ಪೂರ್ಣ ಅಸ್ತಿತ್ವ ಕಾಣದ ಹೊಸ ತಾಲೂಕು
ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲ-ಬಾಡಿಗೆ ಕಟ್ಟಡಲ್ಲೇ ಕಚೇರಿ
Team Udayavani, May 19, 2022, 2:20 PM IST
ಕೊಪ್ಪಳ: ಈ ಹಿಂದಿನ ಸರ್ಕಾರವು 2018ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮೂರು ಹೊಸ ತಾಲೂಕುಗಳನ್ನು ಘೋಷಣೆ ಮಾಡಿದೆ. ಆದರೆ 4 ವರ್ಷ ಪೂರೈಸುತ್ತಾ ಬಂದರೂ ಹೊಸ ತಾಲೂಕುಗಳು ಸ್ವಂತ ನೆಲೆಯನ್ನು ಕಂಡಿಲ್ಲ. ಬಾಡಿಗೆಯಲ್ಲೇ ಜನರಿಗೆ ಸೇವೆ ಕೊಡುವಂತಾಗಿದ್ದು, ಕೋವಿಡ್‌ನಿಂದಾಗಿ ಅಭಿವೃದ್ಧಿಗೂ ಅನುದಾನ ಖೋತಾ ಆಗಿದೆ.
ಹೀಗಾಗಿ ಹೆಸರಿಗಷ್ಟೇ ಹೊಸ ತಾಲೂಕು ಎನ್ನುವಂತಾಗಿ, ಹಳೇ ತಾಲೂಕೇ ನಮಗೆ ಗತಿ ಎಂದು ಜನತೆ ತೆರಳುವಂತಾಗಿದೆ.
ಹೌದು. ಈ ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ ಜಿಲ್ಲೆಗೆ ಮೂರು ಹೊಸ ತಾಲೂಕು ಘೋಷಣೆ ಮಾಡಿದ್ದರು. ಆದರೆ ಅಭಿವೃದ್ಧಿ ಕಾಣಲಿಲ್ಲ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೇರಿ 2018ರ ಚುನಾವಣೆಯ ಹೊಸ್ತಿಲಲ್ಲಿ ಜಿಲ್ಲೆಯಲ್ಲಿ ಕಾರಟಗಿ, ಕುಕನೂರು ಹಾಗೂ ಕನಕಗಿರಿ ಹೊಸ ತಾಲೂಕುಗಳೆಂದು ಘೋಷಣೆ ಮಾಡಿತು.
ಸರ್ಕಾರವೇನೋ ಜನರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ದೊರೆತು, ಆಡಳಿತಾತ್ಮಕ ಕಾರ್ಯವು ವೇಗವಾಗಿ ನಡೆಯಲಿ, ಜನರು ದೂರದ ಪ್ರದೇಶಕ್ಕೆ ಅಲೆದಾಡುವುದನ್ನು ತಪ್ಪಲಿ ಎನ್ನುವ ಉದ್ದೇಶದಿಂದ ಹೊಸ ತಾಲೂಕುಗಳು ರಚನೆ ಮಾಡಿದೆ. ಆದರೆ ಸರ್ಕಾರದ ಉದ್ದೇಶವು ಈವರೆಗೂ ಸಂಪೂರ್ಣವಾಗಿ ಈಡೇರಿಲ್ಲ.
