ಹೊಸ ತಾಲೂಕುಗಳಲ್ಲಿ ಸೌಲಭ್ಯಗಳೇ ಮರೀಚಿಕೆ
Team Udayavani, May 19, 2022, 1:23 PM IST
“ಉತ್ಸಾಹ ಕಲ್ಲಿದ್ದಲ ಒಳಗಿನ ಕಾವಾಗಬೇಕೇ ಹೊರತು, ಹುಲ್ಲಿಗೆ ಬಿದ್ದ ಬೆಂಕಿ ಆಗಬಾರದು’ ಎಂಬ ಕುವೆಂಪು ಅವರ ಮಾತು ಹೊಸ ತಾಲೂಕುಗಳ ರಚನೆ ಮತ್ತು ಅವುಗಳ ಈಗಿನ ಸ್ಥಿತಿಗೆ ಹೆಚ್ಚು ಒಪ್ಪುವಂಥದ್ದು. 2017ರಿಂದ ಈಚೆಗೆ ರಾಜಕೀಯ ಒತ್ತಡ ಗಳಿಂದಾಗಿ ಸೃಷ್ಟಿಯಾದ 58 ತಾಲೂಕು ಗಳಲ್ಲಿ ಬಹುತೇಕ ಕೇಂದ್ರಗಳಿಗೆ ಅನಾಥಪ್ರಜ್ಞೆ ಕಾಡುತ್ತಿದೆ. 25ಕ್ಕೂ ಹೆಚ್ಚು ತಾಲೂಕುಗಳಿಗೆ ಇದುವರೆಗೆ ಕಾಯಕಲ್ಪವೇ ದೊರೆತಿಲ್ಲ. ಅಗತ್ಯ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ನಿರೀಕ್ಷಿಸಿದ ಅನುದಾನವೇ ಸಿಕ್ಕಿಲ್ಲ. ಮೂಲ ಸೌಕರ್ಯದ ಮಾತಂತೂ ಕೇಳುವುದೇ ಬೇಡ. ಆರಂಭಶೂರತ್ವ ಪ್ರದರ್ಶಿಸಿದ್ದ ಜನಪ್ರತಿನಿಧಿಗಳು ಈ ಬಗ್ಗೆ ದನಿಯನ್ನೂ ಎತ್ತುತ್ತಿಲ್ಲ. “ಉದಯವಾಣಿ’ ಯ ರಿಯಾಲಿಟಿ ಚೆಕ್‌ನಲ್ಲಿ ಕಂಡ ಹೊಸ ತಾಲೂಕುಗಳ ದುಃಸ್ಥಿತಿಯ ಚಿತ್ರಣ ಇಲ್ಲಿದೆ…
ಬೆಳಗಾವಿ
ತಾಲೂಕಿನ ವಿಚಾರವೇ ಗೊಂದಲ
ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಜನರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರಕಾರ ಐದು ಹೊಸ ತಾಲೂಕುಗಳ ಘೋಷಣೆ ಮಾಡಿದೆ. ಇದರಿಂದ 10 ತಾಲೂಕುಗಳಿದ್ದ ಸಂಖ್ಯೆ ಈಗ 15 ಕ್ಕೆ ಏರಿಕೆಯಾಗಿದೆ. ಹಿಂದಿನ ಸರಕಾರ ಘೋಷಣೆ ಮಾಡಿದಂತೆ ಕಿತ್ತೂರು, ನಿಪ್ಪಾಣಿ, ಕಾಗವಾಡ, ಮೂಡಲಗಿ ಹಾಗೂ ಯರಗಟ್ಟಿ ತಾಲೂಕುಗಳ ಘೋಷಣೆಯಾಗಿದೆ. ಮೂಡಲಗಿಯಲ್ಲಿ ಕೇವಲ ನಾಲ್ಕು ಕಚೇರಿಗಳು ಬಂದಿದ್ದೇ ದೊಡ್ಡ ಸಾಧನೆ. ಪೂರ್ಣ ಪ್ರಮಾಣದ ತಾಲೂಕಿಗೆ ಕನಿಷ್ಠ 18 ಕಚೇರಿಗಳು ಬರಬೇಕು. ಕಿತ್ತೂರಿನಲ್ಲಿ ತಹಶೀಲ್ದಾರ್ ಕಚೇರಿ ಆರಂಭವಾಗಿ ಐದು ವರ್ಷಗಳು ಕಳೆದಿವೆ. ತಾಲೂಕಿಗೆ ಮುಕುಟಪ್ರಾಯವಾಗಿರುವ ಮಿನಿ ವಿಧಾನಸೌಧವನ್ನು 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಇನ್ನೂ ಉದ್ಘಾಟನೆಯಾಗಿಲ್ಲ. ಯರಗಟ್ಟಿಯಲ್ಲಿ ಬಹುತೇಕ ಕಚೇರಿಗಳಿಲ್ಲದೆ ಅನಾಥವಾಗಿದೆ. ತಹಶೀಲ್ದಾರ್ ಕಚೇರಿ ಬಿಟ್ಟು ಬೇರೆ ಯಾವುದೇ ಕಚೇರಿ ಇಲ್ಲಿಗೆ ಬಂದಿಲ್ಲ. ಜನರ ಪರದಾಟ ತಪ್ಪಿಲ್ಲ. ಹಳ್ಳಿಗಳ ಸೇರ್ಪಡೆ ವಿಷಯದಲ್ಲಿ ಅಸಮಾಧಾನ ಇದೆ. ಕಾಗವಾಡದಲ್ಲಿ ಸಾರ್ವಜನಿಕರಿಗೆ ಮುಖ್ಯವಾಗಿ ಬೇಕಾಗಿರುವ ಉಪ ನೋಂದಣಿ ಕಚೇರಿ ಸ್ಥಾಪನೆಗೆ ಬಹಳ ಬೇಡಿಕೆ ಇದೆ. ಮಿನಿ ವಿಧಾನಸೌಧದ ನಿರ್ಮಾಣದ ಆಸೆ ಇನ್ನೂ ಈಡೇರಿಲ್ಲ.
ನಿಪ್ಪಾಣಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿಗಳು ಬಂದಿಲ್ಲ. ನಮ್ಮದು ಚಿಕ್ಕೋಡಿಯೇ ಅಥವಾ ನಿಪ್ಪಾಣಿ ತಾಲೂಕೇ ಎಂಬ ಗೊಂದಲ ಜನರಲ್ಲಿ ಇನ್ನೂ ಇದೆ. ಸರಕಾರದ ಕೆಲವು ಕಡತಗಳಲ್ಲಿ ಮಾತ್ರ ನಿಪ್ಪಾಣಿ ತಾಲೂಕು ಎಂದು ನಮೂದಿಸುತ್ತಿರುವುದರಿಂದ ಈ ಗೊಂದಲ ಮೂಡಿದೆ. ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಬಲವಾಗಿದೆ.
ಚಿಕ್ಕಮಗಳೂರು
ಮೂಲಸೌಲಭ್ಯಗಳೇ ಇಲ್ಲ ಕಾಫಿನಾಡಿನ ಅಜ್ಜಂಪುರ ಮತ್ತು ಕಳಸ ಪಟ್ಟಣವನ್ನು ರಾಜ್ಯ ಸರಕಾರ ನೂತನ ತಾಲೂಕು ಕೇಂದ್ರವಾಗಿ ಘೋಷಿಸಿ ಮೂರ್ನಾಲ್ಕು ವರ್ಷ ಕಳೆದರೂ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಅಜ್ಜಂಪುರ ತಾಲೂಕು ಕೇಂದ್ರ ರಚನೆಯಾದ ಬಳಿಕ ತಾಲೂಕು ದಂಡಾಧಿಕಾರಿಯನ್ನು ನೇಮಕ ಮಾಡಲಾಗಿದೆ. ತಾಲೂಕು ಕಚೇರಿಯನ್ನು ತೆರೆಯಲಾಗಿದೆ. ಪಟ್ಟಣ ಪಂಚಾಯತ್ ರಚನೆಯಾಗಿದೆ. ಆದರೆ, ಸಿಬಂದಿ ಕೊರತೆ ಎದುರಿಸುತ್ತಿದೆ. ಬಹುತೇಕ ಕಚೇರಿಗಳು ಇನ್ನೂ ತರೀಕೆರೆ ತಾಲೂಕು ಕೇಂದ್ರದಿಂದಲೇ ನಿರ್ವಹಣೆಯಾಗುತ್ತಿದೆ. ತಾಲೂಕು ಸೌಧ ಕಸ್ಟಡಿ ನಿರ್ಮಿಸಿದರೆ ಅನುಕೂಲ ಎಂಬುದು ಜನರ ಮಾತು. ಕಳಸ ತಾಲೂಕು ಕೇಂದ್ರವಾಗಿ ರಚನೆಯಾದ ಬಳಿಕ ನಾಡ ಕಚೇರಿಯನ್ನು ತಾಲೂಕು ಕಚೇರಿಯಾಗಿ ಪರಿವರ್ತಿಸಿ ತಹಶೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ. ಬಹುತೇಕ ಸರಕಾರಿ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲೂಕು ಕಚೇರಿ ನಿರ್ಮಾಣಕ್ಕೆ ಕಳಸ ಪಟ್ಟಣ ಮಾವಿನಕರೆಯಲ್ಲಿ ಜಮೀನು ಗುರುತಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿಲ್ಲ.
ಕೊಪ್ಪಳ
ಬಾಡಿಗೆಯಲ್ಲೇ ಜನರಿಗೆ ಸೇವೆ ಕೊಪ್ಪಳದಲ್ಲಿ ಮೂರು ಹೊಸ ತಾಲೂಕುಗಳ ರಚನೆಯಾಗಿದ್ದು, ಇಲ್ಲಿ ಸ್ವಂತ ಕಚೇರಿಗಳೇ ಇಲ್ಲ. ಎಲ್ಲವೂ ಬಾಡಿಗೆ ಕಟ್ಟಡಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಹೊಸದಾಗಿ ಕಾರಟಗಿ, ಕುಕನೂರು ಹಾಗೂ ಕನಕಗಿರಿ ತಾಲೂಕುಗಳು ಘೋಷಣೆಯಾಗಿವೆ. ಹೊಸ ತಾಲೂಕಗಳು ಘೋಷಣೆಯಾಗಿ ಬರೋಬ್ಬರಿ 4 ವರ್ಷಗಳು ಕಳೆಯುತ್ತಾ ಬಂದಿವೆ. ಆದರೆ ಸರಕಾರವೇ ಅಲ್ಲಿ ಸ್ವಂತ ಕಚೇರಿಗಳಿಗೆ ಅನುದಾನ ನೀಡುತ್ತಿಲ್ಲ. ಜಮೀನುಗಳು ಲಭ್ಯವಾಗುತ್ತಿಲ್ಲ. ಹಲವು ಕಡೆ ಜಾಗಕ್ಕೆ ಹುಡುಕಾಟವೂ ನಡೆದಿದೆ. ಸದ್ಯ ಕುಕನೂರು ಹೊಸ ತಾಲೂಕು ಕಚೇರಿ ಖಾಸಗಿ ಸಮುದಾಯ ಭವನದಲ್ಲಿ ಆಡಳಿತಾತ್ಮಕ ಕಾರ್ಯ ನಡೆದಿದ್ದರೆ ತಹಶೀಲ್ದಾರ್ ಕಚೇರಿಯೂ ಸ್ವಂತ ನೆಲೆಯಲ್ಲಿಲ್ಲ. ಕಾರಟಗಿ ತಾ| ಕಚೇರಿಯು ನವಲಿ ರಸ್ತೆಯಲ್ಲಿನ ಸಣ್ಣ ಸರಕಾರಿ ಕಟ್ಟಡದಲ್ಲಿದೆ. ಎಪಿಎಂಸಿಯಲ್ಲಿ ತಹಶೀಲ್ದಾರ್ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಕನಕಗಿರಿ ತಾಲೂಕು ಕಚೇರಿ ಸರಕಾರಿ ಹೈಸ್ಕೂಲ್ ಕಟ್ಟಡದಲ್ಲಿ ಮುನ್ನಡೆ ಯುತ್ತಿದ್ದರೆ, ತಹಶೀಲ್ದಾರ್ ಕಚೇರಿಯೂ ಸಹ ಕನಕಾಚಲಾಪತಿ ದೇವಸ್ಥಾನದ ಪ್ರವಾಸಿ ಮಂದಿರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸಿಬಂದಿಯ ಕೊರತೆಯೂ ಹೆಚ್ಚಾಗಿ ಕಾಡುತ್ತಿದೆ.
