ಸೂರಿಲ್ಲದವರಿಗೆ ಮಾದರಿ ಸಮುಚ್ಛಯ
ಪುರಸಭೆ ವ್ಯಾಪ್ತಿಯಲ್ಲಿ ಜಿ- ಪ್ಲಸ್ ಮಾದರಿ ಮನೆ, ಮೇ 8ಕ್ಕೆ ಭೂಮಿಪೂಜೆ
Team Udayavani, May 5, 2022, 11:05 AM IST
ಕಾರ್ಕಳ: ಬಡವರಿಗೆ ಸೂರು ಕಲ್ಪಿಸಲು ಸರಕಾರ ನಾನಾ ಯೋಜನೆಗಳನ್ನು ತಂದರೂ ಇನ್ನು ಸೂರಿಲ್ಲದೆ ಅನೇಕ ಮಂದಿ ಇದ್ದಾರೆ. ಕಾರ್ಕಳ ಪುರಸಭೆ ಜಿ-ಪ್ಲಸ್ ಮಾದರಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಮೇ 8ಕ್ಕೆ ಮಾದರಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ.
ಪುರಸಭೆ ವ್ಯಾಪ್ತಿಯ 16 ಕೋ.ರೂ. ಅಂದಾಜು ಪಟ್ಟಿಯಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಪತ್ತೂಂಜಿಕಟ್ಟೆಯಲ್ಲಿ ಗೊತ್ತುಪಡಿಸಿದ ಆರು ಎಕರೆ ಜಾಗದಲ್ಲಿ ಸಮುಚ್ಛಯ ನಿರ್ಮಾಣವಾಗಲಿದೆ. ಮೇ 8ಕ್ಕೆ ಸಮುತ್ಛಯ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿಪೂಜೆಗೆ ದಿನ ನಿಗದಿಪಡಿಸಲಾಗಿದೆ.
ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡ ನಿವೇಶನ ರಹಿತರಿಗಾಗಿ ಮನೆ ನಿರ್ಮಾಣವಾಗಲಿದೆ. ಆರಂಭದಲ್ಲಿ ಸುಮಾರು ಆರು ಎಕರೆ ವಿಸ್ತೀರ್ಣ ಜಾಗದಲ್ಲಿ 250 ಮನೆಗಳು ನಿರ್ಮಾಣವಾಗಲಿವೆ. ಹಲವು ವರ್ಷಗಳ ಹಿಂದೆಯೇ ಜಾಗ ಗುರುತಿಸಲಾಗಿತ್ತಾದರೂ ಈ ಪ್ರದೇಶಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಿರಲಿಲ್ಲ. ಈಗ ಅಲ್ಲಿಗೆ ಮೂಲ ಸೌಕರ್ಯ ಒದಗಿಸಿ ವ್ಯವಸ್ಥಿತವಾಗಿ ಮನೆಗಳ ನಿರ್ಮಾಣವಾಗಲಿದೆ.
ಸುಮಾರು 358 ಚದರಡಿ ವಿಸ್ತೀರ್ಣದ ಒಂದು ಮನೆ ನಿರ್ಮಾಣಕ್ಕೆ 6,44,378 ರೂ. ವೆಚ್ಚ ತಗಲಲಿದೆ. ಅದರಲ್ಲಿ ಪರಿಶಿಷ್ಟ ಜಾತಿ-ಪಂಗಡಗಳವರಿಗೆ ಕೇಂದ್ರ ಸರಕಾರದಿಂದ 1.5 ಲಕ್ಷ ರೂ., ರಾಜ್ಯ ಸರಕಾರದಿಂದ 2 ಲಕ್ಷ ರೂ. ಸಹಾಯಧನ ಸಿಗಲಿದೆ. ಉಳಿದ ಮೊತ್ತವನ್ನು ಆರ್ಹ ಫಲಾನುಭವಿಗಳು ಭರಿಸಬೇಕು. ಅದಕ್ಕೆ ಅಗತ್ಯ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಒದಗಿಸಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಲವನ್ನು ಪ್ರತೀ ತಿಂಗಳು ಮರುಪಾವತಿಸಿ, ಸಾಲ ಮರುಪೂರಣಗೊಳಿಸಿದ ಬಳಿಕವಷ್ಟೇ ಆ ಮನೆ ವಾರಸುದಾರರ ಪಾಲಿಗೆ ಸೇರಲಿದೆ. ಅಲ್ಲಿಯ ತನಕ ನಿರ್ಮಾಣವಾದ ಮನೆಯಲ್ಲಿ ವಾಸಕ್ಕೆ ದೊರಕಲಿದೆ.
