ಸಭೆಗೆ ಗೈರಾದ ಅಧಿಕಾರಿಗೆ ನೋಟಿಸ್ ನೀಡಿ
ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒಗೆ ಶಾಸಕ ಶ್ರೀನಿವಾಸ ಮಾನೆ ಖಡಕ್ ಸೂಚನೆ
Team Udayavani, Apr 26, 2022, 12:11 PM IST
ಹಾನಗಲ್ಲ: ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಿಡಿಮಿಡಿಗೊಂಡ ಶಾಸಕ ಶ್ರೀನಿವಾಸ ಮಾನೆ ಅವರು, ತಕ್ಷಣ ಗೈರಾದ ಎಲ್ಲ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಕಟ್ಟಪ್ಪಣೆ ನೀಡಿದರು.
ಸೋಮವಾರ ತಾಪಂ ಸಭಾಂಗಣದಲ್ಲಿ ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಆರಂಭವಾಗುತ್ತಿದ್ದಂತೆಯೇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಸಣ್ಣ ನೀರಾವರಿ ಇಲಾಖೆ, ಉಪ ನೋಂದಣಾಧಿಕಾರಿ, ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಗೈರಾಗಿರುವುದು ಗಮನಕ್ಕೆ ಬಂದಿತು. ಇದರಿಂದ ಸಿಟ್ಟಿಗೆದ್ದ ಶಾಸಕ ಮಾನೆ ಅವರು, ಕೆಡಿಪಿ ಸಭೆಗೆ ತನ್ನದೇ ಆದ ಸಂವಿಧಾನಿಕ ಮಹತ್ವವಿದೆ. ನ್ಯಾಯಸಮ್ಮತ ಕಾರಣ ನೀಡದೇ ಅಧಿಕಾರಿಗಳು ಗೈರಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಮ್ಮ ಜನ ಮೊದಲೇ ಸಮಸ್ಯೆಯಲ್ಲಿದ್ದಾರೆ. ಈ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹೀಗಿರುವಾಗ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರಾಗಿರುವುದನ್ನು ತಾವು ಸುತಾರಾಂ ಒಪ್ಪುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಅಲ್ಲದೇ, ನೋಟಿಸ್ ನೀಡುವಂತೆ ತಾಪಂ ಇಒ ಆರ್. ಸುನೀಲಕುಮಾರ್ ಅವರಿಗೆ ಸೂಚಿಸಿದರು.
ಹಾನಗಲ್ಲ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ಬಂದ್ ಆಗಿದ್ದು, ಬೇಸಿಗೆ ಆರಂಭವಾಗಿರುವುದರಿಂದ ಜನ ಪರದಾಡುತ್ತಿದ್ದಾರೆ. ಸಂಬಂಧಿಸಿದ ಗುತ್ತಿಗೆದಾರರನ್ನು ಸಭೆಗೆ ಕರೆದುಕೊಂಡು ಬರುವಂತೆ ಸೂಚಿಸಲಾಗಿತ್ತು. ಗುತ್ತಿಗೆದಾರರು ಇರಲಿ, ಸ್ವತಃ ಇಲಾಖೆಯ ಎಇಇ ಮದನಕುಮಾರ ಶಿಂಧೆ ಅವರೇ ಸಭೆಗೆ ಬರದೇ ನೆಪ ಹೇಳಿ ಸಿಬ್ಬಂದಿ ಕಳಿಸಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಬಿರಾದಾರ ವರದಿ ವಾಚಿಸಲು ಮುಂದಾದಾಗ ಮಧ್ಯಪ್ರವೇಶಿಸಿದ ಶಾಸಕ ಮಾನೆ, ನಿಮ್ಮ ಇಲಾಖೆ ಅಭಿಯಂತರ ಹೊನ್ನಪ್ಪ ಅವರನ್ನು ಕೂಸನೂರಿಗೆ ಕರೆದುಕೊಂಡು ಹೋಗಿ ಸಾರ್ವಜನಿಕರ ಸಮಸ್ಯೆ ಕೇಳುವಂತೆ ಸೂಚಿಸಿದ್ದೆ. ಆದರೆ, ನೀವು ಆ ಕೆಲಸ ಮಾಡಿಲ್ಲ. ಸಾರ್ವಜನಿಕರ ಸಮಸ್ಯೆ ಕೇಳುವ ಸಂಯಮ ನಿಮ್ಮ ಇಲಾಖೆ ಅಭಿಯಂತರ ಹೊನ್ನಪ್ಪ ಅವರಿಗಿದ್ದಂತೆ ಕಂಡು ಬರುತ್ತಿಲ್ಲ. ಜನರೊಂದಿಗೆ ಅಗೌರವದಿಂದ ಮಾತನಾಡಿದರೆ ನಾನು ಸುಮ್ಮನಿರುವುದಿಲ್ಲ. ಅವರು ರಾಜಕಾರಣ ಮಾಡಬೇಕೆಂದಿದ್ದರೆ ರಾಜೀನಾಮೆ ಕೊಡಲು ಹೇಳಿ. ನನ್ನ ಅಭ್ಯಂತರವೇನೂ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ತಾಲೂಕಿನಲ್ಲಿ ಕೆಲ ಕೆರೆಗಳು