ರೈತನಿಗೆ ದ್ರಾಕ್ಷಿ ಹುಳಿ
ದ್ರಾಕ್ಷಿ ಕೃಷಿ ಕ್ಷೇತ್ರ ಬಡವಾಗುತ್ತಿದೆ
Team Udayavani, May 4, 2022, 11:39 AM IST
ತೆಲಸಂಗ: ಬರದ ನಾಡಿಗೆ ವರವಾಗಿ ಬಂದ ದ್ರಾಕ್ಷಿ ಬೆಳೆ ಇಂದು ರೈತನಿಗೆ ಹುಳಿಯಾಗುತ್ತಿದೆ. ಒಂದೆಡೆ ಬರ, ಹವಾಮಾನ ವೈಪರೀತ್ಯ, ಮತ್ತೂಂದೆಡೆ ಸೂಕ್ತ ಬೆಲೆ ಸಿಗದಿರುವುದಕ್ಕೆ ದ್ರಾಕ್ಷಿ ಕೃಷಿ ಕ್ಷೇತ್ರ ಬಡವಾಗುತ್ತಿದೆ.
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪೂರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಅಭಾವದಿಂದ ಇತ್ತೀಚಿನ ವರ್ಷಗಳಲ್ಲಿ ಹನಿ ನೀರಾವರಿ ಮಾಡಿ ಬೆಳೆಯಬಹುದಾದ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಬೆಳೆ ಬೆಳೆಯಲು ಪ್ರಾರಂಭಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕೊಂದರಲ್ಲಿಯೇ 600 ಹೆಕ್ಟರ್, ಎಂದರೆ ಸುಮಾರು 15 ಸಾವಿರ ಎಕರೆ ಭೂಮಿಯಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಲಾಭದಾಯಕ ವಾಣಿಜ್ಯ ಬೆಳೆಯಾದ ದ್ರಾಕ್ಷಿಯನ್ನು ಇತ್ತೀಚೆಗೆ ಹೆಚ್ಚೆಚ್ಚು ರೈತರು ಬೆಳೆಯುತ್ತಿದ್ದಾರೆ. ಉತ್ತಮ ಬೆಲೆ ಬಂದರೆ ಲಕ್ಷಾಂತರ ರೂ ಲಾಭ ಕೊಡುವ ದ್ರಾಕ್ಷಿಯತ್ತ ರೈತರು ಆಕರ್ಷಿತರಾಗುತ್ತಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಕೋವಿಡ್ ಕಾರಣದಿಂದ ಸೂಕ್ತ ಬೆಲೆ ಇಲ್ಲದ್ದಕ್ಕೆ ದ್ರಾಕ್ಷಿ ಬೆಳೆದ ರೈತ ತತ್ತರಿಸಿ ಹೋಗಿದ್ದಾನೆ. ಸಾಲ ಮಾಡಿ ಚಿಕ್ಕದಾಗಿ ದ್ರಾಕ್ಷಿ ಕೃಷಿ ಪ್ರಾರಂಭಿಸಿದ ಸಾಕಷ್ಟು ರೈತರು ಕೈ ಸುಟ್ಟುಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ 3ಹಂತದಲ್ಲಿ ದ್ರಾಕ್ಷಿ ಬೆಳೆ ನಷ್ಟವಾಗಿದೆ. ಮೊದಲು ಹಂತದ ಬೇಸಿಗೆಯಲ್ಲಿ ಕಡ್ಡಿ ತೆಯಾರಾಗದೆ ಶೇ. 