ಗ್ರಾ.ಪಂ; ವ್ಯಾಪ್ತಿಯಲ್ಲಿ “ವಿನಯ ಸಾಮರಸ್ಯ’: ಕೋಟ
Team Udayavani, May 18, 2022, 12:50 AM IST
ಮಂಗಳೂರು: ಅಸ್ಪೃಶ್ಯತೆ ತೊಡೆದು ಹಾಕಿ ಸಾಮಾಜಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಗ್ರಾ. ಪಂ. ವ್ಯಾಪ್ತಿಯಲ್ಲಿ “ವಿನಯ ಸಾಮರಸ್ಯ’ ಎಂಬ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಅಸ್ಪೃಶ್ಯತೆ ಮುಕ್ತ ಗ್ರಾ. ಪಂ. ರಚನೆಗೆ ಈ ಅಭಿಯಾನ ನಾಂದಿಯಾಗಲಿದೆ ಎಂದರು.
ವಿನಯ ಸಾಮರಸ್ಯ ಯೋಜನೆಯನ್ನು ಮುಂದಿನ ತಿಂಗಳು ರಾಜ್ಯದಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ನಡೆಸಲು ಚಿಂತನೆ ನಡೆಸಲಾಗಿದೆ. ಕೊಪ್ಪಳದಲ್ಲಿ ದಲಿತ ವರ್ಗದ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ವಿದ್ಯಮಾನ ಆಧರಿಸಿ ಆತನ ಹೆಸರಿನಲ್ಲೇ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.
ಇದಕ್ಕೆ ಪೂರಕವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶಕ್ಕೆ ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ವಪೀಠಾಧಿಪತಿಗಳನ್ನು ಆಹ್ವಾನಿಸಲಾಗುವುದು. ರಾಜ್ಯದ 6,020 ಗ್ರಾಮ ಪಂಚಾಯತ್‌ಗಳ ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ವ್ಯಾಪ್ತಿಯ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಮಿತಿ ನೆರವಿನಲ್ಲಿ ದಲಿತ ಸಮಾವೇಶ ಸಂಘಟಿಸಲಾಗುವುದು. ಅಸ್ಪೃಶ್ಯತೆ ಮುಕ್ತ ಗ್ರಾ. ಪಂ. ರಚನೆಗೊಂಡರೆ 25ರಿಂದ 50 ಲಕ್ಷ ರೂ. ಬಹುಮಾನ ನೀಡುವ ಉದ್ದೇಶ ಇದೆ ಎಂದರು.
ಅಂತ್ಯೋದಯ ಪರಿಕಲ್ಪನೆ
ಯಲ್ಲಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪಂಡಿತ್ ದೀನ್‌ದಯಾಳ್ ಹೆಸರಿನಲ್ಲಿ ರಾಜ್ಯದ ಐದು ಕಡೆಗಳಲ್ಲಿ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುವುದು. ಒಂದು ಶಿಕ್ಷಣ ಕೇಂದ್ರದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯ ತೆರೆಯಲಿದ್ದು, ವಿಶ್ವವಿದ್ಯಾನಿಲಯಗಳನ್ನು ಗುರಿಯಾಗಿಸಿ ವಿ.ವಿ. ಆವರಣಗಳಲ್ಲೇ ಇದನ್ನು ಸ್ಥಾಪಿಸಲು ಚಿಂತಿಸಲಾಗಿದೆ. ಈ ವಸತಿ ನಿಲಯಗಳಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ,ಅಲ್ಪಸಂಖ್ಯಾಕ ಹಾಗೂ ಮೀಸಲಾತಿ ಇಲ್ಲದ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಮಂಗಳೂರು, ಶಿವಮೊಗ್ಗ, ಮೈಸೂರು, ಧಾರವಾಡ ಹಾಗೂ ದಾವಣಗೆರೆಗಳಲ್ಲಿ ಈ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಕನಕದಾಸ ವಸತಿ ನಿಲಯ
ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ಕನಕದಾಸ ವಸತಿ ನಿಲಯಗಳನ್ನು ರಾಜ್ಯದ 50 ಕಡೆಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. 175 ಕೋಟಿ ರೂ. ವೆಚ್ಚದಲ್ಲಿ ಈ ವಸತಿ ನಿಲಯಗಳು ಸ್ಥಾಪನೆಯಾಗಲಿವೆ. ಅಂಬೇಡ್ಕರ್ ನಿಗಮ ಮೂಲಕ 350 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಡೆಗಳಲ್ಲಿ 100 ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡಗಳಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ನಾರಾಯಣಗುರು ಹೆಸರಿನಲ್ಲಿ ವಸತಿ ಶಾಲೆ ನಿರ್ಮಿಸಲಾಗುವುದು. ಪ್ರತಿ ವಸತಿ ಶಾಲೆಗೆ 29 ಕೋ ರೂ. ಮೀಸಲಿರಿಸಲಾಗಿದೆ. ಇವೆಲ್ಲವೂ ಕಾರ್ಯಗತವಾದರೆ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕೊರತೆ ನೀಗಲಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.