ಸುರಕ್ಷಿತವಾಗಿಲ್ಲ. ಅಪಾಯಕಾರಿಯಾಗಿವೆ. ಹಿರೇಕಣಗಿ, ಚಿಕ್ಕೇರಿಹೊಸಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮಳೆ ಸುರಿದರೆ ಸಾಕು ನೀರೆಲ್ಲ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಕಾಲುವೆ ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಮುಂದೆ ಹೋಗುವಂತೆ ವ್ಯವಸ್ಥೆ ಮಾಡಲು ಹೇಳಿದ್ದೆ. ಈವರೆಗೆ ಏನು ಕ್ರಮ ಕೈಗೊಂಡಿದ್ದೀರಿ ಹೇಳಿ ಎಂದು ಶಾಸಕರು ಪ್ರಶ್ನಿಸಿದರು. ಆಗ ಲೋಕೋಪಯೋಗಿ, ಜಿಪಂ, ನೀರಾವರಿ ಇಲಾಖೆಯ ಅಧಿಕಾರಿಗಳು ಈ ಕೆಲಸ ನಮಗೆ ಸಂಬಂಧಿಸಿದ್ದಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದರು. ಇದರಿಂದ, ಸಿಡಿಮಿಡಿಗೊಂಡ ಶಾಸಕ ಮಾನೆ, ಅಧಿಕಾರಿಗಳು ಪರಸ್ಪರ ಒಬ್ಬರಿಗೊಬ್ಬರು ಸಮನ್ವಯದಿಂದ ಕೆಲಸ ಮಾಡಬೇಕು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ನಿಮ್ಮ ನಿಮ್ಮ ಜವಾಬ್ದಾರಿ ನೀವು ನಿರ್ವಹಿಸಿದರೆ ಮಾತ್ರ ಸಮಸ್ಯೆಗಳು ಮುಕ್ತಿ ಕಾಣಲಿವೆ. ಜನರೂ ಕೂಡ ನೆಮ್ಮದಿ ಹೊಂದಲಿದ್ದಾರೆ. ಬೇಜವಾಬ್ದಾರಿ ತೋರದೇ ಕಳಕಳಿ ಪ್ರದರ್ಶಿಸಬೇಕೆಂದು ತಾಕೀತು ಮಾಡಿದರು.
ಕೊರೊನಾ 4ನೇ ಅಲೆಯ ಭೀತಿ ಶುರುವಾಗಿದೆ. ಲಸಿಕೆ ಅಭಿಯಾನ ಚುರುಕಿಗೆ ಗಮನ ಹರಿಸಿ. ಈ ಬಗ್ಗೆ ಜನಜಾಗೃತಿ ಮೂಡಿಸಿ ಎಂದು ಟಿಎಚ್‌ಒ ಡಾ|ಲಿಂಗರಾಜ್ ಅವರಿಗೆ ಸೂಚಿಸಿದರು. ಕೆಲ ಸರ್ಕಾರಿ ಶಾಲೆಗಳ ಆಸ್ತಿ ಇಲಾಖೆಯ ಹೆಸರಿನಲ್ಲಿಲ್ಲ. ಅಂಥವುಗಳ ಲಿಸ್ಟ್ ಮಾಡಿ, ದಾಖಲೆ ಪತ್ರ ಸಂಗ್ರಹಿಸಿ ತಹಶೀಲ್ದಾರ್ ಗಮನಕ್ಕೆ ತರುವಂತೆ ಬಿಇಒ ಆರ್.ಎನ್.ಹುರುಳಿ ಅವರಿಗೆ ಮಾನೆ ಹೇಳಿದರು.
ರೈತರು ನೀಡುವ ಅರ್ಜಿಗಳಿಗೆ ಸ್ವೀಕೃತಿ ಪತ್ರ ನೀಡಬೇಕು. ಕಚೇರಿಯಲ್ಲಿರುವ ಸಿಬ್ಬಂದಿ ತಮ್ಮ ಬಳಿಗೆ ಬರುವ ರೈತರಿಗೆ ಸರ್ಕಾರದ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ನೋಡಿಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಅವರಿಗೆ ಸೂಚನೆ ನೀಡಲಾಯಿತು.
ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ತಾಪಂ ಆಡಳಿತಾಧಿಕಾರಿ ಡಾ|ರಾಜೂ ಕೋಲೇರ, ಇಒ ಸುನೀಲಕುಮಾರ, ಅಕ್ಕಿಆಲೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹನುಮಂಪ್ಪ ಗೊಂದಿ ಇದ್ದರು.
ಬಿತ್ತನೆ ಬೀಜ-ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಿ
ಕಳೆದ ಬಾರಿ ತಾಲೂಕಿನಲ್ಲಿ ಬಿತ್ತನೆ ಬೀಜದ ಕೊರತೆಯಾಗಿತ್ತು. ಈ ಬಾರಿ ಅದಕ್ಕೆ ಅವಕಾಶ ಕೊಡಬೇಡಿ. ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಮುಂಗಾರು ಹಂಗಾಮು ಆರಂಭಗೊಂಡ ತಕ್ಷಣವೇ ವಿತರಣೆ ಆರಂಭಿಸಿ. ನಿಷ್ಕಾಳಜಿ ವಹಿಸಿ ರೈತರಿಗೆ ಅನಾನುಕೂಲ ಮಾಡಿದರೆ ಸಹಿಸುವುದಿಲ್ಲ ಎಂದು ಶಾಸಕ ಮಾನೆ ಅವರು ಕೃಷಿ ಇಲಾಖೆಯ ದೇವೇಂದ್ರಪ್ಪ ಕಡ್ಲೆàರ ಅವರಿಗೆ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.