ಚಾಮರಾಜನಗರ
ಜನರಿಗೆ ಸೇವೆಯೇ ಸಿಗುತ್ತಿಲ್ಲ
2018ರಲ್ಲಿ ಕೊಳ್ಳೇಗಾಲ ತಾಲೂಕನ್ನು ವಿಭಜನೆ ಮಾಡಿ ಹೊಸದಾಗಿ ಹನೂರು ತಾಲೂಕು ಘೋಷಣೆ ಮಾಡಲಾಗಿದೆ. ಹಿಂದೆ ಯೇ ಇಲ್ಲಿ ವಿಶೇಷ ತಹಸೀಲ್ದಾರ್ ಕಚೇರಿ ಇದ್ದು, ಈಗ ಇದನ್ನೇ ನೂತನ ತಹಸೀಲ್ದಾರ್ ಕಚೇರಿಯಾಗಿ ಪರಿವರ್ತಿಸಲಾಗಿದೆ. ಹನೂರು ಪಟ್ಟಣದ ಹೊರವಲಯದಲ್ಲಿ 7.12 ಎಕರೆ ಜಾಗವನ್ನು ಮಿನಿ ವಿಧಾನಸೌಧಕ್ಕೆ ಮೀಸಲಿರಿಸಲಾಗಿದ್ದು, ಇನ್ನೂ ಅನುದಾನ ಸಿಕ್ಕಿಲ್ಲ. ಶಾಸಕ ನರೇಂದ್ರ ಬೇಡಿಕೆಯಂತೆ 10 ಕೋಟಿ ರೂ. ಅನುದಾನ ನೀಡಲು ಸರಕಾರ ಭರವಸೆ ನೀಡಿದೆ. ಇದರ ಜತೆಗೆ ತಾ.ಪಂ. ಮತ್ತು ಖಜಾನೆ ಕಚೇರಿಗಳು ಮಾತ್ರ ಆರಂಭವಾಗಿದ್ದು, ಉಳಿದವು ಬಂದಿಲ್ಲ. ಹೀಗಾಗಿ ಜನಕ್ಕೆ ಸರಿಯಾದ ರೀತಿಯಲ್ಲಿ ಸೇವೆ ಸಿಗುತ್ತಿಲ್ಲ.
ಹಾವೇರಿ
ನಾಲ್ಕು ವರ್ಷವಾದರೂ ಸೌಕರ್ಯವಿಲ್ಲ
ಹೊಸ ತಾಲೂಕಾಗಿ ರಟ್ಟಿಹಳ್ಳಿಯನ್ನು ಘೋಷಿಸಿದಾಗ ತಾಲೂಕಿನ 63 ಗ್ರಾಮಗಳ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಕೆಲವು ತಿಂಗಳ ಬಳಿಕ ತಾಲೂಕು ಕೇಂದ್ರ ಕಚೇರಿಗಳಿಗೆ ತುಂಗಾ ಮೇಲ್ದಂಡೆ ಯೋಜನೆಯ ಕಟ್ಟಡಗಳನ್ನು ಗುರುತಿಸಿ 2018, ಫೆ.24ರಂದು ನೂತನ ತಾಲೂಕು ಆಡಳಿತ ಕೇಂದ್ರ ಉದ್ಘಾಟಿಸಲಾಯಿತು. ಆದರೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಬೇಕಾದ ಸರಕಾರಿ ಇಲಾಖೆಗಳು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭ ಮಾಡದಿರುವ ಹಿನ್ನೆಲೆ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಸದ್ಯ 5-6 ಇಲಾಖೆಗಳು ಮಾತ್ರ ಕಾರ್ಯಾರಂಭ ಮಾಡಿವೆ.
ಬಳ್ಳಾರಿ
ಅನುದಾನದ ಕೊರತೆ
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೊಟ್ಟೂರು, ಕಂಪ್ಲಿ, ಕುರುಗೋಡುಗಳನ್ನು ಹೊಸ ತಾಲೂಕುಗಳನ್ನಾಗಿ ರಚಿಸಿ ಅರ್ಧದಶಕವೇ ಉರುಳಿದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ. ಬಳ್ಳಾರಿ ತಾಲೂಕಿನಲ್ಲಿದ್ದ ಕುರುಗೋಡು ನೂತನ ತಾಲೂಕಾಗಿ ರಚನೆಯಾಗಿದ್ದು, ಗ್ರಾಮ ಪಂಚಾಯತ್‌ನಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆಯಾದರೂ ತಾಲೂಕುಗಳಲ್ಲಿ ಇರಬೇಕಾದ ಸೌಲಭ್ಯಗಳನ್ನು ಇಂದಿಗೂ ಈಡೇರಿಸಲಾಗಿಲ್ಲ. ಇನ್ನು ಕಂಪ್ಲಿ, ಕೊಟ್ಟೂರು ತಾಲೂಕುಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ತಹಶೀಲ್ದಾರ್, ತಾಪಂ ಕಚೇರಿಗಳಿಗೂ ಸಹ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿಲ್ಲ. ಕೊಟ್ಟೂರು, ಕುರುಗೋಡು ತಾಲೂಕುಗಳಲ್ಲಿ ದೇವಸ್ಥಾನಕ್ಕೆ ಸೇರಿದ್ದ ಯಾತ್ರಿ ನಿವಾಸದ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿಗಳು ನಡೆದರೆ, ತಾಪಂ ಕಚೇರಿಗಳಿಗೆ ಕೊಟ್ಟೂರಿನಲ್ಲಿ ಶಾಲಾ ಕಟ್ಟಡ, ಕುರುಗೋಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ್ದ ಸಮುದಾಯ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಂಪ್ಲಿಯಲ್ಲಿ ತಹಶೀಲ್ದಾರ್ ಕಚೇರಿ ಯನ್ನು ಎಪಿಎಂಸಿಗೆ ಸೇರಿದ್ದ ಕಟ್ಟಡದಲ್ಲಿ, ತಾಪಂ ಕಚೇರಿ ಯನ್ನು ನೀರಾವರಿ ಇಲಾಖೆಗೆ ಸೇರಿದ್ದ ಕಟ್ಟಡದಲ್ಲಿ ಬಾಡಿಗೆ ನಡೆಸಲಾಗುತ್ತಿದೆ. ಇಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಸರಿಯಾದ ಅನುದಾನವೂ ಸಿಗುತ್ತಿಲ್ಲ.
