ಗುಜರಾತ್-ಹೈದರಾಬಾದ್: ಪೇಸ್ ಬೌಲಿಂಗ್ ಪಡೆಗಳ ರೇಸ್!
Team Udayavani, Apr 27, 2022, 8:30 AM IST
ಮುಂಬಯಿ: ಬುಧವಾರದ ಐಪಿಎಲ್ ಹಣಾಹಣಿ ದೊಡ್ಡ ಪಂದ್ಯವೊಂದಕ್ಕೆ ಸಾಕ್ಷಿಯಾಗಲಿದೆ. ಈ ಬಾರಿಯ ಟಾಪ್ ಹಾಗೂ ನೆಚ್ಚಿನ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ ಹೈದರಾಬಾದ್ ತಂಡಗಳೆರಡು ಎರಡನೇ ಸುತ್ತಿನಲ್ಲಿ ಪರಸ್ಪರ ಎದುರಾಗಲಿವೆ. ಎರಡೂ ತಂಡಗಳು ಪೇಸ್ ಬೌಲಿಂಗ್ ಪಡೆಗಳನ್ನು ಹೊಂದಿರುವ ಕಾರಣ ಗೆಲುವಿನ ರೇಸ್ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಗುಜರಾತ್ ಎದುರಿನ ಮೊದಲ ಸುತ್ತಿನ ಮೇಲಾಟದಲ್ಲಿ ಹೈದರಾಬಾದ್ ಜಯ ಸಾಧಿಸಿದ್ದು, ಸತತ 5 ಪಂದ್ಯಗಳನ್ನು ಗೆದ್ದ ಹುರುಪಿನಲ್ಲಿದೆ. ಇನ್ನೊಂದಡೆ ಗುಜರಾತ್ ಏಳರಲ್ಲಿ ಆರನ್ನು ಜಯಿಸಿದ್ದು, ಆ ಏಕೈಕ ಸೋಲು ಹೈದರಾಬಾದ್ ವಿರುದ್ಧವೇ ಅನುಭವಿಸಿದ್ದು ಎಂಬ ಆಕ್ರೋಶ ಹಾಗೂ ಸಂಕಟದಲ್ಲಿದೆ. ಇದಕ್ಕೆ ಸೇಡು ತೀರಿಸಿಕೊಳ್ಳುವುದು ಹಾರ್ದಿಕ್ ಪಾಂಡ್ಯ ಪಡೆಯ ಯೋಜನೆ.
ಆರೇಂಜ್ ಆರ್ಮಿಯ ವೇಗಿಗಳು
4 ಮಂದಿ ಘಾತಕ ವೇಗಿಗಳನ್ನು ಹೊಂದಿರುವ “ಆರೇಂಜ್ ಆರ್ಮಿ’ ಖ್ಯಾತಿಯ ಹೈದರಾಬಾದ್ ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಜುಜುಬಿ 68 ರನ್ನಿಗೆ ಗಂಟುಮೂಟೆ ಕಟ್ಟುವಂತೆ ಮಾಡಿದ ನಿದರ್ಶನ ಇನ್ನೂ ಕಣ್ಮುಂದೆ ಇದೆ. ಮಾರ್ಕೊ ಜಾನ್ಸೆನ್ (5 ಪಂದ್ಯ, 6 ವಿಕೆಟ್), ಉಮ್ರಾನ್ ಮಲಿಕ್ (7 ಪಂದ್ಯ, 10 ವಿಕೆಟ್). ಟಿ. ನಟರಾಜನ್ (7 ಪಂದ್ಯ, 15 ವಿಕೆಟ್) ಹಾಗೂ ಭುವನೇಶ್ವರ್ ಕುಮಾರ್ (9 ವಿಕೆಟ್, 7 ಪಂದ್ಯ) ಹೈದರಾಬಾದ್ ತಂಡದ ಬೌಲಿಂಗ್ ಪಿಲ್ಲರ್. ಪಿಚ್ ಪೇಸ್ ಬೌಲಿಂಗ್‌ಗೆ ಸಹಕರಿಸಿದರೆ ಎದುರಾಳಿಗೆ ಕಂಟಕ ತಪ್ಪಿದ್ದಲ್ಲ.