ನಿವೇಶನಕ್ಕೆ ಸಂಬಂಧಿಸಿ ಶೇ. 10ರ ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಸಾಮಾನ್ಯ ವರ್ಗಕ್ಕೂ ಇದರಲ್ಲಿ ಸವಲತ್ತು ಪಡೆಯಲು ಅವಕಾಶವಿದೆ. ಫಲಾನುಭವಿಗಳಿಗೆ ಕೇಂದ್ರ ಸರಕಾರದಿಂದ 1.50 ಲಕ್ಷ ರೂ., ರಾಜ್ಯದಿಂದ 1.20 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ ಮೊತ್ತವನ್ನು ರಾಷ್ಟ್ರೀಯ ಬ್ಯಾಂಕ್ ಮೂಲಕ ಸಾಲ ರೂಪದಲ್ಲಿ ಪಡೆಯಲು ಅವಕಾಶವಿರುತ್ತದೆ. ಸಾಮಾನ್ಯ ವರ್ಗದ ಅಪೇಕ್ಷಿತರು ಶೇ. 15ರ ಮೊತ್ತವನ್ನು ಮುಂಗಡ ರೂಪದಲ್ಲಿ ಪಾವತಿಸಬೇಕಾಗುತ್ತದೆ.
ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 9 ಕಡೆ ಸ್ಲಂ ಏರಿಯಾಗಳಿವೆ. ಬಂಗ್ಲೆಗುಡ್ಡೆ ನರ್ಸಿಂಗ್ ಹೋಂ ಹಿಂಭಾಗ, ಬಂಗ್ಲೆಗುಡ್ಡೆ, ಐತಕಟ್ಟೆ, ಬಂಡಿಮಠ, ರಣವೀರ ಕಾಲನಿ, ಮರಿಣಾಪುರ, ಬೊಬ್ಬಳ ಕಾಲನಿ, ದಾನಶಾಲೆ, ಹವಾಲ್ದಾರಬೆಟ್ಟು ಸೇರಿ 9 ಕಡೆ ಕೊಳಚೆಗೇರಿ ಪ್ರದೇಶಗಳನ್ನು ಗುರುತಿಸಲಾಗಿದೆ.
ಪುರಸಭೆ ಗುರುತಿಸಲಾದ ಇತರೆಡೆಗಳಲ್ಲಿ ಅನುಷ್ಠಾನ ಗೊಳಿಸುವ ಚಿಂತನೆ ಆರಂಭದಲ್ಲಿ ಇತ್ತಾದರೂ ಅದಕ್ಕೆ ಪೂರಕ ಸಕಾರಾತ್ಮಕ ಸ್ಪಂದನೆ ಸಿಗದೆ ಹೋದುದರಿಂದ ಪತ್ತೂಂಜಿಕಟ್ಟೆ ಪರಿಸರದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಚಿಂತನೆ ಈಗ ಮಾಡಲಾಗಿದೆ. ವಸತಿ ಸಮುಚ್ಛಯ ನೆಲೆಯಲ್ಲಿ ಈ ಯೋಜನೆ ಕಾರ್ಯಗತಗೊಂಡರೆ ಅದಕ್ಕೆ ತಗಲುವ ವೆಚ್ಚ ಹೆಚ್ಚಳಗೊಳ್ಳಲಿದೆ. ಕೇಂದ್ರ, ರಾಜ್ಯ ಸರಕಾರ ಈ ಹಿಂದೆ ನಿಗದಿಪಡಿಸಿದ ಸಹಾಯಧನ ಫಲಾನುಭವಿಗಳಿಗೆ ದೊರಕಲಿದ್ದು ಉಳಿದ ಮೊತ್ತ ಬ್ಯಾಂಕ್‌ನಿಂದ ಸಾಲ ರೂಪದಲ್ಲಿ ಪಡೆಯಬೇಕು.
ಕಾಲ ಕೂಡಿ ಬಂದಿದೆ
ಸರಕಾರದ ಜನಪರ ಯೋಜನೆಯಿದು. ಸಮುಚ್ಛಯ ನಿರ್ಮಾಣಕ್ಕೆ ಸಂಬಂಧಿಸಿ ಈ ಹಿಂದೆ ಪ್ರಕ್ರಿಯೆ ನಡೆದಿದ್ದರೂ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಆರ್ಹ ನಿವೇಶನ ರಹಿತರಿಗೆ ಅನುಕೂಲವಾಗಲಿದೆ. ಸಚಿವರು ಶೀಘ್ರದಲ್ಲೇ ಭೂಮಿ ಪೂಜೆ ನಡೆಸುವರು. -ಸುಮಾಕೇಶವ್, ಅಧ್ಯಕ್ಷೆ, ಪುರಸಭೆ ಕಾರ್ಕಳ
ಅರ್ಜಿಗಳ ಪರಿಶೀಲನೆ
ಪುರಸಭೆ ವ್ಯಾಪ್ತಿಯಲ್ಲಿ 9 ಕೊಳಚಗೇರಿ ಸ್ಥಳ ಗುರುತಿಸಲಾಗಿದೆ. ವಸತಿರಹಿತರ ಪಟ್ಟಿ ಸಿದ್ಧಪಡಿಸಲಾಗಿದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಅವರಲ್ಲಿ ಅರ್ಹರನ್ನು ಅಂತಿಮಗೊಳಿಸಲಾಗುವುದು. -ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.