ವಿಜಯಪುರ
8 ಹೊಸ ತಾಲೂಕು ರಚಿಸಿದರೂ ಹಳೆ ಸಮಸ್ಯೆ ತಪ್ಪಿಲ್ಲ
ಹೊಸದಾಗಿ ರಚನೆಯಾಗಿರುವ 8 ತಾಲೂಕುಗಳ ಕಚೇರಿಯ ಆಡಳಿತಾತ್ಮಕ ನಿರ್ವಹಣೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರ 2017-18ರಿಂದ 2021-22ರ ವರೆಗೆ 1.53 ಕೋಟಿ ರೂ. ನೀಡಿದೆ. ಇಲ್ಲಿ ಹೊಸದಾಗಿ ಚಡಚಣ, ತಿಕೋಟಾ, ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ತಾಳಿಕೋಟೆ, ದೇವರಹಿಪ್ಪರಗಿ, ಆಲಮೇಲ ತಾಲೂಕುಗಳು ರಚನೆಯಾಗಿವೆ. ಒಟ್ಟು 8ರಲ್ಲಿ ಏಳು ಕಡೆ ಮಾತ್ರ ತಹಶೀಲ್ದಾರ್ ನೇಮಕವಾಗಿದ್ದು, ಸರಕಾರ ವಾಹನವನ್ನು ನೀಡಿದೆ. ಸ್ವಂತ ಕಟ್ಟಡ ಇಲ್ಲದ ಕಾರಣ ಶಾಲೆಗಳಲ್ಲಿ, ಸರಕಾರದ ಹಳೆಯ ಕಟ್ಟಡಗಳಲ್ಲಿ, ಇñರ ಇಲಾಖೆಗಳ ದೊಡ್ಡ ಕಟ್ಟಡಗಳಲ್ಲಿ ತಹಶೀಲ್ದಾರ್ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ನೂತನ ತಾಲೂಕುಗಳ ಆಡಳಿತಕ್ಕೆ ತಾಲೂಕಾಡಳಿತ ಭವನ ನಿರ್ಮಾಣಕ್ಕೆ ಬಹುತೇಕ ಎಲ್ಲ ಕಡೆಗಳಲ್ಲಿ ಸ್ಥಳ ಗುರುತಿಸಿದ್ದು, ಕೆಲವೆಡೆ ಜಮೀನು ಹಸ್ತಾಂತರ ಕಾರ್ಯ ಪ್ರಗತಿಯಲ್ಲಿವೆ. ತಿಕೋಟಾ ಹೊರತಾಗಿ ಇತರ ಯಾವ ಹೊಸ ತಾಲೂಕಿನಲ್ಲೂ ತಾಲೂಕಾಡಳಿತ ಭವನ ಕಾಮಗಾರಿ ಆರಂಭಗೊಂಡಿಲ್ಲ. ಹೊಸ ತಾಲೂಕು ರಚನೆಗೆ ತೋರಿದ ಆತುರವನ್ನು ಸರಕಾರ ಹೊಸ ತಾಲೂಕಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ, ವಿಶೇಷವಾಗಿ ಸರಕಾರದ ಎಲ್ಲ ಇಲಾಖೆಗಳ ಕಚೇರಿಗಳನ್ನು ತೆರೆದು, ಹಳೆಯ ತಾಲೂಕಿನಿಂದ ವಿಂಗಡಿಸಿ ಸಾರ್ವಜನಿಕರ ಮೂಲ ದಾಖಲೆಗಳನ್ನು ಹೊಸ ತಾಲೂಕಿಗೆ ವಿಂಗಡಿಸಿ, ವರ್ಗಾಯಿಸುವ ಕೆಲಸ ಮಾಡಿಲ್ಲ. ಪರಿಣಾಮ ಮೂಲ ತಾಲೂಕು ರಚನೆಯ ವಾಸ್ತವಿಕ ಆಶಯ ಈಡೇರಿಲ್ಲ.
ಧಾರವಾಡ
ಮಿಲ್ ಕಟ್ಟಡದಲ್ಲಿ ಅಣ್ಣಿಗೇರಿ ತಾಲೂಕು ಕಚೇರಿ!
ಹೇಳಿಕೊಳ್ಳಲು ಹೊಸ ತಾಲೂಕು, ಅದಕ್ಕೊಂದು ಸ್ವಂತ ತಾಲೂಕು ಕಚೇರಿ ಕಟ್ಟಡವಿಲ್ಲ. ಅಗತ್ಯವಾದ ಸೌಲಭ್ಯಗಳು ಇಲ್ಲ. 25ಕ್ಕೂ ಅಧಿಕ ಇಲಾಖೆಗಳ ಕಚೇರಿಗಳೂ ಇಲ್ಲ. ಸಿಬಂದಿಯೂ ಇಲ್ಲ. ಒಟ್ಟಿನಲ್ಲಿ ಹೊಸ ತಾಲೂಕು ಎಂಬ ಹೆಸರು ಬಂತೆ ವಿನಾಃ ಅಭಿವೃದ್ಧಿಗೆ ಪೂರಕವಾಗುವ ಅಗತ್ಯ ಸೌಲಭ್ಯಗಳು ಮಾತ್ರ ಸರಕಾರದಿಂದ ಇನ್ನೂ ಲಭಿಸಿಲ್ಲ. ಧಾರವಾಡ ಜಿಲ್ಲೆಯಲ್ಲಿ 2018ರಲ್ಲಿ ಘೋಷಣೆಯಾದ ಮೂರು ಹೊಸ ತಾಲೂಕುಗಳ ಇಂದಿನ ದುಃಸ್ಥಿತಿ ಇದು. ಅಳ್ನಾವರ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕುಗಳು ರಚನೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳು ಕಳೆದರೂ, ತಾಲೂಕು ಆಡಳಿತವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಅಗತ್ಯವಾದ ಎಲ್ಲ ಇಲಾಖಾವಾರು ಸೌಲಭ್ಯಗಳು ಮಾತ್ರ ಇನ್ನು ಈ ಹೊಸ ತಾಲೂಕುಗಳಿಗೆ ಲಭಿಸಿಲ್ಲ. ತಾಲೂಕು ಕಚೇರಿಗಳಿಗೆ ಶಾಶ್ವತ ಕಟ್ಟಡಗಳೇ ಇನ್ನೂ ನಿರ್ಮಾಣವಾಗಿಲ್ಲ. ಅಳ್ನಾವರದಲ್ಲಿ ತಾಲೂಕು ಕಚೇರಿಗಳು ಪಟ್ಟಣ ಪಂಚಾಯತ್ ಕಟ್ಟಡದಲ್ಲಿ ನಡೆದರೆ ಅಣ್ಣಿಗೇರಿಯಲ್ಲಿ ಬಾಡಿಗೆ ಕಟ್ಟಡ ಮಿಲ್‌ನಲ್ಲಿ ಕಚೇರಿ ನಡೆಯುತ್ತಿದೆ. ಹುಬ್ಬಳ್ಳಿ ನಗರ ತಾಲೂಕಿನ ಕಥೆಯೂ ಬೇರೆಯಾಗಿಲ್ಲ. ಒಟ್ಟಿನಲ್ಲಿ ಹೊಸ ತಾಲೂಕು ಕಚೇರಿಗಳಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಲಭಿಸಿಲ್ಲ.
