ಉಪಯೋಗಕ್ಕೆ ಇಲ್ಲದ ಬಸ್ ತಂಗುದಾಣಗಳು
ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ವರ್ಷ 5 ಕಳೆದರೂ ಸಮಸ್ಯೆಗೆ ಪರಿಹಾರ ಇಲ್ಲ
Team Udayavani, May 16, 2022, 9:56 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಕಲ್ಲಾಪುವರೆಗೆ ಬಸ್ ತಂಗುದಾಣಗಳ ಕೊರತೆ ಒಂದೆಡೆಯಾದರೆ, ನಿರ್ಮಾಣಗೊಂಡಿರುವ ತಂಗುದಾಣಗಳು ಪ್ರಯಾಣಿಕರ ಉಪಯೋಗಕ್ಕೆ ಇಲ್ಲದೆ ಹೆದ್ದಾರಿ ಬದಿಯಲ್ಲಿ ಬಿಸಿಲು, ಮಳೆ ಎನ್ನದೇ ರಸ್ತೆ ಬದಿಯಲ್ಲೇ ಬಸ್‌ಗೆ ಕಾಯುವ ಸ್ಥಿತಿ ಪ್ರಯಾಣಿಕರದ್ದು. ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ವರ್ಷ ಐದು ಕಳೆದರೂ ಸಮಸ್ಯೆ ಪರಿಹಾರಕ್ಕೆ ಹೆದ್ದಾರಿ ಇಲಾಖೆ ಇನ್ನೂ ಮೀನ – ಮೇಷ ಎಣಿಸುತ್ತಿದೆ.
ತಲಪಾಡಿಯಿಂದ ಕಲ್ಲಾಪುವರೆಗೆ ಖಾಸಗಿ ಯಾಗಿ ನಿರ್ಮಾಣಗೊಂಡಿರುವ ಬಸ್ ತಂಗುದಾಣಗಳನ್ನು ಹೊರತು ಪಡಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ವಹಿಸಿಕೊಂಡ ನವಯುಗ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಬಸ್ ತಂಗು ದಾಣಗಳು ಕೇವಲ ಆರು. ತಲಪಾಡಿ ಯಿಂದ ಮಂಗಳೂರು ಸಂಪರ್ಕಿಸುವ ಕಲ್ಲಾಪುವರೆಗೆ ಎರಡೂ ಬದಿಯಲ್ಲಿ 33 ಬಸ್ ತಂಗುದಾಣಗಳ ಆವಶ್ಯಕತೆ ಯಿದ್ದು, ಖಾಸಗಿಯಾಗಿ ಐದು ಬಸ್ ತಂಗುದಾಣಗಳಿದ್ದರೆ, ಸ್ಥಳೀಯಾಡಳಿತ ಸಂಸ್ಥೆ ನಿರ್ಮಿಸಿರುವ ಮೂರು ಬಸ್ ತಂಗುದಾಣಗಳಿವೆ. ಉಳಿದಂತೆ ಹೆಚ್ಚಿನ ಬಸ್ ತಂಗು ದಾಣಗಳಲ್ಲಿ ಪ್ರಯಾಣಿಕರು ಬೇಸಗೆ ಕಾಲದಲ್ಲಿ ಬಿಸಿಲಿನಲ್ಲಿ ಮತ್ತು ಮಳೆಗಾಲದಲ್ಲಿ ಮಳೆಗೆ ಬಸ್‌ಗೆ ಕಾಯುವ ಸ್ಥಿತಿ ಹೆದ್ದಾರಿ ಬದಿಯದ್ದು.
ತಂಗುದಾಣದಲ್ಲಿ ನಿಲ್ಲದ ಬಸ್
ತಲಪಾಡಿಯಿಂದ ಮಂಗಳೂರು ಸಂಪರ್ಕಿಸುವ ರಸ್ತೆಯಲ್ಲಿನ ಬೀರಿ ಪ್ರದೇಶ ಅತ್ಯಂತ ದೊಡ್ಡ ಜಂಕ್ಷನ್ ಆಗಿದ್ದು, ತಲಪಾಡಿ, ದೇರಳಕಟ್ಟೆ, ಮಾಡೂರು, ಸೋಮೇಶ್ವರ, ಉಚ್ಚಿಲ ಬದಿಯಿಂದ ದಿನವೊಂದಕ್ಕೆ ಸಾವಿರಾರು ಪ್ರಯಾಣಿಕರು ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುವ ಸ್ಥಿತಿ. ಇಲ್ಲಿ ಹೆದ್ದಾರಿ ಕಾಮಗಾರಿಯಿಂದ ನಿರ್ಮಾಣವಾಗಿರುವ ಬಸ್ ತಂಗುದಾಣ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ. ಜಂಕ್ಷನ್‌ನಿಂದ ಕೆಲವೇ ಅಡಿ ದೂರದಲ್ಲಿರುವ ಸರ್ವಿಸ್ ರಸ್ತೆಯ ಬದಿಯಲ್ಲಿ ತಂಗುದಾಣ ನಿರ್ಮಾಣವಾಗಿದ್ದರೂ ಅಲ್ಲಿ ಬಸ್‌ಗಳು ನಿಲ್ಲದೆ ಜಂಕ್ಷನ್‌ನ ಮುಖ್ಯ ಹೆದ್ದಾರಿಯಲ್ಲೇ ನಿಲ್ಲುವುದರಿಂದ ಪ್ರಯಾಣಿಕರಿಗೆ ತಂಗುದಾಣ ಉಪಯೋಗಕ್ಕಿಲ್ಲದಂತಾಗಿದೆ. ಈ ಹಿಂದೆ ಪೊಲೀಸರ ಮೇಲುಸ್ತುವಾರಿಯಲ್ಲಿ ಎಲ್ಲ ಬಸ್‌ಗಳನ್ನು ತಂಗುದಾಣದೊಳಗೆ ಕಡ್ಡಾಯ ಮಾಡಿದರೂ ಬಳಿಕ ಹಿಂದಿನಂತೆ ಹೆದ್ದಾರಿ ಬದಿಯಲ್ಲೇ ನಿಲ್ಲಿಸುವುದರಿಂದ ಪ್ರಯಾಣಿಕರು ಮಳೆ, ಬಿಸಿಲಿಗೆ ನಿಲ್ಲುವ ಸ್ಥಿತಿ ಇಲ್ಲಿನದು. ಈ ಪ್ರದೇಶದಲ್ಲಿ ಬಸ್ ನಿಲ್ದಾಣದ ಸರ್ವಿಸ್ ರಸ್ತೆಯ ಬದಿಯಲ್ಲೇ ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ.
ಮಳೆಗಾಲಕ್ಕಿಂತ ಮೊದಲು ತಂಗುದಾಣ ಅಗತ್ಯ
ಕಲ್ಲಾಪು, ತೊಕ್ಕೊಟ್ಟು ಓವರ್‌ಬ್ರಿಡ್ಜ್, ಅಂಬಿಕಾರಸ್ತೆ, ಕಾಪಿಕಾಡು, ಕೊಲ್ಯ, ಕೋಟೆಕಾರು ಕೆ.ಸಿ.ರೋಡ್, ಅಡ್ಕ, ಕೆಳಗಿನ ತಲಪಾಡಿ, ಸಂಕೊಳಿಗೆಯಲ್ಲಿ ಬಸ್ ತಂಗುದಾಣ ಅಗತ್ಯವಿದ್ದು, ಕೆಲವೆಡೆ ಒಂದು ಬದಿಯಲ್ಲಿ ತಂಗುದಾಣವಿದ್ದರೆ, ಇನ್ನೊಂದು ರಸ್ತೆಯಲ್ಲಿ ತಂಗುದಾಣ ನಿರ್ಮಾಣವಾಗಿಲ್ಲ. ಕೆಲವು ತಂಗುದಾಣಗಳಲ್ಲಿ ಸರ್ವಿಸ್ ರಸ್ತೆ ಇಲ್ಲದೆ ಬಸ್‌ಗೆ ಕಾಯುವವರು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿಂದ ರಕ್ಷಣೆಯನ್ನು ಪಡೆಯುವ ಸ್ಥಿತಿ ಇಲ್ಲಿನದು.
ಸಮಸ್ಯೆಗೆ ಶೀಘ್ರ ಪರಿಹಾರ
ನೀಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭ ನವಯುಗ್ ಸಂಸ್ಥೆ ಕೋಟೆಕಾರ್ -ಬೀರಿ ಬಳಿ ನಿರ್ಮಿಸಿರುವ ಬಸ್ ತಂಗುದಾಣ ನಿಷ್ಪ್ರಯೋಜಕವಾಗಿದೆ. ನಿಲ್ದಾಣದಲ್ಲಿ ಬಸ್ ನಿಲ್ಲದ ಕಾರಣ ಜನರು ರಸ್ತೆ ಬದಿಯಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಬೀರಿಯಲ್ಲಿ ತಲಪಾಡಿ ಕಡೆ ಹೋಗುವ ಜಂಕ್ಷನ್‌ನಲ್ಲಿಯೂ ಬಸ್ ತಂಗುದಾಣ ಅಗತ್ಯವಿದೆ. ಹೆದ್ದಾರಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಕ್ರಮಕೈಗೊಂಡು ಪ್ರಯಾಣಿಕರ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕು. – ವೆಂಕಟೇಶ್ ಬೀರಿ, ಸ್ಥಳೀಯ ನಿವಾಸಿ
ಕ್ರಮ ಕೈಗೊಳ್ಳಲಾಗುವುದು
ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆ ಯೋಜನ ವರದಿಯಲ್ಲಿ ನಮೂದಿಸಿದಂತೆ ತಂಗುದಾಣ ನಿರ್ಮಾಣ ಮಾಡಬೇಕು. ಕೆಲವು ಕಡೆ ಜಾಗದ ಕೊರತೆಯಿಂದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಅವೈಜ್ಞಾನಿಕವಾಗಿರುವ ಬಸ್ ನಿಲ್ದಾಣದ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. – ಮಧುಕರ ವಟೋರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ
-ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.