ಹೊಸ ತಾಲೂಕಗಳು ಘೋಷಣೆಯಾಗಿ ಬರೊಬ್ಬರಿ 4 ವರ್ಷ ಕಳೆಯುತ್ತಾ ಬಂದಿವೆ. ಆದರೆ ಸರ್ಕಾರವೇ ಅಲ್ಲಿ ಸ್ವಂತ ಕಚೇರಿಗಳಿಗೆ ಅನುದಾನ ನೀಡುತ್ತಿಲ್ಲ. ಜಮೀನುಗಳು ಲಭ್ಯವಾಗುತ್ತಿಲ್ಲ. ಹಲವು ಕಡೆ ಜಾಗಕ್ಕೆ ಹುಡುಕಾಟವೂ ನಡೆದಿದೆ. ಸದ್ಯ ಕೂಕನೂರು ಹೊಸ ತಾಲೂಕು ಕಚೇರಿ ಖಾಸಗಿ ಸಮುದಾಯ ಭವನದಲ್ಲಿ ಆಡಳಿತಾತ್ಮಕ ಕಾರ್ಯ ನಡೆದಿದ್ದರೆ, ತಹಶೀಲ್ದಾರ್ ಕಚೇರಿಗೂ ಸ್ವಂತ ನೆಲೆಯಿಲ್ಲ. ಕಾರಟಗಿ ತಾಲೂಕು ಕಚೇರಿಯು ನವಲಿ ರಸ್ತೆಯಲ್ಲಿನ ಸಣ್ಣ ಸರ್ಕಾರಿ ಕಟ್ಟಡದಲ್ಲಿದೆ. ಎಪಿಎಂಸಿಯಲ್ಲಿ ತಹಶೀಲ್ದಾರ್ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಕನಕಗಿರಿ ತಾಲೂಕು ಕಚೇರಿ ಸರ್ಕಾರಿ ಹೈಸ್ಕೂಲ್ ಕಟ್ಟಡದಲ್ಲಿ ಮುನ್ನಡೆಯುತ್ತಿದ್ದರೆ, ತಹಶೀಲ್ದಾರ್ ಕಚೇರಿಯೂ ಕನಕಾಚಲಾಪತಿ ದೇವಸ್ಥಾನದ ಪ್ರವಾಸಿ ಮಂದಿರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿನ ಮೂರು ಹೊಸ ತಾಲೂಕುಗಳಲ್ಲಿ ತಾಪಂ ಕಚೇರಿ, ತಹಶೀಲ್ದಾರ್ ಗಳ ಕಚೇರಿ ಸ್ಥಾಪನೆಯಾಗಿದ್ದು ಬಿಟ್ಟರೆ ಉಳಿದಂತೆ ಬೇರಾವ ಕಚೇರಿಗಳು ಇಲ್ಲ. ತಾಲೂಕು ಸಹಾಯಕ ಅಧಿಕಾರಿಗಳೂ ಇಲ್ಲ. ಮೂಲ ತಾಲೂಕಿನ ತಾಲೂಕು ಮಟ್ಟದಲ್ಲಿನ ಅಧಿಕಾರಿಗಳೇ ಹೊಸ ತಾಲೂಕುಗಳಿಗೆ ಪ್ರಭಾರದ ನೊಗ ಹೊತ್ತಿದ್ದಾರೆ.
ಮೂಲ ಸೌಲಭ್ಯವೂ ಅಷ್ಟಕ್ಕಷ್ಟೇ: ಹೊಸ ತಾಲೂಕಿನ ಕಟ್ಟಡಗಳಲ್ಲೇ ಬಾಡಿಗೆಯಲ್ಲಿ ನಡೆಯುತ್ತಿವೆ. ಜನರು ಸರ್ಕಾರಿ ಸೇವೆಗೆ ಬಂದರೆ ಅವರಿಗೆ ಸರಿಯಾದ ಮೂಲ ಸೌಕರ್ಯಗಳೇ ಇಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿಶ್ರಾಂತಿಯ ತಾಣಗಳೂ ಇಲ್ಲ. ಹೀಗಾಗಿ ಜನತೆ ವಿಶ್ರಾಂತಿಗೆ ಖಾಸಗಿ ಮಳಿಗೆಗಳ ಆಸರೆ ಪಡೆಯಬೇಕಿದೆ. ಸರ್ಕಾರಿ ಅಧಿಕಾರಿ ವರ್ಗಕ್ಕೂ ಸೌಲಭ್ಯಗಳೇ ಸರಿಯಾಗಿ ದೊರೆಯುತ್ತಿಲ್ಲ. ಸರ್ಕಾರವೂ ನಿರ್ವಹಣೆಗಾಗಿ ಅನುದಾನವನ್ನೂ ಅಷ್ಟಕ್ಕಷ್ಟೆ ಕೊಡುತ್ತಿದೆ. ಇದರಿಂದ ಅಧಿಕಾರಿಗಳೂ ಸಹ ಸ್ವಲ್ಪ ಹಣ ವೆಚ್ಚ ಮಾಡಲು ನೂರೆಂಟು ಬಾರಿ ಆಲೋಚಿಸಬೇಕಿದೆ.
