏಕೆಂದರೆ ಬ್ಯಾಂಕಿಂಗ್ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಮ್ಯಾಕ್ರಾನ್, ಅತ್ಯಂತ ಕಡಿಮೆ ವಯಸ್ಸಿಗೇ ಹೋಲೆಂದ್ ಅವರ ನಿಕಟವರ್ತಿಯಾಗಿದ್ದರು. ಅವರ ಸಲಹೆಗಾರನಾಗಿ ಆಯ್ಕೆಯಾಗಿ ಬಳಿಕ, ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ ಮ್ಯಾಕ್ರಾನ್, ರಾಜಕಾರಣದ ಒಳಹೊರಹುಗಳನ್ನು ಅರಿತಿದ್ದರು. ಕಡೆಗೆ ಹೋಲೆಂದ್ ಸರಕಾರಕ್ಕೆ ನಾಲ್ಕು ವರ್ಷವಿದ್ದಾಗ, ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಪಕ್ಷ ಕಟ್ಟಿದ್ದವರು ಮ್ಯಾಕ್ರಾನ್.
2017ರಲ್ಲಿ ಮ್ಯಾಕ್ರಾನ್ ಗೆಲುವಿಗೆ ಹೋಲೆಂದ್ ಸಹಕಾರವೂ ಕಾರಣವಿತ್ತು ಎಂಬುದನ್ನು ಇಲ್ಲಿ ಹೇಳಬಹುದು. ಇದರ ಜತೆಗೆ ಕಟ್ಟರ್ ಬಲಪಂಥೀಯರಾಗಿದ್ದ ಲೇ ಪೆನ್ ಅವರನ್ನು ಫ್ರಾನ್ಸ್ ಜನತೆ ಸ್ವೀಕಾರ ಮಾಡಲಿಲ್ಲ. ಇವರು ಹೋಲೆಂದ್ ವಿರುದ್ಧವೂ ಸೋತಿದ್ದು, ಎರಡನೇ ಬಾರಿಗೆ ಮ್ಯಾಕ್ರಾನ್ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದರೆ ಆಗ ಜನ ಲೇ ಪೆನ್ ಅವರನ್ನು ಬಿಟ್ಟು ಮ್ಯಾಕ್ರಾನ್ ಅವರನ್ನು ಆರಿಸಿತ್ತು.
ಈಗ ಮ್ಯಾಕ್ರಾನ್ ಅವರಿಗೆ ಗೆಲುವು ಅಷ್ಟು ಸಲೀಸಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಸದ್ಯ ಚುನಾವಣೆ ಮೇಲೆ ರಷ್ಯಾ ಯುದ್ಧ ಗಮನಾರ್ಹ ಪಾತ್ರ ವಹಿಸುತ್ತಿದೆ ಎಂದು ಹೇಳುತ್ತಿದ್ದಾರಾದರೂ ಈ ವಿಚಾರದಲ್ಲಿ ಯಾರು ಆಯ್ಕೆಯಾದರೆ ಉತ್ತಮ ಎಂಬುದನ್ನು ನಿರ್ಧರಿಸುವುದು ಫ್ರಾನ್ಸ್ ಜನರ ಪಾಲಿಗೆ ಕಷ್ಟದ ಸಂಗತಿ. ಯುದ್ಧ ಆರಂಭವಾದಾಗಿನಿಂದಲೂ ಮ್ಯಾಕ್ರಾನ್, ರಷ್ಯಾ ಅಧ್ಯಕ್ಷ ಪುತಿನ್ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿಲ್ಲ. ಇದಕ್ಕೆ ಮಿಗಿಲಾಗಿ, ಪಾಶ್ಚಾತ್ಯ ದೇಶಗಳು ಮತ್ತು ರಷ್ಯಾ ಅಧ್ಯಕ್ಷರ ಮಧ್ಯೆ ಸಂಧಾನಕಾರರಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಯುದ್ಧ ಆರಂಭವಾದಾಗಿನಿಂದ ಐದು ಬಾರಿ ಅವರು ಪುತಿನ್ ಜತೆ ಮಾತುಕತೆ ನಡೆಸಿದ್ದಾರೆ. ಇನ್ನು ಲೇ ಪೆನ್ ಅವರಂತೂ, ನೇರವಾಗಿಯೇ ತಾವು