20ರಷ್ಟು, ಎರಡನೇ ಹಂತ ಚಾಟ್ನಿ ಆದ ನಂತರ ಮೊಗ್ಗು, ಹೂವು ಹಂತದಲ್ಲಿ ಮಳೆಯಾಗಿ ಶೇ. 20ರಷ್ಟು, ಮೂರನೇ ಹಂತದಲ್ಲಿ ಕಟಾವ್ ಸಮಯದಲ್ಲಿ ಮತ್ತು ದ್ರಾಕ್ಷಿ ಶೆಡ್‌ನಲ್ಲಿದ್ದಾಗ ಮಳೆ-ಗಾಳಿಗೆ ಶೇ. 40ರಷ್ಟು ಹಾನಿ ಆಗಿದೆ. ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಮತ್ತೆ ತೊಂದರೆ ಆಗುತ್ತಲೇ ಇದೆ. ದ್ರಾಕ್ಷಿಯಿಂದ ಬರಬೇಕಾದ ಆದಾಯಕ್ಕೆ, ಪಟ್ಟ ಶ್ರಮಕ್ಕೆ ಹೊಡೆತ ಬಿದ್ದಿರಬಹುದು. ಆದರೆ ಇವೆಲ್ಲದರ ಮಧ್ಯೆಯೂ ಛಲ ಬಿಡದ ದ್ರಾಕ್ಷಿ ಬೆಳೆಗಾರರು ಯಶಸ್ಸನ್ನು ಕಂಡಿದ್ದಾರೆ. ಒಣ ಬೇಸಾಯ ಮಾಡುತ್ತ, ಬರದ ದವಡೆಯಿಂದ ನಲುಗುತ್ತಿದ್ದವರು, ಲಾಭದ ಸಿಹಿ ಕಹಿ ಅನುಭವಿಸುತ್ತಲೇ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡಿದ್ದಾರೆ.
ಆರಂಭಿಕ ವರ್ಷ 2 ಲಕ್ಷ ಬೇಕು: ಒಂದು ಎಕರೆ ನೆಲದಲ್ಲಿ ದ್ರಾಕ್ಷಿ ಬೆಳೆ ಮಾಡಬೇಕು ಎಂದರೆ ಈಗೀನ ದಿನದಲ್ಲಿ 2 ಲಕ್ಷಕ್ಕೂ ಅಧಿಕ ಹಣ ಸುರಿಯಬೇಕು. ದ್ರಾಕ್ಷಿ ಸಸಿ ತರಿಸಿಕೊಳ್ಳಬೇಕು, ಕುಣಿ ತೆಗೆಸಬೇಕು. ತಂತಿ ಕಂಬ ಹಾಕಿ ಬಿದಿರು ನೆಡಬೇಕು. ಡ್ರಿಪ್ ಮಾಡಿಸಿ, ಕಲಮ್ ಕಟ್ಟಿ, ಗಿಡ ಬೆಳೆಸಬೇಕು. ಪ್ರತಿ ಹಂತದಲ್ಲಿಯೂ ಗೊಬ್ಬರ, ಔಷಧಿ ಕಾಲಕಾಲಕ್ಕೆ ತಪ್ಪದಂತೆ ಕೊಡಬೇಕು. ಹವಾಮಾನಕ್ಕೆ ತಕ್ಕಂತೆ ರಾತ್ರಿ, ಸಂಜೆ, ಬೆಳಗ್ಗೆ ಔಷಧಿ ಸಿಂಪಡಿಸಬೇಕಾಗುತ್ತದೆ. ಬೆಳೆಗ್ಗೆ ಸಿಂಪಡಿಸಿದ್ದರೂ ಹವಾಮನ ಆಧಾರದ ಮೇಲೆ ಮತ್ತೆ ಸಂಜೆಯೂ ಔಷಧಿ ಸಿಂಪರಣೆ ಮಾಡಬೇಕಾಗಿಯೂ ಬರಬಹುದು. ದ್ರಾಕ್ಷಿ ಬೆಳೆ ಎಷ್ಟು ಲಾಭವೋ ಅಷ್ಟೇ ಪ್ರಮಾಣದಲ್ಲಿ ಆರೈಕೆಯೂ ಮುಖ್ಯವಾಗಿದೆ. ವರ್ಷವಿಡಿ ಬೆಳೆಸಿ ಸಾಕಾಗುವಷ್ಟು ಹಣ ಸುರಿದು, ಸ್ವಲ್ಪವೇ ತಪ್ಪಿದರೆ ಅಥವಾ ಹವಾಮಾನ ಕೈಕೊಟ್ಟರೆ ಮತ್ತೂಂದು ವರ್ಷ ಫಲಕ್ಕಾಗಿ ಕಾಯಬೇಕು. ಮತ್ತೇ ವರ್ಷವಿಡಿ ಆರೈಕೆಗೆ ಹಣ ಸುರಿಯಬೇಕು.
