ಗಂಜಿ ಕುಡಿದು ಬದುಕುತ್ತೇನೆ ಹೊರತು ಭ್ರಷ್ಟಾಚಾರ ಮಾಡಲ್ಲ; ಹಾಲಪ್ಪ ಅವರಿಗೆ ಬೇಳೂರು ಟಾಂಗ್
Team Udayavani, Apr 30, 2022, 4:02 PM IST
ಸಾಗರ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪಿಂಚಣಿಯಲ್ಲಿ ಬದುಕುತ್ತಿದ್ದಾರೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ನನ್ನನ್ನು ಟೀಕಿಸಿದ್ದಾರೆ. ಅವರು ಹೇಳಿದಂತೆ ನಾನು ಪಿಂಚಣಿಯಲ್ಲಿ ಗಂಜಿ ಕುಡಿದು ಬದುಕುತ್ತೇನೆಯೇ ವಿನಃ ಭ್ರಷ್ಟಾಚಾರ ಮಾಡಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಬದುಕುತ್ತಿಲ್ಲ. ಇವತ್ತಿಗೂ ಜನರಿಗೆ ಸಹಾಯ ಮಾಡುತ್ತ ಬದುಕುತ್ತಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಾಸಕ ಹಾಲಪ್ಪ ಅವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕ ಹಾಲಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನನಗೆ ಸಂತೋಷವೇ ಆಗುತ್ತದೆ. ಅದನ್ನು ತಪ್ಪಿಸುವಂತಹ ನೀಚತನಕ್ಕೆ ನಾನು ಹೋಗುವುದಿಲ್ಲ. ಹಿಂದೆ ನನಗೆ ಸಚಿವ ಸ್ಥಾನ ಸಿಗಬಹುದಾದ ಸಂದರ್ಭದಲ್ಲಿ ಹಾಲಪ್ಪ ಅಡ್ಡಗಾಲು ಹಾಕಿ ಅದನ್ನು ಕೋಟಾ ಶ್ರೀನಿವಾಸ ಪೂಜಾರಿಗೆ ಕೊಡಿಸಿದ್ದರು. ಈಗ ಇದೇ ಕೋಟಾ ಕಾರಣದಿಂದ ಈಡಿಗ ಕೋಟಾದಡಿ ಸಿಗಬೇಕಾಗಿದ್ದ ಸಚಿವ ಸ್ಥಾನ ಕೋಟಾ ಖಾಲಿಯಾಗಿರುವುದರಿಂದ ಹಾಲಪ್ಪ ಅವರಿಗೆ ಸಿಗುವುದಿಲ್ಲ ಎಂದು ವ್ಯಂಗ್ಯವಾಗಿ ಭವಿಷ್ಯ ನುಡಿದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಈತನಕ ದೂರು ಕೊಟ್ಟರೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಆಗಿಲ್ಲ. ಕಾನೂನು ಸುವ್ಯವಸ್ಥೆ ಕ್ಷೇತ್ರವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟಿದೆ. ಈಗ ನೋಡಿದರೆ ಎಂಡಿಎಫ್‌ನಲ್ಲಿ ಹಲ್ಲೆಯಲ್ಲಿ ತೊಡಗಿಸಿಕೊಂಡವರೇ ಶಾಸಕರ ಕಾರಿನಲ್ಲಿ ತಿರುಗುತ್ತಿದ್ದಾರೆ ಎಂದು ಆರೋಪಿಸಿದ ಬೇಳೂರು, ಹೊಡೆದಾಟಗಳಿಗೆ ವಿಚಾರಣೆಯೇ ಇಲ್ಲ ಎಂದರೆ ಕ್ಷೇತ್ರದಲ್ಲಿ ಇನ್ನು ಮುಂದೆ ಕೈಗಳೇ ಹೆಚ್ಚು ಮಾತನಾಡಬಹುದು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೂ ಈ ವಿಷಯ ತಂದಿದ್ದೆ. ಪರಿಶೀಲಿಸುವ ಭರವಸೆ ಮಾತ್ರ ಸಿಕ್ಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಉದಯವಾಣಿಯಲ್ಲಿ ಕರಾವಳಿಯ ಸಚಿವ ತ್ರಯರು: ಸಾರ್ವಜನಿಕರ ಪ್ರಶ್ನೆಗಳಿಗೆ ಸ್ಪಂದನೆ
ಶಾಸಕ ಹಾಲಪ್ಪ ಅವರ ಬೆನ್ನಿಗೆ ಸಂಘ ಪರಿವಾರವೂ ಇಲ್ಲ, ಬಿಜೆಪಿಯೂ ಇಲ್ಲ. ಕೊನೆಗೂ ಹಾಲಪ್ಪ ಜೊತೆ ಉಳಿದಿರುವುದು ಎಂಕ ಸೀನ ನಾಣಿ ಮಾತ್ರ. ಶಾಸಕರು ಕಮಿಷನ್ ಬಗ್ಗೆ ವ್ಯಾಖ್ಯಾನ ಮಾಡಿ ಪ್ರತಿಸಾರಿ ಶೇ. 21ರಷ್ಟು ಮಾತ್ರ ತೆರಿಗೆ ಸರ್ಕಾರಕ್ಕೆ ಹೋಗುತ್ತದೆ ಎಂದು ಹೇಳುವ ಮೂಲಕ ತಮಗೆ ಶೇ. 19ರಷ್ಟು ಕಮಿಷನ್ ಸಿಗುತ್ತಿರುವುದನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದಾರೆಯೇ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಶಾಸಕರು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದಿಲ್ಲ. ಅವರು ಅಭಿವೃದ್ಧಿ ಎಂದರೆ ಗಣಪತಿ ಕೆರೆ ಒಂದೇ ಎಂದು ಭಾವಿಸಿಕೊಂಡಂತೆ ಕಾಣುತ್ತಿದೆ. ಗಣಪತಿ ಕೆರೆ ಕೆಳಭಾಗದಲ್ಲಿ ಶಾಸಕರ ನಿವೇಶನ ಇರುವುದರಿಂದ ಈ ಪ್ರದೇಶ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿದೆ ಎಂದು ಕಿಡಿಕಾರಿದರು.
