ಚಲನಚಿತ್ರರಂಗದ ಗತಕಾಲದ ರಾಣಿ ….ಜನ್ಮಭೂಮಿಯ ಸುಖದಲ್ಲಿ ಹಿರಿಯ ನಟಿ ಹರಿಣಿ
ಚಲನಚಿತ್ರರಂಗದ ಗತಕಾಲದ ರಾಣಿ ಹರಿಣಿ "ಉದಯವಾಣಿ' ಸಂವಾದದಲ್ಲಿ...
Team Udayavani, Apr 30, 2022, 6:30 AM IST
ಮಣಿಪಾಲ: ಉಡುಪಿ ಮೂಲದ ಚಲನಚಿತ್ರ ರಂಗದ ಹಿರಿಯ ನಟಿ, ನಿರ್ಮಾಪಕಿ ಹರಿಣಿಯವರು ಶುಕ್ರವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿ ಸಂಪಾದಕೀಯ ವಿಭಾಗದ ಕಾರ್ಯನಿರ್ವಹಣೆಯನ್ನು ನೋಡಿದರು. “ಉದಯವಾಣಿ’ ಸಹೋದರ ಚಲನಚಿತ್ರ ಪತ್ರಿಕೆ “ರೂಪತಾರಾ’ ಹೊರತಂದ ವಿಶೇಷ ಸಂಚಿಕೆಯಲ್ಲಿ ತಮ್ಮ ಬಗೆಗೆ ಬಂದ ಲೇಖನ, ಚಿತ್ರಗಳನ್ನು ನೋಡಿ ಸಂತೋಷಪಟ್ಟರು. ಕಚೇರಿಯ ಸಂಪಾದಕೀಯ ಸಿಬಂದಿ ವರ್ಗದೊಂದಿಗೆ ಒಂದು ಗಂಟೆಗೂ ಅಧಿಕ ಹೊತ್ತು ಸಂವಾದ ನಡೆಸಿದರು. 1940ರಿಂದ 70ರ ದಶಕದ ವರೆಗಿನ ಚಿತ್ರರಂಗದ ಹಲವು ಕೌತುಕಕಾರಿ ಅಂಶಗಳನ್ನು ಮೆಲುಕು ಹಾಕಿದರು. ಡಾ| ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸಿರುವ ಅನುಭವ, “ನಮ್ಮ ಮಕ್ಕಳು’ ಚಲನಚಿತ್ರಕ್ಕೆ 1969ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ (ಫಿಲ್ಮ್ಫೇರ್ ಅವಾರ್ಡ್) ಸಿಕ್ಕಿದ ಸಂದರ್ಭ, ಇಂದು ಚಿತ್ರರಂಗ ಬೆಳೆದಿರುವ ರೀತಿ ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಪ್ರಸ್ತುತ ಮತ್ತು ಹಿಂದಿನ ಚಿತ್ರರಂಗದ ಶೂಟಿಂಗ್ ಸ್ಪಾಟ್, ಸಂಭಾವನೆ ವ್ಯತ್ಯಾಸವೇನು ?
ಹಿಂದೆಲ್ಲ ಚಿತ್ರೀಕರಣ ನಡೆ ಯುವಾಗ ಈಗಿನಷ್ಟು ಸೌಕರ್ಯಗಳು ಇರಲಿಲ್ಲ. ಈಗಿನ ನಟ, ನಟಿಯರಿಗೆ ಇರುವಂತೆ ಕಾರವ್ಯಾನ್‌ನಂಥ ಸೌಲಭ್ಯಗಳನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿರಲಿಲ್ಲ. ಸಂಭಾವನೆ ವಿಷಯಕ್ಕೆ ಈಗಿನ ಕಾಲಕ್ಕೂ ಅಂದಿಗೂ ಅಜಗಜಾಂತರ. ಹಲವು ಕಷ್ಟಗಳನ್ನು ಎದುರಿಸಿ ಸಿನೆಮಾ ಮಾಡುವ ಕಾಲ ಅದಾಗಿತ್ತು. ನಿರ್ಮಾಪಕ, ನಿರ್ದೇಶಕ, ನಟ, ನಟಿಯರು ಎಲ್ಲರೂ ಹೊಟ್ಟೆಪಾಡಿಗೆ ದುಡಿಯುತ್ತಿದ್ದರು. ಜನರು ಕೊಟ್ಟ ಕಲೆಯ ಪಟ್ಟಕ್ಕೆ ಎಂದಿಗೂ ಧಕ್ಕೆ ತರುವ ಕೆಲಸ ಯಾರೂ ಮಾಡಿರಲಿಲ್ಲ.