ಒಣ ದ್ರಾಕ್ಷಿ ಅನಿವಾರ್ಯ: ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ಹೆಚ್ಚು ದ್ರಾಕ್ಷಿ ಬಂದಾಗ, ತಂಪಾದ ವಾತಾವರಣ ಇದ್ದಾಗ ಮತ್ತು ಅನೇಕ ಸಂದರ್ಭದಲ್ಲಿ ಬೆಲೆ ಕುಸಿಯುತ್ತದೆ. ಹಸಿ ದ್ರಾಕ್ಷಿ ಬೆಲೆ ಕುಸಿದಾಗ ಒಣ ದ್ರಾಕ್ಷಿ ಮಾಡುವುದು ಅನಿವಾರ್ಯವಾಗುತ್ತದೆ. ಅಥಣಿ ಭಾಗದಲ್ಲಿ ಶೇ. 30ರಷ್ಟು ರೈತರು ಒಣ ದ್ರಾಕ್ಷಿ ಮಾಡುತ್ತಾರೆ. ಪ್ರಸಕ್ತ ವರ್ಷ ಮಳೆ-ಗಾಳಿಗೆ ಶೆಡ್‌ನಲ್ಲಿ ದ್ರಾಕ್ಷಿ ತೊಯ್ದು, ತಗಡು ಹಾರಿ, ಟ್ರೆಗಳು ಚೆಲ್ಲಾಪಿಲ್ಲಿಯಾಗಿ, ಪ್ಲಾಸ್ಟಿಕ್ ಹರಿದು ತುಂಬಾ ನಷ್ಟವಾಗಿದೆ. ಹೀಗಿದ್ದರೂ ಹಸಿ ದ್ರಾಕ್ಷಿಗೆ ಬೆಲೆ ಸಿಗದಿದ್ದಾಗ ಒಣ ದ್ರಾಕ್ಷಿ ಮಾಡಿ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ.
10 ವರ್ಷದಿಂದ ಬೆಲೆ ಹೆಚ್ಚಿಲ್ಲ; ಕಳೆದ 10 ವರ್ಷಗಳಿಂದ ಒಣ ಹಾಗೂ ಹಸಿ ದ್ರಾಕ್ಷಿ ಬೆಲೆ ಕೇಜಿಗೆ 25 ರಿಂದ 30 ರೂ. ಇದೆ. ಚೆನ್ನಾಗಿ ಬೆಳೆದ ಬೆರಳೆಣಿಕೆಯಷ್ಟು ರೈತರಿಗೆ 20ರಿಂದ 50ರೂಪಾಯಿವರೆಗೂ ಬೆಲೆ ದೊರೆಯುತ್ತದೆ. ಆದರೆ ದಿನಕ್ಕೆ ನೂರು ರೂಪಾಯಿ ಇದ್ದ ಕೂಲಿ ಈಗ 500-600 ತಲುಪಿದೆ. ಔಷಧಿ, ಗೊಬ್ಬರ ಬೆಲೆ 10ಪಟ್ಟು ಹೆಚ್ಚಿದೆ. ಈ ಮೊದಲು ಎಕರೆಯೊಂದರ ಉಪಚಾರಕ್ಕೆ ವರ್ಷಕ್ಕೆ 70 ಸಾವಿರದಿಂದ 1ಲಕ್ಷ ರೂ. ಸಾಕಾಗುತ್ತಿತ್ತು. ಈಗ 2 ರಿಂದ 3ಲಕ್ಷಕ್ಕೂ ಅಧಿಕ ಹಣ ಸುರಿಯಬೇಕು. ಆದರೆ ದ್ರಾಕ್ಷಿ ಬೆಲೆ ಮಾತ್ರ ಹೆಚ್ಚಿಲ್ಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.
