ಬ್ಯಾಂಕಿಂಗ್ ಲೋಕದ ಮಹಾ ದಿಗ್ಗಜ ಮೂಲ್ಕಿ ಸುಂದರರಾಮ ಶೆಟ್ಟಿ
Team Udayavani, Apr 29, 2022, 12:25 PM IST
ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ 1975ರ ನವೆಂಬರ್ 19 ಒಂದು ಸ್ಮರಣೀಯ ದಿನ. ಸಣ್ಣ ಬ್ಯಾಂಕ್ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ, ಕರ್ನಾಟಕದ ಕರಾವಳಿ ಮೂಲದ ವಿಜಯಾ ಬ್ಯಾಂಕ್, ಇಡೀ ಬ್ಯಾಂಕಿಂಗ್ ಲೋಕ ಅಚ್ಚರಿ ಪಡುವಂತೆ ಒಂದೇ ದಿನ ದೇಶಾದ್ಯಂತ 27 ಶಾಖೆಗಳನ್ನು ತೆರೆದು ಇತಿಹಾಸ ಸೃಷ್ಟಿಸಿತ್ತು. ವಿಜಯಾ ಬ್ಯಾಂಕ್‌ನ ಈ ದೈತ್ಯ ಬೆಳವಣಿಗೆ ಮತ್ತು ಬ್ಯಾಂಕಿಂಗ್ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ ಪ್ರೇರಕ ಶಕ್ತಿಯೇ ಮೂಲ್ಕಿ ಸುಂದರರಾಮ ಶೆಟ್ಟಿ. ಎಪ್ರಿಲ್ 30ರ ಶನಿವಾರ (30-04-1915 ಜನ್ಮದಿನ) ಬ್ಯಾಂಕಿಂಗ್ ಲೋಕದ ಈ ಮಹಾದಿಗ್ಗಜರ ಜನ್ಮ ದಿನವಾಗಿದ್ದು ಅವರನ್ನು ಸ್ಮರಿಸಿಕೊಳ್ಳಲೇಬೇಕು.
1931ರಲ್ಲಿ ಸಾಮಾಜಿಕ ಧುರೀಣ ಎ.ಬಿ. ಶೆಟ್ಟಿ ಅವರು ತಮ್ಮ ಕೆಲವು ರೈತಮಿತ್ರರೊಂದಿಗೆ ಸೇರಿ ಹುಟ್ಟುಹಾಕಿದ ವಿಜಯಾ ಬ್ಯಾಂಕ್, ಮುಂದೆ ಮೂಲ್ಕಿ ಸುಂದರರಾಮ ಶೆಟ್ಟಿಯವರ ನೇತೃತ್ವದಲ್ಲಿ ದೇಶಾದ್ಯಂತ ಪಸರಿಸಿ ಅಖೀಲ ಭಾರತ ಮಟ್ಟದ ಬ್ಯಾಂಕ್ ಅಗಿ ಪರಿವರ್ತಿತವಾಗಿದ್ದು ಈಗ ಇತಿಹಾಸ ಮತ್ತು ಒಂದು ದಂತಕಥೆ. ವಾಸ್ತವದಲ್ಲಿ ಸುಂದರರಾಮ ಶೆಟ್ಟಿ ಅವರು ಓದಿದ್ದು ಹತ್ತನೆ ತರಗತಿಯವರೆಗೆ ಮಾತ್ರ. ಆದರೆ ಅವರ ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ ಮತ್ತು 1932ರಿಂದ 1951ರ ವರೆಗೆ ವಿವಿಧ ವಿಮಾ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಅವರನ್ನು ವಿಜಯಾ ಬ್ಯಾಂಕ್‌ನ ಉನ್ನತ ಹುದ್ದೆಗೆ ಏರಿಸಿದ್ದು ಒಂದು ರೋಚಕ ಕಥೆ ಮತ್ತು ಇಂದಿನ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಮತ್ತು ಬ್ಯಾಂಕರ್‌ಗಳಿಗೆ ರೋಲ್ ಮಾಡೆಲ್.
