ಸುಪ್ರೀಂ ತೀರ್ಪಿನಂತೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿ
Team Udayavani, May 11, 2022, 6:00 AM IST
ಹಿಂದುಳಿದ ವರ್ಗಗಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿಲ್ಲ. ಒಂದು ರೀತಿಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿನ್ನಡೆಯಾಗಿದೆ ಎಂದು ಹೇಳಬಹುದು. ಆದರೆ ಮಂಗಳವಾರ ಮಧ್ಯ ಪ್ರದೇಶಕ್ಕೆ ಸಂಬಂಧಿಸಿದ ಅರ್ಜಿಯೊಂದರ ಬಗ್ಗೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಮೀಸಲಾತಿ ಸೇರಿದಂತೆ ಯಾವುದೇ ವಿಚಾರವಿರಲಿ, ಅವುಗಳನ್ನು ಬದಿಗಿಟ್ಟು ಅವಧಿ ಮುಗಿದಿರುವ 23,262 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ತೀರ್ಪು ನೀಡಿದೆ. ಅಷ್ಟೇ ಅಲ್ಲ, ಮಧ್ಯ ಪ್ರದೇಶ ಚುನಾವಣ ಆಯೋಗಕ್ಕೂ ಸೂಚನೆ ನೀಡಿರುವ ಸುಪ್ರೀಂಕೋರ್ಟ್, ಎರಡು ವಾರದಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆಯೂ ಸೂಚಿಸಿದೆ.
ತೀರ್ಪು ನೀಡುವಾಗ ಮುಂದುವರಿದು, ಇದು ಕೇವಲ ಮಧ್ಯ ಪ್ರದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದೆ. ಹೀಗಾಗಿ ಅವಧಿ ಮುಗಿರುವ ಕರ್ನಾಟಕ, ಮಹಾರಾಷ್ಟ್ರವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಚುನಾವಣೆ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವುದೇ ರಾಜ್ಯಗಳು ಇರಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಈ ಮಟ್ಟದ ವಿಳಂಬ ಸಲ್ಲದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸುವ ಯೋಜನೆಗಳ ಜಾರಿ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರ ಪಂಚಾಯಿತಿಗಳು ಮತ್ತು ಮಹಾನಗರ ಪಾಲಿಕೆಗಳ ಕಾರ್ಯ ಮಹತ್ತರವಾದದ್ದು. ಇತ್ತೀಚೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಸಿಇಒಗಳ ಜತೆ ಸಭೆ ನಡೆಸಿ, ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದಿದ್ದಾರೆ. ಆದರೆ ಸ್ಥಳೀಯ ಮಟ್ಟದಲ್ಲಿ ಈ ಯೋಜನೆಗಳ ಅನುಷ್ಠಾನ ಮಾಡಬೇಕು ಎಂದಾದರೆ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು ಕಾರ್ಯ ನಿರ್ವಹಿಸುತ್ತಲೇ ಇಲ್ಲ. ಹೀಗಾಗಿ ಯಾರು ಅನುಷ್ಠಾನ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.
ಇಂಥದ್ದೇ ಪ್ರಶ್ನೆಯನ್ನು ಮಧ್ಯ ಪ್ರದೇಶ ಸರಕಾರವನ್ನು ಸುಪ್ರೀಂಕೋರ್ಟ್ ಕೇಳಿದೆ. ಕಳೆದ ಎರಡು ವರ್ಷಗಳಿಂದ 23 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆರಿಸದೇ, ಹಾಗೆಯೇ ಬಿಟ್ಟಿರುವುದು ಸರಿಯೇ ಎಂದು ತೀಕ್ಷ್ಣವಾಗಿ ಕೇಳಿದೆ. ಯಾವುದೇ ಸರಕಾರವಾಗಲಿ, ಮೀಸಲಾತಿ ನೆಪವಾಗಿಟ್ಟುಕೊಂಡು ಆಯ್ಕೆ ಪ್ರಕ್ರಿಯೆಯನ್ನೇ ಸ್ಥಗಿತ ಮಾಡುವುದು ಸರಿಯಲ್ಲ ಎಂದೂ ಖಡಕ್ಕಾಗಿ ಹೇಳಿದೆ.
ಸದ್ಯ ಎಸ್‌ಸಿ ಮತ್ತು ಎಸ್‌ಟಿಯವರಿಗೆ ಮಾತ್ರ ಮೀಸಲಾತಿ ನೀಡಿ, ಉಳಿದವರನ್ನು ಸಾಮಾನ್ಯ ವರ್ಗದ ಅಡಿಗೆ ತಂದು ಚುನಾವಣೆ ನಡೆಸಬೇಕಾಗಿದೆ. ಸುಪ್ರೀಂಕೋರ್ಟ್ ಇನ್ನೊಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಿದೆ. ಅಂದರೆ ಒಬಿಸಿ ಸಮುದಾಯಕ್ಕೆ ಮೀಸಲಾತಿ ನೀಡಲೇಬೇಕು ಎಂದಾದಲ್ಲಿ, ರಾಜಕೀಯ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯದವರಿಗೆ ಅವಕಾಶ ನೀಡಿ ಎಂಬ ಸಲಹೆಯನ್ನೂ ನೀಡಿದೆ. ಈ ಮೂಲಕವಾದರೂ ಅವಧಿಗೆ ಸರಿಯಾಗಿ ಚುನಾವಣೆ ನಡೆಸಿ ಎಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.