ಮಹಾರಾಷ್ಟ್ರ ಮಾರುಕಟ್ಟೆ ಅನಿವಾರ್ಯ: ಅಥಣಿ ದ್ರಾಕ್ಷಿ ಬೆಳೆಗಾರರಿಗೆ ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿಯೇ ವ್ಯವಹರಿಸಬೇಕಿರುವ ಅನಿವಾರ್ಯತೆ ಇದೆ. 600 ಕೋಟಿಗೂ ಕೋಟಿಗೂ ಅಧಿಕ ವ್ಯವಹಾರ ದ್ರಾಕ್ಷಿ ಬೆಳೆಗಾರರು ಮಹಾರಾಷ್ಟ್ರದ ತಾಸಗಾಂವ ಪಟ್ಟಣದಲ್ಲಿ ಮಾಡುತ್ತಾರೆ ಎಂಬ ಅಂದಾಜಿದೆ. ದ್ರಾಕ್ಷಿ ಬೆಳೆಯುವುದು ಕರ್ನಾಟಕದಲ್ಲಿ. ಆದರೆ ಇದರ ವ್ಯವಹಾರದ ಲಾಭ ಮಾತ್ರ ಮಹಾರಾಷ್ಟ್ರದ ಸರಕಾರಕ್ಕೆ ಮತ್ತು ಅಲ್ಲಿಯ ಜನಕ್ಕೆ ಹೋಗುತ್ತದೆ. ಕಮಿಷನ್ ಎಜೆಂಟರು, ಕೋಲ್ಡ್ ಸ್ಟೋರೆಜ್ ಬಾಡಿಗೆದಾರರು ಕೋಟ್ಯಾಧಿಪತಿಗಳಾಗಿದ್ದು ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರಿಂದ. ಆದರೆ ಅಥಣಿ ಅಥವಾ ಕರ್ನಾಟಕದಲ್ಲಿ ಸೌಲಭ್ಯಗಳಿಲ್ಲದ್ದರಿಂದ ಮಹಾರಾಷ್ಟ್ರದ ಮಾರುಕಟ್ಟೆ ವ್ಯವಹಾರ ಇಲ್ಲಿಯ ರೈತರಿಗೆ ಅನಿವಾರ್ಯವಾಗಿದೆ.
ವರದಾನವಾಗಿದೆ ಸಮೂಹ ಸೌಲಭ್ಯ ಕೇಂದ್ರ: 20 ಕೋಟಿ ವೆಚ್ಚದಲ್ಲಿ ಮಾಜಿ ಶಾಸಕ ಶಹಜಾನ ಡೊಂಗರಗಾಂವ ನೇತೃತ್ವದಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ನೆರವಿನಿಂದ ಅಥಣಿ ರೈಸಿನ್ ಪ್ರೊಸಸಿಂಗ್ ಕ್ಲಸ್ಟರ್ ಅಸೋಸಿಯೇಷನ್ ಹೆಸರಿನಲ್ಲಿ ಸಮೂಹ ಸೌಲಭ್ಯ ಕೇಂದ್ರವನ್ನು ತೆರೆಯಲಾಗಿದೆ. 2019ರಿಂದ ಇದು ದ್ರಾಕ್ಷಿ ಬೆಳೆಗಾರರಿಗೆ ಹಸಿ ದ್ರಾಕ್ಷಿ ಒಣಗಿಸುವ ಶೆಡ್ ಗಳು, ಒಣಗಿದ ದ್ರಾಕ್ಷಿ ಕ್ಲೀನಿಂಗ್, ವಾಷಿಂಗ್, ಟ್ರೇಡಿಂಗ್, ಸಾರ್ಟಿಂಗ್, ಗಂಧಕೀಕರಣ ಹೀಗೆ ಎಲ್ಲ ಪ್ರಕಾರದ ಸಂಸ್ಕರಣೆ ಮಾಡಿ, ಪ್ಯಾಕಿಂಗ್ ಮಾಡಿ ಶೀತಲ ಗ್ರಹದಲ್ಲಿಟ್ಟು ಮಾರಾಟ ಮಾಡಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ತಾಲೂಕಿನ ಐನೂರು ರೈತರು ಇದರ ಪ್ರಯೋಜನ ಪಡೆಯುತ್ತಿದ್ದು, ಪ್ರಮಾನ ಚಿಕ್ಕದಿದ್ದರೂ ಅನೇಕ ರೈತರಿಗೆ ವರದಾನವಾಗಿದೆ.