ಡೊನಾಲ್ಡ್ ಟ್ರಂಪ್ ಮತ್ತು ವ್ಲಾದಿಮಿರ್ ಪುತಿನ್ ಅವರ ಹಾದಿಯಲ್ಲೇ ಇರುವವರು ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ತಾವು ಪುತಿನ್ ಸಮರ್ಥಕರು ಎಂಬುದನ್ನು ದೇಶದ ಮುಂದೆ ಹೇಳಿದ್ದಾರೆ. ಜತೆಗೆ ಚುನಾವಣೆ ಸಂದರ್ಭದಲ್ಲೇ ಭಾರತದಲ್ಲಿ ಈಗ ತಲೆದೋರಿರುವ ಹಿಜಾಬ್ ವಿವಾದವನ್ನೂ ಪ್ರಸ್ತಾವಿಸಿ, ಮುಂದಿನ ದಿನಗಳಲ್ಲಿ ಸಂಪೂರ್ಣ ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಮತ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಆದರೆ, ಈ ಅಂಶ ಚುನಾವಣೆಯಲ್ಲಿ ಅವರ ಕೈ ಹಿಡಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಇದರ ಜತೆಯಲ್ಲೇ ನ್ಯಾಟೋ ಮತ್ತು ರಷ್ಯಾ ನಡುವೆ ಸಂಧಾನ ಮಾಡುವ ಭರವಸೆಯನ್ನೂ ನೀಡಿದ್ದಾರೆ ಲೇ ಪೆನ್.
ಇವೆಲ್ಲದಕ್ಕಿಂತ ಮುಖ್ಯವಾಗಿ ಐರೋಪ್ಯ ಒಕ್ಕೂಟದ ನಾಯಕತ್ವದ ವಿಚಾರದಲ್ಲಿಯೂ ಫ್ರಾನ್ಸ್ ಚುನಾವಣೆ ಪ್ರಾಮುಖ್ಯ ಪಡೆದುಕೊಂಡಿದೆ. ಇದುವರೆಗೆ ಜರ್ಮನಿ ಛಾನ್ಸೆಲರ್ ಆಗಿದ್ದ ಏಂಜೆಲಾ ಮಾರ್ಕೆಲ್ ಅವರು ಒಂದು ರೀತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಈಗ ಅವರ ಅನುಪಸ್ಥಿತಿಯಲ್ಲಿ ಮ್ಯಾಕ್ರಾನ್ ಅವರೇ ಐರೋಪ್ಯ ಒಕ್ಕೂಟದಲ್ಲಿ ಮಿಂಚುತ್ತಿದ್ದಾರೆ. ಒಂದು ರೀತಿಯಲ್ಲಿ ಜಾಗತಿಕ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ರಷ್ಯಾ -ಉಕ್ರೇನ್ ಯುದ್ಧದಲ್ಲಿ ಸಂಧಾನಕಾರನ ಪಾತ್ರ ವಹಿಸಿದ್ದಾರೆ. ಅಲ್ಲದೆ ಅಮೆರಿಕ, ಬ್ರಿಟನ್, ಚೀನ, ರಷ್ಯಾ, ಭಾರತ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳ ನಾಯಕರ ಜತೆಗೂ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ. ಈ ಪಾತ್ರವನ್ನು ಕಟ್ಟರ್ ಬಲಪಂಥೀಯ ಧೋರಣೆ ಹೊಂದಿರುವ ಲೇ ಪೆನ್ ವಹಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗಳೂ ಫ್ರಾನ್ಸ್ ಜನತೆಯಲ್ಲಿ ಇವೆ.
– ಸೋಮಶೇಖರ ಸಿ.ಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.