ಗ್ರಾಮೀಣ ಸೊಗಡಿನ, ಕರಾವಳಿ ಜಿಲ್ಲೆಯ ಬ್ಯಾಂಕ್ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ವಿಜಯಾ ಬ್ಯಾಂಕ್‌ನ ಶಾಖೆಗಳನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಿ ಬ್ಯಾಂಕ್‌ನ್ನು ಅಖೀಲ ಭಾರತ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಸುಂದರರಾಮ ಶೆಟ್ಟಿಯವರಿಗೆ ಸಲ್ಲಬೇಕು. ಆ ದಿನಗಳಲ್ಲಿಯೇ ಈಶಾನ್ಯ ಭಾರತದ ಏಳು ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದು ಉಳಿದ ಬ್ಯಾಂಕ್‌ಗಳು ಅಲ್ಲಿಗೆ ಕಾಲಿಡುವಂತೆ ಪ್ರೇರೇಪಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂಕವಾದ ಮತ್ತು ಹಿಂಸೆ ತಾಂಡವವಾಡುತ್ತಿರುವಾಗ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲೂ ಶಾಖೆಯನ್ನು ತೆರೆದಿದ್ದರು. ಜನಸಾಮಾನ್ಯರು ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಬಾರದು ಎನ್ನುವ ಒಂದೇ ಧ್ಯೇಯದಿಂದ ಅವರು ಶಾಖೆಗಳನ್ನು ತೆರೆಯುತ್ತಿದ್ದರು. ಸುಂದರರಾಮ ಶೆಟ್ಟಿ ಅವರು ಒಂದೇ ವರ್ಷ ಬ್ಯಾಂಕ್‌ನ 105 ಶಾಖೆಗಳನ್ನು ತೆರೆದಿದ್ದು ಮತ್ತು ಒಂದೇ ದಿನ ನೂರರಕ್ಕಿಂತ ಹೆಚ್ಚು ಜನರಿಗೆ ಉದ್ಯೋಗಪತ್ರ ನೀಡಿದ್ದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಅವರು ನಿರುದ್ಯೋಗಿ ವಿದ್ಯಾವಂತರಿಗೆ ಆವಶ್ಯಕತೆ, ಅನಿವಾರ್ಯತೆ ಮತ್ತು ಅರ್ಹತೆಯ ಆಧಾರದ ಮೇಲೆ ನಿಂತ ಸ್ಥಳದಲ್ಲಿಯೇ ಉದ್ಯೋಗ ನೀಡುತ್ತಿದ್ದರು. ನೀರಿಲ್ಲದ ಊರಿನಲ್ಲಿ, ಕನಿಷ್ಠ ನಾಗರಿಕ ಸೌಲಭ್ಯಗಳು ಲಭ್ಯವಾಗದ ಪ್ರದೇಶಗಳಲ್ಲೂ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುವುದಕ್ಕೆ ಶ್ರೀಕಾರ ಹಾಕಿದ ಶ್ರೇಯವೂ ಇವರಿಗೆ ಸಲ್ಲಬೇಕು.
“ಉಳುವವನೇ ಹೊಲದೊಡೆಯ’ ಘೋಷವಾಕ್ಯದಡಿಯಲ್ಲಿ ಭೂ ಸುಧಾರಣ ಕಾಯ್ದೆ ಜಾರಿಗೆ ಬಂದಾಗ ಸಾವಿರಾರು ಕೃಷಿಕರು ತಮ್ಮ ಜೀವನದ ಆಧಾರ ಕಳೆದುಕೊಂಡಾಗ, ಬೇರೆ ಯಾವುದೇ ಆದಾಯದ ಮೂಲ ಇಲ್ಲದೆ ನಿರ್ಗತಿಕರಾದಾಗ ಸಂಕಷ್ಟಕ್ಕೆ ಸಿಲುಕಿದ ಬಹುತೇಕ ಕುಟುಂಬಗಳಿಗೆ ಮುಖ್ಯವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಡ ಕುಟುಂಬಗಳ ಯುವಕ-ಯುವತಿಯರಿಗೆ ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿ ಬದುಕನ್ನು ಕಲ್ಪಿಸಿಕೊಟ್ಟಿದ್ದರು. ಮಾನವೀಯತೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುವಾಗ ಕಾನೂನಿನ ಅಡಚಣೆ, ಬ್ಯಾಂಕ್‌ನ ನೀತಿ, ನಿಯಮ-ನಿಬಂಧನೆಗಳು ತಡೆ ಒಡ್ಡಿದರೂ ಅವುಗಳನ್ನು ದಿಟ್ಟತನದಿಂದ ನಿಭಾಯಿಸಿಕೊಂಡು ಸಮಸ್ಯೆಗಳನ್ನು ಶೆಟ್ಟಿಯವರು ಪರಿಹರಿಸುತ್ತಿದ್ದರು. ಬ್ಯಾಂಕ್‌ನ ವ್ಯವಹಾರ, ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿಯೂ ಅವರ ಕೊಡುಗೆ ಮಹತ್ವದ್ದು. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಆರ್ಥಿಕ ನೆರವನ್ನೂ ನೀಡಿದ್ದರು.