ಅಕಾಲಿಕ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಮನೆ ಕುಸಿತ, ಕೊಟ್ಟಿಗೆ ಹಾನಿ, ಫಸಲು ನಷ್ಟದ ಜೊತೆಗೆ ಜಾನುವಾರುಗಳು ಸಿಡಿಲಿನಿಂದ ಮೃತಪಟ್ಟಿದೆ. ಈತನಕ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ರಾಜ್ಯ ಸರ್ಕಾರಕ್ಕೆ ಮತ್ತು ಶಾಸಕರಿಗೆ ಕಣ್ಣುಕಿವಿ ಇಲ್ಲ. ಕಳೆದ ಸಾಲಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಸಾಕಷ್ಟು ಮನೆಗಳು ನೆಲಸಮವಾಗಿತ್ತು. ಸರ್ಕಾರ 5 ಲಕ್ಷ ರೂ. ಪರಿಹಾರ ಕೊಡುವ ಭರವಸೆ ನೀಡಿತ್ತು. ಈತನಕ ಕೇವಲ 94 ಸಾವಿರ ರೂಪಾಯಿ ಬಿಡುಗಡೆಯಾಗಿದ್ದು ಬಿಟ್ಟರೆ ಉಳಿದ ಹಣ ಬಂದಿಲ್ಲ. ಶಾಸಕರು ಬಡವರ ಪರ ಅಲ್ಲ, ರಿಯಲ್ ಎಸ್ಟೇಟ್ ಪರ ಇದ್ದಾರೆ ಎನ್ನುವುದು ಜಗಜ್ಜಾಹಿರವಾಗುತ್ತಿದೆ ಎಂದರು.
ಇದನ್ನೂ ಓದಿ : ರಮ್ಜಾನ್ ಹಬ್ಬ: ಭಟ್ಕಳದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಶಾಂತಿ ಸಭೆ
ನಮ್ಮ ಅವಧಿಯಲ್ಲಿ ಪ್ರತಿವರ್ಷ ಗ್ರಾಮ ಪಂಚಾಯ್ತಿಗೆ 60 ಆಶ್ರಯ ಮನೆ ನೀಡಿದ್ದೇವೆ. ಮೊದಲ ಬಾರಿಗೆ ಶಾಸಕರು ಈ ವರ್ಷ ಗ್ರಾಮ ಪಂಚಾಯ್ತಿಗೆ 30 ಮನೆ ನೀಡಿದ್ದಾರೆ. ಆದರೆ ಮನೆ ಕಟ್ಟಿಕೊಳ್ಳಲು ಹಣ ಬಿಡುಗಡೆಯಾಗಿಲ್ಲ. ಫಲಾನುಭವಿಗಳು ಸರ್ಕಾರದಿಂದ ಹಣ ಬರುತ್ತದೆ ಎಂದು ಅರೆಬರೆ ಮನೆಕಟ್ಟಿಕೊಂಡು ಬಿಸಿಲು ಮಳೆಯಲ್ಲಿ ವಾಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಇರುವಾಗ ಪ್ರಧಾನಿಯವರು ಅಚ್ಛೆದಿನ್ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕದಡುವ ಕೆಲಸ ನಡೆಯುತ್ತಿದೆ. ಎಲ್ಲ ಸಮುದಾಯದವರು ಶಾಂತಿ ಮತ್ತು ಸೌಹಾರ್ದತೆಯಿಂದ ಇರುವ ವಾತಾವರಣ ರಾಜ್ಯ ಸರ್ಕಾರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ನಗರಸಭೆ ವಿಪಕ್ಷ ನಾಯಕ ಮಂಡಗಳಲೆ ಗಣಪತಿ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ಪ್ರಮುಖರಾದ ಸಂತೋಷ್ ಸದ್ಗುರು, ಯಶವಂತ ಪಣಿ, ಡಿ.ದಿನೇಶ್, ತಾರಾಮೂರ್ತಿ, ಅನ್ವರ್ ಭಾಷಾ, ಗಣಾಧೀಶ್ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.