ಹಲ್ಲುಜ್ಜುವ ಅನುಭವವನ್ನು ಆನಂದದಾಯಕವಾಗಿಸುವುದು ಹೇಗೆ?
Team Udayavani, May 9, 2022, 8:15 AM IST
ಸರಳವಾಗಿ ಹೇಳಬೇಕೆಂದರೆ, ಧ್ಯಾನವು ಅರಿವು ಮತ್ತು ಸಹಾನುಭೂತಿಗಳನ್ನು ನಿಯಂತ್ರಿತ ಪರಿಸರದಲ್ಲಿ ಅನುಭವಕ್ಕೆ ತರುವುದು. ನಾವು ಕಣ್ಣು ಮುಚ್ಚಿಕೊಂಡು ಕುಳಿತು ನಮ್ಮ ಏಕಾಗ್ರತೆಯನ್ನು ನಮ್ಮ ಉಸಿರಾಟದ ಕಡೆಗೆ ಅಥವಾ ದೀಪಜ್ವಾಲೆಯಂತಹ ಒಂದು ದೃಶ್ಯದ ಕಡೆಗೆ ನೆಟ್ಟಾಗ ನಾವು ಆ ಅರಿವನ್ನು ಸ್ಥಿರಗೊಳಿಸಲು ಪಳಗಿಸುತ್ತೇವೆ. ನಾವು ಮನಸ್ಸಿನ ಮೂಲಕ ಇದನ್ನು ನಡೆಸಿದಾಗ ನಾವು ಪ್ರತಿಯೊಂದು ಕ್ಷಣದ ಬಗ್ಗೆ ಅರಿವನ್ನು ಹೊಂದುತ್ತೇವೆ.
ಇದನ್ನು ಹೀಗೆಯೇ ಹೇಳಿದರೆ ಆಚರಣೆಗೆ ತರುವುದು ಬಹಳ ಕಠಿನ ಎನ್ನಿಸಬಹುದು. ಆದರೆ ಇದೇ ತಂತ್ರವನ್ನು ನಾವು ನಮ್ಮ ದೈನಂದಿನ ಕೆಲವು ಚಟುವಟಿಕೆಗಳಿಗೂ ಅನ್ವಯಿಸಬಹುದು. ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಎಂದರೆ ಇದೇ. ನಾವು ಯಾವ ಕ್ಷಣದಲ್ಲಿ ಏನನ್ನು ಮಾಡುತ್ತಿದ್ದೇವೆಯೋ ಅದರಲ್ಲಿ ಸಂಪೂರ್ಣವಾಗಿ, ನೂರಕ್ಕೆ ನೂರರಷ್ಟು ತೊಡಗಿಸಿಕೊಳ್ಳುವುದು. ಇದರರ್ಥ ದಿನದ ಇಪ್ಪತ್ತನಾಲ್ಕು ತಾಸು, ವಾರದ ಏಳು ದಿನ ಸಕ್ರಿಯವಾಗಿ ಇರುವುದು ಎಂದರ್ಥವಲ್ಲ – ಮರ್ಕಟದಂತಹ ನಮ್ಮ ಮನಸ್ಸು ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಸಕ್ರಿಯವಾಗಿರುತ್ತದೆ. ಆದರೆ ನಾವು ಪ್ರಜ್ಞಾಪೂರ್ವಕವಾಗಿ ಎಚ್ಚರದಿಂದಿರುವ ನಿರ್ದಿಷ್ಟ ಉದ್ದೇಶದಿಂದ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬುದು ಇದರ ಅರ್ಥ.