ಡಾ| ರಾಜ್‌ಕುಮಾರ್ ಅವರೊಂದಿಗಿನ ಒಡನಾಟ ಹೇಗಿತ್ತು?
ಡಾ| ರಾಜ್ ಅವರೊಂದಿಗೆ ಒಡನಾಟ ಸದಾ ಸ್ಮರಣೀಯ. ಉತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಮುಂದೊಂದು ದಿನ ರಾಜ್ ಅವರು ಅಭಿಮಾನಿಗಳ ಪಾಲಿನ ದೊಡ್ಡ ನಟನಾಗಬಹುದು ಎಂದುಕೊಂಡಿದ್ದೆ. ಆದರೆ ರಾಜ್ ಅಭಿಮಾನಿಗಳ ದೇವರಾಗಿದ್ದಾರೆ.
ತಮ್ಮದೆ ಪ್ರೊಡಕ್ಷನ್ ಆದರೂ ಪಂಡರಿಬಾಯಿ ಅವರಿಗೆ ಅವಕಾಶ ಕೊಟ್ಟಿರಿ?
ಸ್ವಂತ ಪ್ರೊಡಕ್ಷನ್‌ನಲ್ಲಿ ನಿರ್ಮಿಸಿದ “ನವ ಜೀವನ’ ಎರಡನೇ ಚಿತ್ರವಾಗಿತ್ತು. ಚಿತ್ರದಲ್ಲಿನ ಪಾತ್ರಕ್ಕೆ ನಾನು ಸರಿ ಹೊಂದದ ಕಾರಣ, ಪಾತ್ರಕ್ಕೆ ಸರಿ ಹೊಂದುವ ಪಂಡರಿಬಾಯಿ ಅವರನ್ನು ಆಯ್ಕೆ ಮಾಡಲಾಯಿತು. ಚಿತ್ರ ನಿರ್ಮಾಣ ಸಂಸ್ಥೆಯನ್ನು ನನಗಾಗಿ ಆರಂಭಿಸಿದ್ದಲ್ಲ.
“ನಾಂದಿ’ ಸಿನೆಮಾದಲ್ಲಿ ಬಾಯಿ ಬಾರದ, ಕಿವಿ ಕೇಳದ ಬಾಲಕಿಯ ಪಾತ್ರದ ನಿರ್ವಹಣೆ ಅನುಭವ ಹೇಗಿತ್ತು ?
ನಾಂದಿ ಸಿನೆಮಾದ ಆ ಪಾತ್ರ ತುಂಬ ಸವಾಲಿನದ್ದಾಗಿತ್ತು. ಸಿನೆಮಾ ಚಿತ್ರೀಕರಣಕ್ಕೂ ಮುನ್ನ ಮದ್ರಾಸ್‌ನ ವಿಶೇಷ ಶಾಲೆಯಲ್ಲಿ ಬಾಯಿ ಬಾರದ, ಕಿವಿ ಕೇಳದ ವ್ಯಕ್ತಿಗಳ ವರ್ತನೆ ಕಲಿತುಕೊಂಡೆ. ಚಿತ್ರೀಕರಣದ ಸ್ಥಳಕ್ಕೂ ಸಂಬಂಧಪಟ್ಟ ಶಿಕ್ಷಕರು ಆಗಮಿಸಿ ಸಲಹೆ ನೀಡುತ್ತಿದ್ದರು. ಈ ಸಿನೆಮಾಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆಂದು ಎಲ್ಲರೂ ಭಾವಿಸಿದ್ದರು. ಆದರೆ ಸಿಗಲಿಲ್ಲ. ಬೆಳಗಾವಿಯಲ್ಲಿ ಇದಕ್ಕೆ ಪ್ರತಿಭಟನೆಯೂ ನಡೆದಿತ್ತು. ಆ ಜನರ ಪ್ರೀತಿ, ಅಭಿಮಾನ ರಾಷ್ಟ್ರ ಪ್ರಶಸ್ತಿಗಿಂತ ಮಿಗಿಲಾಗಿತ್ತು.