ಪ್ರಸಕ್ತ ವರ್ಷ ರೈತರಿಗೆ ಹವಾಮಾನ ವೈಪರಿತ್ಯ ತೊಂದರೆ ತಂದೊಡ್ಡುತ್ತಿದೆ. ಒಣ ದ್ರಾಕ್ಷಿ ತೋಯ್ದು ತೊಂದರೆ ಆಗಿದ್ದು ಪ್ರತ್ಯಕ್ಷ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. –ಮಹೇಶ ಕುಮಠಳ್ಳಿ, ಶಾಸಕರು-ಅಥಣಿ
ಈ ಭಾಗದ ರೈತರಿಗೆ ತೊಂದರೆ ಆದಾಗಲೆಲ್ಲ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಅವರು ವಿಮೆ ಮತ್ತು ಪರಿಹಾರ ಕೊಡಿಸಿದ್ದಾರೆ. ಸದ್ಯಕ್ಕೆ ದ್ರಾಕ್ಷಿ ಬೆಳೆ ಮಾತ್ರವಲ್ಲದೆ ನಷ್ಟವಾಗಿರುವ ಪ್ರತಿಯೊಂದು ಬೆಳೆಗೂ ಸೂಕ್ತ ಪರಿಹಾರ ಕೊಡಿಸಲು ನಮ್ಮ ತಂದೆಯವರ ಮೂಲಕ ಸರಕಾರಕ್ಕೆ ಮನವರಿಕೆ ಮಾಡಿಕೊಡುವೆವು. –ಚಿದಾನಂದ ಸವದಿ, ಬಿಜೆಪಿ ಯುವ ಮುಖಂಡ
ಎಕರೆಗೆ 2ರಿಂದ 3 ಲಕ್ಷ ಖರ್ಚು ಮಾಡಿರುವ ರೈತರಿಗೆ ಅಲ್ಪ ಮೊತ್ತದ ಪರಿಹಾರ ಏನೂ ಸಾಕಾಗಲಾರದು. ಸಾಲದ ದವಡೆಯಿಂದ ರೈತ ಹೊರಬರಲು ಹವಾಮಾನ ಕೈ ಹಿಡಿಯುತ್ತಿಲ್ಲ. ಸರಕಾರ ಕೈ ಹಿಡಿದರೆ ಮಾತ್ರ ರೈತನನ್ನು ಬದುಕಿಸಿಕೊಳ್ಳಲು ಸಾಧ್ಯವಿದೆ. –ಶಹಜಾನ ಡೊಂಗರಗಾಂವ. ಮಾಜಿ ಶಾಸಕರು, ಅಥಣಿ.
ಎಲ್ಲ ಹಂತದಲ್ಲಿಯೂ ರೈತರೊಂದಿಗೆ ಇದ್ದು ಕೆಲಸ ಮಾಡಿದ್ದೇವೆ. ಪ್ರತಿ ಹಂತದಲ್ಲಿನ ವರದಿಯನ್ನು ಸರಕಾರಕ್ಕೆ ತಲುಪಿಸುವ ಕೆಲಸ ಮಾಡಿದ್ದೇವೆ. ಅಕಾಲಿಕ ಮಳೆ ಕೆಲ ರೈತರಿಗೆ ನಷ್ಟ ಮಾಡಿದ್ದು, ತೋಟಗಳಿಗೆ ಬೇಟಿ ನೀಡಿ ಖುದ್ದು ವರದಿ ಪಡೆದಿದ್ದೇವೆ. –ಶ್ವೇತಾ ಹಾಡಕರ್. ತೋಟಗಾರಿಕಾ ನಿರ್ದೇಶಕರು, ಅಥಣಿ.
–ಜೆ.ಎಮ್.ಖೊಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.