ಬಾಗಲಕೋಟೆ
ಹೊಸ ತಾಲೂಕಿಗಿಲ್ಲ ಆಡಳಿತ ಕಟ್ಟಡ!
ಇಲ್ಲಿ ಈ ಮೊದಲು ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಜಮಖಂಡಿ, ಮುಧೋಳ ತಾಲೂಕು ಕೇಂದ್ರಗಳಿದ್ದವು. ಅದರಲ್ಲಿ ಹುನಗುಂದ ತಾಲೂಕನ್ನು ವಿಂಗಡಿಸಿ, ಇಳಕಲ್ಲ ಹೊಸ ತಾಲೂಕನ್ನಾಗಿ, ಜಮಖಂಡಿ ತಾಲೂಕು ವಿಂಗಡಿಸಿ, ರಬಕವಿ- ಬನಹಟ್ಟಿ ಹಾಗೂ ಬಾದಾಮಿ ತಾಲೂಕು ಪುನರ್ ವಿಂಗಡಿಸಿ, ಗುಳೇದಗುಡ್ಡ ಹೊಸ ತಾಲೂಕನ್ನಾಗಿ ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮೂರೂ ತಾಲೂಕು ಆಡಳಿತ ಕಚೇರಿಗಳು ಸದ್ಯಕ್ಕೆ ಸರಕಾರದ ವಿವಿಧ ಕಚೇರಿಗಳಲ್ಲಿ ನಡೆಯುತ್ತಿವೆ. ಹೊಸ ತಾಲೂಕು ಘೋಷಣೆಯಾಗಿ, ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದರೂ ಮಿನಿ ವಿಧಾನಸೌಧ ಅಥವಾ ತಾಲೂಕು ಆಡಳಿತ ಭವನ ನಿರ್ಮಾಣ ಗೊಂಡಿಲ್ಲ. ಇದಕ್ಕಾಗಿ ಸೂಕ್ತ ಜಾಗ ಗುರುತಿಸುವ ಕಾರ್ಯ ಇನ್ನೂ ನಡೆಯುತ್ತಿದೆ.
ಗದಗ
ನಾಮ್‌ಕೇವಾಸ್ತೆಯಾದ ಹೊಸ ತಾಲೂಕು
ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಢ ನೂತನ ತಾಲೂಕುಗಳು ವರ್ಷಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ಜನ ಸೇವೆಗೆ ಸಿದ್ಧಗೊಂಡಿಲ್ಲ. ಕಂದಾಯ ಸೇರಿದಂತೆ ನಾಲ್ಕೈದು ಇಲಾಖೆಗಳ ಹೊರತಾಗಿ ಎಲ್ಲದಕ್ಕೂ ಮಾತೃ ತಾಲೂಕಿಗೆ ಓಡುವ ಅನಿವಾರ್ಯ ತೆಗೆ ಪೂರ್ಣ ವಿರಾಮ ಬಿದ್ದಿಲ್ಲ. ಲಕ್ಷ್ಮೇಶ್ವರದಲ್ಲಿ ಈ ಹಿಂದೆ ಸ್ಥಾಪನೆ ಗೊಂಡಿದ್ದ ಖಜಾನೆ, ಉಪನೋಂದಣಾಕಾರಿಗಳ ಕಚೇರಿ ಜತೆಗೆ ಭೂ ದಾಖಲೆಗಳ ಕಚೇರಿಯಲ್ಲಿ ತಾತ್ಕಾಲಿಕವಾಗಿ ತಹಶೀಲ್ದಾರ್ ಕಚೇರಿ ಆರಂಭಿಸಿದ್ದು, ತಾ.ಪಂ. ಕಚೇರಿಯನ್ನು ಹೊಸದಾಗಿ ನಿರ್ಮಿ ಸಲಾಗಿದೆ. ಜತೆಗೆ ಜಿ.ಪಂ. ನರೇಗಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರನ್ನು ಲಕ್ಷ್ಮೇಶ್ವರ ತಾ.ಪಂ. ಇಒ ಹುದ್ದೆಗೆ ಪ್ರಭಾರಿಯನ್ನಾಗಿ ನೇಮಿಸಿದ್ದೇ ಈವರೆಗಿನ ಸಾಧನೆ ಎನ್ನುವಂತಾಗಿದೆ. ಗಜೇಂದ್ರ ಗಡದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರವಾಸಿ ಮಂದಿರ ದಲ್ಲಿ ತಹಶೀಲ್ದಾರ್ ಕಚೇರಿ ಆರಂಭಿಸಲಾಗಿದೆ. ಜತೆಗೆ ಹೊಸದಾಗಿ ಉಪಖಜಾನೆ, ತಾ.ಪಂ. ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ಅಗತ್ಯ ಸಿಬಂದಿ, ಕಂಪ್ಯೂಟರ್, ಪೀಠೊಪಕರಣಗಳ ಕೊರತೆ ಎದುರಿಸುತ್ತಿವೆ. ಇತರ ಇಲಾಖೆಗಳ ಮಾತೇ ಇಲ್ಲ.
ದಕ್ಷಿಣ ಕನ್ನಡ
ಹಳೆ ತಾಲೂಕು ಕೇಂದ್ರಗಳೇ ಗತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ, ಕಡಬ ತಾಲೂಕುಗಳು ರಚನೆಯಾಗಿ ಮೂರು ವರ್ಷಗಳು ಹಾಗೂ ಉಳ್ಳಾಲ ಹಾಗೂ ಮೂಲ್ಕಿ ತಾಲೂಕು ರಚನೆಯಾಗಿ ಎರಡು ವರ್ಷಗಳು ಸಮೀಪಿಸುತ್ತಿವೆ. ಆದರೆ ತಾಲೂಕು ಆಡಳಿತಗಳು ವರ್ಗಾವಣೆಯಾಗದ ಕಾರಣ ಜನ ಇನ್ನೂ ಹಳೆಯ ತಾಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಿಲ್ಲ. ಹೊಸ ತಾಲೂಕುಗಳ ಪೈಕಿ, ಮೂಡುಬಿದಿರೆಯಲ್ಲಿ ಮಾತ್ರ ಮಿನಿ ವಿಧಾನಸೌಧ ಕಟ್ಟಡ ಪೂರ್ಣಗೊಂಡಿದೆ. ಉಳಿದ ತಾಲೂಕುಗಳಲ್ಲಿ ಆಡಳಿತ ಸೌಧ ಕೂಡ ಇಲ್ಲ. ಮೂಡುಬಿದಿರೆ ತಾಲೂಕಿನಲ್ಲಿ ಒಟ್ಟು 28 ಗ್ರಾಮಗಳಿವೆ. ಸದ್ಯ ಪೂರ್ಣ ಪ್ರಮಾಣದಲ್ಲಿ ತಹಶೀಲ್ದಾರ್ ಇದ್ದಾರೆ. ಕಡಬದಲ್ಲಿ 42 ಗ್ರಾಮಗಳಿವೆ. ಇಲ್ಲಿ ಆಡಳಿತ ಸೌಧದ ನಿರ್ಮಾಣ ಕೆಲಸ ನಡೆಯುತ್ತಿದೆ. ಮೂಲ್ಕಿ ತಾಲೂಕಿನಲ್ಲಿ 30 ಗ್ರಾಮಗಳಿದ್ದು, ಆಡಳಿತ ಸೌಧ ನಿರ್ಮಾಣಕ್ಕಾಗಿ ಇತ್ತೀಚೆಗಷ್ಟೇ ಶಿಲಾನ್ಯಾಸ ನೆರವೇರಿದೆ. ಉಳ್ಳಾಲದಲ್ಲಿ 26 ಗ್ರಾಮಗಳಿದ್ದು, ಆಡಳಿತ ಸೌಧ ನಿರ್ಮಾಣಕ್ಕಾಗಿ ಜಾಗದ ಹುಡುಕಾಟ ನಡೆಯುತ್ತಿದೆ.