ಕನ್ನಡ ಸಿನೆಮಾಗಳ ಮೇಲಿನ ಅಭಿಮಾನ ಹೇಗಿತ್ತು?
ನಮ್ಮ ಕಾಲಘಟ್ಟದಲ್ಲಿ ಬೇರೆ ಭಾಷೆ ಸಿನೆಮಾಗಳು ಹೌಸ್‌ಫುಲ್ ಆಗಿ ಟಿಕೆಟ್ ಸಿಗದಿದ್ದರೆ ಕನ್ನಡ ಭಾಷೆ ಸಿನೆಮಾ ನೋಡಲು ಬರುತ್ತಿದ್ದರು. ಈ ಸಂಗತಿಗಳು ಮನಸ್ಸಿಗೆ ನೋವು ತರಿಸುತ್ತಿದ್ದವು. ನಮ್ಮ ಜನರೇ ಅನ್ಯ ಭಾಷೆ ಚಿತ್ರಗಳ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಕನ್ನಡ ಸಿನೆಮಾ ಮೇಲಿನ ಅಭಿಮಾನ, ಕನ್ನಡ ಭಾಷಾ ಜಾಗೃತಿ ಅಪರಿಮಿತವಾಗಿ ಬೆಳೆದಿದೆ. ನನ್ನ ಮಾತೃ ಭಾಷೆ ತುಳುವಾಗಿದ್ದು, ಬೆಳೆದಿದ್ದು ತಮಿಳುನಾಡಿನಲ್ಲಿ. ತುಳು, ತಮಿಳು ಮಾತ್ರ ನನಗೆ ತಿಳಿದಿತ್ತು. ಕನ್ನಡ ತಿಳಿದಿರಲಿಲ್ಲ. ಮೊದಲ ಕನ್ನಡ ಚಿತ್ರ ಜಗನ್ಮೋಹಿನಿಯಲ್ಲಿ ಅಭಿನಯಿಸುತ್ತಲೇ ಕನ್ನಡ ಕಲಿತೆ. ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ನನಗೆ ಕನ್ನಡ ಕಲಿಸಿದ ಗುರು.
ಅಂದಿನ ಕಾಲ ಘಟ್ಟದಲ್ಲಿ ಚಿತ್ರರಂಗದ ನಟ, ನಟಿಯರು ಸಾಮಾಜಿಕವಾಗಿ ಹೇಗೆ ಬೆರೆಯುತ್ತಿದ್ದರು?
ಅಂದಿನ ಕಾಲದಲ್ಲಿ ನಟ, ನಟಿಯರು ಜನರಿಂದ ಎಂದಿಗೂ ಅಂತರ ಕಾಯ್ದುಕೊಳ್ಳು ತ್ತಿರಲಿಲ್ಲ. 1961ರಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಜನರಿಗೆ ನೆರವಾಗಲು ನಾನು, ಡಾ| ರಾಜ್, ನರಸಿಂಹರಾಜು, ಪಂಡರಿಬಾಯಿ, ಬಾಲಕೃಷ್ಣ ಮೊದಲಾದ ನಟ, ನಟಿಯರು ರಾಜ್ಯಾದ್ಯಂತ ಸಂಚರಿಸಿ ಪ್ರವಾಹ ನಿಧಿ ಸಂಗ್ರಹಿಸಿ ಜನರಿಗೆ ನೆರವಾದೆವು. ಜನರ ಕಷ್ಟ, ಸಾಮಾಜಿಕ ಸಮಸ್ಯೆಗಳಿಗೆ ಚಿತ್ರರಂಗದ ಕಡೆಯಿಂದಲೂ ಸ್ಪಂದನೆ ದೊರೆಯುತ್ತಿದ್ದ ಕಾಲಘಟ್ಟವದು.