ಉದಾಹರಣೆಗೆ, ಹಲ್ಲುಜ್ಜುವ ಚಟುವಟಿಕೆಯಿಂದ ಇದನ್ನು ಆರಂಭಿಸಬಹುದು. ನಾವೆಲ್ಲರೂ ಪ್ರತೀ ದಿನ ನಡೆಸುವ ಚಟುವಟಿಕೆಗಳಲ್ಲಿ ಇದು ಒಂದು. ಪ್ರಾಯಃ ಅನೇಕರು ಯಾಂತ್ರಿಕವಾಗಿ ಇದನ್ನು ನಡೆಸಬಹುದು. ಕೆಲವೊಮ್ಮೆ ಇದು ಬಹಳ ಉದಾಸೀನತೆಯ, ಬೋರ್ ಹೊಡೆಸುವ ಚಟುವಟಿಕೆಯಾಗಿಯೂ ಕಾಣಿಸಬಹುದು. ಇದರಿಂದಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಇದನ್ನು ಮುಗಿಸಿ ಮುಂದಿನ ಕೆಲಸಕ್ಕೆ ಹೊರಡುವ ತರಾತುರಿಯೂ ನಮ್ಮಲ್ಲಿ ಇರಬಹುದು. ಆದರೆ ಹಲ್ಲುಜ್ಜುವ ಚಟುವಟಿಕೆಯನ್ನೂ ಸಂಪೂರ್ಣ ಅರಿವಿನೊಂದಿಗೆ, ಮನಸ್ಸಿನ ಏಕಾಗ್ರತೆಯೊಂದಿಗೆ ಆಚರಿಸುವ ಸಾಧ್ಯತೆ ನಮ್ಮ ಮುಂದೆ ಇದೆ. ಪ್ರತೀ ದಿನ ಬೆಳಗ್ಗೆ ಎದ್ದು ಯಾವುದೋ ಯೋಚನೆಯಲ್ಲಿ ಕಳೆದುಹೋಗಿರುತ್ತ ಹಲ್ಲುಜ್ಜುವುದಕ್ಕಾಗಿ ಸ್ನಾನಗೃಹದತ್ತ ತೆರಳುವ ಬದಲು ಪ್ರತೀ ಬಾರಿ ಮನಸ್ಸು ಎಲ್ಲೆಲ್ಲೋ ಸುತ್ತಾಡಲು ಹೊರಟಾಗ ನಿಮ್ಮ ಮನಸ್ಸನ್ನು ಹಲ್ಲುಜ್ಜುವ ಕ್ರಿಯೆಯತ್ತ ಎಳೆದು ತನ್ನಿ. ನೀವು ಏನನ್ನು ನೋಡುತ್ತಿದ್ದೀರಿ, ಏನನ್ನು ಕೇಳುತ್ತಿದ್ದೀರಿ, ನೀವು ಹಾಕಿಕೊಂಡಿರುವ ಟೂತ್‌ಪೇಸ್ಟ್‌ನ ಬಣ್ಣ ಯಾವುದು, ಅದರ ಸುವಾಸನೆ ಹೇಗಿದೆ ಎಂಬುದನ್ನೆಲ್ಲ ಪ್ರತೀ ಕ್ಷಣ ಅನುಭವಿಸಿ.
ಇದರ ಬಗ್ಗೆ ನೀವು ಬಹಳ ಯೋಚನೆ ಮಾಡಬೇಕಾಗಿಲ್ಲ; ಕಷ್ಟ ಪಡಬೇಕಾಗಿಲ್ಲ; ನೀವು ಯಾವುದರಲ್ಲಿ ತೊಡಗಿದ್ದೀರೋ ಅದರ ಬಗ್ಗೆ ಸಂಪೂರ್ಣವಾಗಿ ಅರಿವನ್ನು ಹೊಂದಿದ್ದು, ಅನುಭವಿಸುತ್ತ ನಡೆಸುವುದು ಇದು.
ಮುಂದಕ್ಕೆ ನೀವು ಹಲ್ಲುಜ್ಜಲು ಆರಂಭಿಸಿದಾಗ ಮನಸ್ಸನ್ನು ಅದರತ್ತ ಕೇಂದ್ರೀಕರಿಸಿ, ಧ್ಯಾನ ಮಾಡುವ ಸಂದರ್ಭದಲ್ಲಿ ಉಸಿರಾಟದತ್ತ ಮನಸ್ಸನ್ನು ಕೇಂದ್ರೀಕರಿಸುವ ಹಾಗೆಯೇ ಹಲ್ಲುಜ್ಜುವ ಕ್ರಿಯೆಯತ್ತ ಮನಸ್ಸನ್ನು ಕೇಂದ್ರೀಕರಿಸಿ. ಬ್ರಶ್ ಹಲ್ಲುಗಳ ಹಿಂದೆ ಮುಂದೆ ಸರಿಯುವುದನ್ನು, ಒಂದು ಲಯದಲ್ಲಿ ನಿಮ್ಮ ಕೈ ಬ್ರಶ್ಶನ್ನು ಹಿಂದೆ ಮುಂದೆ ಆಡಿಸುವುದನ್ನು ಏಕಾಗ್ರತೆಯಿಂದ ಗಮನಿಸಿ. ಟೂತ್‌ಬ್ರಶ್ ಹಲ್ಲುಗಳಿಗೆ ಉಜ್ಜುವಾಗ ಆಗುವ ಸದ್ದನ್ನು ಗಮನಿಸಿ.