ದಾವಣಗೆರೆ
ನ್ಯಾಮತಿಗೆ ತಪ್ಪದ ಹೊನ್ನಾಳಿ ಅವಲಂಬನೆ!
ನ್ಯಾಮತಿ ತಾಲೂಕು ಕೇಂದ್ರವಾಗಿ ಮೂರು ವರ್ಷಗಳಾದರೂ ಪ್ರತಿಯೊಂದಕ್ಕೂ ಹೊನ್ನಾಳಿಯ ಕಚೇರಿಗಳಿಗೆ ಎಡತಾಕುವುದು ತಪ್ಪಿಲ್ಲ. ಆಧಾರ್ ಕಾರ್ಡ್‌ಗೂ ಹೊನ್ನಾಳಿಗೆ ಹೋಗಿ ಬರಬೇಕಾಗಿದೆ. ಈಗಲೂ ಆಮೆಗತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬೆರಳಣಿಕೆಯಷ್ಟು ಅಲ್ಲೊಂದು ಇಲ್ಲೊಂದು ಸರಕಾರಿ ಕಚೇರಿಗಳು ಕಾಣಲಾರಂಭಿಸಿವೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಸಹಕಾರ ಸೇರಿದಂತೆ ಯಾವುದೇ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳೇ ಇಲ್ಲ. ನ್ಯಾಯಾಲಯವೂ ಸಹ ಪ್ರಾರಂಭವಾಗಿಲ್ಲ. ತಾಲೂಕು ಕೇಂದ್ರವಾಗಿದ್ದರೂ ಬಸ್ ನಿಲ್ದಾಣವೇ ಇಲ್ಲ.
ಮೈಸೂರು
ಅನುದಾನವೇ ಇಲ್ಲ
ಎಚ್.ಡಿ.ಕೋಟೆ ತಾಲೂಕು ವಿಭಜಿಸಿ ಸರಗೂರು ತಾಲೂಕು ಅಸ್ತಿತ್ವಕ್ಕೆ ತಂದು 4 ವರ್ಷಗಳಾದರೂ ತಹಶೀಲ್ದಾರ್ ನೇಮಕ ಹೊರತುಪಡಿಸಿ ಬೇರಾವುದೇ ಇಲಾಖೆಗಳು ಕಾರ್ಯಾರಂಭ ಮಾಡಿಲ್ಲ. ಹಾಗೆಯೇ ಸಾಲಿಗ್ರಾಮ ತಾಲೂಕಿನ ಸ್ಥಿತಿಯೂ ಅದೇ ಆಗಿದೆ. ಸರಗೂರಿನಲ್ಲಿ ಬೆರಳೆಣಿಕೆಯಷ್ಟು ಇಲಾಖೆ ತೆರೆದಿವೆ. ಹೀಗಾಗಿ ಏನೇ ಕೆಲಸವಿದ್ದರೂ ಎಚ್.ಡಿ.ಕೋಟೆಗೇ ಹೋಗಬೇಕಾಗಿದೆ. ಸದ್ಯ ತಾಲೂಕು ಪಂಚಾಯತ್ ಕಚೇರಿ, ತಾಲೂಕು ಖಜಾನೆ, ನೀರಾವರಿ ಇಲಾಖೆ ಮತ್ತು ಪಶು ಸಂಗೋ ಪನೆ ಇಲಾಖೆಗಳು ಖಾಸಗಿ ಕಟ್ಟಡದಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿವೆ. ಸಾಲಿಗ್ರಾಮದಲ್ಲಿ ಹೊಸ ತಾಲೂಕಿನ ಅಸ್ತಿತ್ವದ ದೃಷ್ಟಿಯಿಂದ ಈವರೆಗೆ ಯಾವುದೇ ಕೆಲಸಗಳಾಗಿಲ್ಲ. ಸದ್ಯ ಸಾಲಿಗ್ರಾಮದ ನಾಡಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ ಕಾರ್ಯಾರಂಭ ಮಾಡಿದ್ದು, ಗ್ರೇಡ್-2 ತಹಶೀಲ್ದಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ಇಲಾಖೆಗಳು ಕೆ.ಆರ್. ನಗರದಲ್ಲಿಯೇ ಉಳಿದಿವೆ. ಪರಿಣಾಮ ಹೊಸ ತಾಲೂಕಿನ ಜನರು ಅಗತ್ಯ ಕೆಲಸಗಳಿಗಾಗಿ ಕೆ.ಆರ್. ನಗರಕ್ಕೆ ಅಲೆಯುವುದು ಸಾಮಾನ್ಯವಾಗಿದೆ.
ಉಡುಪಿ
ಇನ್ನೂ ನಾಲ್ಕು ವರ್ಷ ಬೇಕು
ಉಡುಪಿ ಜಿಲ್ಲೆಯಲ್ಲಿದ್ದ ಕುಂದಾಪುರ, ಉಡುಪಿ ಹಾಗೂ ಕಾರ್ಕಳ ತಾಲೂಕನ್ನು ವಿಂಗಡಿಸಿ ಹೊಸದಾಗಿ ನಾಲ್ಕು ತಾಲೂಕು ರಚನೆ ಮಾಡಿ ಐದಾರು ವರ್ಷ ಕಳೆದರೂ ಎಲ್ಲಿಯೂ ಪೂರ್ಣ ಪ್ರಮಾಣದ ಮೂಲಸೌಕರ್ಯ ಇಲ್ಲ.
