ಬಾದಾಮಿಯಲ್ಲಿ ಸಿದ್ದು ಸ್ಪರ್ಧೆಗೆ ವಿರೋಧದ ಕೂಗು?
Team Udayavani, May 5, 2022, 6:10 AM IST
ಬಾಗಲಕೋಟೆ: ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಸದ್ಯ ಆಡಳಿತ ಪಕ್ಷ ಬಿಜೆಪಿಯಲ್ಲಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಹಾಗೂ ಆಮ್ ಆದ್ಮಿ ಪಕ್ಷ ಕೂಡ ಈ ಬಾರಿ ಜಿಲ್ಲೆಯ ಒಂದು ಕ್ಷೇತ್ರದಲ್ಲಾದರೂ ಖಾತೆ ತೆರೆಯಬೇಕೆಂಬ ತವಕದಲ್ಲಿ ಸಂಘಟನೆಯಲ್ಲಿ ತೊಡಗಿವೆ.
ಜಿಲ್ಲೆಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದು, ಅದರಲ್ಲಿ ಬಾದಾಮಿ, ಜಮಖಂಡಿ ಕ್ಷೇತ್ರಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಉಳಿದ 5 ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಎರಡು ಕ್ಷೇತ್ರ ಪ್ರತಿನಿಧಿಸುವ ಮುಧೋಳದ ಗೋವಿಂದ ಕಾರಜೋಳ, ಬೀಳಗಿಯ ಮುರುಗೇಶ ನಿರಾಣಿ ಸರ್ಕಾರ ದಲ್ಲಿ ಪ್ರಬಲ ಖಾತೆ ಸಚಿವರೂ ಆಗಿದ್ದಾರೆ. ಹಿರಿಯ ರಾಜಕಾರಣಿ ಎಸ್.ಆರ್.ಪಾಟೀಲ್‌ಗೆ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ್ದೇ ತಡ ಅವರೀಗ ಕಾಂಗ್ರೆಸ್‌ನ ರಾಜ್ಯ ಮಟ್ಟದ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅದರಲ್ಲೂ ಜಿಲ್ಲೆ ಪ್ರತಿನಿಧಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗಿನ ಅವರ ಸಂಬಂಧ ಕೊಂಚ ಹಳಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಪ್ರಭಾವಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರುಗೇಶ ನಿರಾಣಿ ಅವರದೇ ಪ್ರತ್ಯೇಕ ಬೆಂಬಲಿಗರ ಪಡೆ ಇದೆ. ಬಿಜೆಪಿ ಶಾಸಕರಲ್ಲೂ ಎರಡೂ ಗುಂಪುಗಳಿದ್ದು, ಅಸಮಾಧಾನದ ವಿಷಯದಲ್ಲಿ ಕಾಂಗ್ರೆಸ್ಸಿಗೇನೂ ಬಿಜೆಪಿ ಕಮ್ಮಿ ಇಲ್ಲ.
ಬಾಗಲಕೋಟೆಯಲ್ಲಿ 3ನೇ ಶಕ್ತಿ! ಇಲ್ಲಿ ಹಾಲಿ ಶಾಸಕ ವೀರಣ್ಣ ಚರಂತಿ ಮಠ ಮತ್ತು ಕಾಂಗ್ರೆಸ್‌ನ ಮಾಜಿ ಸಚಿವ ಎಚ್.ವೈ.ಮೇಟಿ ಅವರಿಬ್ಬರಿಗೂ ಎದುರಾಗಿ ಪ್ರತ್ಯೇಕ ಗುಂಪು ಹುಟ್ಟಿಕೊಂಡಿದೆ. ಇದಕ್ಕೆ ಬಿಜೆಪಿಯ ಯುವ ಧುರೀಣ ಮಲ್ಲಿಕಾರ್ಜುನ ಚರಂತಿಮಠ ನಾಯಕತ್ವ ವಹಿಸಿದ್ದು, ಕ್ಷೇತ್ರದಲ್ಲಿ ತಮ್ಮದೇ ರೀತಿಯ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ಬಾರಿ ಅವರೂ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಗುಲ್ಲು ಜೋರಾಗಿದೆ.
ಬಾದಾಮಿಗೆ ಯಾರು?: ಪುನಃ ಸಿದ್ದರಾಮಯ್ಯ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲ್ಲುತ್ತಾರೆ ಎಂಬ ಸಮೀಕ್ಷೆ ಒಂದೆಡೆ ಇದ್ದರೆ ಅವರನ್ನು ವಿರೋಧಿಸಲು ಕಾಂಗ್ರೆಸ್‌ನಲ್ಲೇ ಒಂದು ಗುಂಪು ಸಿದ್ಧಗೊಂಡಿದೆ. ಹೀಗಾಗಿ ಮರಳಿ ಅವರು ಇಲ್ಲಿಂದಲೇ ಸ್ಪರ್ಧಿಸುವುದು ಅನುಮಾನ ಎನ್ನಲಾ ಗಿದೆ. ಸಿದ್ದು ಒಲ್ಲೆ ಅಂದರೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮನಸೇನ ಚಿಮ್ಮನಕಟ್ಟಿ ಸಹಿತ 12ಕ್ಕೂ ಹೆಚ್ಚು ಜನ ಟಿಕೆಟ್ ಪೈಪೋಟಿಯಲ್ಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪುರ, ಕುಮಾರಗೌಡ ಜನಾಲಿ, ಎಂ.ಕೆ. ಪಟ್ಟಣಶೆಟ್ಟಿ, ರಾಜ ಶೇಖರ ಶೀಲವಂತ ಹೀಗೆ ಹಲವರು ಬಿಜೆಪಿಯಿಂದ ಬಾದಾಮಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.