ಒಮ್ಮೆಲೆ ಅಭಿನಯ ನಿಲ್ಲಿಸಲು ಕಾರಣವೇನು ?
ಕೆಲವು ವಿಷಯಗಳಲ್ಲಿ ನಿರಾಸೆ ಎದುರಿಸ ಬೇಕಾಯಿತು. ಇನ್ನು ಚಿತ್ರರಂಗದಲ್ಲಿ ಮುಂದುವರಿಯಲು ನಾನು ಅರ್ಹಳಲ್ಲ ಎಂಬ ಭಾವನೆ ಬಂದ ಬಳಿಕ ದೃಢ ನಿರ್ಧಾರ ತೆಗೆದುಕೊಂಡು ಚಿತ್ರರಂಗದಲ್ಲಿ ಅಭಿನಯಿಸ ದಿರಲು ನಿರ್ಧರಿಸಿದೆ. ಕೆಲವು ಸಮಯ ನಿರ್ಮಾಪಕಿಯಾಗಿ ಸಹೋದರರಾದ ವಾದಿ ರಾಜ್ ಮತ್ತು ಜವಾಹರ್ ಅವರೊಂದಿಗೆ ಕೆಲಸ ನಿರ್ವಹಿಸಿದೆ.
ತುಳು ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ ?
ನಾನು ಕನ್ನಡದಲ್ಲಿ ನಟಿಸುತ್ತಿದ್ದ ವೇಳೆಗಾಗಲೇ ತುಳು ಚಿತ್ರರಂಗ ಸಕ್ರಿಯವಾಗಿತ್ತಾದರೂ ತುಳು ಚಿತ್ರ ನಿರ್ಮಾಪಕರು ನನಗೆ ಅವಕಾಶ ನೀಡಲು ಮುಂದೆ ಬಂದಿರಲಿಲ್ಲ. ಇದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಇತ್ತೀಚಿನ ದಶಕಗಳಲ್ಲಿ ತುಳು ಭಾಷೆಯಲ್ಲಿ ಅತ್ಯುತ್ತಮ ಸಿನೆಮಾಗಳು ಹೊರಬರುತ್ತಿದ್ದು, ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ.
ಹುಟ್ಟೂರು ಉಡುಪಿ ಪ್ರವಾಸ ಅನುಭವ ಹೇಗಿದೆ?
ಹಲವಾರು ಬಾರಿ ಉಡುಪಿಗೆ ಬಂದಿದ್ದೇನೆ. ಬಂದಾಗಲೆಲ್ಲ ಬಿಸಿಲ ಬೇಗೆಯಿಂದಾಗಿ ಉಡುಪಿಯಿಂದ ಹೋಗಬೇಕು ಅಂತ ಅನಿಸುತ್ತಿತ್ತು. ಈ ಸಲ ಬಿಸಿಲಿನ ತಾಪ ಎಷ್ಟೇ ಇದ್ದರೂ ಉಡುಪಿ ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ವಯಸ್ಸಾಗುತ್ತ ಜನ್ಮ ಭೂಮಿ ಸುಖದ ಅನುಭವ ನೀಡುತ್ತಿದೆ.
“ಉದಯವಾಣಿ’ಯ ಸಹೋದರ ಪತ್ರಿಕೆ “ರೂಪತಾರಾ’ 1982ರಲ್ಲಿ ಐದನೆಯ ಹುಟ್ಟುಹಬ್ಬದ ಸವಿನೆನಪಿಗಾಗಿ ಹೊರತಂದ ವಿಶೇಷಾಂಕದಲ್ಲಿ 1940-50ರ ದಶಕದ ಚಲನಚಿತ್ರ ರಂಗದ ರಾಣಿ, ಸೌಂದರ್ಯದ ಖನಿ ಹರಿಣಿಯವರ ಒಂದು ವಿಶೇಷ ಭಂಗಿ. ಇದನ್ನು “ಉದಯವಾಣಿ’ಯ ಸಂಪಾದಕೀಯ ವಿಭಾಗದಲ್ಲಿ ವೀಕ್ಷಿಸಿದ ಹರಿಣಿಯವರು ಗತಕಾಲದ ವೈಭವವನ್ನು ಸ್ಮರಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.