ಉಡುಪಿ ತಾಲೂಕಿನ ಕೆಲವು ಭಾಗವನ್ನು ವಿಭಾಗಿಸಿ ಬ್ರಹ್ಮಾವರ ಮತ್ತು ಕಾಪು ತಾಲೂಕು ರಚನೆ ಮಾಡಲಾಗಿತ್ತು. ಕಾರ್ಕಳ ತಾಲೂಕನ್ನು ವಿಭಜಿಸಿ ಹೆಬ್ರಿಯನ್ನು ಪ್ರತ್ಯೇಕ ತಾಲೂಕಾಗಿ ರಚಿಸಲಾಗಿತ್ತು. ಕುಂದಾಪುರ ತಾಲೂಕನ್ನು ಭಾಗಮಾಡಿ ಬೈಂದೂರು ಪ್ರತ್ಯೇಕಿಸಲಾಗಿದೆ.
ಬೈಂದೂರು ಪೇಟೆಯಲ್ಲೇ ಹೊಸ ತಾಲೂಕು ಕಚೇರಿ ನಿರ್ಮಾಣವಾಗುತ್ತಿದೆ. ಸದ್ಯ ತಹಶೀಲ್ದಾರ್ ಕಚೇರಿಯಲ್ಲೇ ತಾಲೂಕು ಕಚೇರಿಯ ಕಾರ್ಯವೈಖರಿಗಳು ನಡೆಯುತ್ತಿದೆ. ಪ್ರತ್ಯೇಕವಾಗಿ ಯಾವ ಇಲಾಖೆಯೂ ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸೌಲಭ್ಯಗಳಂತೂ ಇಲ್ಲವೇ ಇಲ್ಲ. ಹೊಸ ತಾಲೂಕು ರಚನೆಯಾದ ಅನಂತರದಲ್ಲಿ ಕಟ್ಟಡದ ಶಂಕುಸ್ಥಾಪನೆಯಾಗಿ ನಿರ್ಮಾಣ ಹಂತದಲ್ಲಿದೆ.
ಹೆಬ್ರಿಯಲ್ಲಿ ಜೂನ್ ಮೊದಲ ವಾರದಲ್ಲಿ ತಾಲೂಕು ಕಟ್ಟಡ ಉದ್ಘಾಟನೆಯಾಗಲಿದೆ. ಸುಮಾರು 10 ಕೋಟಿ ವೆಚ್ಚದಲ್ಲಿ ಕಟ್ಟಡ ಬಹುತೇಕ ಪೂರ್ಣಗೊಂಡಿದೆ. ಆದರೆ, ತಾಲೂಕು ರಚನೆಯಾಗಿ ಇಷ್ಟು ವರ್ಷವಾದರೂ ನಾಡ ಕಚೇರಿ ಹೆಬ್ರಿಗೆ ಬಂದಿಲ್ಲ. ತಾಲೂಕಿನ ಜನರು ನಾಡ ಕಚೇರಿಗೆ ಅಜೆಕಾರಿಗೆ ಹೋಗಬೇಕಾದ ಪರಿಸ್ಥಿತಿಯಿದೆ.
ಕಾಪು ತಾಲೂಕಿನ ನೂತನ ಸೌಧದ ನಿರ್ಮಾಣ ಪ್ರಕ್ರಿಯೆ ವರ್ಷದಿಂದೀಚೆಗೆ ಶುರುವಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಬಹುತೇಕ ಎಲ್ಲ ವಿವರ ಹಾಗೂ ಮಾಹಿತಿ ಹೊಸ ತಾಲೂಕು ಕಚೇರಿಯಲ್ಲಿ ಲಭ್ಯವಾಗುತ್ತಿದೆ. ಬ್ರಹ್ಮಾವರ ತಾಲೂಕು ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ ಜನರ ತಮ್ಮ ಕೆಲಸ ಕಾರ್ಯಕ್ಕೆ ಉಡುಪಿಗೆ ಅಲೆಯುವುದು ತಪ್ಪಿಲ್ಲ.
ರಾಯಚೂರು
ಸಿರವಾರ, ಮಸ್ಕಿ ಹೆಸರಿಗೆ ಮಾತ್ರ ತಾಲೂಕು
ನಾಲ್ಕು ವರ್ಷ ಕಳೆದರೂ ಸಿರವಾರ ಮತ್ತು ಮಸ್ಕಿ ತಾಲೂಕುಗಳಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕಳೆದ ವರ್ಷ ಅರಕೇರಾವನ್ನು ತಾಲೂಕಾಗಿ ಸಂಪುಟ ಸಭೆಯಲ್ಲಿ ಘೋಷಿಸಲಾಗಿದೆ. ಮಸ್ಕಿ, ಸಿರವಾರ ತಾಲೂಕು ಜನರಿಗೆ ಇಂದಿಗೂ ಹಳೇ ತಾಲೂಕುಗಳಿಗೆ ಅಲೆಯುವ ಗೊಳು ತಪ್ಪಿಲ್ಲ. ಉಭಯ ತಾಲೂಕು ಕೇಂದ್ರಗಳಲ್ಲಿ ಬಹುತೇಕ ಕಚೇರಿಗಳು ಇಂದಿಗೂ ಶುರುವಾಗಿಲ್ಲ. ಮಸ್ಕಿ ತಾಲೂಕು ಸಿಂಧನೂರು, ಲಿಂಗಸುಗೂರು ಹಾಗೂ ಮಾನ್ವಿ ತಾಲೂಕುಗಳ ಹಳ್ಳಿಗಳನ್ನು ಸೇರಿಸಿ ರಚಿಸಲಾಗಿದೆ. ಹೀಗಾಗಿ ಇಲ್ಲಿನ ಜನ ಕೆಲವೊಂದು ಕಚೇರಿ ಕೆಲಸಗಳಿಗೆ ಇಂದಿಗೂ ಮೂರು ತಾಲೂಕುಗಳಿಗೆ ಅಲೆಯಬೇಕಿದೆ. ಸಿರವಾರ ತಾಲೂಕು ಜನರದ್ದೂ ಇದೇ ಗೋಳಾಗಿದೆ. ಅವರು ಕೂಡ ಏನೇ ಕೆಲಸ ಕಾರ್ಯಗಳಿದ್ದರೂ ಮಾನ್ವಿ ತಾಲೂಕಿಗೆ ಹೋಗಬೇಕಿದೆ. ಯಾವುದಾದರೂ ನೋಂದಣಿ ಕೆಲಸಗಳಿದ್ದರೆ ಇಂದಿಗೂ ಮಾನ್ವಿಗೆ ಹೋಗಬೇಕಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಬಿಟ್ಟರೆ ಉಳಿದೆಲ್ಲ ಕೆಲಸಗಳಿಗೆ ಹಳೆ ತಾಲೂಕುಗಳಿಗೆ ಹೋಗಬೇಕಿದೆ. ಮಸ್ಕಿ ಮತ್ತು ಸಿರವಾರದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಈಗಾಗಲೇ ಸ್ಥಳ ನಿಗದಿ ಮಾಡಲಾಗಿದೆ.