ಹುನಗುಂದ: ಹುನಗುಂದ ಕ್ಷೇತ್ರದಲ್ಲಿ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಧ್ಯೆ ಸ್ಪರ್ಧೆ ಇದ್ದೇ ಇದೆ. ಇವರಿಬ್ಬರ ಮಧ್ಯೆ ಎಸ್.ಆರ್. ನವಲಿಹಿರೇಮಠ ಕೂಡ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆಂಬ ಕುತೂಹಲ ಕ್ಷೇತ್ರದ ಜನರಲ್ಲಿದೆ.
ಬೀಳಗಿಯಲ್ಲಿ ನಿರಾಣಿ: ಸಚಿವ ಮುರುಗೇಶ ನಿರಾಣಿ ಈ ಬಾರಿಯೂ ಬೀಳಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನಿಶ್ಚಿತ. ಆದರೆ, ಜಮಖಂಡಿ ಕ್ಷೇತ್ರದ ಮೇಲೂ ಒಂದು ಕಣ್ಣಿಟ್ಟಿದ್ದಾರೆ ಎಂಬ ಮಾತಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಟಿ.ಪಾಟೀಲ, ಬಸವಪ್ರಭು ಸರನಾಡಗೌಡ ಹಾಗೂ ಎಂ.ಎನ್.ಪಾಟೀಲ ಹೆಸರು ಕೇಳಿ ಬರುತ್ತಿವೆ. ಹಳೆ ಹುಲಿಗಳ ಮಧ್ಯೆ ಕಾಳಗ ಏರ್ಪಟ್ಟರೆ, ಬಸವಪ್ರಭು ಸರನಾಡಗೌಡರ ನಡೆ ಏನಿರುತ್ತದೆ ಎಂಬ ಕುತೂಹಲವೂ ಪಕ್ಷದಲ್ಲಿದೆ.
ಮುಧೋಳದಲ್ಲಿ ಕಾರಜೋಳ: ಕಾರಜೋಳ ಪ್ರತಿನಿಧಿಸುತ್ತಿರುವ ಮುಧೋಳಕ್ಕೆ ಈ ಬಾರಿ ಅವರ ಪುತ್ರ ಅರುಣ ಕಾರಜೋಳ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ದಟ್ಟವಾಗಿದೆ. ಬಿಜೆಪಿಯಲ್ಲಿ ಕಾರಜೋಳ ಇಲ್ಲವೇ ಅವರ ಪುತ್ರ ಮಾತ್ರ ಸ್ಪರ್ಧೆ ಮಾಡ್ತಾರೆಂಬ ಮಾತಿದೆ. ಕಾಂಗ್ರೆಸ್ಸಿನ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಮುಖಂಡ ಸತೀಶ ಬಂಡಿವಡ್ಡರ ಮಧ್ಯೆ ಟಿಕೆಟ್‌ಗೆ ಪೈಪೋಟಿ ಇದೆ. ಈ ಬಾರಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಹೋರಾಟದ ಬಿಸಿ ಕಾರಜೋಳರಿಗೆ ತಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಮಖಂಡಿಗೆ ಆನಂದ: ಕಾಂಗ್ರೆಸ್‌ನಿಂದ ಆನಂದ ನ್ಯಾಮಗೌಡರ ಸ್ಪರ್ಧೆ ಸಾಧ್ಯತೆ ಇದೆ. ಪಕ್ಷದಲ್ಲಿ ಇನ್ನಿಬ್ಬರು ಟಿಕೆಟ್ ಕೇಳುತ್ತಿದ್ದಾರಾದರೂ, ತಾವಾಯಿತು, ತಮ್ಮ ಕ್ಷೇತ್ರದ ಕೆಲಸ ವಾಯಿತು ಎಂಬ ಮನಸ್ಥಿತಿಯ ನ್ಯಾಮಗೌಡರಿಗೆ ಪಕ್ಷದಲ್ಲೂ ಉತ್ತಮ ಹೆಸರಿದೆ. ಬಿಜೆಪಿ ಯಿಂದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ 2013ರಿಂದ ನಿರಂತರ ಸೋಲು ಅನುಭವಿಸಿದ್ದಾರೆ. ಉದ್ಯಮಿಗಳಾದ ಸಂಗಮೇಶ ನಿರಾಣಿ, ಜಗದೀಶ ಗುಡಗುಂಟಿ, ಏಗಪ್ಪ ಸವದಿ ಹೀಗೆ ಹಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
– ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.