ಮೂಲ ತಾಲೂಕಿಗೆ ಜನರ ಅಲೆದಾಟ: ಸರ್ಕಾರವೇನೋ ಹೊಸ ತಾಲೂಕು ಸ್ಥಾಪಿಸಿದ್ದೇವೆ ಎಂದು ಹೇಳಿಕೊಂಡು ಬೀಗುತ್ತಿದೆ. ಆದರೆ ಘೋಷಣೆಯಂತೆ ಪೂರ್ಣ ಪ್ರಮಾಣದಲ್ಲಿ ಅವುಗಳು ಅಸ್ತಿತ್ವಕ್ಕೆ ಬಂದಿಲ್ಲ. ಜನತೆ ಅಲೆದಾಟ ಇಂದಿಗೂ ತಪ್ಪಿಲ್ಲ. ಹಳೇಯ ದಾಖಲೆ ಬೇಕೆಂದರೆ ಅವರು ಮತ್ತೆ ಗಂಗಾವತಿ, ಯಲಬುರ್ಗಾ ಹಳೇ ತಾಲೂಕು ಕಚೇರಿಗಳಿಗೆ ಬರಬೇಕಿದೆ. ಕಂದಾಯ, ಕೃಷಿ ಸಂಬಂಧಿತ ಕೆಲವೊಂದು ಸೇವೆ ಬಿಟ್ಟರೆ ಮತ್ಯಾವ ಸೇವೆಗಳು ಜನರಿಗೆ ಸಿಗಲ್ಲ.
ಹೀಗಾಗಿ ಜನರ ಅಲೆದಾಟ ತಪ್ಪುತ್ತಿಲ್ಲ. ಇನ್ನು ತಾಲೂಕು ಮಟ್ಟದ ಅಧಿಕಾರಿಗಳು ತಾಪಂ ಸಭೆ ನಡೆದರೆ, ಜನಪ್ರತಿನಿಧಿಗಳ ಸಭೆ ನಡೆದರೆ ಹಳೇ ಹಾಗೂ ಹೊಸ ತಾಲೂಕು ಕಚೇರಿಗಳ ಸಭೆಗಳಿಗೂ ಹಾಜರಾಗಿ ವರದಿ ಒಪ್ಪಿಸಬೇಕಿದೆ. ಎರಡೆರಡು ಸಭೆಗೆ ಹಾಜರಾಗುವುದು ಅಧಿಕಾರಿಗಳಿಗೂ ಹೊರೆಯಾಗುತ್ತಿದೆ. ಇದೊಂದು ಆಡಳಿತಾತ್ಮಕ ದೊಡ್ಡ ಸಮಸ್ಯೆ ಎದುರಾಗುತ್ತಿದ್ದು, ಸರ್ಕಾರವು ಇಂತಹ ತಾಂತ್ರಿಕ ಸಮಸ್ಯೆ ಇತ್ಯರ್ಥ ಮಾಡುತ್ತಿಲ್ಲ. ಇದಲ್ಲದೇ ಸರ್ಕಾರದ ಆನ್‌ಲೈನ್ ಸೇವೆಗಳಲ್ಲಿ, ಪ್ರಗತಿಯ ವರದಿಯಲ್ಲಿ ಮೂಲ 4 ತಾಲೂಕುಗಳೆಂದೇ ಪರಿಗಣನೆ ಮಾಡುತ್ತಿದೆ. ಹೊಸ ತಾಲೂಕುಗಳ ಪ್ರತ್ಯೇಕ ವರದಿ ತಯಾರಾಗುತ್ತಿಲ್ಲ.