ರಾಮನಗರ
ಹಣಕಾಸು ಇಲಾಖೆ ಒಪ್ಪಿಗೆಯೇ ಸಿಕ್ಕಿಲ್ಲ
ಕನಕಪುರ ತಾಲೂಕಿನಿಂದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಬೇರ್ಪಡಿಸಿ ಹಾರೋಹಳ್ಳಿ ಹೊಸ ತಾಲೂಕು ರಚನೆ ಮಾಡಲಾಗಿದೆ. ಆದರೆ, ಇದಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ಇನ್ನಷ್ಟೆ ಸಿಗಬೇಕಾಗಿದೆ. ಹಾರೋಹಳ್ಳಿಯ 11 ವೃತ್ತಗಳ 107 ಗ್ರಾಮಗಳು ಮತ್ತು ಮರಳವಾಡಿ ಹೋಬಳಿಯ 15 ವೃತ್ತಗಳ 145 ಗ್ರಾಮಗಳು ಒಟ್ಟು 26 ಕಂದಾಯ ವೃತ್ತಗಳ 252 ಗ್ರಾಮಗಳನ್ನು ನೂತನ ತಾಲೂಕಿನಲ್ಲಿ ಸೇರ್ಪಡೆಗೆ ಸರಕಾರ ಗುರುತಿಸಿದೆ. ಜತೆಗೆ ತಾಲೂಕಿಗೆ ಬೇಕಾದ ಹೊಸ ಕಟ್ಟಡಗಳಿಗಾಗಿ 109 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಇಂದಿಗೂ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಹಾಗೆಯೇ ತಾಲೂಕು ಕೇಂದ್ರಕ್ಕಾಗಿ ಸ್ಥಳವನ್ನೂ ಗುರುತಿಸಲಾಗಿಲ್ಲ.
ಚಿಕ್ಕಬಳ್ಳಾಪುರ
ಮೂಲ ಸೌಲಭ್ಯ ಮರೀಚಿಕೆ
ಈ ಜಿಲ್ಲೆಯಲ್ಲಿ ಹೊಸದಾಗಿ ಚೇಳೂರು ಮತ್ತು ಮಂಚೇನಹಳ್ಳಿ ಹೋಬಳಿ ಕೇಂದ್ರಗಳನ್ನು ತಾಲೂಕು ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಆದರೆ ತಾಲೂಕುಗಳಲ್ಲಿ ಇರಬೇಕಾದ ಅಗತ್ಯ ಸೌಲಭ್ಯಗಳು ಇಲ್ಲಿ ಸಿಗುತ್ತಿಲ್ಲ. ಮಂಚೇನ ಹಳ್ಳಿ ಜಿಲ್ಲೆಯಲ್ಲಿ ಅತೀ ದೊಡ್ಡ ಹೋಬಳಿಯಾಗಿದ್ದು, ತೊಂಡೇಬಾವಿ ಹೋಬಳಿಯ ಒಟ್ಟು 7 ಗ್ರಾ.ಪಂ.ಗಳು ಹಾಗೂ 10 ಕಂದಾಯ ವೃತ್ತಗಳನ್ನು ಒಳಗೊಂಡಂತೆ ಹೊಸ ತಾಲೂಕು ರಚನೆ ಮಾಡಲಾಗಿದೆ. ಆದರೆ, ತಾಲೂಕು ಕೇಂದ್ರಕ್ಕೆ ನೀಡಬೇಕಾದ ಸೌಕರ್ಯವನ್ನು ನೀಡಲಾಗಿಲ್ಲ. ಅದೇ ರೀತಿ ಚೇಳೂರು ತಾಲೂಕಿನ ಬೇಡಿಕೆ ಈಡೇರಿದ್ದು, ಸೌಲಭ್ಯಗಳು ಮರೀಚಿಕೆಯಾಗಿ ಉಳಿದಿದೆ. ಇಲ್ಲಿ ತಹಶೀಲ್ದಾರ್, ಆಡಳಿತ ಕಟ್ಟಡ, ಸಿಬಂದಿ ಸೇರಿ ಯಾವುದೇ ವ್ಯವಸ್ಥೆಯಾಗಿಲ್ಲ.
ಉತ್ತರ ಕನ್ನಡ
ನಾಡಕಚೇರಿಯಲ್ಲೇ ದಾಂಡೇಲಿ ತಹಶೀಲ್ದಾರ್ ಕಚೇರಿ
2017ರಲ್ಲಿ ದಾಂಡೇಲಿ ತಾಲೂಕಾಗಿ ಘೊಷಣೆಯಾದ ಅನಂತರ ದಾಂಡೇಲಿ ನಗರದ ನಾಡಕಚೇರಿಯಲ್ಲಿಯೇ ತಹಶೀಲ್ದಾರ್ ಕಚೇರಿ ಆರಂಭವಾಗಿದೆ. ತಹಶೀಲ್ದಾರರ ಕಚೇರಿ ಕರ್ತವ್ಯಕ್ಕೆ ಪೀಠೊಪಕರಣ ಹಾಗೂ ಕಚೇರಿಯ ಇತರ ಸೌಲಭ್ಯ ಹಾಗೂ ಕಾಗದ ಪತ್ರ, ಲೇಖನ ಸಾಮಗ್ರಿ ಖರೀದಿಗೆ ಒಟ್ಟು 25 ಲಕ್ಷ ರೂ.ಗಳನ್ನು ಸರಕಾರ ನೀಡಿದೆ. ಇದನ್ನು ಹೊರತುಪಡಿಸಿ 10 ಕೋಟಿಯ ಆಡಳಿತ ಭವನ ನಿರ್ಮಾಣ ಹಂತದಲ್ಲಿದೆ. 5 ಎಕ್ರೆ ಪ್ರದೇಶವನ್ನು ಜಿಲ್ಲಾಡಳಿತ ನೀಡಿದ್ದು, ಭವ್ಯ ಆಡಳಿತ ಭವನ ನಿರ್ಮಾಣ ಮುಕ್ತಾಯ ಹಂತದಲ್ಲಿದೆ. ಬರುವ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಆಡಳಿತ ಭವನ ಉದ್ಘಾಟನೆ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.