ರಶೀದ್ ಖಾನ್ ಗೈರಿನಿಂದ ಹೈದರಾಬಾದ್ ತಂಡದ ಸ್ಪಿನ್ ಡಿಪಾರ್ಟ್‌ಮೆಂಟ್ ದುರ್ಬಲಗೊಂಡಿದೆಯಾದರೂ ವಾಷಿಂಗ್ಟನ್ ಸುಂದರ್ ಮತ್ತು ಜಗದೀಶ್ ಸುಚಿತ್ ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಆರ್. ಸಮರ್ಥ್, ಆಲೌರೌಂಡರ್ ಶ್ರೇಯಸ್ ಗೋಪಾಲ್, ರೆಹಮಾನುಲ್ಲ ಗುರ್ಬಜ್ ಕಾಯುತ್ತಿರುವ ಆಟಗಾರರು. ರಶೀದ್ ಖಾನ್ ಎದುರಾಳಿ ಗುಜರಾತ್ ತಂಡದಲ್ಲಿರುವುದು ಈ ಪಂದ್ಯದ ಮತ್ತೊಂದು ಕುತೂಹಲ.
ಗುಜರಾತ್ ತಂಡದ ಫಾಸ್ಟ್ ಬೌಲಿಂಗ್ ವಿಭಾಗ ಘಾತಕವಾಗಿಯೇ ಇದೆ. ಮೊಹಮ್ಮದ್ ಶಮಿ (7 ಪಂದ್ಯ, 10 ವಿಕೆಟ್), ಲಾಕಿ ಫರ್ಗ್ಯುಸನ್ (7 ಪಂದ್ಯ, 9 ವಿಕೆಟ್) ಇಲ್ಲಿನ ಪ್ರಮುಖರು. ವಿಂಡೀಸ್‌ನ ಅಲ್ಜಾರಿ ಜೋಸೆಫ್ ಕೂಡ ರೇಸ್‌ನಲ್ಲಿದ್ದಾರೆ. ಘಾತಕ ಲೆಗ್ಗಿ ರಶೀದ್ ಖಾನ್ 7 ಪಂದ್ಯಗಳಿಂದ 8 ವಿಕೆಟ್ ಕೆಡವಿದ್ದಾರೆ.
ಪವರ್ ಪ್ಲೇ ಬ್ಯಾಟಿಂಗ್ ನಿರ್ಣಾಯಕ
ಎರಡೂ ತಂಡಗಳ ಪವರ್ ಪ್ಲೇ ಅವಧಿಯ ಬ್ಯಾಟಿಂಗ್ ಇಲ್ಲಿ ನಿರ್ಣಾಯಕವಾಗಲಿದೆ. ಯಾರು ವೇಗಿಗಳನ್ನು ಸಮರ್ಥವಾಗಿ ನಿಭಾಯಿಸಿ ದೊಡ್ಡ ಮೊತ್ತ ಪೇರಿಸುವರೋ ಅವರಿಗೆ ಮೇಲುಗೈ ಅವಕಾಶ ಜಾಸ್ತಿ ಎಂಬುದು ಈಗಿನ ಲೆಕ್ಕಾಚಾರ.
ಗುಜರಾತ್ ತಂಡ ಶುಭಮನ್ ಗಿಲ್ (207 ರನ್) ಹಾಗೂ ವೃದ್ಧಿಮಾನ್ ಸಾಹಾ ಅವರನ್ನು ನೆಚ್ಚಿಕೊಂಡಿದೆ. ಅಗ್ರ ಕ್ರಮಾಂಕ ಕುಸಿದರೆ ಭಡ್ತಿ ಪಡೆದು ಬರುವ ಹಾರ್ದಿಕ್ ಪಾಂಡ್ಯ (295 ರನ್) ಬಹಳಷ್ಟು ಸಲ ತಂಡವನ್ನು ಮೇಲೆತ್ತಿದ ನಿದರ್ಶನವಿದೆ. ಹಾಗೆಯೇ ಹಳಬ ಡೇವಿಡ್ ಮಿಲ್ಲರ್ (220 ರನ್) ಕೂಡ ಉತ್ತಮ ಲಯದಲ್ಲಿದ್ದಾರೆ. ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್ ಈ ತಂಡದ ಬೆಸ್ಟ್ ಫಿನಿಶರ್.