ಕೋವಿಡ್‌ನಿಂದಾಗಿ ಅನುದಾನ ಇಲ್ಲ: ಕಳೆದ ಎರಡು ವರ್ಷದಿಂದ ಕೊರೊನಾ ಮಹಾಮಾರಿಯು ಜಗತ್ತಿಗೆ ಆವರಿಸಿದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದ್ದು, ಅನುದಾನವೂ ಇಲ್ಲದಂತಾಗಿ ತುಂಬ ತೊಂದರೆ ಎದುರಾಗಿದೆ. ಹೊಸ ತಾಲೂಕುಗಳಿಗೆ ಅನುದಾನವೂ ಅಷ್ಟಕ್ಕಷ್ಟೆ ಬಂದಿದೆ ಎನ್ನುವುದು ಅಧಿಕಾರಿಗಳ ಮಾತು. ಸ್ವಂತ ಕಟ್ಟಡಕ್ಕೆ ಜಾಗವೇ ಅಂತಿಮ ಆಗುತ್ತಿಲ್ಲ. ಅನುದಾನವೂ ಬಂದಿಲ್ಲ. ಸರ್ಕಾರ ಕೇವಲ ನಿರ್ವಹಣೆಗೆ ಮಾತ್ರ ಅನುದಾನ ಕೊಡುತ್ತಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಘೋಷಣೆ ಮಾಡಿದ ಮೂರು ಹೊಸ ತಾಲೂಕುಗಳು ಹೆಸರಿಗೆ ಮಾತ್ರ ಎನ್ನುವಂತಿದ್ದು, ಅನುದಾನ ಇಲ್ಲದೇ ನೂರೆಂಟು ತೊಂದರೆ ಎದುರಿಸುತ್ತಿವೆ. ಬೆರಳೆಣಿಕೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಬಿಟ್ಟರೆ ಸಂಪೂರ್ಣ ಅಸ್ತಿತ್ವಕ್ಕೆ ಬಂದಿಲ್ಲ. ಇದರಿಂದ ಜನರ ಅಲೆದಾಟಕ್ಕೆ ಇನ್ನೂ ಮುಕ್ತಿಯೇ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಘೋಷಣೆಯಾಗಿರುವ ಮೂರು ಹೊಸ ತಾಲೂಕುಗಳ ಪೈಕಿ ಕುಕನೂರು ತಾಲೂಕು ಸ್ವಂತ ಕಚೇರಿಗೆ ಜಾಗ ಅಂತಿಮಗೊಂಡಿದ್ದು, ಭೂ ಸ್ವಾಧೀನ, ಕಟ್ಟಡಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2 ಕೋಟಿ ರೂ. ಬಂದಿದೆ. ಇನ್ನು 10 ಕೋಟಿ ಬರುವುದು ಬಾಕಿಯಿದೆ. ಕಾರಟಗಿ ಹಾಗೂ ಕನಕಗಿರಿ ತಾಲೂಕು ಕಚೇರಿಗೆ ಜಾಗ ಅಂತಿಮವಾಗಬೇಕಿದ್ದು, ಭೂ ಸ್ವಾಧೀನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಿದ್ಧತೆಯಲ್ಲಿದೆ. ಕಚೇರಿಗಳ ನಿರ್ವಹಣೆಗಾಗಿ ಸರ್ಕಾರದಿಂದ 90 ಲಕ್ಷ ರೂ. ಬಿಡುಗಡೆಯಾಗಿದೆ. ∙ಎಂ.ಪಿ. ಮಾರುತಿ, ಕೊಪ್ಪಳ ಎಡಿಸಿ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.