ಅವರು ತಮ್ಮ ಆಡಳಿತಾವಧಿ ಪೂರ್ತಿ man of action ಅಗಿದ್ದು , ತಮ್ಮ ದಿನನಿತ್ಯದ ಅಡಳಿತದಲ್ಲಿ ಎಂದೂ Let me see, let me look in to this, let me do the best ಎನ್ನದೇ ಸಮಸ್ಯೆಗಳಿಗೆ ಅಂತ್ಯ ಕಾಣಿಸುತ್ತಿದ್ದರು. ಮ್ಯಾನೇಜ್‌ಮೆಂಟ್ ಪದವೀಧರರು, ಅರ್ಥಿಕ ತಜ್ಞರು ಮತ್ತು ಜ್ಞಾನದ ಸಾಗರವನ್ನೇ ತುಂಬಿಕೊಂಡಿರುವ ಉನ್ನತ ಅಧಿಕಾರಿಗಳು ನಾಚುವಂತೆ, ಮುಜುಗರ ಪಡುವಂತೆ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಮತ್ತು vಜಿಛಿಡಿ ಟಟಜಿnಠಿನ್ನು ಪ್ರತಿಪಾದಿಸುತ್ತಿದ್ದರು. ತಮ್ಮ ಲೋಕಾನುಭವ, ವಿಷಯ ಜ್ಞಾನ ಮತ್ತು ವ್ಯವಹಾರ ಅನುಭವಗಳು ಅವರ ಸೀಮಿತ ಶೈಕ್ಷಣಿಕ ಅರ್ಹತೆಯನ್ನು ಮರೆಮಾಚುತ್ತಿದ್ದವು.
ಬ್ಯಾಂಕ್‌ಗಳಲ್ಲಿ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಆಯಾಮ ಅರಂಭವಾಗಿದ್ದು ಕೂಡ ಇವರ ಕಾಲದಲ್ಲಿಯೇ.
1946ರಿಂದ ನಿರ್ದೇಶಕರಾಗಿದ್ದ ಇವರನ್ನು 1962ರಲ್ಲಿ ಗೌರವಾಧ್ಯಕ್ಷರಾಗಿ ನೇಮಿಸಲಾಗಿತ್ತು. ಮಧ್ಯಾಂತರದಲ್ಲಿ ಒಮ್ಮೆ ಒಂದೂವರೆ ವರ್ಷ ದೂರವಾಗಿದ್ದನ್ನು ಬಿಟ್ಟರೆ ಅವರ ಮತ್ತು ವಿಜಯಾ ಬ್ಯಾಂಕ್‌ನ ನಡುವಣ ಸಂಬಂಧಕ್ಕೆ ಮೂರೂವರೆ ದಶಕಗಳು. 1969ರಿಂದ 1979ರ ವರೆಗೆ ಬ್ಯಾಂಕ್‌ನ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ವಿಜಯಾ ಬ್ಯಾಂಕ್‌ನ್ನು ಹಿಮಾಲಯದೆತ್ತರಕ್ಕೆ ಏರಿಸಿ ಬ್ಯಾಂಕಿಂಗ್ ವಲಯ, ಸರಕಾರ ಮತ್ತು ಬಿಸಿನೆಸ್ ಸಮೂಹ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. ಬ್ಯಾಂಕ್‌ನ್ನು ಇನ್ನೂ ಮುಂದುವರಿಸುವ ಚೈತನ್ಯವಿದ್ದರೂ ನಾಡಿನ ಕಾನೂನಿನ ಪ್ರಕಾರ 1979ರಲ್ಲಿ ಬ್ಯಾಂಕ್‌ನಿಂದ ನಿವೃತ್ತರಾದರು. 1981ರಲ್ಲಿ ಅಮೆರಿಕದ ಬೋಸ್ಟನ್‌ನಲ್ಲಿರುವ ಮಗನ ಮನೆಗೆ ಹೋದಾಗ ಅಲ್ಲಿ ದೈವಾಧೀನರಾದರು. ಆ ಮೂಲಕ ಬ್ಯಾಂಕಿಂಗ್ ಕ್ಷೇತ್ರದ ಒಂದು ಅದ್ಭುತ ತಾರೆ ಕಣ್ಮರೆಯಾಯಿತು.
ಅವರ ಹಿತಚಿಂತಕರು, ಅನುಯಾಯಿಗಳು, ಅಭಿಮಾನಿಗಳು ಮತ್ತು ವಿಜಯಾ ಬ್ಯಾಂಕ್‌ನ ನಿವೃತ್ತ ಸಿಬಂದಿ ಅವರ ನೆನಪಿನಲ್ಲಿ ಮೂಲ್ಕಿಯಲ್ಲಿ ಬೃಹತ್ ಸಮುದಾಯ ಭವನವನ್ನು ನಿರ್ಮಿಸಿ ಅವರ ನೆನಪು ಸದಾ ಇರುವಂತೆ ಕಾರ್ಯ ಪ್ರವೃತ್ತರಾಗಿರುವುದು ಶ್ಲಾಘನೀಯ. ಮಂಗಳೂರಿನ ಲೈಟ್‌ಹೌಸ್ ಹಿಲ್ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನಿಡುವ ಮೂಲಕ ಅವರು ಈ ನಾಡಿಗೆ ಅವರು ಸಲ್ಲಿಸಿದ ಸೇವೆಯನ್ನು ಗೌರವಿಸಿ, ಸ್ಮರಿಸುವ ಕಾರ್ಯವನ್ನು ಮಾಡಲಾಗಿದೆ.
-ಎ.ಬಿ. ಶೆಟ್ಟಿ
(ಲೇಖಕರು ಚೇರ್‌ಮನ್, ವಿಜಯಾ ಬ್ಯಾಂಕ್ ನಿವೃತ್ತರ ಸಂಘ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.