ಹೈದರಾಬಾದ್ ಎಚ್ಚರಿಕೆಯ ಆಟ
ಹೈದರಾಬಾದ್ ತೀರಾ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುವ ತಂಡ. ಟಿ20 ಜೋಶ್‌ಗಿಂತ ಮಿಗಿಲಾಗಿ ವಿಕೆಟ್ ಉಳಿಸಿಕೊಂಡು ಹಂತ ಹಂತವಾಗಿ ವೇಗಕ್ಕೆ ಒಡ್ಡಿಕೊಳ್ಳುವ ಶೈಲಿ ಇವರದು. ಇದರಲ್ಲಿ ವಿಲಿಯಮ್ಸನ್ ಮತ್ತು ಅಭಿಷೇಕ್ ಶರ್ಮ ಈಗಾಗಲೇ ಉತ್ತಮ ಯಶಸ್ಸು ಕಂಡಿದ್ದಾರೆ. ಕೆಕೆಆರ್‌ನಿಂದ ಬಂದ ರಾಹುಲ್ ತ್ರಿಪಾಠಿ, ದಕ್ಷಿಣ ಆಫ್ರಿಕಾದ ಐಡನ್ ಮಾರ್ಕ್‌ರಮ್ ಮಧ್ಯಮ ಸರದಿಯ ನಂಬುಗೆಯ ಬ್ಯಾಟರ್. ಆದರೆ ನಿಕೋಲಸ್ ಪೂರಣ್, ಪ್ರಿಯಂ ಗರ್ಗ್, ಅಬ್ದುಲ್ ಸಮದ್ ಇನ್ನೂ ಪೂರ್ಣ ಸಾಮರ್ಥ್ಯ ತೋರಿಲ್ಲ.
ಗುಜರಾತ್ ಸೋತದ್ದು ಹೈದರಾಬಾದ್‌ಗೆ ಮಾತ್ರ!
ನೂತನ ತಂಡವಾದ ಗುಜರಾತ್ ಟೈಟಾನ್ಸ್ ತಂಡದ್ದು ಕನಸಿನ ಆರಂಭ. ಆಡಿದ 7 ಪಂದ್ಯಗಳಲ್ಲಿ ಆರನ್ನು ಗೆದ್ದಿರುವ ಹಾರ್ದಿಕ್ ಪಾಂಡ್ಯ ಪಡೆ, 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ನೆಲೆಸಿದೆ (ರಾಜಸ್ಥಾನ್-ಆರ್‌ಸಿಬಿ ಪಂದ್ಯಕ್ಕೂ ಮುನ್ನ). ಒಂದರಲ್ಲಷ್ಟೇ ಸೋಲನುಭವಿಸಿದೆ. ಈ ಸೋಲು ಎದುರಾದದ್ದು ಹೈದರಾಬಾದ್ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ.
ಗುಜರಾತ್-ಹೈದರಾಬಾದ್ ನಡುವಿನ ಮೊದಲ ಸುತ್ತಿನ ಮುಖಾಮುಖೀ ಎ. 11ರಂದು ನವೀ ಮುಂಬಯಿಯಲ್ಲಿ ಏರ್ಪಟ್ಟಿತ್ತು. ಇದನ್ನು ಕೇನ್ ವಿಲಿಯಮ್ಸನ್ ಪಡೆ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ನಾಯಕ ಹಾರ್ದಿಕ್ ಪಾಂಡ್ಯ ಅವರ ಅಜೇಯ 50 ರನ್ ನೆರವಿನಿಂದ 7 ವಿಕೆಟಿಗೆ 162 ರನ್ ಗಳಿಸಿತು. ಹೈದರಾಬಾದ್ 19.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 168 ರನ್ ಬಾರಿಸಿತು. ವಿಲಿಯಮ್ಸನ್ 57 ರನ್ ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಈ ಸೋಲಿಗೆ ಗುಜರಾತ್ ಸೇಡು ತೀರಿಸಿಕೊಂಡೀತೇ, ಎಸ್‌ಆರ್‌ಎಚ್‌ನ ಗೆಲುವಿನ ಸರಪಳಿಯನ್ನು ತುಂಡರಿಸೀತೇ ಎಂಬುದು ಬುಧವಾರ ರಾತ್ರಿಯ ಕೌತುಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.