ಬ್ರಶ್‌ನ ಕೂದಲುಗಳು ನಿಮ್ಮ ವಸಡು, ಹಲ್ಲುಗಳಿಗೆ ಉಜ್ಜುವುದನ್ನು ಏಕಾಗ್ರವಾಗಿ ಗಮನಿಸಿ. ಮೊದಮೊದಲು ಇದು ಬಹಳ ಕ್ಷುಲ್ಲಕ ವಿಚಾರ ಎನ್ನಿಸಬಹುದು. ಆದರೆ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನದಂತಹ ಅನುಭವವನ್ನು ಪಡೆಯಲು ಹಲ್ಲುಜ್ಜುವ ಕ್ರಿಯೆಯು ಬಹಳ ಉತ್ತಮವಾದ ಒಂದು ಅವಕಾಶ. ಹಲ್ಲುಜ್ಜುವ ಕ್ರಿಯೆಯ ಪುನರಾವರ್ತನೆಯ ಸ್ವಭಾವವೇ ಇದಕ್ಕೆ ಕಾರಣ. ಧ್ಯಾನದ ಹಾಗೆಯೇ ಹಲ್ಲುಜ್ಜುವ ಕ್ರಿಯೆ ಕೂಡ ಗಮನವನ್ನು ಏಕಾಗ್ರಗೊಳಿಸಲು ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಡುತ್ತದೆ.
ನಾವು ಪುನರಾವರ್ತಿತವಾಗಿ, ಪದೇಪದೆ ಮಾಡುವ ಚಟುವಟಿಕೆಗಳನ್ನು ಮನಸ್ಸು ಸ್ವಯಂಚಾಲಿತವಾಗಿ, ಏಕತಾನವಾಗಿ ನಡೆಸುವ ಸ್ವಭಾವವನ್ನು ಹೊಂದಿರುತ್ತದೆ. ಊಟ ಮಾಡುವುದು, ನಮಗೆ ನಿಕಟರಾಗಿರುವ ವ್ಯಕ್ತಿಗಳ ಜತೆಗೆ ನಮ್ಮ ಸಂಬಂಧದಂತಹ ಕೆಲವು ಚಟುವಟಿಕೆಗಳನ್ನು ತೆಗೆದುಕೊಂಡರೆ, ಇವು ಕೂಡ ರೂಢಿಗತ, ಏಕತಾನತೆಯ ಕ್ರಿಯೆಗಳಾಗಿ ಬಿಡುವ ಸಾಧ್ಯತೆಗಳಿರುತ್ತವೆ. ನಾವು ಈ ಕ್ಷಣ ಏನು ಮಾಡುತ್ತಿದ್ದೇವೆಯೋ ಅದರಲ್ಲಿಯೇ ನಮ್ಮ ಏಕಾಗ್ರತೆಯನ್ನು ಹರಿಸುವುದು, ಅದನ್ನು ಈಗಷ್ಟೇ ಹೊಸದಾಗಿ ಮಾಡುತ್ತಿದ್ದೇವೆ ಎಂಬಂತೆ ತಲ್ಲೀನರಾಗುವುದು ಅತ್ಯಂತ ಉತ್ತಮ. ಮನಸ್ಸನ್ನು ಪೂರ್ಣವಾಗಿ ತೊಡಗಿಸಿಕೊಂಡು ಹಲ್ಲನ್ನು ಉಜ್ಜುವುದರಿಂದ ನಮ್ಮ ಹಲ್ಲುಗಳು ಶುಚಿಯಾಗುವುದಷ್ಟೇ ಅಲ್ಲ; ಸಮಯವಿಲ್ಲ ಎಂದು ಗಡಿಬಿಡಿಯಲ್ಲಿ, ಯಾಂತ್ರಿಕವಾಗಿ ನಡೆಸಬಹುದಾದ ಒಂದು ಕ್ರಿಯೆಯನ್ನು ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ನಡೆಸಲು ಸಾಧ್ಯವಾಗುತ್ತದೆ.
-ಡಾ| ಆನಂದದೀಪ್ ಶುಕ್ಲಾ ಅಸೋಸಿಯೇಟ್ ಪ್ರೊಫೆಸರ್, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗ ಮಣಿಪಾಲ ದಂತ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.